ಪಾಕಿಸ್ತಾನಕ್ಕೆ ವಾಟರ್ ಸ್ಟ್ರೈಕ್! – ನೀರು ನಿಲ್ಲಿಸಿದ್ಯಾಕೆ ಮೋದಿ?
ಸರ್ಜಿಕಲ್ ಸ್ಟ್ರೈಕ್ ಆಯ್ತು.. ಏರ್ಸ್ಟ್ರೈಕ್ ಆಯ್ತು.. ಈಗ ವಾಟರ್ ಸ್ಟ್ರೈಕ್.. ಪಾಕಿಸ್ತಾನದ ವಿರುದ್ಧ ಅಂತಾ ಉದ್ದೇಶಪೂರ್ವವಾಗಿ ಕೈಗೊಂಡಿರೋ ಕ್ರಮ ಅಲ್ಲದೇ ಇದ್ರೂ, ಭಾರತದ ಒಂದು ಡ್ಯಾಮ್ನಿಂದಲೇ ಪಾಕಿಸ್ತಾನ ಕಂಗಾಲಾಗಿದೆ. ಜಮ್ಮು-ಕಾಶ್ಮೀರದೊಳಕ್ಕೆ ಉಗ್ರರನ್ನ ಛೂ ಬಿಡೋ ಮೂಲಕ ಕಾಟ ಕೊಡೋ ಪಾಕಿಸ್ತಾನಕ್ಕೆ ಈಗ ಇದೇ ಕಾಶ್ಮೀರದಲ್ಲಿ ನಿರ್ಮಾಣವಾದ ಒಂದು ಡ್ಯಾಮ್ನಿಂದಲೇ ಬಿಸಿ ಮುಟ್ಟಿದೆ. ನೀವೆಲ್ಲಾ ಇಂಡಸ್ ನೀರಿನ ಒಪ್ಪಂದದ ಬಗ್ಗೆ ಕೇಳಿಯೇ ಇರ್ತೀರಾ. ಈ ಇಂಡಸ್ ನೀರಿನ ಒಪ್ಪಂದದಲ್ಲಿ ಒಟ್ಟು ಆರು ನದಿಗಳು ಬರ್ತಾವೆ. ರಾವಿ, ಬ್ಯಾಸ್, ಸತ್ಲುಜ್, ಇಂಡಸ್, ಝೇಲಮ್ ಮತ್ತು ಚೆನಾಬ್. ಈ ಪೈಕಿ ರಾವಿ, ಬ್ಯಾಸ್, ಸತ್ಲುಜ್ ಈ ಮೂರೂ ನದಿಗಳ ನೀರನ್ನ ಭಾರತಕ್ಕೆ ನೀಡಲಾಗಿತ್ತು. ಆದ್ರೆ ನಾವು ಮಾತ್ರ ಇದನ್ನ ಸಂಪೂರ್ಣವಾಗಿ ಬಳಕೆ ಮಾಡ್ತಾ ಇರಲಿಲ್ಲ. ನದಿಗಳ ನೀರು ಪಾಕಿಸ್ತಾನಕ್ಕೂ ಹರಿದು ಹೋಗ್ತಾ ಇತ್ತು. ಆದ್ರೀಗ ಪಾಕಿಸ್ತಾನಕ್ಕೆ ನೀರು ಹರಿಯೋದನ್ನ ಭಾರತ ಕಂಪ್ಲೀಟ್ ಬಂದ್ ಮಾಡಿದೆ. ಅದು ಹೇಗೆ? ಇದಕ್ಕೆ ಕಾರಣ ಏನು? ಇದು ಪಾಕಿಸ್ತಾನದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ? ಭಾರತಕ್ಕೆ ಏನೆಲ್ಲಾ ಲಾಭವಾಗುತ್ತೆ? ಅನ್ನೂ ಮಾಹಿತಿ ಇಲ್ಲಿದೆ..
