ಅಳಿಯನ ಜಾತಕ ಹಿಡಿದು ಅಮಿತ್ ಶಾಗೆ ಗೌಡರು ಹೇಳಿದ್ದೇನು? – ಡಾ.ಮಂಜುನಾಥ್ ಭವಿಷ್ಯವೇನು?
ಬಿಜೆಪಿಯ ರಾಜಕೀಯದ ಪ್ರಯೋಗಕ್ಕೆ ಡಾ.ಮಂಜುನಾಥ್ ದಾಳ ಆದ್ರಾ?
ಬಿಜೆಪಿ ಜೊತೆ ದೋಸ್ತಿ ಮಾಡಿಕೊಂಡಿರುವ ಖುಷಿಯಲ್ಲಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅದೇ ಖುಷಿಯಲ್ಲಿ ತಮ್ಮ ಬಾವ ಡಾ. ಮಂಜುನಾಥ್ ಅವರನ್ನು ಕಮಲ ಪಕ್ಷದಿಂದಲೇ ಅಭ್ಯರ್ಥಿ ಮಾಡಿಸಿದ್ದಾರೆ.. ಬಿಜೆಪಿ ನಾಯಕರಿಗೂ ಎಂದೂ ಗೆಲ್ಲದ ಕೋಟೆಯನ್ನು ಗೆಲ್ಲಲು ಓರ್ವ ಸಮರ್ಥ ಸೇನಾನಿ ಬೇಕಿತ್ತು.. ಅಂತಹ ಸಮರ್ಥ ಸೇನಾನಿ ಡಾ. ಮಂಜುನಾಥ್ ಆಗಬಹುದು ಎಂಬುದು ಬಿಜೆಪಿಯವರ ಲೆಕ್ಕಾಚಾರ.. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಹೆಸರು ಕೇಳಿದ್ರೆ ಸಿಡಿದು ಬೀಳುವ ಕುಮಾರಸ್ವಾಮಿಯವರಿಗೆ ಹೇಗಾದ್ರೂ ಮಾಡಿ ಡಿಕೆಶಿಯನ್ನು ಸೋಲಿಸಿದ್ರೆ ಸಾಕು ಎಂಬ ಆಸೆಯಿದೆ. ಅತಿಆಸೆ ಕೆಲವೊಮ್ಮೆ ತಾನು ಮಾಡೋದಿಕ್ಕೆ ಹೊರಟಿದ್ದೇನು ಎನ್ನುವುದನ್ನೇ ಮರೆಸಿಬಿಡುತ್ತದೆ.. ಅಲ್ಲದೆ ಅದ್ರಿಂದಾಗುವ ಪರಿಣಾಮಗಳು, ಅಲ್ಲಿರುವ ಸಮಸ್ಯೆಗಳು, ಸವಾಲುಗಳನ್ನೂ ಕಾಣದಂತೆ ಮಾಡಿಬಿಡುತ್ತದೆ.. ಸದ್ಯ ಡಾ.ಮಂಜುನಾಥ್ ಅವರನ್ನು ಬಿಜೆಪಿ ಟಿಕೆಟ್ನಲ್ಲಿ ಕಣಕ್ಕಿಳಿಸಲು ಮುಂದಾದ ಜೆಡಿಎಸ್ ಕೂಡ ಇದೇ ಸ್ಥಿತಿಯಲ್ಲಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.. ಮತ್ತೊಂದೆಡೆ ಜ್ಯೋತಿಷ್ಯ.. ಭವಿಷ್ಯದ ಮೇಲೆ ಅಪಾರ ನಂಬಿಕೆ ಹೊಂದಿರುವ ದೇವೇಗೌಡರು ತಮ್ಮ ಅಳಿಯನ ಜಾತಕ ಹಿಡಿದೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ಮಾತಾಡಿ ಬಂದಿದ್ದರಂತೆ.. ಅಸಲಿಗೆ ಡಾ.