ಕಲ್ಲಂಗಡಿ ಮಹಾತ್ಮೆ ಗೊತ್ತಾ? – ಇದು ಗೊತ್ತಾದ್ರೆ ಪಕ್ಕಾ ಈಗ್ಲೇ ತಿನ್ನುತ್ತೀರಿ!
ಬೇಸಿಗೆಕಾಲ ಬಂತಂದರೆ ಸಾಕು.. ಹಲವು ಹಣ್ಣುಗಳು ಮಾರುಕಟ್ಟೆಗೆ ಲಗ್ಗೆ ಇಡ್ತವೆ.. ರಸ್ತೆ ಬದಿಯಲ್ಲಿ ಹಣ್ಣು ತರಕಾರಿ ಅಂಗಡಿಗಳಲ್ಲಿ ಹಲವು ಹಣ್ಣುಗಳನ್ನು ಮಾರಾಟಕ್ಕಿಟ್ಟಿರುತ್ತಾರೆ.. ಅದ್ರಲ್ಲಿ ಕಲ್ಲಂಗಡಿ ಹಣ್ಣು ಹಾಟ್ ಫೇವರಿಟ್.. ಕಲ್ಲಂಗಡಿ ಹಣ್ಣು ತಿನ್ನುವುದು ಬೇಸಿಗೆಯಲ್ಲಿ ತುಂಬಾ ಪ್ರಯೋಜನಕಾರಿ. ಈ ಹಣ್ಣಿನಲ್ಲಿ ಹಲವು ಔಷಧೀಯ ಗುಣಗಳಿವೆ.. ಇನ್ನು ಬೇಸಿಗೆಯಲ್ಲಿ ಎದುರಾಗುವ ಸಾಮಾನ್ಯ ಸಮಸ್ಯೆಗಳಲ್ಲಿ ಡಿಹೈಡ್ರೇಷನ್ ಒಂದು. ಎಷ್ಟೇ ನೀರು ತೆಗೆದುಕೊಂಡರೂ ಈ ಸಮಸ್ಯೆ ಎದುರಾಗುತ್ತದೆ. ಅದರಲ್ಲೂ ಹೊರಗೆ ಓಡಾಡುವವರು ನಿರ್ಜಲೀಕರಣಕ್ಕೆ ತುತ್ತಾಗುತ್ತಾರೆ. ಕಲ್ಲಂಗಡಿಯಲ್ಲಿ ಶೇ. 92 ರಷ್ಟು ನೀರಿನ ಅಂಶ ಇದೆ. ಅಷ್ಟೇ ಅಲ್ಲದೇ ಉತ್ಕರ್ಷಣ ನಿರೋಧಕಗಳು, ಜೀವಸತ್ವಗಳು ಮತ್ತು ಪೋಷಕಾಂಶಗಳು ಸಹ ಆರೋಗ್ಯವನ್ನು ರಕ್ಷಿಸುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣನ್ನು ಸೇವಿಸಿದರೆ ಬೇಸಿಗೆಯಲ್ಲಿ ಬರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.
