ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಬಳ್ಳಾರಿ ಐಸಿಸ್ನ 4 ಜನಕ್ಕೆ ಗ್ರಿಲ್
ಕುಂದಲಹಳ್ಳಿಯ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ ತನಿಖೆ ಚುರುಕುಗೊಂಡಿದೆ. ಎನ್ಐಎ ಅಧಿಕಾರಿಗಳು ಹಲವು ಕಡೆಗಳಲ್ಲಿ ದಾಳಿ ನಡೆಸಿ ಶಂಕಿತರನ್ನು ವಶಕ್ಕೆ ಪಡೆಯುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಬಳ್ಳಾರಿ ಇಸ್ಲಾಮಿಕ್ ಸ್ಟೇಟ್ಸ್ ಮಾಡ್ಯೂಲ್’ನ ನಾಲ್ವರು ಶಂಕಿತ ಐಸಿಎಸ್ ಉಗ್ರರನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ) ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕಳೆದ ಮೂರು ದಿನಗಳಿಂದ ವಿಚಾರಣೆಗೊಳಪಡಿಸಿದೆ.
ಇದನ್ನೂ ಓದಿ: ಅಯೋಧ್ಯೆಯ ರಾಮ ಮಂದಿರದ ಸಂಕೀರ್ಣ ನಿರ್ಮಾಣ ಕಾರ್ಯ 2024ರ ಡಿಸೆಂಬರ್ ವೇಳೆಗೆ ಪೂರ್ಣ
ಮಾರ್ಚ್ 1 ರಂದು ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಟೋಟಗೊಂಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಎನ್ಐಎ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಇದೀಗ ಬಾಂಬ್ ಸ್ಫೋಟ ಪ್ರಕರಣದ ಶಂಕಿತ ವ್ಯಕ್ತಿ ಜತೆ ನಂಟು ಹೊಂದಿದ ಅನುಮಾನದ ಮೇರೆಗೆ ನಾಲ್ವರು ಶಂಕಿತ ಉಗ್ರರಾದ ಬಳ್ಳಾರಿ ಕೌಲ್ ಬಜಾರ್ನ ಮಿನಾಜ್ ಅಲಿಯಾಸ್ ಸುಲೇಮಾನ್, ಸೈಯದ್ ಸಮೀರ್, ಮುಂಬೈನ ಅನಾಸ್ ಇಕ್ಬಾಲ್ ಶೇಕ್ ಹಾಗೂ ದೆಹಲಿಯ ಶಯಾನ್ ರೆಹಮಾನ್ ಅವರನ್ನು ಎನ್ಐಎ ಸುದೀರ್ಘವಾಗಿ ವಿಚಾರಣೆ ನಡೆಸಿದೆ. ಆದರೆ, ಇದುವರೆಗೆ ಕೆಫೆ ಬಾಂಬರ್ನ ಕುರಿತು ಯಾವುದೇ ಖಚಿತ ಮಾಹಿತಿಯನ್ನು ಬಳ್ಳಾರಿ ಗ್ಯಾಂಗ್ ಬಾಯ್ಬಿಟ್ಟಿಲ್ಲ ಎಂದು ತಿಳಿದು ಬಂದಿದೆ.
ಕೆಫೆ ಬಾಂಬ್ ಸ್ಫೋಟ ಕೃತ್ಯಕ್ಕೂ ಮಂಗಳೂರು ಕುಕ್ಕರ್ ಹಾಗೂ ಶಿವಮೊಗ್ಗ ಬಾಂಬ್ ಪ್ರಯೋಗ ಪ್ರಕರಣಗಳಿಗೆ ನಂಟು ಪತ್ತೆಯಾದ ಕೂಡಲೇ ಚುರುಕಾದ ಎನ್ಐಎ ಅಧಿಕಾರಿಗಳು, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ಹಳೇ ಪ್ರಕರಣಗಳ ಶಾಕೀರ್ ಹಾಗೂ ಆತನ ಸಹಚರರು ಸೇರಿದಂತೆ ಕೆಲವು ಶಂಕಿತ ಉಗ್ರರನ್ನು ವಿಚಾರಣೆಗೊಳಪಡಿಸಿದ್ದರು. ಇದಕ್ಕೆ ಆಕ್ಷೇಪಿಸಿದ ಕೆಲವು ಶಂಕಿತ ಉಗ್ರರು, ತಮಗೆ ಅನಗತ್ಯವಾಗಿ ಎನ್ಐಎ ಅಧಿಕಾರಿಗಳು ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು ಎನ್ನಲಾಗಿದೆ. ಹೀಗಾಗಿ ಬಳ್ಳಾರಿ ಗ್ಯಾಂಗ್ ವಿಚಾರಣೆಗೆ ನ್ಯಾಯಾಲಯದ ಅನುಮತಿ ಪಡೆದು ಎನ್ಐಎ ಅಧಿಕಾರಿಗಳು ಈಗ ಕೆಫೆ ಸ್ಫೋಟದ ಕುರಿತು ಪ್ರಶ್ನಿಸಿದ್ದಾರೆ ಎಂದು ತಿಳಿದು ಬಂದಿದೆ.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಪ್ರತ್ಯೇಕವಾಗಿ ನಾಲ್ವರನ್ನು ಸತತ ಮೂರು ದಿನಗಳಿಂದ ಎನ್ಐಎ ವಿಚಾರಣೆ ಮಾಡಿದೆ. ವಿಚಾರಣೆಗೆ ನ್ಯಾಯಾಲಯ ನೀಡಿರುವ ಸಮಯ ಶನಿವಾರ ಅಂತ್ಯವಾಗಲಿದೆ ಎಂದು ಗೊತ್ತಾಗಿದೆ.