ಮಂಜುನಾಥ್ ಜಾತಕದಲ್ಲೇನಿತ್ತು ಎಂಬ ವಿವರಣೆ ಇಲ್ಲಿದೆ.
ಇದನ್ನೂ ಓದಿ: ಡಿಕೆ ಸುರೇಶ್ ವಿರುದ್ಧ ಡಾ.ಮಂಜುನಾಥ್ ಕಣಕ್ಕಿಳಿದರೆ ಏನಾಗುತ್ತೆ? – ಅಳಿಯ ಸ್ಪರ್ಧೆ ಮಾಡೋದು ದೇವೇಗೌಡರಿಗೆ ಇಷ್ಟವಿಲ್ಲ ಏಕೆ..?
ಪದ್ಮಶ್ರೀ ಡಾ.ಸಿ.ಎನ್.ಮಂಜುನಾಥ್ ಕನ್ನಡಿಗರು ಹೆಮ್ಮೆ ಪಡುವಂತಹ ವೈದ್ಯ.. ಜಯದೇವ ಹೃದ್ರೋಗಗಳ ಆಸ್ಪತ್ರೆಯನ್ನು ದೇಶಕ್ಕೇ ಮಾದರಿಯಾಗುವಂತೆ ಬೆಳೆಸಿದವರು.. ಸಂಶೋಧನೆ ಮತ್ತು ಚಿಕಿತ್ಸೆಗೆ ಆದ್ಯತೆ ನೀಡಿ, ಹೃದಯ ರೋಗಿಗಳ ಹೃದಯಗೆದ್ದವರು.. ಆದ್ರೀಗ ಸೇವೆಯಿಂದ ನಿವೃತ್ತರಾಗುತ್ತಿದ್ದಂತೆ ಡಾ.ಮಂಜುನಾಥ್, ರಾಜಕೀಯದ ರಂಗ ಪ್ರವೇಶ ಮಾಡಿದ್ದಾರೆ.. ಡಾ.ಮಂಜುನಾಥ್ ಮೂಲತಃ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದವರು.. ಅವರ ಸಹೋದರ ಸಿ.ಎನ್.ಬಾಲಕೃಷ್ಣ, ಶ್ರವಣಬೆಳಗೊಳ ಮತಕ್ಷೇತ್ರದ ಹಾಲಿ ಶಾಸಕ.. ಹೀಗಾಗಿ ಹಾಸನದಿಂದಲೇ ಡಾ.ಮಂಜುನಾಥ್ ಲೋಕಸಭೆ ಚುನಾವಣೆಯಲ್ಲೇನಾದರೂ ಸ್ಪರ್ಧಿಸಿದ್ರೆ ಗೆಲ್ಲೋದು ಅತ್ಯಂತ ಸುಲಭದ ಕ್ಷೇತ್ರ.. ಆದ್ರೆ ಹಾಸನದಲ್ಲಿ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಬಿಟ್ಟು ಬೇರೆ ಯಾರನ್ನೂ ಕಣಕ್ಕಿಳಿಸಲು ಸಾಧ್ಯವಿಲ್ಲದ ಸ್ಥಿತಿಯಲ್ಲಿ ದೊಡ್ಡ ಗೌಡರ ಕುಟುಂಬವಿದೆ.. ಖುದ್ದು ದೇವೇಗೌಡರೇ ಮೊಮ್ಮಗನಿಗಾಗಿ ಸೀಟು ಬಿಟ್ಟಿದ್ದರಿಂದ ಅದನ್ನು ಬೇರೆಯವರಿಗೆ ಬಿಟ್ಟುಕೊಡಲು ರೇವಣ್ಣ ಮತ್ತು ಭವಾನಿ ರೇವಣ್ಣ ಸುತಾರಂ ಒಪ್ಪಲು ಸಾಧ್ಯವಿಲ್ಲ.. ಇದರಿಂದಾಗಿಯೇ ಮಂಜುನಾಥ್ ಅವರನ್ನು ದೇವೇಗೌಡರ ರಾಜಕೀಯದ ಕರ್ಮಭೂಮಿಯಾಗಿರುವ ಬೆಂಗಳೂರು ಗ್ರಾಮಾಂತರ ಮತ ಕ್ಷೇತ್ರಕ್ಕೆ ವರ್ಗಾವಣೆ ಮಾಡಲಾಗಿದೆ.. ಆದ್ರೆ ಇಂತಹ ಸಾಹಸ ಯಾವ ಸಂದರ್ಭದಲ್ಲಿ ಬೇಕಿದ್ದರೂ ದುಸ್ಸಾಹಸವಾಗಿ ಮಾರ್ಪಡಬಹುದು ಎನ್ನುವುದು ದೇವೇಗೌಡರಿಗೆ ತಮ್ಮ ಅನುಭವದಿಂದಲೇ ಗೊತ್ತಿದೆ.. ಈ ಕಾರಣಕ್ಕಾಗಿಯೇ ಅಳಿಯನ ರಾಜಕೀಯ ರಂಗಪ್ರವೇಶಕ್ಕೆ ಅಡ್ಡಗೋಡೆಯ ಮೇಲೆ ದೀಪ ಇಟ್ಟವರಂತೆ ಮಾತಾಡಿದ್ದರು.. ಅಳಿಯ ರಾಜಕೀಯಕ್ಕೆ ಬರುವುದು ಬೇಡ, ಅವರ ಗೌರವಕ್ಕೆ ಚ್ಯುತಿ ಬರುವಂತಹ ಕೆಲಸಕ್ಕೆ ಒಪ್ಪಲಾರೆ ಅಂತೆಲ್ಲಾ ಹೇಳಿದ್ದರು.. ಹಾಗಿದ್ದರೂ ದೊಡ್ಡ ಗೌಡರ ಮನವೊಲಿಸಿ, ಮಂಜುನಾಥ್ ಬಿಜೆಪಿ ಕ್ಯಾಂಡಿಡೇಟ್ ಆಗಿ ಸ್ಪರ್ಧಿಸುವಂತೆ ಕುಮಾರಸ್ವಾಮಿ ನೋಡಿಕೊಂಡಿದ್ದಾರೆ.. ಇಷ್ಟಕ್ಕೂ ದೇವೇಗೌಡರು ಒಲ್ಲದ ಮನಸ್ಸಿನಿಂದ ಒಪ್ಪಿಗೆ ಸೂಚಿಸೋದಿಕ್ಕೆ ಕಾರಣ..
ಡಾ. ಮಂಜುನಾಥ್ ಅವರ ಜಾತಕದ ಆಧಾರದ ಮೇಲೆ ಅಮಿತ್ ಶಾ ಅವರ ಜೊತೆ ನಡೆಸಿದ್ದ ಮಾತುಕತೆ ಬಗ್ಗೆ ವಿವರಿಸುವುದೂ ಇದೆ. ಆದರೆ ಅದಕ್ಕೂ ಮೊದಲು, ಬಿಜೆಪಿಯ ರಾಜಕೀಯದ ಪ್ರಯೋಗಕ್ಕೆ ಡಾ.ಮಂಜುನಾಥ್ ದಾಳ ಆದ್ರಾ ಎಂಬ ಬಗ್ಗೆಯೂ ಚರ್ಚೆ ಶುರುವಾಗಿದೆ.