ರಾಜ್ಯಸಭೆ ಚುನಾವಣೆಗೆ ‘ಕೈ’ ಕೊಟ್ಟ ಶಾಸಕರು -ಹಿಮಗಿರಿಯಲ್ಲಿ ಸರ್ಕಾರ ಪತನವಾಗುತ್ತಾ?
ಹಿಮಾಚಲ ಪ್ರದೇಶದಲ್ಲೂ ರಾಜ್ಯಸಭಾ ಚುನಾವಣೆ ವೇಳೆ ದೊಡ್ಡ ಹೈಡ್ರಾಮಾವೇ ನಡೆದಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದೂ ಕಾಲು ವರ್ಷದಲ್ಲಿಯೇ ಭಾರಿ ಬಿಕ್ಕಟ್ಟು ಎದುರಾಗಿದೆ. ಸಿಎಂ ಸುಖ್ವಿಂದರ್ ಸಿಂಗ್ ಸುಖು ಅವರ ಸರ್ಕಾರ ಪತನದ ಭೀತಿಗೆ ಸಿಲುಕಿದೆ. ಮಂಗಳವಾರ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನ ಹಿರಿಯ ನಾಯಕ ಅಭಿಷೇಕ್ ಮನು ಸಿಂಘ್ವಿ ಅವರನ್ನು ಗೆಲ್ಲಿಸಿಕೊಳ್ಳಲು ಆಗಿಲ್ಲ. ಇದ್ರ ನಡುವೆ ಅಡ್ಡ ಮತದಾನದ ಏಟಿನಿಂದ ಚೇತರಿಸಿಕೊಳ್ಳುವ ಮುನ್ನವೇ ಪ್ರಮುಖ ನಾಯಕನ ರಾಜೀನಾಮೆ ಮತ್ತೊಂದು ಆಘಾತ ನೀಡಿದೆ. ಈ ನಡುವೆ ಹಿಮಾಚಲ ಪ್ರದೇಶ ಸರ್ಕಾರವು ಬಹುಮತ ಸಾಬೀತುಪಡಿಸುವಂತೆ ಬಿಜೆಪಿ ಪಟ್ಟು ಹಿಡಿದಿದೆ. ರಾಜ್ಯಸಭೆಯ 1 ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಭಾರೀ ಮುಖಭಂಗ ಅನುಭವಿಸಿದೆ. ಬಹುಮತ ಇದ್ದರೂ ಕೂಡ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಆಗದೆ ಸೋಲು ಅನುಭವಿಸಿದೆ. 68 ಸದಸ್ಯರ ವಿಧಾನಸಭೆಯಲ್ಲಿ 40 ಸ್ಥಾನಗಳೊಂದಿಗೆ ಆರಾಮದಾಯಕ ಬಹುಮತ ಹೊಂದಿರುವ ಕಾಂಗ್ರೆಸ್, ಈಗ ತನ್ನ ಸರ್ಕಾರವನ್ನು ಉಳಿಸಿಕೊಳ್ಳುವ ಬೇಗುದಿಗೆ ಸಿಲುಕಿದೆ.
ಇದನ್ನೂ ಓದಿ: ಈ ದಿನ ಮಹಿಳೆಯರಿಗೆ ಸಂಪೂರ್ಣ ಉಚಿತ -ಏನಿದು ಲೇಡೀಸ್ ಸ್ಪೆಷಲ್ ಆಫರ್?
