ಮಂಡ್ಯದಲ್ಲಿ ಹೆಚ್‌.ಡಿ ಕುಮಾರಸ್ವಾಮಿ ಸ್ಪರ್ಧೆಗೆ ಒತ್ತಾಯ! – ಯೂ ಟರ್ನ್ ಹೊಡೆದ ಸುಮಲತಾ?

ಮಂಡ್ಯದಲ್ಲಿ ಹೆಚ್‌.ಡಿ ಕುಮಾರಸ್ವಾಮಿ ಸ್ಪರ್ಧೆಗೆ ಒತ್ತಾಯ! – ಯೂ ಟರ್ನ್ ಹೊಡೆದ ಸುಮಲತಾ?

ರಾಜಕೀಯ ಅನ್ನೋದೇ ಹಾಗೇ. ಯಾವಾಗ ಏನ್ ನಡೆಯುತ್ತೆ, ಯಾರು ಎಲ್ಲಿರ್ತಾರೆ ಅನ್ನೋದನ್ನೇ ಹೇಳೋಕಾಗಲ್ಲ. ಇವತ್ತಿದ್ದ ಸರ್ಕಾರ ನಾಳೆ ಪತನವಾದ್ರೂ ಅಚ್ಚರಿ ಇಲ್ಲ. ಇದೀಗ ಇಂಥದ್ದೇ ಬೆಳವಣಿಗೆ ಮಂಡ್ಯದಲ್ಲಿ ನಡೀತಿದೆ. ಇಷ್ಟು ದಿನ ಜಪ್ಪಯ್ಯ ಅಂದ್ರೂ ಮಂಡ್ಯ ಬಿಟ್ಟು ಹೋಗಲ್ಲ ಅಂತಿದ್ದ ಸಂಸದೆ ಸುಮಲತಾ ಅಂಬರೀಶ್ ಈಗ ಯೂಟರ್ನ್ ಹೊಡೆದ್ರಾ ಅನ್ನೋದೇ ದೊಡ್ಡ ಸಂಚಲನ ಸೃಷ್ಟಿಸಿದೆ. ನಾನು ಮಂಡ್ಯದ ಸೊಸೆ, ಮಂಡ್ಯದ ಗಂಡು ಅಂಬರೀಶ್ ಪತ್ನಿ, ಗೌಡ್ತಿ, ಸ್ವಾಭಿಮಾನದ ಸಮರ ಅಂತೆಲ್ಲಾ ಹೇಳ್ತಿದ್ದ ಸುಮಲತಾ  ಚುನಾವಣೆಗೆ ಸ್ಪರ್ಧೆಯನ್ನೇ ಮಾಡಲ್ಲ ಎಂಬ ಸುದ್ದಿ ಸುನಾಮಿ ಎಬ್ಬಿಸಿದೆ.

ಇದನ್ನೂ ಓದಿ: ಸುಮಲತಾಗೆ ಬಿಜೆಪಿ ಟಿಕೆಟ್ ಮಿಸ್ ಆಯ್ತಾ..? – ಸಂಸದೆಯ ಪಾಡು ಈಗ ಅತ್ತಲೂ ಇಲ್ಲ ಇತ್ತಲೂ ಇಲ್ಲ

ಸುಮಲತಾ ಅಂಬರೀಶ್. ಮಂಡ್ಯದ ಪಕ್ಷೇತರ ಸಂಸದೆ. 2019ರ ಲೋಕಸಭಾ ಚುನಾವಣೆಯಲ್ಲಿ ಘಟಾನುಘಟಿಗಳನ್ನು ಎದುರು ಹಾಕಿಕೊಂಡು ರಾಷ್ಟ್ರೀಯ ಪಕ್ಷಗಳ ನಡುವೆ ಗೆದ್ದು ಬೀಗಿದ್ದ ಸ್ವಾಭಿಮಾನಿ ಮಹಿಳೆ. ಬದಲಾದ ರಾಜಕೀಯದಲ್ಲಿ ಬಿಜೆಪಿ ಬೆನ್ನಿಗೆ ನಿಂತು ಬಿಜೆಪಿ ಟಿಕೆಟ್​ಗಾಗಿಯೇ ಪಟ್ಟು ಹಿಡಿದಿದ್ರು. ಖುದ್ದು ಪ್ರಧಾನಿ ಮೋದಿ ಮತ್ತು ಅಮಿತ್ ಶಾರನ್ನೇ ಭೇಟಿಯಾಗಿ ಒಂದು ಚಾನ್ಸ್ ಕೊಡಿ ಎಂದು ಕೇಳಿದ್ದರು. ಆದ್ರೀಗ ಮಂಡ್ಯದಲ್ಲಿ ದೋಸ್ತಿಗಳ ಕೈ ಮೇಲಾದಂತಿದೆ. ಮೈತ್ರಿ ಟಿಕೆಟ್ ದಳಪಡೆಯ ಪಾಲಾಗಿದೆ. ಅದ್ರಲ್ಲೂ ಮೈತ್ರಿ ಅಭ್ಯರ್ಥಿಯ ಹೆಸರೇ ಈಗ ಸಕ್ಕರೆ ನಾಡಲ್ಲಿ ಕಂಪನ ಉಂಟು ಮಾಡಿದೆ. ಇದೇ ಕಾರಣಕ್ಕೆ ಸಂಸದೆ ಸುಮಲತಾ ಅಂಬರೀಶ್ ಯೂಟರ್ನ್ ಹೊಡೆದಿದ್ದಾರೆ ಎನ್ನಲಾಗ್ತಿದೆ.

