ಯಡಿಯೂರಪ್ಪ ಕೊಟ್ಟ ಮಾತು ಉಳಿಸಿಕೊಂಡಿಲ್ಲ.. ತಾಯಿಯ ಕುತ್ತಿಗೆ ಹಿಸುಕುತ್ತಿದ್ದಾರೆ – ಈಶ್ವರಪ್ಪ ವಾಗ್ದಾಳಿ
ಹಾವೇರಿ-ಗದಗ ಲೋಕಸಭೆ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ಈಶ್ವರಪ್ಪ ಪುತ್ರ ಕಾಂತೇಶ್ ಗೆ ತೀವ್ರ ನಿರಾಸೆಯಾಗಿದೆ. ಬಿಜೆಪಿ ಹಿರಿಯ ನಾಯಕ ಕೆ.ಎಸ್ ಈಶ್ವರಪ್ಪ ಪುತ್ರನಿಗೆ ಟಿಕೆಟ್ ಕೊಡಿಸಲು ಎಲ್ಲಿಲ್ಲದ ಕಸರತ್ತು ನಡೆಸಿದ್ದರು. ಅವರ ಪ್ರಯತ್ನಕ್ಕೆ ಫಲ ಸಿಗಲಿಲ್ಲ. ಮಗನಿಗೆ ಟಿಕೆಟ್ ಬಿಎಸ್ ವೈ ಅವರು ಕೊಡಿಸಿಲ್ಲ ಎನ್ನುವ ಈಶ್ವರಪ್ಪ ಅಸಮಾಧಾನ ಹೊರಹಾಕಿದ್ದಾರೆ.. ಯಡಿಯೂರಪ್ಪ ಅವರು ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ. ತಾಯಿಯ ಕುತ್ತಿಗೆ ಹಿಸುಕುತ್ತಿದ್ದಾರೆ ಎಂದು ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ತುಕಾಲಿ ಸಂತೋಷ್ ಕಾರು ಅಪಘಾತ – ಆಟೋ ಚಾಲಕ ಸಾವು
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ನಾನು ಯಡಿಯೂರಪ್ಪ ಮನೆಗೆ ಹೋದಾಗ ಕಾಂತೇಶ್ಗೆ ಹಾವೇರಿ ಕ್ಷೇತ್ರದಿಂದ ಟಿಕೆಟ್ ಕೊಡಿಸುವ ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾಂತೇಶ್ ಆ ಭಾಗದಲ್ಲಿ ಓಡಾಡಿದ್ದ, ಜನರ ವಿಶ್ವಾಸಗಳಿಸಿದ್ದ. ಆದರೆ ಯಡಿಯೂರಪ್ಪ ತಮ್ಮ ಮಾತನ್ನು ಉಳಿಸಿಕೊಳ್ಳಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕೇವಲ ಕಾಂತೇಶ್ಗೆ ಮಾತ್ರವಲ್ಲ ಪ್ರತಾಪ್ ಸಿಂಹ, ಸದಾನಂದ ಗೌಡ, ಸಿ.ಟಿ.ರವಿ ಸೇರಿದಂತೆ ಅನೇಕರಿಗೆ ಅನ್ಯಾಯವಾಗಿದೆ. ನನ್ನ ಬೆಂಬಲಿಗರು ಶಿವಮೊಗ್ಗ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತೆ ಒತ್ತಾಯಿಸುತ್ತಿದ್ದಾರೆ. ಈ ಬಗ್ಗೆ ನಾನು ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ಇದು ನನ್ನ ಭವಿಷ್ಯ, ರಾಜ್ಯದ ಭವಿಷ್ಯ, ಪಕ್ಷದ ಭವಿಷ್ಯ. ಮಾರ್ಚ್ 15 ರಂದು ಸಭೆ ನಡೆಸ್ತೇನೆ, ನಂತರ ಮುಂದಿನ ನಿರ್ಧಾರ ತೆಗೆದುಕೊಳ್ತೇನೆ ಎಂದು ಹೇಳಿದ್ದಾರೆ.
ಪಕ್ಷದ ಹಿರಿಯರೇ ಹೇಳುತ್ತಿದ್ದಾರೆ. ಪ್ರತಾಪ್ ಸಿಂಹ, ಸಿಟಿ ರವಿ, ನಳೀನ್ ಕುಮಾರ್ ಕಟೀಲ್, ನಿಮ್ಮಂಥ ನಿಷ್ಠಾವಂತರನ್ನೇ ಪಕ್ಕಕ್ಕೆ ಸರಿಸುತ್ತಿದ್ದಾರೆ. ಅವರು ತಾಯಿಯ ಕುತ್ತಿಗೆಯನ್ನೇ ಹಿಸುಕುತ್ತಿದ್ದಾರೆ. ತಮ್ಮ ವೈಯಕ್ತಿಕ ಸಾಧನೆಗಾಗಿ ನೀವು ಏನು ಸ್ಟ್ಯಾಂಡ್ ತೆಗೆದುಕೊಳ್ಳಬೇಕು? ತಾಯಿಯನ್ನೇ ಅವರ ಕೈಯಿಂದ ಹಿಸುಕುತ್ತಿದ್ದಾರೆ ಎಂಬ ಪ್ರಶ್ನೆ ಎದ್ದಿದೆ. ಅನೇಕ ಬೆಂಬಲಿಗರು ಈ ಮಾತನ್ನು ಹೇಳುತ್ತಿದ್ದಾರೆ ಎಂದು ಈಶ್ವರಪ್ಪ ಹೇಳಿದ್ದಾರೆ.
ಯಡಿಯೂರಪ್ಪ ಹಠಕ್ಕೆ ಬಿದ್ದು ಶೋಭಾ ಕರಂದ್ಲಾಜೆ ಹಾಗೂ ಬಸವರಾಜ್ ಬೊಮ್ಮಾಯಿ ಅವರಿಗೆ ಟಿಕೆಟ್ ಕೊಡಿಸಿದ್ದಾರೆ. ನನ್ನ ಮಗನಿಗೆ ಟಿಕೇಟ್ ಕೊಡಿಸಲು ಆಗಲಿಲ್ಲವೇ? ತಾಯಿ ಸ್ಥಾನದಲ್ಲಿರೋರು ಪಕ್ಷದ ಕತ್ತು ಹಿಸುಕುತ್ತಿದ್ದಾರೆ. ತಾಯಿ ಸ್ಥಾನದಲ್ಲಿರುವ ಪಕ್ಷವನ್ನು ಉಳಿಸುವಂತೆ ಕಾರ್ಯಕರ್ತರು ನನಗೆ ಒತ್ತಾಯಿಸುತ್ತಿದ್ದಾರೆ. ಹಿಂದುತ್ವದ ವಿಚಾರದಲ್ಲಿ ಮಾತನಾಡುತ್ತಿದ್ದವರನ್ನು ಮೂಲೆಗುಂಪು ಮಾಡಲಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.