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಐದು ಶಾಸಕರನ್ನ ಹೊಂದಿದೆ.. ದೋಸ್ತಿ ಪಕ್ಷಗಳಲ್ಲಿ ಬಿಜೆಪಿ ಎರಡು ಶಾಸಕರನ್ನು ಹೊಂದಿದ್ದರೆ, ಜೆಡಿಎಸ್ನಿಂದ ಕುಮಾರಸ್ವಾಮಿ ಚನ್ನಪಟ್ಟಣದ ಶಾಸಕ.. ಮೇಲ್ನೋಟದ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ ಅಂತ ಹೇಳೋದು ಸುಲಭ.. ಆದ್ರೆ ರಾಜಕೀಯದಲ್ಲಿ ಲೆಕ್ಕ ಯಾವತ್ತೂ 1 ಪ್ಲಸ್ 1 ಅಂದ್ರೆ ಎರಡು ಆಗೋದಿಲ್ಲ.. ಅಲ್ಲಿ 1 ಕೂಡಿಸು 1 ಸೊನ್ನೆಯೂ ಆಗಬಹುದು.. ಮೂರು ನಾಲ್ಕೂ ಆಗಬಹುದು.. ಅಂತದ್ದೊಂದು ಪರಿಸ್ಥಿತಿಯೇ ಈಗ ಬೆಂಗಳೂರು ಗ್ರಾಮಾಂತರದಲ್ಲಿದೆ ಎನ್ನುವುದು ಬಿಜೆಪಿ ಹಾಗೂ ಜೆಡಿಎಸ್ನ ಅಚಲ ನಂಬಿಕೆ.. ಯಾಕಂದ್ರೆ ರಾಮನಗರ, ಕುಣಿಗಲ್ ಮತ್ತು ಮಾಗಡಿ ಕ್ಷೇತ್ರಗಳಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮತಗಳನ್ನು ಸೇರಿಸಿದ್ರೆ 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗಿಂತ ಹೆಚ್ಚಿದೆ.. ಆನೇಕಲ್ ಮತ್ತು ಕನಕಪುರದಲ್ಲಿ ಮಾತ್ರ ಬಿಜೆಪಿ ಹಾಗೂ ಜೆಡಿಎಸ್ ಜೊತೆ ಸೇರಿದ್ರೂ ಕಾಂಗ್ರೆಸ್ ಗಿಂದ 80 ಸಾವಿರಕ್ಕೂ ಹೆಚ್ಚು ಮತಗಳ ಹಿನ್ನಡೆ ಅನುಭವಿಸುತ್ತವೆ.. ಅನೇಕಲ್ನಲ್ಲಿ ಕೂಡ ಬಿಜೆಪಿ ಮತ್ತು ಜೆಡಿಎಸ್ ಮತಗಳನ್ನು ಜೊತೆ ಸೇರಿಸಿದ್ರೂ ಅದಕ್ಕಿಂತ ಹೆಚ್ಚು ಮತಗಳನ್ನು ಕಾಂಗ್ರೆಸ್ ಗಳಿಸಿತ್ತು.. ಇದರ ಆಧಾರದಲ್ಲಿ ನೋಡಿದಾಗ ಬಿಜೆಪಿ ಗೆದ್ದಿರುವ ಎರಡು ಶಾಸಕ ಸ್ಥಾನಗಳು ಮತ್ತು ಮೂರು ಕಾಂಗ್ರೆಸ್ ಶಾಸಕರಿರುವ ಕಡೆಗಳಲ್ಲಿ ಮೈತ್ರಿ ಪಕ್ಷ ಮುನ್ನಡೆಯಲ್ಲಿದೆ.. ಜೊತೆಗೆ ಚನ್ನಪಟ್ಟಣದಲ್ಲಿ ಕೇವಲ 15 