ಟಾಟಾ ಸನ್ಸ್ ವಿಮಾನಯಾನ ಸಂಸ್ಥೆಗಳ ವಿಲೀನ ಪ್ರಕ್ರಿಯೆ ಶೀಘ್ರದಲ್ಲೇ ಆರಂಭ!
ನವದೆಹಲಿ: ಟಾಟಾ ಸನ್ಸ್ ತನ್ನ ವಿಮಾನಯಾನ ಸಂಸ್ಥೆಗಳ ವಿಲೀನ ಪ್ರಕ್ರಿಯೆಯನ್ನು ಈಗಾಗಲೇ ಆರಂಭಿಸಿದ್ದು, ಈ ತಿಂಗಳ ಆರಂಭದಲ್ಲಿ ಟಾಟಾ ಸನ್ಸ್ ಏರ್ ಏಷ್ಯಾದಲ್ಲಿದ್ದ ಮಲೇಷಿಯನ್ ಏರ್ ಲೈನ್ ನ ಶೇ.16ರಷ್ಟು ಪಾಲನ್ನು ಸ್ವಾಧೀನ ಪಡಿಸಿಕೊಳ್ಳುವ ಮೂಲಕ ಇದನ್ನು ಏರ್ ಇಂಡಿಯಾ ಎಕ್ಸ್ ಪ್ರೆಸ್ ನಲ್ಲಿ ವಿಲೀನಗೊಳಿಸಿತ್ತು. ಇದೀಗ ವಿಸ್ತಾರಾ, ಏರ್ಏಷ್ಯಾ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್ಪ್ರೆಸ್ ಶೀಘ್ರದಲ್ಲೇ ಏರ್ ಇಂಡಿಯಾ ಬ್ರ್ಯಾಂಡ್ನಡಿ ಬರಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಅಮೆಜಾನ್, ಟ್ವಿಟರ್ ಬೆನ್ನಲ್ಲೇ ಡಿಸ್ನಿ ಸಿಬ್ಬಂದಿಗೂ ಕಹಿ ಸುದ್ದಿ: ನೇಮಕಾತಿ ತಡೆ, ಉದ್ಯೋಗ ಕಡಿತ!
ವಿಸ್ತಾರಾದಲ್ಲಿ ಪಾಲು ಹೊಂದಿರುವ ಸಿಂಗಾಪುರ್ ಏರ್ಲೈನ್ಸ್ (ಎಸ್ಐಎ)ನೊಂದಿಗೆ ಟಾಟಾ ಗ್ರೂಪ್ ಮೊದಲ ಸುತ್ತಿನ ಚರ್ಚೆ ನಡೆಸಿದ ಬಳಿಕ ಈ ವಿಚಾರ ಬೆಳಕಿಗೆ ಬಂದಿದ್ದು, ಈ ವಿಲೀನ ಪ್ರಕ್ರಿಯೆ ಪೂರ್ಣಗೊಂಡಲ್ಲಿ ಫ್ಲೀಟ್ ಮತ್ತು ಮಾರುಕಟ್ಟೆ ಪಾಲಿನಲ್ಲಿ ಏರ್ ಇಂಡಿಯಾ ದೇಶದ ಎರಡನೇ ಅತಿದೊಡ್ಡ ವಿಮಾನಯಾನ ಸಂಸ್ಥೆ ಎನಿಸಿಕೊಳ್ಳಲಿದೆ.
