ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸುಮಲತಾಗೆ ಮೈತ್ರಿ ಶಾಕ್ – ಪಕ್ಷವೊಂದರ ಚಿಹ್ನೆಯಡಿ ಸ್ಪರ್ಧಿಸಬೇಕೆಂಬ ಪ್ರಯತ್ನ ವಿಫಲ..!

ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸುಮಲತಾಗೆ ಮೈತ್ರಿ ಶಾಕ್ – ಪಕ್ಷವೊಂದರ ಚಿಹ್ನೆಯಡಿ ಸ್ಪರ್ಧಿಸಬೇಕೆಂಬ ಪ್ರಯತ್ನ ವಿಫಲ..!

ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಜೆಡಿಎಸ್​ಗೆ ಮೂರು ಕ್ಷೇತ್ರಗಳು ಫೈನಲ್ ಆಗಿವೆ. ಮಂಡ್ಯ, ಹಾಸನ ಮತ್ತು ಕೋಲಾರ. ಇದನ್ನು ಖುದ್ದು ಹೆಚ್.ಡಿ ಕುಮಾರಸ್ವಾಮಿಯೇ ಘೋಷಣೆ ಮಾಡಿದ್ದಾರೆ. ಹಾಗೇ ಹಾಸನದಲ್ಲಿ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಅವ್ರೇ ಸ್ಪರ್ಧೆ ಮಾಡ್ತಾರೆ. ಅವ್ರನ್ನ ಗೆಲ್ಲಿಸಿ ಅನ್ನೋ ಮೂಲಕ ಮತಯಾಚನೆ ಮಾಡಿದ್ದಾರೆ. ಮಂಡ್ಯ ಕ್ಷೇತ್ರದ ಬಗ್ಗೆ ಹೆಚ್​ಡಿಕೆ ತುಟಿ ಬಿಚ್ಚಿಲ್ಲ. ಹೀಗಾಗಿ ಮಂಡ್ಯದ ದಳ ಅಭ್ಯರ್ಥಿಯಾಗಿ ಯಾರು ಕಣಕ್ಕಿಳಿಯುತ್ತಾರೆ ಅನ್ನೋದೇ ಮಿಲಿಯನ್ ಡಾಲರ್ ಪ್ರಶ್ನೆ. ಯಾಕಂದ್ರೆ ನಿಖಿಲ್ ಕುಮಾರಸ್ವಾಮಿ ಪರ ಕ್ಷೇತ್ರದಲ್ಲಿ ಅಲೆ ಇದ್ರೂ ನಿಖಿಲ್ ಸ್ಪರ್ಧೆ ಮಾಡಲ್ಲ ಅಂತಾ ಘೋಷಿಸಿದ್ದಾರೆ. ಖುದ್ದು ಹೆಚ್.ಡಿ ಕುಮಾರಸ್ವಾಮಿಗೇ ಬಿಜೆಪಿ ಹೈಕಮಾಂಡ್ ಆಫರ್ ಕೊಟ್ಟಿದ್ರೂ ರಾಷ್ಟ್ರ ರಾಜಕಾರಣಕ್ಕೆ ಹೋಗಲು ಹಿಂದೇಟು ಹಾಕಿದ್ದಾರೆ. ಹೀಗಾಗಿ ಜೆಡಿಎಸ್​ನಿಂದ ಯಾರು ಸ್ಪರ್ಧಿಸ್ತಾರೆ ಅನ್ನೋದೇ ದೊಡ್ಡ ತಲೆನೋವಾಗಿತ್ತು. ಕೊನೆಗೂ ಅಳೆದು ತೂಗಿ ಅಭ್ಯರ್ಥಿಯನ್ನ ಆಯ್ಕೆ ಮಾಡಿದ್ದಾರೆ. ಆದ್ರೆ ಇದು ಜೆಡಿಎಸ್ ಕೋಟೆಯಲ್ಲೇ ಕಂಪನ ಎಬ್ಬಿಸಿದೆ. ಮತ್ತೊಂದೆಡೆ ಸುಮಲತಾ ಅಂಬರೀಶ್ ಮುಂದಿನ ನಡೆಯೂ ನಿಗೂಢವಾಗಿದೆ. ಹಾಗಾದ್ರೆ ಜೆಡಿಎಸ್ ಅಭ್ಯರ್ಥಿ ಯಾರು..? ಸುಮಲತಾ ಕಾದು ನೋಡುವ ತಂತ್ರಕ್ಕೆ ಮೊರೆ ಹೋದ್ರಾ..? ಕಾಂಗ್ರೆಸ್​ನ ಸ್ಟಾರ್ ಚಂದ್ರುಗೆ ಹೊಡೆಯುತ್ತಾ ಜಾಕ್​​ಪಾಟ್..?.. ಈ ಎಲ್ಲಾ ವಿವರವಾದ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಶಪಥದಿಂದ ಸಿಕ್ಕಿಬಿದ್ರಾ ಸುಮಲತಾ? – ಸ್ವಾಭಿಮಾನ ಬಿಟ್ಟರೆ ಸೀಟು ಪಡೆಯಬಹುದಾ?

8 ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡ ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡುವುದು ಬಹುತೇಕ ಖಚಿತಗೊಂಡಿದೆ. ಅಧಿಕೃತ ಘೋಷಣೆಯೊಂದೇ ಬಾಕಿ ಇದೆ. ಈಗಾಗ್ಲೇ ಕಾಂಗ್ರೆಸ್​ನಿಂದ ಸ್ಟಾರ್ ಚಂದ್ರುಗೆ ಟಿಕೆಟ್ ಘೋಷಣೆ ಮಾಡಿಯಾಗಿದೆ. ಮತ್ತೊಂದೆಡೆ ಪಕ್ಷೇತರವಾಗಿ ಕಣಕ್ಕಿಳಿಯೋಕೆ ಹಾಲಿ ಸಂಸದೆ ಸುಮಲತಾ ಅಂಬರೀಶ್ ವೇದಿಕೆ ಸಿದ್ಧಗೊಳಿಸುತ್ತಿದ್ದಾರೆ. ಪ್ರಚಾರದ ಭರಾಟೆಯನ್ನೂ ಆರಂಭಿಸಿದ್ದಾರೆ. ಸಂಸದೆ ಸುಮಲತಾ ಅವರು ಬಿಜೆಪಿ ಟಿಕೆಟ್‌ಗಾಗಿ ಪಟ್ಟು ಹಿಡಿದಿದ್ದ ಕಾರಣ ಇಲ್ಲಿಯವರೆಗೂ ಮೈತ್ರಿ ಅಭ್ಯರ್ಥಿ ಆಯ್ಕೆ ವಿಷಯ ಕಗ್ಗಂಟಾಗಿ ಉಳಿದಿತ್ತು. ಆದ್ರೀಗ ಅಳೆದು ತೂಗಿ ಅಭ್ಯರ್ಥಿಯನ್ನ ಆಯ್ಕೆ ಮಾಡಲಾಗಿದೆ. ಜೆಡಿಎಸ್ ಮುಖಂಡ ಸಿ.ಎಸ್ ಪುಟ್ಟರಾಜುಗೆ ಮಂಡ್ಯ ಮೈತ್ರಿ ಟಿಕೆಟ್ ಎನ್ನಲಾಗಿದೆ. ಟಿಕೆಟ್ ಖಾತರಿಯಾಗ್ತಿದ್ದಂತೆ ಜಿಲ್ಲೆಯ ಪ್ರಮುಖ ನಾಯಕರ ವಿಶ್ವಾಸಗಳಿಸುವ ಯತ್ನ ನಡೆಯುತ್ತಿದೆ. ಸದ್ಯ ರಾಜಕೀಯದಿಂದ ಅಂತರ ಕಾಯ್ದುಕೊಂಡಿರುವ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರನ್ನು ಪುಟ್ಟರಾಜು ಭೇಟಿ ಮಾಡಿದ್ದಾರೆ. ಪೇಟ, ಶಾಲು, ಹೂಮಾಲೆ ಹಾಕಿ ಸನ್ಮಾಸಿದ್ದಾರೆ. ಮಾಜಿ ಸಿಎಂ ಎಸ್​ ಎಂ ಕೃಷ್ಣ ರಾಜಕೀಯದಿಂದ ದೂರವಿದ್ದರೂ ಮಂಡ್ಯದಲ್ಲಿ ಅಪಾರ ಬೆಂಬಲಿಗರು, ಅಭಿಮಾನಿಗಳನ್ನ ಹೊಂದಿದ್ದಾರೆ. ಆ ಹಿನ್ನಲೆ ಎಸ್.ಎಂ.ಕೆ ಬೆಂಬಲಿಗರ ವಿಶ್ವಾಸಗಳಿಸಲು ಸಿ.ಎಸ್.ಪುಟ್ಟರಾಜು ಭೇಟಿ ಮಾಡಿದ್ದಾರೆ ಎನ್ನಲಾಗುತ್ತಿದೆ.

ಪುಟ್ಟರಾಜುಗೆ ಮಂಡ್ಯ ಟಿಕೆಟ್? 

ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಅಲಿಯಾಸ್ ವೆಂಕಟರಮಣೇಗೌಡ ವಿರುದ್ಧ ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್ ಮುಖಂಡ ಸಿ.ಎಸ್.ಪುಟ್ಟರಾಜು ಹೆಸರು ಅಂತಿಮಗೊಂಡಿದೆ ಎನ್ನಲಾಗುತ್ತಿದೆ.  ಹೆಚ್.ಡಿ.ಕುಮಾರಸ್ವಾಮಿ ಹಾಗೂ ಡಿ.ಸಿ.ತಮ್ಮಣ್ಣ ಅವರ ಹೆಸರುಗಳು ಚರ್ಚೆಯಲ್ಲಿದ್ರೂ ಸಿ.ಎಸ್.ಪುಟ್ಟರಾಜು ಅವರೇ ಅಂತಿಮವಾಗಿ ಅಭ್ಯರ್ಥಿಯಾಗಲಿದ್ದಾರಂತೆ. ಕಳೆದೆರಡು ದಿನಗಳಿಂದ ಸಿ.ಎಸ್.ಪುಟ್ಟರಾಜು ವಿಷಯ ಮುನ್ನೆಲೆಗೆ ಬಂದಿದ್ದು ಇದೇ ಹೆಸರು ಘೋಷಣೆ ಸಾಧ್ಯತೆ ಇದೆ. ಇಷ್ಟು ದಿನ ದೇವೇಗೌಡ ಕುಟುಂಬದವ್ರೇ ಅಭ್ಯರ್ಥಿಯಾಗಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದರು. ಆದರೆ ದೊಡ್ಡಗೌಡ್ರ ಕುಟುಂಬ ಸದಸ್ಯರು ಸ್ಪರ್ಧಿಸುವ ಸಾಧ್ಯತೆ ತೀರಾ ಕಡಿಮೆ ಇದೆ. ಹಾಸನ ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳಲ್ಲಿ ಹೆಚ್​ಡಿಡಿ ಕುಟುಂಬ ಸದಸ್ಯರೇ ಸ್ಪರ್ಧಿಸುತ್ತಿರುವ ಕಾರಣ ಮಂಡ್ಯದಲ್ಲಿ ಕುಟುಂಬ ಸದಸ್ಯರು ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಸಿ.ಎಸ್ ಪುಟ್ಟರಾಜುಗೆ ಟಿಕೆಟ್ ನೀಡುವ ಸಾಧ್ಯತೆ ಇದೆ.

ಹೀಗೆ ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸಿ.ಎಸ್ ಪುಟ್ಟರಾಜು ಹೆಸರು ಮುನ್ನಲೆಗೆ ಬಂದಿದ್ರೆ ಅತ್ತ ಕಾಂಗ್ರೆಸ್ ಈಗಾಗ್ಲೇ ಭರ್ಜರಿ ಪ್ರಚಾರ ನಡೆಸುತ್ತಿದೆ. ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪ್ರಚಾರ ಕ್ಷೇತ್ರದಾದ್ಯಂತ ಅತ್ಯಂತ ಉತ್ಸಾಹದಿಂದ ನಡೆಯುತ್ತಿದೆ. ಚಂದ್ರು ಸುತ್ತಲೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸೇರಿದಂತೆ ಶಾಸಕರ ಕೋಟೆಯೇ ನಿರ್ಮಾಣವಾಗಿದೆ. ಜಿಲ್ಲೆಯಾದ್ಯಂತ ಸಣ್ಣ ಪುಟ್ಟ ಸಮುದಾಯಗಳನ್ನು ಸಂಘಟಿಸಿ ಅವರನ್ನು ತಮ್ಮತ್ತ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಆದ್ರೆ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಲ್ಲಿ ಇಲ್ಲಿವರೆಗೂ ಉತ್ಸಾಹ ಕಾಣುತ್ತಿಲ್ಲ. ಯಾಕಂದ್ರೆ ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ಯಾರು ಅನ್ನೋದು ಘೋಷಣೆಯಾಗಿಲ್ಲ. ಅಲ್ಲದೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತು ಕಂಗೆಟ್ಟಿರುವ ಜೆಡಿಎಸ್ ನಾಯಕರು ಅದ್ರಿಂದ ಹೊರಬರಲು ಸಾಧ್ಯವಾಗಿಲ್ಲ. ಮತ್ತೊಂದೆಡೆ ಜೆಡಿಎಸ್ ಸ್ಥಳೀಯ ಮುಖಂಡರಲ್ಲೂ ಒಳಜಗಳ, ಅಸಮಾಧಾನಗಳಿವೆ. ಇದು ಮೈತ್ರಿ ಕಥೆಯಾದ್ರೆ ಸುಮಲತಾ ಅಂಬರೀಶ್ ಮುಂದಿನ ನಡೆಯೂ ಕುತೂಹಲ ಮೂಡಿಸಿದೆ.

