ಲೋಕಸಭಾ ಚುನಾವಣೆ ಹೊಸ್ತಿಲಲ್ಲೇ ಹೆಗಡೆ ಹಳೇ ವರಸೆ – ಸಂಸದ ಅನಂತಕುಮಾರ್ ಹೆಗಡೆ ಸರ್ವಾಧಿಕಾರಿ ವರ್ತನೆ ಬಿಜೆಪಿಗೆ ಮುಜುಗರ

ಲೋಕಸಭಾ ಚುನಾವಣೆ ಹೊಸ್ತಿಲಲ್ಲೇ ಹೆಗಡೆ ಹಳೇ ವರಸೆ – ಸಂಸದ ಅನಂತಕುಮಾರ್ ಹೆಗಡೆ ಸರ್ವಾಧಿಕಾರಿ ವರ್ತನೆ ಬಿಜೆಪಿಗೆ ಮುಜುಗರ

ಅನಂತ ಕುಮಾರ್ ಹೆಗಡೆ. ಬಾಯಿ ಬಿಟ್ರೆ ವಿವಾದಗಳೇ. ಇಷ್ಟು ದಿನ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ವಿರುದ್ಧ ನಾಲಗೆ ಹರಿಬಿಡ್ತಿದ್ದ ಇದೇ ನಾಯಕ ಈಗ ಸ್ವಪಕ್ಷ ನಾಯಕರ ವಿರುದ್ಧವೇ ತೊಡೆ ತಟ್ಟಿದ್ದಾರೆ. ಒಂದು ರೀತಿ ಸರ್ವಾಧಿಕಾರಿ ಅಂತಾರಲ್ಲ ಹಾಗೇ ವರ್ತಿಸುತ್ತಿದ್ದಾರೆ. ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಸತತ ಆರು ಬಾರಿ ಸಂಸತ್ ಪ್ರವೇಶ ಮಾಡಿರುವ, ಫೈರ್ ಬ್ರಾಂಡ್ ಖ್ಯಾತಿಯ ಸಂಸದ ಅನಂತಕುಮಾರ್ ಹೆಗಡೆ ಈಗ ಸ್ವಪಕ್ಷೀಯರಿಗೇ ತಲೆಬಿಸಿ ತಂದಿದ್ದಾರೆ. ಕಳೆದ ಬಾರಿ ಆಯ್ಕೆಯಾದ ನಂತರ ಅಜ್ಞಾತವಾಸಕ್ಕೆ ತೆರಳಿದ್ದ ಅವರು ಪಕ್ಷದ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಿಂದಲೂ ದೂರ ಇದ್ದರು. ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೆ ಸ್ವತಃ ಪ್ರಧಾನಿ ಮೋದಿಯೇ ಬಂದಿದ್ದರೂ ಅನಂತ್ ಹಾಜರಾಗಿರಲಿಲ್ಲ. ಅನಾರೋಗ್ಯ ಇದೆ. ಈ ಸಲ ಚುನಾವಣೆಗೆ ಸ್ಪರ್ಧಿಸಲ್ಲ ಎಂದೇ ಹೇಳಲಾಗಿತ್ತು. ಆದ್ರೆ ವರ್ಷದ ಆರಂಭದಲ್ಲೇ ದಿಢೀರ್ ಪ್ರತ್ಯಕ್ಷರಾದ ಸಂಸದರು ಮತ್ತೊಮ್ಮೆ ಹಿಂದೂ ಅಜೆಂಡಾ ಇಟ್ಟುಕೊಂಡೇ ಅಬ್ಬರಿಸುತ್ತಿದ್ದಾರೆ. ಟಿಕೆಟ್ ಆಕಾಂಕ್ಷಿಗಳ ವಿರುದ್ಧವೂ ಸಿಟ್ಟಾಗಿದ್ದು ಧಮ್ ಇದ್ರೆ ನನ್ನ ಮುಂದೆ ಬನ್ನಿ ಎಂದು ಸವಾಲು ಹಾಕಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಹೈಕಮಾಂಡ್ ಮೊದಲ ಪಟ್ಟಿ ಬಿಡುಗಡೆಗೆ ಸಿದ್ಧತೆ -ಕಾಂಗ್ರೆಸ್ ಗೆ 4 ಕ್ಷೇತ್ರದಲ್ಲಿ ಗೆಲುವು?

ಲೋಕಸಭಾ ಚುನಾವಣೆ ಹೊಸ್ತಿಲಲ್ಲೇ ಹಳೇ ವರಸೆ ಆರಂಭಿಸಿರುವ ಸಂಸದ ಅನಂತ್ ಕುಮಾರ್ ಹೆಗಡೆ ತುಪಾಕಿಯಂತೆ ಸಿಡಿಯುತ್ತಿದ್ದಾರೆ. ಉತ್ತರ ಕನ್ನಡ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಮೇಲೆ ಕೆಂಡ ಕಾರುತ್ತಿದ್ದಾರೆ. ಬಹಿರಂಗವಾಗಿಯೇ ಈ ಬಗ್ಗೆ ತಮ್ಮ ರೋಷಾವೇಶ ತೋರಿಸಿದ್ದಾರೆ. ಭಟ್ಕಳ್ ತಾಲೂಕಿನ ಬೆಳಕೆ ಮಹಾಶಕ್ತಿ ಕೇಂದ್ರದ ಕಾರ್ಯರ್ತರ ಸಭೆಯಲ್ಲಿ ಮಾತನಾಡಿದ ಸಂಸದರು, ಅನಿವಾರ್ಯವಾಗಿ ನಾನು ಈ ಬಾರಿ ಇಲ್ಲಿ ಚುನಾವಣೆಗೆ ಸ್ಪರ್ಧೆ ಮಾಡಬೇಕಿದೆ. ನನಗೆ ರಾಜಕೀಯ ಬೇಡ, ಚುನಾವಣೆಗೆ ನಾನು ಸ್ಪರ್ಧೆ ಮಾಡಲ್ಲ ಅಂತಾ ನೇರವಾಗಿ ಹೇಳಿದ್ದೆ. ಆದರೂ ಕೇಲವರು ನನ್ನ ಬಳಿ ಬಂದೂ ಸ್ಪರ್ಧೆ ಮಾಡಲು ಒತ್ತಾಯ ಮಾಡಿದರು. ಹೇಗೋ ಯು ಟರ್ನ್ ಮಾಡಿಕೊಂಡು ಮತ್ತೆ ರಾಜಕೀಯದಲ್ಲಿ ಮುಂದುವರೆಯುತ್ತಿದ್ದೇನೆ ಎನ್ನುವ ಮೂಲಕ ತಾನು ಈ ಬಾರಿ ಟಿಕೆಟ್ ಆಕಾಂಕ್ಷಿ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಅಷ್ಟಕ್ಕೂ ಹೆಗಡೆ ಈ ರೀತಿ ರೌದ್ರರೂಪ ತಾಳೋಕೆ ಕಾರಣವೂ ಇದೆ. ಕ್ಷೇತ್ರದ ಕಾರ್ಯಕರ್ತರು ಅವರಿಗೆ ಟಿಕೆಟ್ ನೀಡಬಾರದೆಂದು ಬಹಿರಂಗವಾಗೇ ಮಾತಾಡಿಕೊಳ್ಳುತ್ತಿದ್ದಾರೆ. ಕೆಲವರು ಟಿಕೆಟ್ ಗೋಸ್ಕರ ಲಾಬಿ ಶುರು ಮಾಡುತ್ತಿರುವುದು ಸಹ ಹೆಗಡೆಗೆ ಆಕ್ರೋಶಕ್ಕೆ ಕಾರಣವಾಗಿದೆ. ಟಿಕೆಟ್ ಆಕಾಂಕ್ಷಿಗಳನ್ನು ಉತ್ತರ ಕುಮಾರನಿಗೆ ಹೋಲಿಸಿ ತಾಕತ್ತಿದ್ದರೆ ತಮ್ಮ ಚೇರ್ ಮೇಲೆ ಕೂರಲಿ ಎಂದು ಹೇಳಿ ತಮ್ಮ ಹಿಂದಿದ್ದ ಕುರ್ಚಿಯೊಂದನ್ನು ಎತ್ತಿ ಟೇಬಲ್ ಮೇಲಿಟ್ಟಿದ್ದಾರೆ. ಕ್ಷೇತ್ರದ ಬಗ್ಗೆ ಕಿಂಚಿತ್ತೂ ಅರಿವಿಲ್ಲದ್ದವರು ಪಾರ್ಲಿಮೆಂಟ್ ಕುರಿತು ಮಾತಾಡುತ್ತಿದ್ದಾರೆ. ಕಿತ್ತೂರು, ಖಾನಾಪುರ ಎಲ್ಲಿವೆ ಅಂತಲೂ ಅವರಿಗೆ ಗೊತ್ತಿಲ್ಲ. ಧಮ್ಮಿದ್ದವರು, ತಾಕತ್ತಿದ್ದವರು ಮುಂದೆ ಬಂದರೆ ತಾನು ಯು-ಟರ್ನ್ ತೆಗೆದುಕೊಂಡು ಹೋಗೋದಾಗಿ ಅನಂತಕುಮಾರ ಹೆಗಡೆ ಸವಾಲು ಹಾಕಿದ್ದಾರೆ. ಸಂಸದರ ಈ ಸರ್ವಾಧಿಕಾರಿ ವರ್ತನೆಗೆ ಉತ್ತರ ಕನ್ನಡ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು, ಮುಖಂಡರೇ ಮುಜುಗರಗೊಂಡಿದ್ದಾರೆ.

