ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಓರ್ವ ಶಂಕಿತನನ್ನು ವಶಕ್ಕೆ ಪಡೆದ ಎನ್ಐಎ
ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟವಾಗಿ ಒಂದು ವಾರಗಳೇ ಕಳೆದಿದೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ರಾಷ್ಟ್ರೀಯ ತನಿಖಾ ದಳ ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.
ಮಾರ್ಚ್ 1 ರಂದು ಮಧ್ಯಾಹ್ನ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟಗೊಂಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಮಾಡ್ಯೂಲ್ನ ಶಂಕಿತ ಉಗ್ರ ಮಿನಾಜ್ ಅಲಿಯಾಸ್ ಸುಲೇಮಾನ್ ಮಾಹಿತಿ ಮೇರೆಗೆ ಎನ್ಐಎ ಅಧಿಕಾರಿಗಳು ಓರ್ವ ಶಂಕಿತನನ್ನು ವಶಕ್ಕೆ ಪಡೆದ್ದಾರೆ. ಆತನನ್ನು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಚಂದ್ರಯಾನ -4 ಕ್ಕೆ ಅಣಿಯಾದ ಇಸ್ರೋ – ಚಂದ್ರನ ಮೇಲೆ ಲ್ಯಾಂಡ್ ಮಾತ್ರವಲ್ಲ ಮರಳಿ ಭೂಮಿಗೆ ಬರುತ್ತೆ ಈ ನೌಕೆ!
ಸದ್ಯ ಜೈಲಿನಲ್ಲಿರುವ ಸುಲೇಮಾನ್ನನ್ನು ಬಾಡಿ ವಾರಂಟ್ ಮೇಲೆ ವಿಚಾರಣೆ ನಡೆಸಲು ನ್ಯಾಯಾಲಯದಿಂದ ಎನ್ಐಎ ಅನುಮತಿ ಪಡೆದಿದೆ. ನ್ಯಾಯಾಲಯ ಮಾರ್ಚ್ 9ರವರೆಗೆ ಕಸ್ಟಡಿಗೆ ನೀಡಿದೆ. ಡಿ.18 ರಂದು ಎನ್ಐಎ ದಾಳಿ ನಡೆಸಿ ಬಳ್ಳಾರಿಯಲ್ಲಿ ಮಿನಾಜ್ ಅಲಿಯಾಸ್ ಸುಲೇಮಾನ್ ಬಂಧಿಸಿತ್ತು.
ಬಾಂಬ್ ಇಟ್ಟ ಬಳಿಕ ಬಾಂಬರ್ ಬೆಂಗಳೂರಿನಿಂದ ಬೀದರ್ ಬಸ್ಸಿನಲ್ಲಿ ತೆರಳಿ ಭಟ್ಕಳದ ಕಡೆಗೆ ಹೋಗಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದ್ದು ಎನ್ಐಎ ಮತ್ತು ಸಿಸಿಬಿ ಪೊಲೀಸರು ಉಗ್ರನ ಪತ್ತೆಗೆ ತನಿಖೆ ಚುರುಕುಗೊಳಿಸಿದ್ದಾರೆ.
ಏನಿದು ಬಳ್ಳಾರಿ ಮಾಡ್ಯೂಲ್?
ಐಸಿಸ್ನಿಂದ ಪ್ರೇರಣೆಗೊಂಡಿದ್ದ ಬಳ್ಳಾರಿ ಯುವಕ ಸುಲೈಮನ್ ಮತ್ತು ಸಹಚರರು ಬಳ್ಳಾರಿ ಐಸಿಸ್ ಮಾಡ್ಯೂಲ್ ಹೆಸರಿನಿಂದ ಗುರುತಿಸಿಕೊಂಡಿದ್ದರು. ಈ ಗುಂಪು ಕಾಲೇಜಿಗೆ ಹೋಗುತ್ತಿದ್ದ ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಿ ತಮ್ಮ ತಂಡಕ್ಕೆ ಸೇರಿಸಿಕೊಳ್ಳುತ್ತಿದ್ದರು. ಕಳೆದ 5 ವರ್ಷದಿಂದ ಪಿಎಫ್ಐ ಸಂಘಟನೆಯಲ್ಲಿ ಇದ್ದ ಬಳ್ಳಾರಿ ಮೂಲದ ಸುಲೈಮನ್ ಬಳ್ಳಾರಿ ಘಟಕವನ್ನು ಆರಂಭಿಸಿದ್ದ. ಈತನಿಗೆ ಬಳ್ಳಾರಿಯ ಸೈಯ್ಯದ್ ಸಮೀರ್ ಸಹಕಾರ ನೀಡುತ್ತಿದ್ದ. ಬೆಂಗಳೂರು ಮತ್ತು ಬಳ್ಳಾರಿ, ಉತ್ತರ ಕರ್ನಾಟಕದಲ್ಲಿ ಬಾಂಬ್ ಸ್ಫೋಟಕ್ಕೆ ಇವರು ಪ್ಲ್ಯಾನ್ ಮಾಡುತ್ತಿದ್ದರು.