ಬೆಳಗಾವಿಯಿಂದ ಜಗದೀಶ್ ಶೆಟ್ಟರ್ ಕಣಕ್ಕೆ? – ಬೆಳಗಾವಿ ಕೋಟೆಯನ್ನ ಉಳಿಸಿಕೊಳ್ಳೋಕೆ ಬಿಜೆಪಿ ರಣತಂತ್ರ..!
ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿ ಬಿಜೆಪಿಗೆ ಶಾಕ್ ಕೊಟ್ಟಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಲೋಕಸಭಾ ಚುನಾವಣೆ ಹೊತ್ತಿಗೆ ಬಿಜೆಪಿಗೆ ಮರಳಿದ್ದಾರೆ. ಶೆಟ್ಟರ್ ಘರ್ ವಾಪ್ಸಿ ಬಳಿಕ ಸಾಕಷ್ಟು ಚರ್ಚೆಗಳಾಗಿವೆ. ಅದ್ಯಾವ ಕಾರಣಕ್ಕೆ ಶೆಟ್ಟರ್ ಬಿಜೆಪಿಗೆ ಮರಳಿದ್ರು..? ಏನು ಆಫರ್ ಕೊಟ್ಟಿದ್ದಾರೆ..? ಲೋಕಸಭಾ ಚುನಾವಣೆಗೆ ಸ್ಪರ್ಧಿಸ್ತಾರಾ..? ಸ್ಪರ್ಧಿಸಿದ್ರೂ ಯಾವ ಕ್ಷೇತ್ರ..? ಹೀಗೆ ಹಲವು ಪ್ರಶ್ನೆಗಳು ಮೂಡಿವೆ. ಈ ಎಲ್ಲಾ ಅನುಮಾನಗಳಿಗೆ ತೆರೆ ಎಂಬಂತೆ ಹೊಸ ಸುದ್ದಿಯೊಂದು ಹೊರ ಬಿದ್ದಿದೆ. ಅದುವೇ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಜಗದೀಶ್ ಶೆಟ್ಟರ್ ಸ್ಪರ್ಧೆ ಮಾಡ್ತಾರೆ ಅನ್ನೋದು. ಯೆಸ್. ಬೆಳಗಾವಿ ಲೋಕಸಭಾ ಕ್ಷೇತ್ರ ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ಕಣ. ಇತ್ತ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಗೆ ಕಸರತ್ತು ನಡೆಸ್ತಿದೆ. ಮತ್ತೊಂದೆಡೆ ಬೆಳಗಾವಿ ಕೋಟೆಯನ್ನ ಉಳಿಸಿಕೊಳ್ಳೋಕೆ ಬಿಜೆಪಿ ರಣತಂತ್ರ ಹೂಡಿದೆ. ಹಾಲಿ ಸಂಸದೆಯಾದ ಮಂಗಳ ಅಂಗಡಿ ಅವರಿಗೆ ಈ ಬಾರೀ ಟಿಕೆಟ್ ಕೈ ತಪ್ಪಲಿದೆ ಎನ್ನಲಾಗಿದೆ.
ಇದನ್ನೂ ಓದಿ: ಕಾಂಗ್ರೆಸ್‌ಗೆ ಹೋದಷ್ಟೇ ಸ್ಪೀಡ್ ಆಗಿ ವಾಪಸ್ ಆದ ಜಗದೀಶ್ ಶೆಟ್ಟರ್ – ‘ಕೈ’ಗೆ ಬೈ ಬೈ ಹೇಳಲು ಕಾರಣವೇನು?