ಇದನ್ನೂ ಓದಿ: ಪಾಕ್ ಪರ ಘೋಷಣೆ ಪ್ರಕರಣ – ಪೊಲೀಸರಿಂದ ನಾಸೀರ್ ಹುಸೇನ್ ಬೆಂಬಲಿಗನ ವಿಚಾರಣೆ
ಹಿಮಾಚಲದಿಂದ ಹುಟ್ಟಿ ಜಮ್ಮು-ಕಾಶ್ಮೀರದ ಮೂಲಕ ಹರಿಯೋ ರವಿ ನದಿಯ ನೀರು ಈ ಹಿಂದೆ ನೇರವಾಗಿ ಪಾಕಿಸ್ತಾನಕ್ಕೆ ಹರಿಯುತ್ತಾ ಇತ್ತು. ಅದನ್ನ ಈಗ ಭಾರತ ಕಂಪ್ಲೀಟ್ ಆಗಿ ಬಂದ್ ಮಾಡಿದೆ. ಯಾಕಂದ್ರೆ ರವಿ ನದಿಗೆ ಅಡ್ಡಲಾಗಿ ಒಂದು ಅಣೆಕಟ್ಟನ್ನ ಕಟ್ಟಲಾಗಿದೆ. ಶಹಾಪುರ್ ಕಂಡಿ ಹೆಸರಿನ ಅಣೆಕಟ್ಟು ಇದಾಗಿದ್ದು, ಪಂಜಾಬ್ ಮತ್ತು ಜಮ್ಮು-ಕಾಶ್ಮೀರದ ಗಡಿಯಲ್ಲೇ ಈ ಅಣೆಕಟ್ಟು ಬರುತ್ತೆ. ಈ ಅಣೆಕಟ್ಟಿನ ನಿರ್ಮಾಣ ಕಾರ್ಯ ಸಂಪೂರ್ಣವಾಗಿದ್ದು, ಹೀಗಾಗಿ ಪಾಕಿಸ್ತಾನದ ಹರಿಯುತ್ತಿದ್ದ ರವಿ ನದಿಯ ನೀರನ್ನ ಬಂದ್ ಮಾಡಲಾಗಿದೆ. ರವಿ ನದಿ ಹಿಮಾಚಲಪ್ರದೇಶದಲ್ಲಿ ಹುಟ್ಟಿ ಜಮ್ಮು-ಕಾಶ್ಮೀರ ಮತ್ತು ಪಂಜಾಬ್ನ್ನ ಹಾದು ಪಾಕಿಸ್ತಾನಕ್ಕೆ ಪ್ರವೇಶಿಸುತ್ತೆ. ಇಲ್ಲಿ ಜಮ್ಮು ಕಾಶ್ಮೀರ ಮತ್ತು ಪಂಜಾಬ್ ನಡುವೆ ರವಿ ನದಿ ಹರಿದು ಹೋಗೋ ಭಾಗದಲ್ಲೇ ಈಗ ಅಣೆಕಟ್ಟನ್ನ ನಿರ್ಮಾಣ ಮಾಡಲಾಗಿದೆ.
