ರೆಸ್ಟೋರೆಂಟ್ ಆಗಿ ಬದಲಾಗುತ್ತಿದೆ ರೈಲು ಬೋಗಿ – ಮಾರ್ಚ್​ ಅಂತ್ಯದ ವೇಳೆ ಬೆಂಗಳೂರಿನ ಈ ರೈಲ್ವೆ ನಿಲ್ದಾಣದಲ್ಲಿ ಆರಂಭ

ರೆಸ್ಟೋರೆಂಟ್ ಆಗಿ ಬದಲಾಗುತ್ತಿದೆ ರೈಲು ಬೋಗಿ – ಮಾರ್ಚ್​ ಅಂತ್ಯದ ವೇಳೆ ಬೆಂಗಳೂರಿನ ಈ ರೈಲ್ವೆ ನಿಲ್ದಾಣದಲ್ಲಿ ಆರಂಭ

ಹಳೆಯದಾದ ರೈಲುಗಳನ್ನು ಇಷ್ಟು ದಿನಗಳ ಕಾಲ ಗುಜರಿಗೆ ಹಾಕಲಾಗುತ್ತಿತ್ತು. ಇದ್ರಿಂದ ರೈಲ್ವೇ ಇಲಾಖೆಗೆ ಐದರಿಂದ ಆರು ಲಕ್ಷದವರೆಗೆ ಹಣ ಬರ್ತಿತ್ತು. ಆದ್ರೀಗ ರೈಲ್ವೇ ಇಲಾಖೆ ಹಣವನ್ನು ಡಬಲ್‌ ಮಾಡಲು ಚಿಂತನೆ ನಡೆಸಿದೆ. ಈ ಹಿನ್ನೆಲೆಯಲ್ಲಿ ರೈಲ್ವೇ ಇಲಾಖೆ ಹೊಸ ಪ್ಲಾನ್ ವೊಂದನ್ನು ಮಾಡಿದೆ. ಅದು ರೈಲು ಕೋಚ್​ ರೆಸ್ಟೋರೆಂಟ್​​.

ಹೌದು, ರೈಲ್ವೇ ಇಲಾಖೆ ಇಷ್ಟು ದಿನಗಳ ಕಾಲ ಹಳೆಯ ರೈಲುಗಳನ್ನು ಗುಜರಿಗೆ ಹಾಕುತ್ತಿತ್ತು. ಇದ್ರಿಂದ ಇಲಾಖೆಗೆ ಒಂದಷ್ಟು ಆದಾಯ ಬರುತ್ತಿತ್ತು. ಇದೀಗ ಆ ಆದಾಯವನ್ನು ಡಬಲ್‌ ಮಾಡಲು ಮುಂದಾಗಿದೆ. ಅದಕ್ಕಾಗಿ ಹಳೆಯ ರೈಲು ಕೋಚ್​ಗಳನ್ನೇ  ರೆಸ್ಟೋರೆಂಟ್ ಗಳಾಗಿ ಮಾರ್ಪಾಡು ಮಾಡುತ್ತಿದೆ​​. ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮತ್ತು ಬೈಯಪ್ಪನಹಳ್ಳಿಯ ಸರ್ ಎಂ. ವಿಶ್ವೇಶ್ವರಯ್ಯ (SMVT) ರೈಲು ನಿಲ್ದಾಣದಲ್ಲಿ ಮಾರ್ಚ್​ ಅಂತ್ಯದ ವೇಳೆಗೆ ರೈಲು ಕೋಚ್ ರೆಸ್ಟೋರೆಂಟ್‌ಗಳು ಶುರುವಾಗಲಿದೆ ಎಂದು ನೈಋತ್ಯ ರೈಲ್ವೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಟ್ರೋಲ್‌ ಸಾಂಗ್ ಈ ಪಾರ್ಟ್ ಅರ್ಥ ಆಯ್ತಾ? – ಉಪ್ಪಿ‌ಗಿಂತ ರುಚಿ ಬೇರೆ ಇಲ್ಲ..!  

ರೈಲು ಕೋಚ್ ರೆಸ್ಟೋರೆಂಟ್‌ ನಿರ್ಮಾಣಕ್ಕೆ 2023ರ ಜೂನ್​​ನಲ್ಲಿ​ ಟೆಂಡರ್​ ಕರೆಯಲಾಗಿತ್ತು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ರೈಲು ಕೋಚ್​ ರೆಸ್ಟೋರೆಂಟ್​ನ ಗುತ್ತಿಗೆಯನ್ನು ಒಎಎಂ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್‌ ಮತ್ತು ಬೈಯಪ್ಪನಹಳ್ಳಿ ರೈಲು ನಿಲ್ದಾಣದ ರೈಲು ಕೋಚ್​ ರೆಸ್ಟೋರೆಂಟ್​ನ ಗುತ್ತಿಗೆಯನ್ನು ಗೌರವ್ ಎಂಟರ್‌ಪ್ರೈಸಸ್ ಪಡೆದುಕೊಂಡಿದೆ. ಈ ಗುತ್ತಿಗೆ​​ ಐದು ವರ್ಷಗಳವರೆಗೆ ಇರುತ್ತದೆ ಎಂದು ರೈಲ್ವೇ ಇಲಾಖೆ ಮಾಹಿತಿ ನೀಡಿದೆ.