‘ಕೈ’ ಕೊಟ್ಟ ಶಾಸಕರು
40 ಶಾಸಕರು ಹಾಗೂ ಮೂವರು ಪಕ್ಷೇತರ ಶಾಸಕರ ಬೆಂಬಲವಿದ್ದರೂ, ಪಕ್ಷದ ಅಧಿಕೃತ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ವಿಧಾನಸಭೆಯಲ್ಲಿ 25 ಶಾಸಕರ ಬಲ ಹೊಂದಿದ್ದ ಬಿಜೆಪಿಯು ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಕುತೂಹಲ ಮೂಡಿಸಿತ್ತು. ಆದ್ರೆ ಕ್ಲೈಮ್ಯಾಕ್ಸ್ನಲ್ಲಿ ಕಾಂಗ್ರೆಸ್ ಶಾಸಕರೇ ಪಕ್ಷಕ್ಕೆ ಕೈ ಕೊಟ್ಟಿದ್ದಾರೆ. ಮಂಗಳವಾರ ನಡೆದ ಮತದಾನದಲ್ಲಿ ಕಾಂಗ್ರೆಸ್ ಪಕ್ಷದ 6 ಹಾಗೂ ಮೂವರು ಪಕ್ಷೇತರ ಶಾಸಕರು ಬಿಜೆಪಿ ಪರ ಮತ ಚಲಾಯಿಸಿದ್ದಾರೆ. ಪರಿಣಾಮ ಕಾಂಗ್ರೆಸ್ನ ಅಭಿಷೇಕ್ ಮನು ಸಿಂಘ್ವಿ ಹಾಗೂ ಬಿಜೆಪಿಯ ಹರ್ಷ ಮಹಾಜನ್ ಅವರು ತಲಾ 34 ಮತಗಳನ್ನು ಪಡೆದುಕೊಂಡು ಸಮಬಲ ಸಾಧಿಸಿದರು. ಅಭ್ಯರ್ಥಿ ಗೆಲುವಿನ ತೀರ್ಮಾನಕ್ಕೆ ಟಾಸ್ ಹಾಕಲಾಯಿತು. ಟ್ರೈ ಬ್ರೇಕರ್ನಲ್ಲಿ ಸಿಂಘ್ವಿ ಸೋಲು ಅನುಭವಿಸಿದರು. ಬಿಜೆಪಿಯ ಹರ್ಷ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಕಾಂಗ್ರೆಸ್ ತೀವಬ್ರ ಮುಖಭಂಗ ಅನುಭವಿಸಿದೆ.
ರಾಜ್ಯಸಭೆಯ ಒಂದು ಸೀಟಿನ ಚುನಾವಣೆ ಹಿಮಾಚಲ ಪ್ರದೇಶ ಸರ್ಕಾರಕ್ಕೆ ಅಳಿವು ಉಳಿವಿನ ಸಂಕಟ ಶುರುಮಾಡಿದೆ. ಸುಖು ಅವರ ಸರ್ಕಾರವು ಸದನದಲ್ಲಿ ವಿಶ್ವಾಸ ಕಳೆದುಕೊಂಡಿದೆ ಎಂದು ಬಿಜೆಪಿ ಪ್ರತಿಪಾದಿಸಿದೆ. ವಿಧಾನಸಭೆಯಲ್ಲಿ ಅವಿಶ್ವಾಸ ಗೊತ್ತುವಳಿ ಮಂಡಿಸಲು ಅದು ಸಿದ್ಧತೆ ನಡೆಸಿದೆ. ಈ ಸಂಬಂಧ ವಿರೋಧ ಪಕ್ಷದ ನಾಯಕ ಜೈ ರಾಮ್ ಠಾಕೂರ್ ಅವರು ರಾಜ್ಯಪಾಲರನ್ನು ಭೇಟಿ ಮಾಡಿದ್ದಾರೆ.
ಸರ್ಕಾರಕ್ಕೆ ಸಂಕಷ್ಟ!