ಪ್ರತಿಷ್ಠೆಯ ಕಣವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಹಾಲಿ ಸಂಸದೆಯಾಗಿರುವ ಮಂಗಳಾ ಅಂಗಡಿ ಅವರಿಗೆ ಈ ಬಾರೀ ಗೆಲ್ಲುವು ಅನುಮಾನ ಎನ್ನಲಾಗುತ್ತಿದೆ. ಹೀಗಾಗಿ ಕ್ಷೇತ್ರವನ್ನ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಕಾಂಗ್ರೆಸ್ ಸೂಕ್ತ ಅಭ್ಯರ್ಥಿಯ ಹುಡುಕಾಟದಲ್ಲಿದೆ. ಮಂಗಳ ಅಂಗಡಿ ಅವರಿಗೆ ಬಿಜೆಪಿ ಟಿಕೆಟ್ ನೀಡಿದ್ರೆ ಕಾಂಗ್ರೆಸ್ ನಿಂದ ಸಚಿವ ಸತೀಶ್ ಜಾರಕಿಹೊಳಿ ಅವರನ್ನ ಕಣಕ್ಕಿಳಿಸಲು ಕಾಂಗ್ರೆಸ್ ನಾಯಕರು ಚಿಂತನೆ ನಡೆಸಿದ್ದರು. ಇತ್ತ ಸತೀಶ್ ಜಾರಕಿಹೊಳಿ ಕಾಂಗ್ರೆಸ್ ನಿಂದ ಕಣಕ್ಕಿಳಿದರೇ ಗೆಲುವು ಕಾಂಗ್ರೆಸ್ ಗೆ ಎನ್ನುವ ಮಾತುಗಳಿವೆ. ಹೀಗಾಗಿ ಅಂತಿಮವಾಗಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನ ಕಣಕ್ಕಿಳಿಸಿಲು ಬಿಜೆಪಿ ಹೈಕಮಾಂಡ್ ಮುಂದಾಗಿದೆ ಎನ್ನಲಾಗಿದೆ. ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಇದೀಗ ಫುಲ್ ಆಕ್ಟಿವ್ ಆಗಿದ್ದಾರೆ. ಬೆಳಗಾವಿ ಲೋಕಸಭೆಗೆ ಬಿಜೆಪಿಯ ಒಮ್ಮತದ ಅಭ್ಯರ್ಥಿಯಾಗಿ ಜಗದೀಶ್ ಶೆಟ್ಟರ್ ಆಯ್ಕೆಯಾಗಿದ್ದಾರೆ. ಲಿಂಗಾಯತ ಸಮುದಾಯದ ಹಿರಿಯ ನಾಯಕರಾಗಿರುವ ಜಗದೀಶ್ ಶೆಟ್ಟರ್ ಅವರನ್ನ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸುವ ನಿಟ್ಟಿನಲ್ಲಿ ರಾಜ್ಯ ಬಿಜೆಪಿ ನಾಯಕರು ಹೈಕಮಾಂಡ್ ನಾಯಕರ ಮುಂದೆ ಬೇಡಿಕೆ ಇಟ್ಟಿದ್ರು. ಇದೀಗ ಬಿಜೆಪಿ ಹೈಕಮಾಂಡ್ ಮಾಜಿ ಸಿಎಂ ಶೆಟ್ಟರ್ ಗೆ ಮಣೆ ಹಾಕಿದೆ ಎನ್ನಲಾಗಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ಕಾಂಗ್ರೆಸ್ ಸೇರಿ ಸೋಲು ಕಂಡಿದ್ದ ಶೆಟ್ಟರ್ ಮರಳಿ ಕಮಲ ಮುಡಿದಿದ್ದಾರೆ. ತಮ್ಮ ಅಸ್ತಿತ್ವವನ್ನ ಸಾಬೀತು ಪಡಿಸಿಕೊಳ್ಳುವ ನಿಟ್ಟಿನಲ್ಲಿ ಅಚ್ಚರಿ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. ಆದ್ರೆ ಹೈಕಮಾಂಡ್ ಮಾತ್ರ ಗುಟ್ಟು ಬಿಟ್ಟು ಕೊಡುತ್ತಿಲ್ಲ. ಹಾಲಿ ಸಂಸದೆ ಮಂಗಳಾ ಅಂಗಡಿ ಅವರಿಗೆ ಹೈಕಮಾಂಡ್ ಮತ್ತೆ ಅವಕಾಶ ನೀಡುತ್ತಾ ಅಥವಾ ಹೊಸ ಅಭ್ಯರ್ಥಿಗೆ ಮಣೆ ಹಾಕುತ್ತಾ ಎಂಬ ಇನ್ನೂ ಸುಳಿವು ಬಿಟ್ಟುಕೊಟ್ಟಿಲ್ಲ. ಇದೀಗ ಜಗದೀಶ್ ಶೆಟ್ಟರ್ ಹೆಸರು ಕೇಳಿ ಬಂದಿದ್ದು ಟಿಕೆಟ್ ಆಕಾಂಕ್ಷಿಗಳ ಎದೆಯಲ್ಲಿ ಢವಢವ ಶುರುವಾಗಿದೆ.