ಸಾವಿರದಷ್ಟು ಮಾತ್ರ ಮತಗಳನ್ನು ಗಳಿಸಿರುವ ಕಾಂಗ್ರೆಸ್ ತೀರಾ ಹೀನಾಯ ಸ್ಥಿತಿಯಲ್ಲಿದೆ.. ಇಷ್ಟು ಹೇಳಿದಾಕ್ಷಣ ಡಾ. ಮಂಜುನಾಥ್ ಗೆಲುವು ಸಲೀಸು ಅಂತ ಅಂದುಕೊಂಡರೆ ನಿಮ್ಮ ಊಹೆ ಮತ್ತೆ ತಪ್ಪಾಗುತ್ತದೆ.. ಯಾಕಂದ್ರೆ ಇದೇ ಚನ್ನಪಟ್ಟಣದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ನಿಂದ ಸ್ಪರ್ಧಿಸಿದ ಕುಮಾರಸ್ವಾಮಿಯವರಿಗೆ ದೊಡ್ಡ ಸಂಖ್ಯೆಯಲ್ಲಿ ಮುಸ್ಲಿಮರು ಬೆಂಬಲ ನೀಡಿದ್ದರು.. ಸಿ.ಪಿ.ಯೋಗೇಶ್ವರ್ ಬಿಜೆಪಿಯಿಂದ ಸ್ಪರ್ಧಿಸಿದ್ದ ಸಿಟ್ಟಿಗೆ ಅವರನ್ನು ಸೊಲಿಸಲೆಂದೇ ಮುಸ್ಲಿಮರ ಮತಗಳು ಕುಮಾರಸ್ವಾಮಿ ಕಡೆಗೆ ವಾಲಿದ್ದವು.. ಅಂತಹ ಸ್ಥಿತಿ ಈಗ ಚನ್ನಪಟ್ಟಣದಲ್ಲಿ ನಿರ್ಮಾಣ ಆಗೋದಿಲ್ಲ.. ಏನಿದ್ದರೂ 50 ಸಾವಿರಕ್ಕಿಂತ ಹೆಚ್ಚು ಮತಗಳನ್ನು ಚನ್ನಪಟ್ಟಣದಲ್ಲೇ ಡಿ.ಕೆ.,ಸುರೇಶ್ ಗಳಿಸುವುದನ್ನ ತಡೆಯುವುದು ಕಷ್ಟ.. ಯಾಕಂದ್ರೆ ಎಷ್ಟೇ ಮೈತ್ರಿ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಿದ್ರೂ ಸಿಪಿ ಯೋಗೇಶ್ವರ್ ತಮ್ಮ ರಾಜಕೀಯ ಭವಿಷ್ಯ ರೂಪಿಸಲೇಬೇಕಾದ ಅನಿವಾರ್ಯತೆಯಲ್ಲಿದ್ದಾರೆ ಎನ್ನುವುದನ್ನು ಮರೆಯಬಾರದು.. ಇದು ವಿಧಾನಸಭಾ ಚುನಾವಣೆಯ ಮತ ಲೆಕ್ಕವಾಗಿದ್ದರೆ, ಇತ್ತ ದೇವೇಗೌಡರ ಅಳಿಯನನ್ನೇ ಬಿಜೆಪಿಯಿಂದ ಅಭ್ಯರ್ಥಿ ಮಾಡಿದ ಕಾರಣಕ್ಕೆ ಬಿಜೆಪಿ ಕಾರ್ಯಕರ್ತರು ಮತ್ತು ಜೆಡಿಎಸ್ ಕಾರ್ಯಕರ್ತರು ಜೊತೆ ಸೇರಿ ಕೆಲಸ ಮಾಡುತ್ತಾರೆ ಎಂಬ ನಂಬಿಕೆ ದೋಸ್ತಿ ನಾಯಕರಲ್ಲಿದೆ.. ಆದ್ರೆ ಅದೂ ಅಷ್ಟು