ಅಸಲಿಗೆ ವರ್ಲ್ಡ್ ಬ್ಯಾಂಕ್ನ ಸಹಕಾರದೊಂದಿಗೆ ಭಾರತ ಮತ್ತು ಪಾಕಿಸ್ತಾನ ನಡುವೆ 1960ರಲ್ಲಿ ಇಂಡಸ್ ಒಪ್ಪಂದ ನಡೆದಿತ್ತು. ಈ ಒಪ್ಪಂದದ ಪ್ರಕಾರ ಪೂರ್ವ ವಲಯದ ನದಿಗಳು ಅಂದ್ರೆ ಬಿಯಾಸ್, ರವಿ ಮತ್ತು ಸತ್ಲೆಜ್ ನದಿಗಳನ್ನ ಭಾರತಕ್ಕೆ ಅಂತಾನೆ ಮೀಸಲಿಡಲಾಗಿತ್ತು. ಆದ್ರೆ ಪಶ್ಚಿಮ ಭಾಗದ ನದಿಗಳು ಅಂದ್ರೆ ಟಿಬೆಟ್ ಭಾಗದಲ್ಲಿ ಹುಟ್ಟಿಕೊಳ್ಳೋ ಇಂಡಸ್, ಝೇಲಮ್ ಮತ್ತು ಚೆನಾಬ್ನ್ನ ಈ ಮೂರು ನದಿಗಳ ನೀರನ್ನ ಪಾಕಿಸ್ತಾನಕ್ಕೆ ಅಂತಾನೆ ಮೀಸಲಿಡಲಾಗುತ್ತೆ. ಒಟ್ಟು ಆರು ನದಿಗಳ ಪೈಕಿ ಪೂರ್ವ ವಲಯದ ಮೂರು ನದಿಗಳ ನೀರು ಭಾರತಕ್ಕೆ, ಪಶ್ಚಿಮ ವಲಯದ ಮೂರು ನದಿಗಳ ನರು ಪಾಕಿಸ್ತಾನದ ಬಳಕೆಗೆ ಅಂತಾ ಒಪ್ಪಂದ ಫೈನಲ್ ಆಗುತ್ತೆ. ಈ ಪೈಕಿ ಭಾರತಕ್ಕೆ ಅಂತಾ ನಿಗದಿ ಮಾಡಿದ್ದ ಸತ್ಲೆಜ್, ಬಿಯಾಸ್ ಮತ್ತು ರವಿ ನದಿಗಳಲ್ಲಿ ವರ್ಷಕ್ಕೆ ಸುಮಾರು 33 ಮಿಲಿಯನ್ ಎಕರೆ ಫೀಟ್ನಷ್ಟು ನೀರು ಸಂಗ್ರಹವಾಗುತ್ತೆ. ಆದ್ರೆ ಭಾರತ ಇದನ್ನ ಸಂಪೂರ್ಣವಾಗಿ ಬಳಕೆ ಮಾಡ್ತಾ ಇರಲಿಲ್ಲ. ಯಾಕಂದ್ರೆ ಯಾವುದೇ ಡ್ಯಾಮ್ಗಳು ಇಲ್ಲದೇ ಇದ್ದಿದ್ರಿಂದ ನೀರನ್ನ ಸಂಗ್ರಹ ಮಾಡುವ ಕಾರ್ಯ ಆಗ್ತಾನೆ ಇರಲಿಲ್ಲ. ಸತ್ಲೆಜ್, ಬಿಯಾಸ್ ಮತ್ತು ರವಿ ನೀರು ಸೀದಾ ಪಾಕಿಸ್ತಾನಕ್ಕೆ ಹರಿದು ಹೋಗ್ತಿತ್ತು. ಅತ್ತ ಪಾಕಿಸ್ತಾನಕ್ಕೆ ಅಂತಾ ನಿಗದಿಯಾಗಿರುವ ಇಂಡಸ್, ಝೇಲಮ್ ಮತ್ತು ಚೆನಾಬ್ ನದಿಗಳು ಕೂಡ ಭಾರತದ ಮೂಲಕವೇ ಹರಿಯುತ್ತಿವೆ. ಈ ಮೂರು ನದಿಗಳ 20% ನಷ್ಟು ನೀರನ್ನ ಭಾರತ ಬಳಸಬಹುದು. ಆದ್ರೆ ಯಾವುದೇ ಕಾರಣಕ್ಕೂ ನೀರಿನ ಹರಿವನ್ನ ಭಾರತ ತಡೆಯುವಂತಿಲ್ಲ. ಅಂದ್ರೆ ಇಂಡಸ್, ಝೇಲಮ್ ಮತ್ತು ಚೆನಾಬ್ ನದಿಗಳಿಗೆ ಅಣೆಕಟ್ಟುಗಳನ್ನ ಕಟ್ಟಿ ನೀರು ಸಂಗ್ರಹ ಮಾಡಿಟ್ಟುಕೊಳ್ಳುವಂತಿಲ್ಲ. ಆದ್ರೆ ಭಾರತಕ್ಕೆ ಮೀಸಲಾಗಿರುವ ಸತ್ಲೆಜ್, ಬಿಯಾಸ್ ಮತ್ತು ರವಿ ನದಿಗಳ ನೀರನ್ನ ಎಷ್ಟು ಸಾಧ್ಯವೋ ಅಷ್ಟು ಬಳಸಿಕೊಳ್ಳೋದಕ್ಕೆ ಭಾರತ ಒಟ್ಟು ಮೂರು ಡ್ಯಾಮ್ಗಳನ್ನ ನಿರ್ಮಾಣ ಮಾಡಿದೆ. ಹೀಗಾಗಿ 95% ನೀರನ್ನ ಭಾರತ ಬಳಸ್ತಾ ಇದ್ದು, ಮೂರು ನದಿಗಳ 5% ನಷ್ಟು ನೀರು ಮಾತ್ರ ಪಾಕಿಸ್ತಾನಕ್ಕೆ ಹರಿಯುತ್ತಿದೆ. ಆದ್ರೆ ಆ 5% ನೀರು ಪಾಕಿಸ್ತಾನಕ್ಕೆ ಹರಿಯೋದನ್ನ ಕೂಡ ಭಾರತ ಬಂದ್ ಮಾಡೋಕೆ ಮುಂದಾಗಿದೆ. ಇದುವರೆಗೆ ರವಿ ನದಿಯ 1150 ಕ್ಯೂಸೆಕ್ಸ್ ನೀರು ಪಾಕಿಸ್ತಾನಕ್ಕೆ ಹರಿಯುತ್ತಿತ್ತು. ಈಗ ಆ ನೀರನ್ನ ಕೂಡ ಭಾರತವೇ ಬಳಸೋಕೆ ನಿರ್ಧರಿಸಿದೆ.
ಜಮ್ಮು-ಕಾಶ್ಮೀರದಲ್ಲಿ ಕತುವಾ ಮತ್ತು ಸಾಂಬಾ ಅನ್ನೋ ಎರಡು ಜಿಲ್ಲೆಗಳಿವೆ. ಅಲ್ಲಿರೋ 32,000 ಎಕರೆ ಕೃಷಿ ಭೂಮಿಗೆ ಪಾಕಿಸ್ತಾನಕ್ಕೆ ಹರಿಯುತ್ತಿರೋ ರವಿ ನದಿ ನೀರನ್ನ ಡೈವರ್ಟ್ ಮಾಡೋಕೆ ಭಾರತ ಸರ್ಕಾರ ಪ್ಲ್ಯಾನ್ ಮಾಡಿತ್ತು. ಇದಕ್ಕಾಗಿಯೇ ಶಹಾಪುರ್ ಎಂಬಲ್ಲಿ ಅಣೆಕಟ್ಟನ್ನ ಈಗ ನಿರ್ಮಾಣ ಮಾಡಿ ಆಗಿದೆ. ಹಾಗಂತಾ ಇದೇನು ನಿನ್ನೆ ಮೊನ್ನೆಯ ಪ್ರಾಜೆಕ್ಟ್ ಆಗಿರಲಿಲ್ಲ. 1995ರಲ್ಲಿ ಆಗಿನ ಪ್ರಧಾನಿ ಪಿ.ವಿ.