5 ವಿಕೆಟ್ ಕಬಳಿಸಿದ ವಿಶ್ವದ ಮೂರನೇ ಬೌಲರ್ – ನೂರನೇ ಟೆಸ್ಟ್‌ನಲ್ಲಿ ಇತಿಹಾಸ ಬರೆದ ಸ್ಪಿನ್ನರ್ ಆರ್.ಅಶ್ವಿನ್

5 ವಿಕೆಟ್ ಕಬಳಿಸಿದ ವಿಶ್ವದ ಮೂರನೇ ಬೌಲರ್ – ನೂರನೇ ಟೆಸ್ಟ್‌ನಲ್ಲಿ ಇತಿಹಾಸ ಬರೆದ ಸ್ಪಿನ್ನರ್ ಆರ್.ಅಶ್ವಿನ್

ಟೀಮ್ ಇಂಡಿಯಾದ ಸ್ಪಿನ್ನರ್ ಆರ್. ಅಶ್ವಿನ್ ತನ್ನ ನೂರನೇ ಟೆಸ್ಟ್ ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದಲ್ಲಿ ಐದು ವಿಕೆಟ್ ಕಬಳಿಸುವ ಮೂಲಕ ಟೀಮ್ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮಿಂಚಿದ್ದಾರೆ. ಇದರ ಜೊತೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಬಾರಿ 5 ವಿಕೆಟ್‌ಗಳನ್ನು ಕಬಳಿಸಿದ ವಿಶ್ವದ ಮೂರನೇ ಬೌಲರ್ ಎನಿಸಿಕೊಂಡಿದ್ದಾರೆ.

ಇದನ್ನೂ ಓದಿ: ಗಿಲ್ ಶತಕವನ್ನು ಕಣ್ತುಂಬಿಕೊಂಡರೂ ತಂದೆಗೆ ಅಸಮಾಧಾನ – ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಮೇಲೆ ಬೇಜಾರು

ಧರ್ಮಶಾಲಾದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಪಂದ್ಯದ 2ನೇ ಇನಿಂಗ್ಸ್‌ನಲ್ಲಿ ರವಿಚಂದ್ರನ್ ಅಶ್ವಿನ್ ದಾಖಲೆಗಳ ಸರದಾರ ಎನಿಸಿಕೊಂಡಿದ್ದಾರೆ. ಆಂಗ್ಲರ ಬೆಂಡೆತ್ತಿದ ಆರ್. ಅಶ್ವಿನ್ 5 ವಿಕೆಟ್‌ಗಳ ಗೊಂಚಲನ್ನು ಕಬಳಿಸಿದ್ದಾರೆ. ಈ ಐದು ವಿಕೆಟ್‌ಗಳೊಂದಿಗೆ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ಪರ ಅತೀ ಹೆಚ್ಚು ಬಾರಿ 5 ವಿಕೆಟ್‌ಗಳನ್ನು ಕಬಳಿಸಿದ ದಾಖಲೆ ಬರೆದಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಧಿಕ ಬಾರಿ ಐದು ವಿಕೆಟ್ ಪಡೆದ ಭಾರತೀಯ ಬೌಲರ್ ಎಂಬ ದಾಖಲೆ ರವಿಚಂದ್ರನ್ ಅಶ್ವಿನ್ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಸ್ಪಿನ್ ಲೆಜೆಂಡ್ ಅನಿಲ್ ಕುಂಬ್ಳೆ ಅವರ ಹೆಸರಿನಲ್ಲಿತ್ತು.

ಟೀಮ್ ಇಂಡಿಯಾದ ಮಾಜಿ ಸ್ಪಿನ್ನರ್ ಅನಿಲ್ ಕುಂಬ್ಳೆ 132 ಟೆಸ್ಟ್ ಪಂದ್ಯಗಳಲ್ಲಿ 35 ಬಾರಿ 5 ವಿಕೆಟ್ ಕಬಳಿಸಿ ದಾಖಲೆ ಬರೆದಿದ್ದರು. ಇದೀಗ ಈ ದಾಖಲೆಯನ್ನು ಅಳಿಸಿ ಹಾಕಿ ರವಿಚಂದ್ರನ್ ಅಶ್ವಿನ್ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಭಾರತದ ಪರ 100ನೇ ಟೆಸ್ಟ್ ಪಂದ್ಯಗಳನ್ನಾಡಿರುವ ರವಿಚಂದ್ರನ್ ಅಶ್ವಿನ್ ಒಟ್ಟು 36 ಬಾರಿ 5 ವಿಕೆಟ್‌ಗಳ ಸಾಧನೆ ಮಾಡಿದ್ದಾರೆ. ಈ ಮೂಲಕ ನೂರನೇ ಪಂದ್ಯದ ಮೂಲಕ ಟೀಮ್ ಇಂಡಿಯಾ ಪರ ಅತ್ಯಧಿಕ ಬಾರಿ 5 ವಿಕೆಟ್ ಕಬಳಿಸಿದ ವಿಶೇಷ ದಾಖಲೆಯನ್ನು ತಮ್ಮದಾಗಿಸಿಕೊಳ್ಳುವಲ್ಲಿ ಅಶ್ವಿನ್ ಯಶಸ್ವಿಯಾಗಿದ್ದಾರೆ. ಇನ್ನು ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ಬಾರಿ 5 ವಿಕೆಟ್ ಕಬಳಿಸಿದ ವಿಶ್ವ ದಾಖಲೆ ಶ್ರೀಲಂಕಾದ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಹೆಸರಿನಲ್ಲಿದೆ. 133 ಟೆಸ್ಟ್ ಪಂದ್ಯಗಳನ್ನಾಡಿರುವ ಮುರಳೀಧರನ್ ಒಟ್ಟು 67 ಬಾರಿ 5 ವಿಕೆಟ್ ಕಬಳಿಸಿ ವಿಶ್ವ ದಾಖಲೆ ನಿರ್ಮಿಸಿಟ್ಟಿದ್ದಾರೆ. ಇದೀಗ 36ನೇ ಬಾರಿ 5 ವಿಕೆಟ್ ಕಬಳಿಸಿರುವ ರವಿಚಂದ್ರನ್ ಅಶ್ವಿನ್ ಈ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ. 2ನೇ ಸ್ಥಾನದಲ್ಲಿ 37 ಬಾರಿ 5 ವಿಕೆಟ್ಗಳ ಸಾಧನೆ ಮಾಡಿರುವ ಆಸ್ಟ್ರೇಲಿಯಾದ ಶೇನ್ ವಾರ್ನ್ ಇದ್ದು, ಮುಂಬರುವ ಟೆಸ್ಟ್ ಪಂದ್ಯಗಳ ಮೂಲಕ ಈ ದಾಖಲೆ ಮುರಿಯುವ ಅವಕಾಶ ರವಿಚಂದ್ರನ್ ಅಶ್ವಿನ್ ಮುಂದಿದೆ.

Sulekha