ಇದನ್ನೂ ಓದಿ: ʼಏನು ಹೇಳಲಿ ನಾನು ಹೊಸತರʼ.. – ರೊಮ್ಯಾಂಟಿಕ್ ಹಾಡಿಗೆ ಹೆಜ್ಜೆ ಹಾಕಿದ ನಮ್ರತಾ, ಕಿಶನ್
ಇನ್ನು ತೂಕ ಕಡಿಮೆ ಮಾಡುವಲ್ಲಿ ಕಲ್ಲಂಗಡಿ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಕಲ್ಲಂಗಡಿ ಹಣ್ಣಿನಲ್ಲಿ ದೇಹಕ್ಕೆ ಬೇಕಾಗುವ ಕ್ಯಾಲೋರಿ ತುಂಬಾ ಕಡಿಮೆಯಿರುತ್ತದೆ. ಇದಲ್ಲದೆ, ಕಲ್ಲಂಗಡಿ ತಿಂದ ತಕ್ಷಣ ಪೂರ್ಣತೆಯ ಭಾವನೆ ಉಂಟಾಗುತ್ತದೆ. ಹೀಗಾಗಿ ತೂಕ ಕಡಿಮೆ ಮಾಡಿಕೊಳ್ಳಲು ಬಯಸುವವರಿಗೆ ಕಲ್ಲಂಗಡಿ ಬೆಸ್ಟ್ ಅಂತಾನೇ ಹೇಳಬಹುದು. ಇದರ ಜೊತೆಗೆ ಹಲವು ಪೋಷಕಾಂಶಗಳಿಗೆ ವಾಟರ್ ಮೆಲನ್ ಹೆಸರುವಾಸಿ. ಪೊಟ್ಯಾಸಿಯಮ್, ಮೆಗ್ನೀಸಿಯಮ್, ವಿಟಮಿನ್ ಎ ಮತ್ತು ವಿಟಮಿನ್ ಸಿ ಸೇರಿದಂತೆ ವಿವಿಧ ಪೋಷಕಾಂಶಗಳು ಇದರಲ್ಲಿವೆ. ಇನ್ನು ಇದರಲ್ಲಿರುವ ಸಿಟ್ರುಲಿನ್ ದೈಹಿಕ ಚಟುವಟಿಕೆಯನ್ನು ಹೆಚ್ಚಿಸುತ್ತದೆ. ಕಲ್ಲಂಗಡಿ ಹಣ್ಣಿನಲ್ಲಿರುವ ವಿಟಮಿನ್ ಸಿ, ಕ್ಯಾರೊಟಿನಾಯ್ಡ್, ಲೈಕೋಪೀನ್, ಕುಕುರ್ಬಿಟಾಸಿನ್ ಉತ್ತಮ ಆರೋಗ್ಯಕ್ಕೆ ಅವಶ್ಯಕ. ಇದರಿಂದ ಕ್ಯಾನ್ಸರ್ನಂತಹ ತೊಂದರೆಗಳನ್ನು ತಡೆಯಬಹುದು. ಸ್ನಾಯು ನೋವಿನಿಂದ ಬಳಲುತ್ತಿರುವವರಿಗೂ ಕಲ್ಲಂಗಡಿ ತುಂಬಾ ಉಪಯುಕ್ತವಾಗಿದೆ. ವಿಶೇಷವಾಗಿ ಇದರಲ್ಲಿರುವ ಸಿಟ್ರುಲಿನ್ ಅಮಿನೋ ಆಮ್ಲವು ಸ್ನಾಯು ನೋವನ್ನು ನಿವಾರಿಸುತ್ತದೆ.
ಇನ್ನು ಜೀರ್ಣಕ್ರಿಯೆಯ ಸಮಸ್ಯೆಗಳಿಗೂ ಕಲ್ಲಂಗಡಿ ಅತ್ಯುತ್ತಮ ಆಯ್ಕೆ ಅಂತಾನೇ ಹೇಳಬಹುದು. ಇದ್ರಲ್ಲಿರುವ ಫೈಬರ್ ಕರುಳಿನ ಆರೋಗ್ಯವನ್ನು ಧೃಢಗೊಳಿಸುತ್ತದೆ. ಜೀರ್ಣಾಂಗ ವ್ಯವಸ್ಥೆಯಿಂದ ತ್ಯಾಜ್ಯವನ್ನು ಹೊರಹಾಕುವಲ್ಲಿ ಇದು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಜೊತೆಗೆ ವಾಟರ್ ಮೆಲನ್ ಚರ್ಮದ ಸಮಸ್ಯೆಗಳಿಗೆ ಪವಾಡ ಪರಿಹಾರವಾಗಿಯೂ ಕಾರ್ಯನಿರ್ವಹಿಸುತ್ತದೆ. ಇದರಲ್ಲಿರುವ ವಿಟಮಿನ್ ಎ ಮತ್ತು ವಿಟಮಿನ್ ಸಿ ಚರ್ಮವನ್ನು ಆರೋಗ್ಯವಾಗಿರಿಸುತ್ತದೆ. ಹೀಗಾಗಿ ಬೇಸಿಗೆಯಲ್ಲಿ ಕಲ್ಲಂಗಡಿ ಸೇವಿಸೋದು ತುಂಬಾನೇ ಒಳ್ಳೆದು.