ಹಾಲಿ ಸಂಸದೆ ಮಂಗಳಾ ಅಂಗಡಿ ಸೇರಿದಂತೆ ಬೆಳಗಾವಿ ಲೋಕಸಭೆ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಲು ಏಳಕ್ಕೂ ಅಧಿಕ ಆಕಾಂಕ್ಷಿಗಳಿದ್ದಾರೆ. ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ, ಮಾಜಿ ಸಂಸದ ರಮೇಶ್ ಕತ್ತಿ, ಮಾಜಿ ಶಾಸಕ ಅನಿಲ್ ಬೆನಕೆ, ಸಂಜಯ್ ಪಾಟೀಲ, ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಶಂಕರಗೌಡ ಪಾಟೀಲ, ಮಹಾಂತೇಶ ವಕ್ಕುಂದ ಅವರ ಮಧ್ಯೆ ಟಿಕೆಟ್ಗಾಗಿ ಪೈಪೋಟಿ ಏರ್ಪಟ್ಟಿದೆ. ಈಗಾಗಲೇ ಹಲವು ಸಲ ದೆಹಲಿಗೆ ಹೋಗಿ ಹೈಕಮಾಂಡ್ ನಾಯಕರು ಹಾಗೂ ರಾಜ್ಯ ಮಟ್ಟದ ಪ್ರಭಾವಿ ನಾಯಕರನ್ನೂ ಭೇಟಿ ಮಾಡಿ ಟಿಕೆಟ್ಗೆ ಬೇಡಿಕೆ ಇಟ್ಟಿದ್ದಾರೆ. ಆದ್ರೆ ಈವರೆಗೂ ಯಾರಿಗೆ ಟಿಕೆಟ್ ಅನ್ನೋದು ಫೈನಲ್ ಆಗಿಲ್ಲ. ಸಂಸದೆ ಮಂಗಳಾ ಅಂಗಡಿ ಈ ಬಾರಿ ನನಗೇ ಟಿಕೆಟ್ ಕೊಡ್ತಾರೆ. ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸಿದ್ದು, ನಾನು ಉತ್ತರ ಕರ್ನಾಟಕದ ಏಕೈಕ ಮಹಿಳಾ ಸಂಸದೆ ಎಂದಿದ್ದಾರೆ. ರಾಜ್ಯ ಬಿಜೆಪಿ ಉಪಾಧ್ಯಕ್ಷ ಅನಿಲ ಬೆನಕೆ ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಮಹಾಂತೇಶ ಕವಟಗಿಮಠ ಲೋಕಸಭೆಗೆ ಸ್ಪರ್ಧಿಸುವುದಾಗಿ ಕ್ಷೇತ್ರದಾದ್ಯಂತ ಓಡಾಡುತ್ತಿದ್ದು, ಕಬಡ್ಡಿ-ಕ್ರಿಕೆಟ್ ಪಂದ್ಯಾವಳಿ ಆಯೋಜಿಸುತ್ತಿದ್ದಾರೆ.
ಹಾಲಿ ಸಂಸದೆ ಮಂಗಳ ಅಂಗಡಿ ಹಾಗೂ ಜಗದೀಶ್ ಶೆಟ್ಟರ್ ಬೀಗರಾಗಬೇಕು. ಹೀಗಾಗಿ ಮಂಗಳ ಅಂಗಡಿ ಕ್ಷೇತ್ರವನ್ನ ಶೆಟ್ಟರ್ಗೆ ಬಿಟ್ಟುಕೊಡುವ ಸಾಧ್ಯತೆಯೂ ಇದೆ. ಮತ್ತೊಂದೆಡೆ ಲೋಕಸಭೆ ಚುನಾವಣೆ ಹತ್ತಿರವಾದರೂ ಮಾಜಿ ಸಚಿವ ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಮಾತ್ರ ಅಭ್ಯರ್ಥಿಗಳ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಿಲ್ಲ. ಜಾರಕಿಹೊಳಿ ಸಹೋದರರ ಸೈಲೆಂಟ್ ಚರ್ಚೆಗೆ ಗ್ರಾಸವಾಗಿದೆ. ಒಟ್ಟಿನಲ್ಲಿ ಹೈಕಮಾಂಡ್ ಕೊನೆ ಗಳಿಗೆಯಲ್ಲಿ ಅಳೆದು ತೂಗಿ ಯಾರಿಗೆ ಟಿಕೆಟ್ ನೀಡುತ್ತೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.