ಸುಲಭದ ಮಾತಲ್ಲ.. ತಮ್ಮ ಅಳಿಯನನ್ನೇ ರಾಜಕೀಯದ ಲಾಭಕ್ಕಾಗಿ ಬೇರೆ ಪಕ್ಷದಿಂದ ಗೌಡರು ಟಿಕೆಟ್ ಕೊಟ್ಟು ನಿಲ್ಲಿಸ್ತಾರೆ.. ಹೀಗಿರುವಾಗ ಜೆಡಿಎಸ್ ಕಾರ್ಯಕರ್ತರು ಇನ್ನು ಆ ಪಕ್ಷಕ್ಕೇ ನಿಷ್ಟರಾಗಿ ಯಾಕಿರಬೇಕು? ನೀವು ನೇರವಾಗಿ ಕಾಂಗ್ರೆಸ್ಗೆ ಬರಬಹುದು ಎಂಬ ಸಂದೇಶವನ್ನು ಆಲ್ರೆಡಿ ಡಿ.ಕೆ.ಸುರೇಶ್ ರವಾನಿಸಲು ಶುರು ಮಾಡಿದ್ದಾರೆ.. ಇದು ಸಹಜವಾಗಿಯೇ ಜೆಡಿಎಸ್ಗೆ ದೊಡ್ಡ ಹೊಡೆತ ಕೊಡುವುದರ ಜೊತೆಗೆ, ರಾಜಕೀಯವಾಗಿ ಸಂಪೂರ್ಣವಾಗಿ ರಾಮನಗರ ಜಿಲ್ಲೆಯಿಂದ ಹೊರದಬ್ಬುವ ಪ್ರಯತ್ನವಾಗಿಯೂ ಕಾಣುತ್ತಿದೆ.. ಈ ಕೆಲಸದಲ್ಲಿ ಕನಕಪುರದ ಬಂಡೆ ಸೋದರರು ಕಂಪ್ಲೀಟ್ ಆಗಿ ತಮ್ಮನ್ನ ತೊಡಗಿಸಿಕೊಂಡಿದ್ದಾರೆ.. ದೇವೇಗೌಡರು 1980ರ ದಶಕದಿಂದಲೂ ಹಾಸನದ ಜೊತೆಗೆ ಕನಕಪುರ ಮತ್ತು ರಾಮನಗರವನ್ನು ತಮ್ಮ ರಾಜಕೀಯದ ಕರ್ಮಭೂಮಿಯಾಗಿ ಸ್ವೀಕರಿಸಿದ್ದರು.. ಅಲ್ಲಿನ ಒಕ್ಕಲಿಗ ಸಮುದಾಯಕ್ಕೂ ದೊಡ್ಡ ಗೌಡರ ಬಗ್ಗೆ ಅದೇ ಅಭಿಮಾನವಿದೆ.. ಆದ್ರೆ ಯಾವಾಗ ಮಗ.. ಸೊಸೆ.. ಮೊಮ್ಮಗ ಅಂತೆಲ್ಲಾ ಕುಟುಂಬದವರಿಗೇ ಆದ್ಯತೆ ನೀಡಿ ಬೆಳೆಸಿದ್ದಾರೆಯೇ ಹೊರತು ಇಡೀ ರಾಮನಗರ ಜಿಲ್ಲೆಯಲ್ಲಿ ಮತ್ತೊಬ್ಬ ಒಳ್ಳೆಯ ಒಕ್ಕಲಿಗ ಲೀಡರ್ ಬೆಳೆಸಲು ಮುಂದಾಗಲಿಲ್ಲ ಎಂಬ ಅಸಮಾಧಾನ ಈ ಭಾಗದಲ್ಲಿರುವುದು ಸುಳ್ಳಲ್ಲ.. ಈಗ ತಮ್ಮ ಪಕ್ಷ ಬಿಟ್ಟು ಬಿಜೆಪಿಯಿಂದ ಅಳಿಯನನ್ನು ಅಖಾಡಕ್ಕೆ ಇಳಿಸಿರುವುದನ್ನು ಒಕ್ಕಲಿಗ ಸಮುದಾಯ ಅಷ್ಟು ಸುಲಭವಾಗಿ ಒಪ್ಪಿಕೊಳ್ಳುತ್ತದಾ ಎಂಬ ಪ್ರಶ್ನೆಯೂ ಇದೆ.. ಡಿ.