ಪುರುಷರನ್ನೇ ನುಂಗುತ್ತೆ ಈ ಪರ್ವತ! – ಜಗತ್ತಿಗೆ ಬೆಳ್ಳಿ ಕೊಟ್ಟವರಿಗೆ ಏನಾಗ್ತಿದೆ?
ದೈತ್ಯ ಪರ್ವತಗಳನ್ನು ಏರಿ ಅದರ ತುದಿ ಮುಟ್ಟುವುದು ಸಾಹಸಿ ಪರ್ವತಾರೋಹಿಗಳ ಕನಸು ಎಂದೇ ಹೇಳಬಹುದು. ಇಂತಹ ಸಾಹಸ ಕೈಗೊಳ್ಳಲು ಪ್ರಪಂಚದ ಅನೇಕ ಸಾಹಸಿಗರು ಇಷ್ಟಪಡುತ್ತಾರೆ. ಎಷ್ಟೇ ಕಷ್ಟ ಆದ್ರೂ ಪರ್ವತ ಏರಲು ಟ್ರೈ ಮಾಡ್ತಾರೆ.. ಆದ್ರೆ ಇಲ್ಲೊಂದು ಪರ್ವತ ಇದೆ.. ಈ ಪರ್ವತದ ಬಗ್ಗೆ ಕೇಳಿದ್ರೆ ಬೆಚ್ಚಿ ಬೀಳ್ತಾರೆ.. ಇದು.. ಒಂದೆರಡಲ್ಲ.. ಬರೋಬ್ಬರಿ 80 ಲಕ್ಷ ಜನರನ್ನ ಬಲಿ ತಗೊಂಡಿದೆ.
ಇದನ್ನೂ ಓದಿ: 100 ಮಂದಿ ಬಿಜೆಪಿ ಅಭ್ಯರ್ಥಿಗಳು ಫೈನಲ್ – ಮಿಡ್ನೈಟ್ ಮೀಟಿಂಗ್ ವೇಳೆ ಮೋದಿ ನೀಡಿದ ಸೂಚನೆ ಏನು?
ನಮ್ಮ ಪ್ರಪಂಚ ಎಷ್ಟೇ ಮುಂದುವರಿದ್ರೂ, ಎಷ್ಟೇ ಆಧುನಿಕತೆಯನ್ನು ಪಡೆದುಕೊಳ್ಳುತ್ತಿದ್ದರೂ ಇನ್ನೂ ಹಲವು ನಿಗೂಢ ಸ್ಥಳಗಳನ್ನು ಬಚ್ಚಿಟ್ಟು ಕುಳಿತಿದೆ.. ಕೆಲವು ಸ್ಥಳಗಳಲ್ಲಿನ ರಹಸ್ಯ ಭೇದಿಸಲು ಮನುಷ್ಯರಿಂದ ಇನ್ನೂ ಸಾಧ್ಯವಾಗಿಲ್ಲ. ಇಂತಹ ಕೆಲವು ಸ್ಥಳಗಳ ರಹಸ್ಯ ಭೇದಿಸಲು ಹೋಗಿ ಜನರು ಪ್ರಾಣಕ್ಕೆ ಕುತ್ತು ತಂದುಕೊಂಡ ಎಷ್ಟೋ ಉದಾಹರಣೆಗಳಿವೆ. ಇದೇ ಸಾಲಿಗೆ ಸೇರುತ್ತದೇ ದಕ್ಷಿಣ ಅಮೆರಿಕಾದ ಬೊಲಿವಿಯಾ ದೇಶದಲ್ಲಿರುವ ಸೆರೊ ರಿಕೊ ಪರ್ವತ. ಇದು ಅಂತಿಂಥ ಪರ್ವತ ಅಲ್ಲ.. ಜನರನ್ನ ನುಂಗುವ ಶ್ರೀಮಂತ ಪರ್ವತ.. ಯಾಕೆ ಇದು ಶ್ರೀಮಂತ ಪರ್ವತ ಅಂದರೆ, ಬೊಲಿವಿಯಾ ದೇಶದಲ್ಲಿ ಹಲವು ಬೆಳ್ಳಿಯ ಗಣಿಗಳಿವೆ. ಅಂತದ್ದೇ ಟನ್ ಗಟ್ಟಲೆ ಬೆಳ್ಳಿಯ ನಿಕ್ಷೇಪಗಳನ್ನು ಈ ಸೆರೊ ರಿಕೊ ಪರ್ವತ ತನ್ನೊಳಗೆ ಬಚ್ಚಿಟ್ಟುಕೊಂಡಿದೆ ಅಂತಾ ಹೇಳಲಾಗುತ್ತದೆ. ಇದೇ ಕಾರಣಕ್ಕಾಗಿ ಇದನ್ನು ಅತ್ಯಂತ ಶ್ರೀಮಂತ ಪರ್ವತ ಅಂತ ಕರೆಯುತ್ತಾರೆ.
