ಲೋಕಯುದ್ಧಕ್ಕೆ ಕರುನಾಡ ಬಿಜೆಪಿ ಸೇನೆ ರೆಡಿ – ಯಾರ್ಯಾರಿಗೆ ಟಿಕೆಟ್.. ಯಾರು ಔಟ್?
ಹ್ಯಾಟ್ರಿಕ್ ಕನಸಿನ ಗುರಿ ಬೆನ್ನತ್ತಿರುವ ಬಿಜೆಪಿ ಹೈಕಮಾಂಡ್ ಲೋಕಸಭಾ ಅಖಾಡಕ್ಕೆ ತನ್ನ ಮೊದಲ ಸೇನಾಪಡೆಯನ್ನ ಇಳಿಸಿದೆ. ಶನಿವಾರ 195 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಅನೌನ್ಸ್ ಮಾಡಿದೆ. ಇದೀಗ ಎರಡನೇ ಲಿಸ್ಟ್ನಲ್ಲಿ ಕರ್ನಾಟಕದ ಟಿಕೆಟ್ ಘೋಷಣೆ ಮಾಡುವ ಸಾಧ್ಯತೆ ದಟ್ಟವಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಭಾನುವಾರ ಸಭೆ ನಡೆದಿದ್ದು, ಚುನಾವಣಾ ನಿರ್ವಹಣಾ ಸಮಿತಿಯು ಪಕ್ಷದ ಅಭ್ಯರ್ಥಿಗಳನ್ನು ಶಾರ್ಟ್ಲಿಸ್ಟ್ ಮಾಡಿದೆ. ಈ ಬಾರಿ ಹಾಲಿ ಸಂಸದರನ್ನು ಹೊರತುಪಡಿಸಿ 12 ಹೊಸ ಮುಖಗಳಿಗೆ ಸ್ಥಾನ ನೀಡಿದೆ ಎನ್ನಲಾಗಿದೆ. ಜೆಡಿಎಸ್ ಜೊತೆಗಿನ ಮೈತ್ರಿ ಹೊರತಾಗಿ ಬಿಜೆಪಿ ಪಕ್ಷ ಎಷ್ಟು ಸ್ಥಾನಗಳಿಗೆ ಅಭ್ಯರ್ಥಿಗಳನ್ನ ಕಣಕ್ಕಿಳಿಸುತ್ತೆ..? ಯಾವ ಕ್ಷೇತ್ರಗಳಲ್ಲಿ ಹಾಲಿ ಸಂಸದರಿಗಿಲ್ಲ ಟಿಕೆಟ್..? ಹೊಸಬರಿಗೆ ಎಲ್ಲೆಲ್ಲಿ ಅವಕಾಶ..? ಬಿಜೆಪಿ ಪ್ಲ್ಯಾನಿಂಗ್ ಹೇಗಿದೆ ಅನ್ನೋ ಮಾಹಿತಿ ಇಲ್ಲಿದೆ..
ಇದನ್ನೂ ಓದಿ: ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಪ್ರಕರಣ – ಕೊನೆಗೂ ಮೂವರು ಅರೆಸ್ಟ್
ಕರ್ನಾಟಕದ 28 ಕ್ಷೇತ್ರಗಳಲ್ಲೂ ಮೈತ್ರಿ ಅಭ್ಯರ್ಥಿಗಳೇ ಗೆಲ್ಲಬೇಕೆಂದು ಬಿಜೆಪಿ ಪಣ ತೊಟ್ಟಿದೆ. ಕಳೆದ ಬಾರಿ ಕಾಂಗ್ರೆಸ್ ಗೆದ್ದಿದ್ದ ಏಕೈಕ ಕ್ಷೇತ್ರ ಬೆಂಗಳೂರು ಗ್ರಾಮಾಂತರವನ್ನೂ ಕಬ್ಜ ಮಾಡಲು ರಣತಂತ್ರ ಹೂಡಿದೆ. ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಸಹೋದರ ಹಾಗೂ ಕಾಂಗ್ರೆಸ್ನ ಹಾಲಿ ಸಂಸದ ಡಿ.ಕೆ.ಸುರೇಶ್ ಅವರನ್ನು ಸೋಲಿಸಲು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಅಳಿಯ ಡಾ.ಸಿ.ಎನ್.ಮಂಜುನಾಥ್ ಅವರನ್ನ ಕಣಕ್ಕಿಳಿಸುವ ನಿಟ್ಟಿನಲ್ಲಿ ಪ್ರಸ್ತಾಪಿಸಲಾಗಿದೆ. ಹಾಲಿ ಸಂಸದರಾದ ಡಿವಿ ಸದಾನಂದಗೌಡ ಮತ್ತು ವಿ ಶ್ರೀನಿವಾಸ್ ಪ್ರಸಾದ್ ನಿವೃತ್ತಿ ಘೋಷಿಸುತ್ತಿದ್ದಂತೆ ಬೆಂಗಳೂರು ಉತ್ತರ ಮತ್ತು ಚಾಮರಾಜನಗರಕ್ಕೆ ಹೊಸ ಹೆಸರುಗಳನ್ನು ಸಭೆಯಲ್ಲಿ ಚರ್ಚಿಸಲಾಗಿದೆ. ಹಾಗಾದ್ರೆ ಯಾವ ಕ್ಷೇತ್ರದಿಂದ ಯಾರು ಸ್ಪರ್ಧಿಸಬಹುದು.. ಸಂಭಾವ್ಯರ ಪಟ್ಟಿಯಲ್ಲಿ ಯಾರ್ಯಾರ ಹೆಸರಿದೆ ಅನ್ನೋದನ್ನ ನೋಡೋಣ.