ಕಳೆದ ವರ್ಷ ಏರ್ ಇಂಡಿಯಾವನ್ನು ಬಿಡ್ನಲ್ಲಿ ಗೆದ್ದುಕೊಂಡ ನಂತರ ಈ ವರ್ಷದ ಜನವರಿಯಲ್ಲಿ ಕಂಪನಿಯ ಜವಾಬ್ದಾರಿಯನ್ನು ಟಾಟಾ ವಹಿಸಿಕೊಂಡಿತ್ತು. ವಿಲೀನದ ನಂತರ ಏರ್ ಇಂಡಿಯಾ ಬ್ರ್ಯಾಂಡ್ ಅಡಿಯಲ್ಲಿ ಟಾಟಾ ಗ್ರೂಪ್ ಕಡಿಮೆ-ವೆಚ್ಚದ ಮತ್ತು ಪೂರ್ಣ ಪ್ರಮಾಣದ ಸೇವೆ ನೀಡುವ ವಿಮಾನಯಾನ ಸಂಸ್ಥೆಯನ್ನು ನಿರ್ವಹಿಸಲಿದೆ. ವಿಲೀನದ ನಂತರ ಟಾಟಾ ಗ್ರೂಪ್ ಏರ್ ಇಂಡಿಯಾ ಹೆಸರಲ್ಲಿ ಒಂದೇ ವಿಮಾನ ಸಂಸ್ಥೆಯನ್ನು ಹೊಂದಿರಲಿದೆ ಎಂದು ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಏರ್ ಇಂಡಿಯಾ ಸಿಇಒ ಕ್ಯಾಂಪ್ಬೆಲ್ ವಿಲ್ಸನ್, ಮುಖ್ಯ ವಾಣಿಜ್ಯ ಅಧಿಕಾರಿ ನಿಪುನ್ ಅಗರ್ವಾಲ್, ಏರ್ ಏಷ್ಯಾ ಇಂಡಿಯಾ ಸಿಇಒ ಸುನಿಲ್ ಭಾಸ್ಕರನ್ ಮತ್ತು ಏರ್ ಇಂಡಿಯಾ ಎಕ್ಸ್ಪ್ರೆಸ್ ಸಿಇಒ ಅಲೋಕೆ ಸಿಂಗ್ ಅವರು ವಿಲೀನ ಪ್ರಕ್ರಿಯೆಯ ನೇತೃತ್ವ ವಹಿಸಿದ್ದು, ಮುಂದಿನ ಒಂದು ವರ್ಷದಲ್ಲಿ ಇದು ಪೂರ್ಣಗೊಳ್ಳಬಹುದು ಎಂದು ತಿಳಿದುಬಂದಿದೆ. ಅಲ್ಲದೇ ಈ ವಿಲೀನದೊಂದಿಗೆ ಏರ್ ಇಂಡಿಯಾ ಸುಮಾರು 233 ವಿಮಾನಗಳೊಂದಿಗೆ ಮತ್ತಷ್ಟು ಶಕ್ತಿಯನ್ನು ಪಡೆಯಲಿದ್ದು, ಕಾರ್ಯಾಚರಣೆಯ ವೆಚ್ಚ ಇಳಿಕೆಯಾಗಲಿದೆ. ಇದಲ್ಲದೆ ವಿಮಾನ ಮತ್ತು ಎಂಜಿನ್ ತಯಾರಕರಂತಹ ಮೂಲ ಉಪಕರಣ ತಯಾರಕರೊಂದಿಗೆ ಕಂಪನಿಗೆ ಹೆಚ್ಚಿನ ಚೌಕಾಶಿ ಮಾಡಲು ಸಾಧ್ಯವಾಗಲಿದೆ. ಅಧಿಕಾರಿಗಳ ಪ್ರಕಾರ ಟಾಟಾ ಗ್ರೂಪ್ ಮತ್ತು ಏರ್ ಇಂಡಿಯಾ ಅಧ್ಯಕ್ಷ ಎನ್ ಚಂದ್ರಶೇಖರನ್, ಮತ್ತು ಸಿಂಗಾಪುರ್ ಏರ್ಲೈನ್ಸ್ ಹಾಗೂ ಏರ್ ಏಷ್ಯಾದ ಉನ್ನತ ಅಧಿಕಾರಿಗಳು ಈ ವಿಲೀನಕ್ಕೆ ಒಪ್ಪಿಕೊಂಡಿದ್ದಾರೆ.