2024ರ ಲೋಕಸಭಾ ಚುನಾವಣೆಗೆ ಬಿಜೆಪಿ-ಕಾಂಗ್ರೆಸ್ ಮೊದಲ ಪಟ್ಟಿಯನ್ನ ಬಿಡುಗಡೆ ಮಾಡಿದ್ದು, ಎರಡನೇ ಪಟ್ಟಿ ಬಿಡುಗಡೆಗೆ ಎರಡೂ ಪಕ್ಷಗಳು ಸಿದ್ಧತೆ ನಡೆಸಿವೆ. ಈ ನಡುವೆ ಕರ್ನಾಟಕದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಎನ್​​ಡಿಎ ಒಕ್ಕೂಟ ಸೇರಿರುವ ಜೆಡಿಎಸ್​ಗೆ ಮಂಡ್ಯ ಕ್ಷೇತ್ರ ಬಿಟ್ಟುಕೊಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಮಂಡ್ಯಕ್ಕಾಗಿ ಪಟ್ಟು ಹಿಡಿದು ಕುಳಿತಿದ್ದ ಸುಮಲತಾ  ಟಿಕೆಟ್​ ಸಿಗುವುದು ಡೌಟ್​​​​ ಅನ್ನೋ ಹಿನ್ನೆಲೆಯಲ್ಲಿ ಯೂಟರ್ನ್​ ಮಾಡ್ತಿದ್ದಾರೆ ಎನ್ನಲಾಗಿದೆ. ಮಂಡ್ಯದಿಂದ ಕುಮಾರಸ್ವಾಮಿನೇ ನಿಲ್ತಾರೆ ಅನ್ನೋ ಸುದ್ದಿ ಬರೋವಾಗಲೇ ತಮ್ಮ ವರಸೆ ಬದಲಿಸಿದ್ದಾರಂತೆ. ಕುಮಾರಸ್ವಾಮಿ ಅಭ್ಯರ್ಥಿ ಆದ್ರೆ, ಅಭ್ಯಂತರವಿಲ್ಲ. ಕುಮಾರಸ್ವಾಮಿ ಅಭ್ಯರ್ಥಿ ಆದ್ರೆ ಕಣದಿಂದ ಹಿಂದಕ್ಕೆ ಸರಿಯುತ್ತೇನೆ. ಕುಮಾರಸ್ವಾಮಿ ಅಲ್ಲದೆ, ಬೇರೆ ಯಾರೇ ಸ್ಪರ್ಧಿಸಿದ್ರೂ ಸಹಕಾರ ನೀಡಲ್ಲ. ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತೇನೆ ಎಂದಿದ್ದಾರಂತೆ.