ಕೆ.ಸುರೇಶ್ ಕೂಡ ಕಳೆದ ಮೂರು ಚುನಾವಣೆಗಳಲ್ಲಿ ತಮ್ಮ ಮತಗಳಿಕೆಯನ್ನು ಹೆಚ್ಚಿಸುತ್ತಾ ಬಂದಿದ್ದಾರೆ.. ಕಾರ್ಯಕರ್ತರ ಜೊತೆ ನೇರ ಸಂಪರ್ಕ ಹೊಂದಿರುವ ನಾಯಕ ಎನ್ನುವುದು ಸುರೇಶ್ಗೆ ಇರುವ ಹೆಗ್ಗಳಿಕೆ.. ಜೊತೆಗೆ ಬಂಡೆ ಸೋದರರು ಒಬ್ಬರ ಗೆಲುವಿಗೆ ಇನ್ನೊಬ್ಬರು ಸಂಪೂರ್ಣ ತೊಡಗಿಸಿಕೊಂಡು ಕೆಲಸ ಮಾಡೋದ್ರಿಂದ ಅವರನ್ನು ಅಲುಗಾಡಿಸುವುದು ಅಷ್ಟು ಸುಲಭದ ಮಾತಲ್ಲ.. ಈ ಸೋದರರ ಸವಾಲನ್ನು ಎದುರಿಸುವುದು ಬಿಜೆಪಿಗೆ ಇರುವ ಅತಿದೊಡ್ಡ ಚಾಲೆಂಜ್.. ಇನ್ನು ಈ ಹಿಂದೆ ಇದೇ ಬೆಂಗಳೂರು ಗ್ರಾಮಾಂತರ ಮತಕ್ಷೇತ್ರ ಕನಕಪುರ ಲೋಕಸಭಾ ಕ್ಷೇತ್ರವಾಗಿದ್ದಾಗಲೂ 1998ರಲ್ಲಿ ಒಮ್ಮೆ ಬಿಜೆಪಿ ಗೆದ್ದಿದ್ದು ಬಿಟ್ಟರೆ, ಮತ್ತೆ ಯಾವತ್ತೂ ಗೆಲುವು ಸಾಧಿಸಿಲ್ಲ.. ಇತ್ತೀಚೆಗೆ ಇದು ಡಿಕೆ ಬ್ರದರ್ಸ್ ಕೋಟೆಯಾಗಿ ಪರಿವರ್ತನೆ ಆಗಿರೋದ್ರಿಂದ ಅದನ್ನು ಒಡೆಯುವುದು ಅಷ್ಟು ಸುಲಭದ ಮಾತಲ್ಲ.. ಇದೆಲ್ಲಾ ಒಂದು ಕಡೆಯಾದರೆ ದೇವೇಗೌಡರು ಅದ್ಯಾಕೆ ತಮ್ಮ ಅಳಿಯನ ರಾಜಕೀಯ ರಂಗಪ್ರವೇಶದ ವಿಚಾರದಲ್ಲಿ ಒಪ್ಪಿಗೆ ಸೂಚಿಸಿರಲಿಲ್ಲ ಎನ್ನುವ ಪ್ರಶ್ನೆ ನಿಮ್ಮನ್ನೂ ಕಾಡ್ತಿರಬಹುದು.. ಆದ್ರೆ ಇಲ್ಲೇ ಇರೋದು ದೇವೇಗೌಡರ ರಾಜಕೀಯ ಅನುಭವದ ತಂತ್ರಗಾರಿಕೆ..
ಇಷ್ಟಕ್ಕೂ ಮೊದಲು ಅಳಿಯನ ರಾಜಕೀಯ ರಂಗಪ್ರವೇಶಕ್ಕೆ ತೆರೆಮರೆಯ ಕಸರತ್ತು ಮಾಡಿರುವುದು ದೇವೇಗೌಡರೇ.. ಖುದ್ದು ಮಾಜಿ ಪ್ರಧಾನಿ ದೇವೇಗೌಡರು, ಬಿಜೆಪಿಯ ಚುನಾವಣಾ ಚಾಣಕ್ಯ ಅಮಿತ್ ಶಾ ಜೊತೆ ಡಾ.