ಈಗಾಗಲೇ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿ ರೈಲು ನಿಲ್ದಾಣದಲ್ಲಿ ರೈಲು ಕೋಚ್ ರೆಸ್ಟೋರೆಂಟ್ ಅನ್ನು ಸ್ಥಾಪಿಸಲಾಗಿದೆ. ರೈಲು ಕೋಚ್ ರೆಸ್ಟೋರೆಂಟ್‌ಗೆ ‘ಬೋಗಿ ಬೋಗಿ’ ಎಂದು ಹೆಸರಿಡಲಾಗಿದೆ. ಈ ರೈಲು ಕೋಚ್​ ರೆಸ್ಟೋರೆಂಟ್​ ಯಶಸ್ವಿಯಾಗಿದೆ. ಹೀಗಾಗಿ ಇದೇ ಮಾದರಿಯಲ್ಲಿ ಬೆಂಗಳೂರಿನಲ್ಲೂ ಆರಂಭಿಸಲಾಗುತ್ತದೆ. ಶ್ರೀ ಸಿದ್ಧಾರೂಢ ಸ್ವಾಮಿ ರೈಲು ನಿಲ್ದಾಣದಲ್ಲಿರುವ ‘ಬೋಗಿ ಬೋಗಿ’ ರೈಲು ಕೋಚ್ ರೆಸ್ಟೋರೆಂಟ್ 24/7 ಕಾರ್ಯನಿರ್ವಹಿಸುತ್ತದೆ. ಈ ರೆಸ್ಟೋರೆಂಟ್​ ಎಸಿ ಮತ್ತು ನಾನ್-ಎಸಿ ಆಸನಗಳನ್ನು ಹೊಂದಿದೆ.

ಬೆಂಗಳೂರಿನಲ್ಲಿ ರೈಲು ಕೋಚ್ ರೆಸ್ಟೋರೆಂಟ್‌ ಪ್ರಾರಂಭಿಸಲು 2023 ಅಕ್ಟೋಬರ್​ ಗಡುವು ನೀಡಲಾಗಿತ್ತು. ಆದರೆ ಕಾರಣಾಂತರಗಳಿಂದ ಐದು ತಿಂಗಳು ತಡವಾಗಿ ಪ್ರಾರಂಭವಾಗುತ್ತಿದೆ. ರೈಲ್ ಕೋಚ್ ರೆಸ್ಟೋರೆಂಟ್‌ ರೈಲ್ವೇ ನಿಲ್ದಾಣಗಳ ಮುಖ್ಯ ದ್ವಾರದ ಬಳಿ ಸ್ಥಾಪಿಸಲಾಗುತ್ತದೆ. ನೈಋತ್ಯ ರೈಲ್ವೆ ವಿಭಾಗ ಪ್ರತಿಯೊಂದು ರೈಲು ನಿಲ್ದಾಣದಲ್ಲೂ ಇಂತಹ ರೆಸ್ಟೋರೆಂಟ್​ ತೆರೆಯಲು ಯೋಚಿಸಿದೆ.

ಸಸ್ಯಹಾರಿ ಮತ್ತು ಮಾಂಸಾಹಾರಿ ಅಡುಗೆಗಾಗಿ ಪ್ರತ್ಯೇಕ ಅಡುಗೆ ಮನೆ ಇರುತ್ತದೆ. ಮತ್ತು ಈ ರೆಸ್ಟೋರೆಂಟ್​​ನಲ್ಲಿ ಉತ್ತರ ಮತ್ತು ದಕ್ಷಿಣ ಭಾರತೀಯ ಆಹಾರ ಸಿಗುತ್ತದೆ. ರೆಸ್ಟೋರೆಂಟ್‌ ಒಳಗೆ 50 ಜನರು ಕೂರಬಹುದು ಮತ್ತು ಹೆಚ್ಚುವರಿಯಾಗಿ ಹೊರಾಂಗಣದಲ್ಲಿ ಆಸನಗಳಿರುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹುಬ್ಬಳ್ಳಿ, ಚೆನ್ನೈ, ಹೈದರಾಬಾದ್, ವಿಜಯವಾಡ, ಭೋಪಾಲ್, ಮುಂಬೈ, ನಾಗ್ಪುರ, ಲಕ್ನೋ ಮತ್ತು ಕೋಲ್ಕತ್ತಾದಂತಹ ನಗರಗಳಲ್ಲಿನ ರೈಲು ನಿಲ್ದಾಣಗಳಲ್ಲಿ ಈಗಾಗಲೇ ಈ ರೀತಿ ರೈಲು ರೆಸ್ಟೋರೆಂಟ್‌ಗಳಿವೆ. ಬೆಂಗಳೂರಿಗರು ಕೂಡ ಈ ತಿಂಗಳ ಕೊನೆಯಲ್ಲಿ ಈ ವಿಶಿಷ್ಟ ಅನುಭವವನ್ನು ಪಡೆಯಬಹುದಾಗಿದೆ.

Shwetha M