ಸಂಭವನೀಯ ಮೈತ್ರಿ ಅಭ್ಯರ್ಥಿ
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಹಾಲಿ ಶಾಸಕ ಡಿ.ಕೆ ಸುರೇಶ್ರನ್ನು ಮಣಿಸಲು ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರ ಅಳಿಯ, ಖ್ಯಾತ ಹೃದ್ರೋಗ ತಜ್ಞ ಡಾ. ಸಿ.ಎನ್ ಮಂಜುನಾಥ್ ರನ್ನು ಕಣಕ್ಕಿಳಿಸಬೇಕೆಂಬ ಬಗ್ಗೆ ಚರ್ಚೆ ನಡೆದಿದೆ. ಹಾಗೇ ಬೆಂಗಳೂರು ಕೇಂದ್ರದಿಂದ ಪಿ.ಸಿ ಮೋಹನ್, ಬೆಂಗಳೂರು ದಕ್ಷಿಣದಿಂದ ತೇಜಸ್ವಿ ಸೂರ್ಯ ಹೆಸರನ್ನ ಪ್ರಸ್ತಾಪಿಸಲಾಗಿದೆ. ಇನ್ನು ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಹೆಸರು 2 ಕ್ಷೇತ್ರಗಳಲ್ಲಿ ಕೇಳಿ ಬಂದಿದೆ. ಬೆಂಗಳೂರು ಉತ್ತರ ಅಥವಾ ಚಿಕ್ಕಮಗಳೂರು ಕ್ಷೇತ್ರ ಎನ್ನಲಾಗಿದೆ. ಇನ್ನು ತುಮಕೂರಿಂದ ವಿ. ಸೋಮಣ್ಣ, ಮೈಸೂರು-ಕೊಡಗು ಕ್ಷೇತ್ರಕ್ಕೆ ಹಾಲಿ ಸಂಸದ ಪ್ರತಾಪ್ ಸಿಂಹ ಹೆಸರಿದೆ. ಚಾಮರಾಜನಗರ ಕ್ಷೇತ್ರಕ್ಕೆ ಶ್ರೀನಿವಾಸ್ ಪ್ರಸಾದ್ ಅಳಿಯ ಡಾ. ಮೋಹನ್ ಹೆಸರು ಹರಿದಾಡ್ತಿದೆ. ದಾವಣಗೆರೆಗೆ ಜಿ.ಎಂ ಸಿದ್ದೇಶ್ವರ್, ಶಿವಮೊಗ್ಗದಿಂದ ಬಿ.ವೈ ರಾಘವೇಂದ್ರ ಸ್ಪರ್ಧೆ ಮಾಡಬಹುದು. ಇನ್ನು ಹಾವೇರಿಗೆ ಬಿ.ಸಿ ಪಾಟೀಲ್ ಅಥವಾ ಕೆ.ಎಸ್ ಈಶ್ವರಪ್ಪ ಪುತ್ರ ಕಾಂತೇಶ್ ಹೆಸರನ್ನ ಪ್ರಸ್ತಾಪಿಸಲಾಗಿದೆ. ಚಿಕ್ಕಬಳ್ಳಾಪುರ ಅಭ್ಯರ್ಥಿಗಳ ರೇಸ್ನಲ್ಲಿ ಡಾ. ಕೆ ಸುಧಾಕರ್ ಮತ್ತು ಅಲೋಕ್ ವಿಶ್ವನಾಥ್ ಇದ್ದಾರೆ. ಉತ್ತರ ಕನ್ನಡದಿಂದ ಅನಂತ ಕುಮಾರ್ ಹೆಗ್ಡೆ ಅಥವಾ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಟಿಕೆಟ್ ನೀಡಬಹುದು. ದಕ್ಷಿಣ ಕನ್ನಡದಿಂದ ಮತ್ತೊಮ್ಮೆ ಕಟೀಲ್ ಸ್ಪರ್ಧೆಗೆ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಹಾಗೇ ಹುಬ್ಬಳ್ಳಿ-ಧಾರವಾಡಕ್ಕೆ ಪ್ರಹ್ಲಾದ್ ಜೋಶಿ, ಚಿತ್ರದುರ್ಗದಿಂದ ಎ ನಾರಾಯಣಸ್ವಾಮಿ, ಬಾಗಲಕೋಟೆಯಿಂದ ಪಿ. ಸಿ. ಗದ್ದಿಗೌಡರ್ ಹಾಗೂ ಬಳ್ಳಾರಿಯಿಂದ ಶ್ರೀರಾಮುಲುರನ್ನ ಕಣಕ್ಕಿಳಿಸುವ ಬಗ್ಗೆ ಚಿಂತನೆ ನಡೆದಿದೆ. ಕೊಪ್ಪಳಕ್ಕೆ ಕರಡಿ ಸಂಗಣ್ಣ, ವಿಜಯಪುಕ್ಕೆ ರಮೇಶ್ ಜಿಗಜಿಣಗಿ, ಕಲಬುರ್ಗಿಯಿಂದ ಉಮೇಶ್ ಜಾದವ್ ಹೆಸರು ಹೇಳಲಾಗಿದೆ. ಇನ್ನು ಬೆಳಗಾವಿಯಿಂದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಬೀದರ್ ನಿಂದ ಭಗವಂತ್ ಖೂಬಾ, ಚಿಕ್ಕೋಡಿ: ಅಣ್ಣಾಸಾಹೇಬ ಜೊಲ್ಲೆ ಅಥವಾ ರಮೇಶ್ ಕತ್ತಿ ಹಾಗೇ ರಾಯಚೂರು ಕ್ಷೇತ್ರದಿಂದ ರಾಜಾ ಅಮರೇಶ್ವರ ಸ್ಪರ್ಧಿಸುವ ಸಾಧ್ಯತೆಗಳಿವೆ.
ಕರ್ನಾಟಕದಲ್ಲಿ ಕಳೆದ ಬಾರಿ ನಿರೀಕ್ಷೆಗೂ ಮೀರಿ ಲೋಕಸಭಾ ಕ್ಷೇತ್ರಗಳನ್ನ ಬಿಜೆಪಿ ಗೆದ್ದುಕೊಂಡಿತ್ತು. 28 ಕ್ಷೇತ್ರಗಳ ಪೈಕಿ ಬರೋಬ್ಬರಿ 25 ಸ್ಥಾನಗಳಲ್ಲಿ ಗೆದ್ದು ಬೀಗಿತ್ತು. ಜೆಡಿಎಸ್ ಹಾಗೂ ಕಾಂಗ್ರೆಸ್ ತಲಾ ಒಂದು ಸೀಟ್ಗೆ ತೃಪ್ತಿ ಪಟ್ಟರೆ ಸುಮಲತಾ ಅಂಬರೀಶ್ ಮಂಡ್ಯದಿಂದ ಪಕ್ಷೇತರ ಅಭ್ಯರ್ಥಿಯಾಗಿ ಜಯಭೇರಿ ಬಾರಿಸಿದ್ದರು. ಆದ್ರೆ ಈ ಸಲ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡಿದ್ದು, 28 ಸ್ಥಾನಗಳಲ್ಲೂ ಗೆಲ್ಲಬೇಕೆಂದು ಗುರಿ ಹೊಂದಿವೆ. ಹೀಗಾಗೇ ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ಇಬ್ಬರು ವೀಕ್ಷಕರು ಹೋಗಿ ಕಾರ್ಯಕರ್ತರು ಮತ್ತು ನಾಯಕರ ಜತೆ ಚರ್ಚಿಸಿದ್ದಾರೆ. ಹಾಗೇ ಆಕಾಂಕ್ಷಿಗಳ ಹೆಸರುಗಳನ್ನು ಸಂಗ್ರಹಿಸಿಕೊಂಡು ಬಂದಿದ್ದಾರೆ. ಆ ಹೆಸರುಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಿದ್ದು, 28 ಸ್ಥಾನಗಳನ್ನೂ ಗೆಲ್ಲುವ ವಾತಾವರಣವಿದೆ. ಬಿಜೆಪಿ- ಜೆಡಿಎಸ್ ಜತೆಯಾಗಿ ಸೂಕ್ತ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಬೇಕು ಎಂದು ನಿರ್ಧರಿಸಲಾಗಿದೆ. ಇದೇ ಕಾರಣಕ್ಕೆ ಕೆಲ ಕ್ಷೇತ್ರಗಳಲ್ಲಿ ಹೊಸ ಮುಖಗಳಿಗೆ ಮಣೆ ಹಾಕಲಾಗ್ತಿದೆ. ಆದ್ರೆ ಇದು ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೆ ಅನ್ನೋದನ್ನ ಕಾದು ನೋಡ್ಬೇಕು.