ಕೇವಲ ಬೆಳ್ಳಿ ಮಾತ್ರವಲ್ಲದೆ ಇನ್ನೂಅನೇಕ ರಹಸ್ಯಗಳನ್ನು ಈ ಪರ್ವತ ಹೊತ್ತುಕೊಂಡಿದೆ. ಅದರಲ್ಲೂ ಈ ಪರ್ವತ ಸುಮಾರು 80 ಲಕ್ಷ ಜನರನ್ನು ನುಂಗಿದೆ. ಈ ಪರ್ವತದ ಕಾರಣದಿಂದಲೇ ಪ್ರತಿ ತಿಂಗಳು ಈ ಪ್ರದೇಶದಲ್ಲಿ 14 ಮಹಿಳೆಯರು ವಿಧವೆಯರಾಗುತ್ತಾರೆ. ಇದಕ್ಕೆ ಕಾರಣ ಸೆರೊ ರಿಕೊ ಪರ್ವತದ ಕೆಳಗೆ ಸುಮಾರು 500 ವರ್ಷಗಳಿಂದಲೂ ನಡೆಯುತ್ತಾ ಬಂದಿರುವ ಬೆಳ್ಳಿಯ ಗಣಿಗಾರಿಕೆ. ಈ ಪರ್ವತ ಶ್ರೇಣಿಗಳಲ್ಲಿ ಸಾವಿರಾರು ಟನ್ ಬೆಳ್ಳಿಯಿದೆ.
ಒಂದು ಕಾಲದಲ್ಲಿ ಸ್ಪೇನ್ ದೊರೆಗಳು ಇಲ್ಲಿ ಸಾಕಷ್ಟು ಗಣಿಗಾರಿಕೆ ನಡೆಸಿ ಪರ್ವತವನ್ನು ಲೂಟಿ ಮಾಡಿದ್ದರು. ಸ್ಪ್ಯಾನಿಷ್ ವಸಾಹತುಶಾಹಿ ಯುಗದಲ್ಲಿ 16ರಿಂದ 18ನೇ ಶತಮಾನದ ನಡುವೆ ಜಗತ್ತಿಗೆ ಶೇ.80ರಷ್ಟು ಬೆಳ್ಳಿ ಈ ಪರ್ವತದ ಗಣಿಗಳಿಂದಲೇ ಪೂರೈಕೆಯಾಗುತ್ತಿತ್ತು. ಅಂದರೆ ಇಲ್ಲಿನ ಗಣಿಗಾರಿಕೆಯ ಅಗಾಧತೆ ಅರ್ಥವಾಗುತ್ತದೆ. ಸೆರೊ ರಿಕೊ ಪರ್ವತದಲ್ಲಿ ಗಣಿಗಾರಿಕೆ ಮಾಡುವುದು ಅಷ್ಟು ಸುಲಭವಾಗಿರಲಿಲ್ಲ ಗಣಿಗಾರಿಕೆಯ ಸಮಯದಲ್ಲಿ ಅದರ ಸುರಂಗದಲ್ಲಿ ಸಿಲುಕಿ 80 ಲಕ್ಷಕ್ಕೂ ಹೆಚ್ಚು ಪುರುಷರು ಪ್ರಾಣ ಕಳೆದುಕೊಂಡರು. ಈ ಕಾರಣಕ್ಕಾಗಿ ಈ ಪರ್ವತವನ್ನು ಪುರುಷರನ್ನು ನುಂಗುವ ಪರ್ವತ ಎನ್ನಲಾಗುತ್ತದೆ. ಇಂದಿಗೂ ಇಲ್ಲಿ 15 ಸಾವಿರಕ್ಕೂ ಹೆಚ್ಚು ಮಂದಿ ಬೆಳ್ಳಿ ಗಣಿಗಾರಿಕೆಯಲ್ಲಿ ತೊಡಗಿದ್ದಾರೆ.. ಈ ಕೆಲಸದಲ್ಲಿ ಅನೇಕರು ಸಾವಿಗೀಡಾಗುತ್ತಲೇ ಇದ್ದಾರೆ.