2019ರ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಸುಮಾರು ನಾಲ್ಕೂವರೆ ವರ್ಷ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಳ್ಳದ ಹೆಗಡೆ, ಚುನಾವಣೆ ಸಮೀಪಿಸುತ್ತಿದ್ದಂತೆ ಮತ್ತೆ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಈ ಬಾರಿ ಟಿಕೆಟ್ ಸಿಗುವುದು ಅನುಮಾನ ಎಂಬ ಮಾತುಗಳ ನಡುವೆ ಪ್ರತಿ ಗ್ರಾಮಗಳಲ್ಲಿ ಸಭೆ ನಡೆಸುತ್ತಾ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಆದರೆ ಕ್ಷೇತ್ರದಲ್ಲಿ ಈ ಬಾರಿ ಅನಂತಕುಮಾರ್ ಹೆಗಡೆ ಪರ ಜನರ ಒಲವಿಲ್ಲ. ಜನ ಹಿಂದುತ್ವ ಮಾತ್ರ ಅಲ್ಲ, ಅಭಿವೃದ್ಧಿಯನ್ನೂ ಕೇಳುತ್ತಾರೆ. ಕೇಂದ್ರ ಸರ್ಕಾರದ ಯೋಜನೆಗಳು ಸಮರ್ಪಕ ಜಾರಿಯಾಗಿಲ್ಲ ಎಂದು ಕೆಲವು ಮುಖಂಡರು ವಿರೋಧ ಹೊರ ಹಾಕಿದ್ದರು. ಅಲ್ಲದೆ ಕ್ಷೇತ್ರದಲ್ಲಿ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಮಾಜಿ ಶಾಸಕಿ ರೂಪಾಲಿ ನಾಯ್ಕ್ ಟಿಕೆಟ್ ಪಡೆಯಲು ಕಸರತ್ತು ನಡೆಸ್ತಿದ್ದಾರೆ. ಹೀಗಾಗಿ ಸಂಸದರಿಗೆ ಟಿಕೆಟ್ ಕೈತಪ್ಪುವ ಭಯವೂ ಇದೆ. ಈ ಎಲ್ಲಾ ಕಾರಣಗಳಿಂದ ಸ್ವಪಕ್ಷೀಯರ ವಿರುದ್ಧವೇ ಫೈರ್ ಬ್ರ್ಯಾಂಡ್​ನಂತೆ ಸಿಡಿಯುತ್ತಿದ್ದಾರೆ. ಅವ್ರ ಈ ಸರ್ವಾಧಿಕಾರಿ ವರ್ತನೆ ಬಿಜೆಪಿಗರಿಗೇ ಇರಿಸುಮುರಿಸು ತಂದಿದೆ.

Sulekha