ಆರಂಭದಿಂದಲೂ ಕೂಡ ಮಂಡ್ಯದಿಂದ ಕುಮಾರಸ್ವಾಮಿ ಅಥವಾ ನಿಖಿಲ್ ಕುಮಾರಸ್ವಾಮಿಯೇ ಸ್ಪರ್ಧೆ ಮಾಡಬಹುದು ಎನ್ನಲಾಗ್ತಿತ್ತು. ಮಂಡ್ಯದ ಕಾರ್ಯಕರ್ತರು ಹಾಗೂ ಮುಖಂಡರೇ ಒತ್ತಾಯ ಮಾಡಿದ್ರು. ಆದ್​ರೆ ನಿಖಿಲ್ ಮಾತ್ರ ಚುನಾವಣೆಗೆ ಸ್ಪರ್ಧಿಸಲು ಸುತಾರಾಂ ಒಪ್ಪುತ್ತಿಲ್ಲ. ಹೀಗಾಗಿ ಅಂತಿಮವಾಗಿ ಹೆಚ್​ಡಿಕೆಯನ್ನೇ ಬಿಜೆಪಿ ಹೈಕಮಾಂಡ್ ಮನವೊಲಿಸಿದೆ ಎನ್ನಲಾಗ್ತಿದೆ. ಹೆಚ್​ಡಿಕೆ ಸ್ಪರ್ಧೆಯಿಂದ ಜೆಡಿಎಸ್​ಗೂ ಲಾಭವಾಗಲಿದೆ. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಳಪೆ ಪ್ರದರ್ಶನ ನೀಡಿರುವ ಜೆಡಿಎಸ್‌ ಪಕ್ಷವು ಮತ್ತೆ ಪುಟಿದೇಳಲು ಶತಾಯಗತಾಯ ಯತ್ನ ನಡೆಸಿದೆ. ಒಂದು ವೇಳೆ ಕುಮಾರಸ್ವಾಮಿ ಅವರು ಮಂಡ್ಯದಿಂದ ಸ್ಪರ್ಧಿಸಿ ಗೆದ್ದರೆ ಕೇಂದ್ರ ಸಚಿವರಾಗಬಹುದು. ಈ ಮೂಲಕ ಪಕ್ಷಕ್ಕೆ ಬಲತಂದುಕೊಡಬಹುದು. ಈಗಾಗಲೇ ಕೈತಪ್ಪುತ್ತಿರುವ ಒಕ್ಕಲಿಗ ಮತಗಳನ್ನು ಮತ್ತೆ ಸೆಳೆಯಬಹುದು.

HDK ಸ್ಪರ್ಧೆಗೆ ಒತ್ತಾಯ!   