ಮಂಜುನಾಥ್ ಅವರ ರಾಜಕೀಯ ಪ್ರವೇಶದ ಬಗ್ಗೆ ಚರ್ಚಿಸಿದ್ದರಂತೆ.. ಅಲ್ಲದೆ ತನ್ನ ಅಳಿಯನ ಜಾತಕದ ಪ್ರಕಾರ ಅವರು ಸಂಸದರಾಗುವ ಯೋಗವಿದೆ ಎಂದಿದ್ದರಂತೆ. ಲೋಕಸಭೆ ಚುನಾವಣೆ ಗೆಲ್ಲಲು ಸಾಧ್ಯವಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದರಂತೆ. ಆದ್ರೆ ಇಷ್ಟೆಲ್ಲಾ ಹೇಳುವಾಗಲೂ ಬಹುತೇಕ ದೇವೇಗೌಡರು ಬೆಂಗಳೂರು ದಕ್ಷಿಣ ಅಥವಾ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಅಳಿಯನಿಗೆ ಟಿಕೆಟ್ ಪಡೆಯುವ ಲೆಕ್ಕಾಚಾರವಿತ್ತು.. ಆದ್ರೆ ದೇವೇಗೌಡರು ಬಯಸಿದ ರೀತಿಯಲ್ಲೇ ರಾಜಕೀಯ ಬೆಳವಣಿಗೆ ನಡೆಯದೇ ಇದ್ದಾಗಲೇ ದೇವೇಗೌಡರು ಬಹಿರಂಗವಾಗಿ ಅಳಿಯನ ಗೌರವದ ವಿಚಾರ ಮಾತಾಡುತ್ತಾ ರಾಜಕೀಯ ಪ್ರವೇಶದ ಬಗ್ಗೆ ಅಡ್ಡಗೋಡೆಯ ಮೇಲೆ ದೀಪ ಇಟ್ಟವರಂತೆ ಮಾತಾಡಿದ್ದರು.. ಹಾಗಿದ್ದರೂ ಬಿಜೆಪಿ ನಾಯಕರು ಮಾತ್ರ ತಮ್ಮದೇ ಲೆಕ್ಕಾಚಾರದಲ್ಲಿ ಡಾ.ಮಂಜುನಾಥ್ ಅವರನ್ನು ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಚುನಾವಣಾ ಕಣಕ್ಕೆ ಇಳಿಸಿದ್ದಾರೆ.. ಡಾಕ್ಟರ್ ಒಳ್ಳೆಯವರು ಎನ್ನುವುದರಲ್ಲಿ ಎರಡು ಮಾತಿಲ್ಲ.. ಆದ್ರೆ ರಾಜಕೀಯದಲ್ಲಿ ಒಳ್ಳೆಯತನ ಮಾತ್ರ ಕೆಲಸ ಮಾಡುವುದಿಲ್ಲ.. ರಾಜಕೀಯ ಎನ್ನುವುದು ಜನರು ತಮ್ಮ ನಾಯಕನ ಆಯ್ಕೆ ಮಾಡುವ ಪ್ರಕ್ರಿಯೆ.. ಚುನಾವಣೆಗಳ ಗೆಲುವಿಗೆ ಇರುವ ಮಾನದಂಡಗಳೇ ಬೇರೆ.. ಹೀಗಾಗಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಮುಂದೇನಾಗುತ್ತದೆ ಎಂದು ನೋಡಬೇಕಿದೆ..