ನರಸಿಂಹರಾವ್ ಅವರೇ ಶಹಾಪುರ್ ಕಂಡಿ ಅಣೆಕಟ್ಟು ನಿರ್ಮಾಣಕ್ಕೆ ಅಡಿಪಾಯ ಕಲ್ಲು ಹಾಕಿದ್ರು. ಆದ್ರೆ ಅಣೆಕಟ್ಟು ನಿರ್ಮಾಣ ವಿಚಾರದಲ್ಲಿ ಜಮ್ಮು-ಕಾಶ್ಮೀರ ಮತ್ತು ಪಂಜಾಬ್ ಸರ್ಕಾರಗಳ ಮಧ್ಯೆ ಕಿತ್ತಾಟ ನಡೀತಾ ಇದ್ದಿದ್ರಿಂದ ಡ್ಯಾಮ್ ನಿರ್ಮಾಣಕ್ಕೆ ಅಡ್ಡಿಯಾಗಿತ್ತು. ನಂತರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಈ ಡ್ಯಾಮ್ನ್ನ ನಿರ್ಮಾಣ ಮಾಡೋಕೆ ಬೇಕಾದ ಕ್ರಮಗಳನ್ನ ಕೈಗೊಳ್ತಾರೆ. ಅಡೆತಡೆಗಳನ್ನ ನಿವಾರಿಸಿ 2018ರಲ್ಲಿ ಅಣೆಕಟ್ಟು ನಿರ್ಮಾಣ ಕಾರ್ಯ ಶುರು ಮಾಡಲಾಗುತ್ತೆ. ಸುಮಾರು 33,000 ಕೋಟಿ ಮೊತ್ತದ ಪ್ರಾಜೆಕ್ಟ್ ಇದಾಗಿದ್ದು, ಜಮ್ಮು-ಕಾಶ್ಮೀರದ ಕೃಷಿ ಭೂಮಿಗೆ ನೀರು ಪೂರೈಕೆ ಮಾಡೋದು ಮಾತ್ರವಲ್ಲ, 206 ಮೆಗಾ ವ್ಯಾಟ್ನಷ್ಟು ವಿದ್ಯುತ್ನ್ನ ಉತ್ಪಾದಿಸಲಾಗುತ್ತೆ.
ಇಲ್ಲಿ ಇನ್ನೊಂದು ಇಂಟ್ರೆಸ್ಟಿಂಗ್ ಸಂಗತಿ ಕೂಡ ಇದೆ. ಆಗಲೇ ಹೇಳಿದ್ನಲ್ಲಾ, ಪಂಜಾಬ್ ಮತ್ತು ಜಮ್ಮು-ಕಾಶ್ಮೀರ ಸರ್ಕಾರಗಳ ಮಧ್ಯೆ ಬಿಕ್ಕಟ್ಟು ಉಂಟಾಗಿದ್ರಿಂದಲೇ ಡ್ಯಾಮ್ ನಿರ್ಮಾಣ ಕಾರ್ಯವಿಳಂಬವಾಯ್ತು ಅಂತಾ. ಈ ಸಮಸ್ಯೆಯನ್ನ ಪರಿಹರಿಸಿರೋದು ಇಲ್ಲೇ ನೋಡಿ. ಶಹಾಪುರ್ ಕಂಡಿ ಡ್ಯಾಮ್ನಲ್ಲಿ ಸಂಗ್ರಹಿಸಿದ ನೀರನ್ನ ಜಮ್ಮು-ಕಾಶ್ಮೀರದ ಕೃಷಿಗೆ ಬಳಸಲಾಗುತ್ತೆ. ಹಾಗೆಯೇ ಇಲ್ಲಿ ಉತ್ಪತ್ತಿಯಾಗೋ 206 ಮೆಗಾ ವ್ಯಾಟ್ ವಿದ್ಯುತ್ನ್ನ ಪಂಜಾಬ್ಗೆ ಸಪ್ಲೈ ಮಾಡಲಾಗುತ್ತೆ. ಈ ಒಂದು ಡ್ಯಾಮ್ನಿಂದ ಎರಡೂ ರಾಜ್ಯಗಳಿಗೆ ಪ್ರಯೋಜವಾಗೋದ್ರಿಂದಲೇ ಡ್ಯಾಮ್ ನಿರ್ಮಾಣಕ್ಕೆ ಇದ್ದ ಅಡ್ಡಿ ಅಂತ್ಯವಾಯ್ತು.