ಇಲ್ಲಿ ಕೆಲಸ ಮಾಡುವ ಯಾರೊಬ್ಬರೂ 40 ವರ್ಷಕ್ಕಿಂತ ಹೆಚ್ಚು ಬದುಕುವುದಿಲ್ಲ. ಸುರಂಗಗಳಿಂದಲೇ ತುಂಬಿಹೋಗಿರುವ ಈ ಪರ್ವತ ಪುರುಷ ಹಾಗೂ ಯುವಕರಿಗೆ ಸಾವಿನ ಬಲೆ ಬೀಸುತ್ತದೆ. ಗಣಿಗಾರಿಕೆಯ ಕಾರಣ ಈ ಪರ್ವತದಲ್ಲಿ ಸಾವಿರಾರು ರಂದ್ರಗಳಾಗಿವೆ. ಇದರಿಂದ ಪರ್ವತ ಕುಸಿಯುವ ಭೀತಿಯೂ ಎದುರಾಗಿದೆ. ಇಲ್ಲಿ ಹೆಚ್ಚು ಧೂಳು ಇರುವ ಕಾರಣ ಕಾರ್ಮಿಕರ ಶ್ವಾಸಕೋಶಕ್ಕೆ ಹಾನಿಯಾಗಿ ಅವರು ಬೇಗ ಸಾವನ್ನಪ್ಪುತ್ತಾರೆ.
ಜನರು ಸಾವಿನಿಂದ ಬಚಾವಾಗಲು ಇಲ್ಲಿನ ದೇವರಾದ ಎಲ್ ಟಿಯೊವನ್ನು ಪ್ರಾರ್ಥಿಸುತ್ತಾರೆ. ಪ್ರತಿ ಸುರಂಗದಲ್ಲೂ ಇರುವ ಎಲ್ ಟಿಯೋ ಪ್ರತಿಮೆಗೆ ಆಲ್ಕೋಹಾಲ್, ಸಿಗರೇಟ್ ಮತ್ತು ಕೋಕಾ ಎಲೆಗಳನ್ನು ಅರ್ಪಿಸುತ್ತಾರೆ. ಪ್ರತಿ ಶುಕ್ರವಾರ ಈ ದೈವಕ್ಕೆ ನೈವೇದ್ಯವನ್ನೂ ಸಲ್ಲಿಸುತ್ತಾರೆ. ಇಷ್ಟಕ್ಕೂ ಈ ಸೆರೊ ರಿಕೊ ಪರ್ವತದಲ್ಲಿ ಕೆಲಸ ಮಾಡುವ ಕಾರ್ಮಿಕರ ಸಾವಿಗೆ ಕಾರಣವಾಗಿರೋದು ಸಿಲಿಕೋಸಿಸ್ ಕಾಯಿಲೆ. ಚಿನ್ನದ ಗಣಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರಂತೆ ಬೆಳ್ಳಿಯ ಗಣಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರಲ್ಲೂ ಈ ಸಮಸ್ಯೆ ಕಂಡುಬರುತ್ತದೆ. ಶ್ವಾಸಕೋಶದೊಳಗೆ ಸೇರುವ ಧೂಳಿನಿಂದ ಜ್ವರ, ಎದೆ ನೋವು, ತೂಕ ನಷ್ಟ, ಶಾರೀರಿಕ ದೌರ್ಬಲ್ಯ ಇದರ ರೋಗಲಕ್ಷಣಗಳು.. ಎದೆಯ ಗೂಡಿನಲ್ಲಿ ತೂತು ಬಿದ್ದು, ವ್ಯಕ್ತಿ ಸಾವಿಗೀಡಾಗುತ್ತಾನೆ. ಗಣಿಗಾರಿಕೆಯಲ್ಲಿ ಪಾದರಸ ಬಳಕೆಯಿಂದಾಗಿ ಕಾರ್ಮಿಕರು ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಸಾಯುತ್ತಾರೆ. ಗಣಿಗಳಲ್ಲಿ ಪುರುಷರೇ ಹೆಚ್ಚು ಕೆಲಸ ಮಾಡುವುದರಿಂದ ಈ ಪರ್ವತಕ್ಕೆ ಪುರುಷರನ್ನು ನುಂಗುವ ಪರ್ವತ ಎಂಬ ಅಪಖ್ಯಾತಿ ಬಂದಿದೆ.