ಸುಮಲತಾ ನಡೆ ಏನು?  

ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸಂಸದೆ ಸುಮಲತಾ ಅವರಿಗೆ ಜೆಡಿಎಸ್-ಬಿಜೆಪಿ ಮೈತ್ರಿ ಭಾರಿ ನಿರಾಸೆ ತಂದಿದೆ. ಪಕ್ಷವೊಂದರ ಚಿಹ್ನೆಯಡಿ ಸ್ಪರ್ಧಿಸಬೇಕೆಂಬ ಅವರ ಪ್ರಯತ್ನಕ್ಕೆ ಫಲ ಸಿಕ್ಕಿಲ್ಲ. ಕಾಂಗ್ರೆಸ್ ಬಿಜೆಪಿ ಎರಡೂ ಪಕ್ಷಗಳೂ ಹೊರಗಿಟ್ಟಿರುವ ಕಾರಣ ಅವರ ಮುಂದಿನ ನಡೆ ಏನು ಎಂಬುದು ಕುತೂಹಲ ಮೂಡಿಸಿದೆ. ಅಂಬರೀಶ್ ಅಭಿಮಾನಿಗಳನ್ನು ಹೊರತುಪಡಿಸಿದ್ರೆ ಸಂಸದೆಯ ಪರವಾಗಿ ನಿಲ್ಲುವವರು ಮಾತನಾಡುವವರು ಯಾರೂ ಇಲ್ಲವಾಗಿದ್ದಾರೆ. ಹೀಗಾಗಿ ಸುಮಲತಾ ಮಂಡ್ಯ ಕ್ಷೇತ್ರದಲ್ಲಿ ಅಕ್ಷರಶಃ ಒಬ್ಬಂಟಿಯಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಗೆದ್ದ ನಂತರ ಸುಮಲತಾ ಕ್ಷೇತ್ರದ ಜನರ ಜೊತೆ ಬೆರೆತಿಲ್ಲ ಎಂಬ ಆರೋಪವೂ ಇದೆ. ಅಲ್ಲದೆ ಸ್ಥಳೀಯ ಬಿಜೆಪಿ ಮುಖಂಡರಿಗೆ ಅವರ ಮೇಲೆ ವಿಶ್ವಾಸವಿಲ್ಲ. ಹೀಗಾಗೇ ಸುಮಲತಾಗೇ ಯಾವುದೇ ಪಕ್ಷಗಳ ಬೆಂಬಲವೂ ಇಲ್ಲ, ಜನ ಕೂಡ ಸಾಥ್ ಕೊಡುತ್ತಿಲ್ಲ.

ಒಟ್ನಲ್ಲಿ ಮಂಡ್ಯ ಕ್ಷೇತ್ರ ದಿನದಿನಕ್ಕೂ ಸಂಚಲನ ಸೃಷ್ಟಿಸುತ್ತಿದೆ. ಈಗಾಗ್ಲೇ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಕ್ಷೇತ್ರದಲ್ಲಿ ಮತಬೇಟೆ ಆರಂಭಿಸಿದ್ದಾರೆ. ಆದ್ರೆ ಮೈತ್ರಿಯಲ್ಲಿ ಮಾತ್ರ ಟಿಕೆಟ್ ಯಾರಿಗೆ ಅನ್ನೋದೇ ಇನ್ನೂ ಘೋಷಣೆಯಾಗಿಲ್ಲ. ಹೀಗಾಗಿ ಜೆಡಿಎಸ್ ಬಿಜೆಪಿ ಕಾರ್ಯಕರ್ತರು ಸೈಲೆಂಟ್ ಆಗಿದ್ದಾರೆ. ಇನ್ನು ಸುಮಲತಾ ಕೂಡ ಯಾರ ಬೆಂಬಲವೂ ಇಲ್ಲದೆ ಒಬ್ಬಂಟಿಯಾಗಿ ಹೋರಾಡುವ ಅನಿವಾರ್ಯತೆ ಎದುರಾಗಿದೆ. ಈ ಎಲ್ಲಾ ಕಾರಣಗಳಿಂದ ಮಂಡ್ಯ ಕ್ಷೇತ್ರ ಮತ್ತೆ ರೋಚಕ ಘಟ್ಟ ತಲುಪಿದೆ.

Sulekha