ಬಿಜೆಪಿಗೆ ಮತದಾನ ಮಾಡಿರುವ ಕಾಂಗ್ರೆಸ್ನ 6 ಬಂಡಾಯ ಶಾಸಕರನ್ನು ಹರ್ಯಾಣ ಪೊಲೀಸರು ಕರೆದೊಯ್ದಿದ್ದಾರೆ ಎಂದು ಸಿಎಂ ಸುಖು ಆರೋಪಿಸಿದ್ದಾರೆ. ಈ ಶಾಸಕರು ಪಂಚಕುಳದಲ್ಲಿನ ರೆಸಾರ್ಟ್ ಒಂದರಲ್ಲಿದ್ದು, ಹಿಮಾಚಲ ಪ್ರದೇಶ ಬಿಜೆಪಿ ಮುಖ್ಯಸ್ಥ ರಾಜೀವ್ ಬಿಂದಾಲ್ ಅವರನ್ನು ಭೇಟಿ ಮಾಡಿದ್ದಾರೆ ಎಂದು ವರದಿಯಾಗಿದೆ. ಒಂದು ವೇಳೆ ಸುಖು ಅವರಿಗೆ ಬಹುಮತ ಸಾಬೀತುಪಡಿಸುವ ಸನ್ನಿವೇಶ ಎದುರಾಗಿ, ಆರು ಮಂದಿ ಶಾಸಕರು ಕೈಕೊಟ್ಟರೆ ಸರ್ಕಾರ ಪತನಗೊಳ್ಳುವ ಸಾಧ್ಯತೆ ಇದೆ. 68 ಸದಸ್ಯರ ವಿಧಾನಸಭೆಯಲ್ಲಿ ಸರ್ಕಾರಕ್ಕೆ ಕನಿಷ್ಠ 35 ಸೀಟುಗಳ ಅಗತ್ಯವಿದೆ. ಆದರೆ ಈಗಿನ ಲೆಕ್ಕಾಚಾರದಲ್ಲಿ ಅದು 34ಕ್ಕೆ ಸೀಮಿತಗೊಳ್ಳಲಿದೆ. ಈ ಆರು ಶಾಸಕರು ಮತ್ತು ಪಕ್ಷೇತರರ ಬಲವಿದ್ದರೂ ಬಿಜೆಪಿ ಸಂಖ್ಯೆ ಸಹ 34ಕ್ಕೆ ನಿಲ್ಲಲಿದೆ. ಹೀಗಾಗಿ ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್ಗೆ ಮತ್ತು ಸರ್ಕಾರ ರಚಿಸಲು ಬಿಜೆಪಿಗೆ ಇನ್ನೂ ಒಬ್ಬ ಶಾಸಕರ ಅಗತ್ಯ ಎದುರಾಗುತ್ತದೆ.
ಈ ಗಾಯದ ಮೇಲೆ ಬರೆ ಎಳೆದಂತೆ ಮಾಜಿ ಸಿಎಂ ವೀರಭದ್ರ ಸಿಂಗ್ ಅವರ ಮಗ ವಿಕ್ರಮಾದಿತ್ಯ ಸಿಂಗ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ಎಲ್ಲ ಬೆಳವಣಿಗೆಗಳ ನಡುವೆ ಪಕ್ಷದ ಹಿರಿಯ ನಾಯಕರಾದ ಭೂಪಿಂದರ್ ಸಿಂಗ್ ಹೂಡಾ ಮತ್ತು ಡಿ.ಕೆ ಶಿವಕುಮಾರ್ ಅವರು ಡ್ಯಾಮೇಜ್ ಕಂಟ್ರೋಲ್ ಸಲುವಾಗಿ ಹಿಮಗಿರಿಯ ರಾಜ್ಯಕ್ಕೆ ತೆರಳಿದ್ದಾರೆ. ಈ ಬಿಕ್ಕಟ್ಟಿನ ನಡುವೆಯೇ ಸ್ಪೀಕರ್ ಚೇಂಬರ್ನಲ್ಲಿ ಘೋಷಣೆಗಳನ್ನು ಕೂಗಿದ ಆರೋಪದ ಮೇಲೆ ಪ್ರತಿಪಕ್ಷ ನಾಯಕ ಜೈರಾಮ್ ಠಾಕೂರ್ ಸೇರಿದಂತೆ 15 ಬಿಜೆಪಿ ಶಾಸಕರನ್ನು ಬುಧವಾರ ಅಮಾನತುಗೊಳಿಸಲಾಗಿದೆ. ಒಟ್ನಲ್ಲಿ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ತೂಗುಯ್ಯಾಲೆಯಲ್ಲಿದ್ದು ಅಳಿವು, ಉಳಿವಿನ ಪ್ರಶ್ನೆ ಎದುರಾಗಿದೆ.