ಮಂಡ್ಯದ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಜೆಡಿಎಸ್ ನಾಯಕರ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಈ ಸಭೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಹೆಚ್​ಡಿ ಕುಮಾರಸ್ವಾಮಿಗೆ ಸ್ಪರ್ಧೆಗೆ ಒತ್ತಾಯಿಸಲಾಗಿದೆ. ನೀವೇ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿ ಎಂದು ನಾಯಕರು ಮನವಿ ಮಾಡಿದ್ದಾರೆ. ಈ ಬಗ್ಗೆ ಅಷ್ಟಾಗಿ ಒಲವು ತೋರದ ಕುಮಾರಸ್ವಾಮಿ, ಅಭ್ಯರ್ಥಿ ಆಯ್ಕೆ ಸಂಬಂಧ ಎಲ್ಲಾ ತೊಡಕುಗಳನ್ನ ನಿವಾರಿಸುವ ಹಾಗೂ ಪಕ್ಷದ ನಾಯಕರ ನಡುವಿನ ಸಣ್ಣಪುಟ್ಟ ಭಿನ್ನಮತ ನಿವಾರಿಸುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಎಲ್ಲಾ ನಾಯಕರ ಅಭಿಪ್ರಾಯ ಪಡೆದ ಕುಮಾರಸ್ವಾಮಿ, ಜೆಡಿಎಸ್ ಅಭ್ಯರ್ಥಿ ಗೆಲುವಿಗೆ ಒಗ್ಗಟ್ಟಾಗಿ ಕೆಲಸ ಮಾಡುವಂತೆ ಸೂಚನೆ ನೀಡಿದ್ದಾರೆ. ಬಳಿಕ ಮಂಡ್ಯ ಕ್ಷೇತ್ರದ ಅಭ್ಯರ್ಥಿ ಪಟ್ಟಿಯಲ್ಲಿ ಮಾಜಿ ಸಚಿವ ಪುಟ್ಟರಾಜು ಹೆಸರು ಮುಂಚೂಣಿಯಲ್ಲಿದೆ. ಇನ್ನೊಂದಡೆ ಬಿಜೆಪಿ ಹೈಕಮಾಂಡ್​ನಿಂದ ಕುಮಾರಸ್ವಾಮಿ ಸ್ಪರ್ಧೆಗೆ ಒತ್ತಡ ಬಂದರೆ ಮುಂದಿನ‌ ನಿರ್ಧಾರದ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ಎಲ್ಲಾ ಆಯ್ಕೆಗಳನ್ನ ಮುಕ್ತವಾಗಿಟ್ಟುಕೊಳ್ಳುವಂತೆ ಜೆಡಿಎಸ್ ನಾಯಕರು ಮನವಿ ಮಾಡಿದ್ದಾರೆ. ಬಿಜೆಪಿ ನಾಯಕರ ಜೊತೆಗಿನ ಮಾತುಕತೆ ಬಳಿಕ ಸ್ಪಷ್ಟ ಚಿತ್ರಣ ದೊರೆಯಲಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಮಂಡ್ಯದಿಂದ ಪುತ್ರ ನಿಖಿಲ್‌ ಅವರು ಮಂಡ್ಯದಿಂದ ಮತ್ತೆ ಕಣಕ್ಕಿಳಿಯಬೇಕೆಂಬುದು ಕುಮಾರಸ್ವಾಮಿ ಅವರ ಹೆಬ್ಬಯಕೆಯಾಗಿತ್ತು. ಆದರೆ, ಬಿಜೆಪಿ ಹೈಕಮಾಂಡ್‌ ಇದಕ್ಕೆ ಒಪ್ಪುತ್ತಿಲ್ಲವೆಂಬ ಮಾತುಗಳು ಕೇಳಿಬಂದಿವೆ. ಕಳೆದ ಬಾರಿಯ ಲೋಕಸಭೆ ಚುನಾವಣೆಯಲ್ಲಿ ನಿಖಿಲ್‌ ಅವರು ಸುಮಲತಾ ವಿರುದ್ಧ ಸ್ಪರ್ಧಿಸಿ ಹೀನಾಯ ಸೋಲು ಅನುಭವಿಸಿದ್ದರು. ಮೇ ತಿಂಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ರಾಮನಗರದಿಂದ ಕಣಕ್ಕಿಳಿದು ಪರಾಭವಗೊಂಡಿದ್ದರು. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ನಿಖಿಲ್‌ ಅವರು ಸ್ಪರ್ಧಿಸದೇ ಹೋದರೆ, ಅವರ ಭವಿಷ್ಯ ಮತ್ತೆ ಅತಂತ್ರವಾಗುವುದು ನಿಶ್ಚಿತವಾಗಿದೆ. ಹೀಗಾಗಿ ಭದ್ರಕೋಟೆಯಾಗಿದ್ದ ಮಂಡ್ಯವನ್ನ ಮರಳಿ ತೆಕ್ಕೆಗೆ ಪಡೆಯಬೇಕು ಅಂದ್ರೆ ಜೆಡಿಎಸ್ ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕಿಳಿಸಬೇಕು. ಇದೇ ಕಾರಣಕ್ಕೆ ನಿಖಿಲ್ ಅಥವಾ ಕುಮಾರಸ್ವಾಮಿ ಸ್ಪರ್ಧೆಗೆ ಒತ್ತಾಯ ಹೆಚ್ಚಾಗಿದೆ. ಹೊರಗಿನ ಲೋಕಕ್ಕೆ ಕುಮಾರಣ್ಣ ಒಪ್ಪುತ್ತಿಲ್ಲ ನಿಜ. ಆದ್ರೆ ಒಳಗೊಳಗೆ ಬಲಿಷ್ಠ ಸೇನಾನಿಯನ್ನೇ ಅಖಾಡಕ್ಕಿಳಿಸಲು ಸರ್ವತಂತ್ರವೂ ರೆಡಿಯಾಗಿದೆ. ಜೊತೆಗೆ ಮಂಡ್ಯದಲ್ಲಿ ಜೆಡಿಎಸ್ ಬಗ್ಗೆ ಒಲವು ಕೂಡ ಹೆಚ್ಚುತ್ತಿದೆ. ಈಗಾಗ್ಲೇ ಕಾಂಗ್ರೆಸ್ ಸ್ಟಾರ್ ಚಂದ್ರುಗೆ ಟಿಕೆಟ್ ನೀಡಿರೋದ್ರಿಂದ ಮಂಡ್ಯ ಕಣ ರಣರಂಗ ಆಗೋದ್ರಲ್ಲಿ ಯಾವುದೇ ಅನುಮಾನ ಇಲ್ಲ.

Shwetha M