ಬಾಹ್ಯಾಕಾಶಕ್ಕೆ ಹೋಗ್ತಿರೋ ನಮ್ಮ ಗಗನಯಾತ್ರಿಗಳು ಯಾರೆಲ್ಲಾ? – ಇಸ್ರೋ ವಿಜ್ಞಾನಿಗಳ ಈ ಮಿಷನ್ ನಡೆಯೋದ್ಯಾವಾಗ?
ಬಾಹ್ಯಾಕಾಶ ಕ್ಷೇತ್ರದಲ್ಲಿ ಈಗಾಗ್ಲೇ ಭಾರತ ತನ್ನ ಛಾಪು ಮೂಡಿಸಿಯಾಗಿದೆ. 2023ರಲ್ಲಿ ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ ಲ್ಯಾಂಡರ್ನ್ನ ಇಳಿಸಿ, ಪ್ರಗ್ಯಾನ್ ರೋವರ್ನ್ನ ಚಂದಿರನ ಅಂಗಳದಲ್ಲಿ ಓಡಿಸಿ ನಮ್ಮ ಇಸ್ರೋ ವಿಜ್ಞಾನಿಗಳು ಇತಿಹಾಸವನ್ನೇ ಬರೆದಿದ್ರು. ಚಂದಿರನ ದಕ್ಷಿಣ ಧ್ರುವ ತಲುಪಿದ ಮೊದಲ ದೇಶ ಭಾರತವಾಗಿತ್ತು. ಆ ಲ್ಯಾಂಡಿಂಗ್ ಕ್ಷಣವನ್ನ ನೆನೆಸಿಕೊಂಡಾಗ ಈಗಲೂ ಕೂಡ ರೋಮಾಂಚನವಾಗುತ್ತೆ. ಈಗ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಭಾಷ್ಯ ಬರೆಯೋಕೆ ಭಾರತ ಸಿದ್ಧವಾಗಿದೆ. ಇಸ್ರೋ ವಿಜ್ಞಾನಿಗಳು ಮತ್ತೊಂದು ಮೆಗಾ ಮಿಷನ್ಗೆ ರೆಡಿಯಾಗಿದ್ದಾರೆ. ಅದುವೇ ಗಗನಯಾನ. ಅಂದ್ರೆ ಇದೇ ಮೊದಲ ಬಾರಿಗೆ ಭಾರತ ಬಾಹ್ಯಾಕಾಶಕ್ಕೆ ಮಾನವನನ್ನ ಕಳುಹಿಸ್ತಾ ಇದೆ. ಅದು ಕೂಡ ನಮ್ಮ ದೇಶದ ಗಗನಯಾತ್ರಿಗಳನ್ನೇ ಕಳುಹಿಸಲಾಗ್ತಿದೆ. ಹಾಗಿದ್ರೆ ಭಾರತದ ಈ ಸ್ಪೇಸ್ ಮಿಷನ್ ಹೇಗಿರುತ್ತೆ? ಬಾಹ್ಯಾಕಾಶಕ್ಕೆ ಹೋಗ್ತಿರೋ ನಮ್ಮ ಗಗನಯಾತ್ರಿಗಳು ಯಾರೆಲ್ಲಾ? ಅವರಿಗೆ ನೀಡಿರೋ ತರಬೇತಿ ಹೇಗಿತ್ತು? ಇಸ್ರೋ ವಿಜ್ಞಾನಿಗಳ ಈ ಮಿಷನ್ ನಡೆಯೋದ್ಯಾವಾಗ? ಇವೆಲ್ಲದರ ಬಗ್ಗೆ ವಿವರಣೆ ಇಲ್ಲಿದೆ.
ಇದನ್ನೂ ಓದಿ: ಇಸ್ರೋಗೆ ಮತ್ತೊಂದು ಯಶಸ್ಸು! – 17 ವರ್ಷಗಳ ಬಳಿಕ ಕಾರ್ಟೋಸ್ಯಾಟ್ ಉಪಗ್ರಹವನ್ನು ಭೂಮಿಯ ವಾತವರಣಕ್ಕೆ ತಂದ ಬಾಹ್ಯಾಕಾಶ ಸಂಸ್ಥೆ
ಮೊದಲಿಗೆ ಇಸ್ರೋದ ಗಗನಯಾನ ಮಿಷನ್ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ. ಇದುವರೆಗೆ ಭಾರತ ಸಾಕಷ್ಟು ಸ್ಯಾಟ್ಲೈಟ್ಗಳನ್ನ ಬಾಹ್ಯಾಕಾಶ ಕಳುಹಿಸಿಕೊಟ್ಟಿದೆ. ನಿಮಗೆ ಗೊತ್ತಿರೋ ಚಂದಿರನ ಅಧ್ಯಯನಕ್ಕಾಗಿ ಅಲ್ಲಿಯೂ ನಮ್ಮ ತಂತ್ರಜ್ಞಾನವನ್ನ ಇಳಿಸಿಯಾಗಿದೆ. ಆದ್ರೆ ಭಾರತ ಇದುವರೆಗೂ ಬಾಹ್ಯಾಕಾಶಕ್ಕಾಗಲಿ, ಚಂದಿರನಲ್ಲಿಗಾಗಲಿ ಮಾನವನನ್ನ ಕಳುಹಿಸಿಲ್ಲ. ಅಮೆರಿಕ ಮಾತ್ರ ಚಂದಿರನಲ್ಲಿ ತನ್ನ ಗಗನಯಾತ್ರಿಗಳನ್ನ ಇಳಿಸಿತ್ತು. ಹಾಗೆಯೇ ಬಾಹ್ಯಾಕಾಶಕ್ಕೆ ಅಮೆರಿಕ, ರಷ್ಯಾ ಮತ್ತು ಚೀನಾ ಈ ಮೂರೂ ರಾಷ್ಟ್ರಗಳು ತಮ್ಮ ಗಗನಯಾತ್ರಿಗಳನ್ನ ಕಳುಹಿಸಿವೆ. ಹಾಗೆಯೇ ಬಾಹ್ಯಾಕಾಶದಲ್ಲಿ ತಮ್ಮ ಸ್ಪೇಸ್ ಸ್ಟೇಷನ್ಗಳನ್ನ ಕೂಡ ಹೊಂದಿವೆ. ಇನ್ಯಾವ ದೇಶ ಕೂಡ ಈ ಸಾಹಸಕ್ಕೆ ಇಳಿದಿಲ್ಲ. ಇದೀಗ ಭಾರತ ಕೂಡ 2035ರ ವೇಳೆಗೆ ಬಾಹ್ಯಾಕಾಶದಲ್ಲಿ ತನ್ನದೇ ಸ್ಪೇಸ್ ಸ್ಪೇಷನ್ನನ್ನ ನಿರ್ಮಾಣ ಮಾಡುವ ಗುರಿ ಇಟ್ಟುಕೊಂಡಿದೆ. ಬಳಿಕ ಅಲ್ಲಿದ್ದುಕೊಂಡೇ ನಮ್ಮ ಗಗನಯಾತ್ರಿಗಳು ಕಾರ್ಯನಿರ್ವಹಿಸ್ತಾರೆ. ಅದಕ್ಕೂ ಮುನ್ನ ನಮ್ಮ ಗಗನಯಾತ್ರಿಗಳನ್ನ ಬಾಹ್ಯಾಕಾಶಕ್ಕೆ ಕಳುಹಿಸಿಕೊಡಬೇಕಲ್ವಾ. ಹೀಗಾಗಿಯೇ ಇಸ್ರೋ ಈಗ ಗಗನಯಾನ ಮಿಷನ್ನನ್ನ ಕೈಗೆತ್ತಿಕೊಂಡಿದೆ. 2025ರಲ್ಲಿ ಮೂವರು ಗಗನಯಾತ್ರಿಗಳನ್ನ ಭೂಮಿಯಿಂದ 400 ಕಿಲೋ ಮೀಟರ್ ದೂರದಲ್ಲಿರೋ ಕಕ್ಷೆಗೆ ಕಳುಹಿಸಿಕೊಡಲಾಗುತ್ತೆ. ಮೂರು ದಿನಗಳ ಮಿಷನ್ ಇದಾಗಿದ್ದು, ಮೂರು ದಿನಗಳ ಬಳಿಕ ನಮ್ಮ ಗಗನಯಾತ್ರಿಗಳು ವಾಪಸ್ ಭೂಮಿಗೆ ಮರಳಲಿದ್ದಾರೆ. ಇದು ಸುಮಾರು 90 ಬಿಲಿಯನ್ ಡಾಲರ್ ಮೊತ್ತದ ಯೋಜನೆಯಾಗಿದ್ದು, ಒಂದು ವೇಳೆ ಗಗನಯಾನ ಮಿಷನ್ ಯಶಸ್ವಿ ಆದಲ್ಲಿ, ಬಾಹ್ಯಾಕಾಶಕ್ಕೆ ಮಾನವನನ್ನ ಕಳುಹಿಸಿದ ನಾಲ್ಕನೇ ದೇಶ ಅನ್ನೋ ಸಾಧನೆಗೆ ಭಾರತ ಪಾತ್ರವಾಗುತ್ತೆ. ಇನ್ನು ಇಡೀ ಮಿಷನ್ನ ಹೊಣೆ ನಮ್ಮ ಇಸ್ರೋ ವಿಜ್ಞಾನಿಗಳದ್ದೇ. ಇಸ್ರೋ ವಿಜ್ಞಾನಿಗಳು ನಿರ್ಮಿಸಿದ ರಾಕೆಟ್ ಮೂಲಕವೇ, ಶ್ರೀಹರಿಕೋಟಾದಿಂದಲೇ ಭಾರತದ ಗಗನಯಾತ್ರಿಗಳನ್ನ ಬಾಹ್ಯಾಕಾಶಕ್ಕೆ ಲಾಂಚ್ ಮಾಡಲಾಗುತ್ತೆ. ಇಲ್ಲಿ ಕೆಲ ಕ್ಷೇತ್ರಕ್ಕೆ ಸಂಬಂಧಿಸಿ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ನೆರವು ಪಡೆಯಲಾಗ್ತಿದೆಯೇ ಹೊರತು, ಆದ್ರೆ ಇಡೀ ಮಿಷನ್ನನ್ನ ಕಂಟ್ರೋಲ್ ಮಾಡೋದು ನಮ್ಮ ಇಸ್ರೋ ವಿಜ್ಞಾನಿಗಳೇ.
ಇಲ್ಲಿ ಇನ್ನೊಂದು ಮಹತ್ವದ ವಿಚಾರವನ್ನ ಹೇಳಲೇಬೇಕು. ಗಗನಯಾನ ಮಿಷನ್ಗಾಗಿ ಈಗಾಗ್ಲೇ ಇಸ್ರೋ ಫೈನಲ್ ಟೆಸ್ಟ್ನ್ನ ಕೂಡ ಕಂಪ್ಲೀಟ್ ಮಾಡಿದೆ. ಗಗನಯಾನ ಮಿಷನ್ಗೆ LVM3 ಲಾಂಚ್ ವೆಹಿಕಲ್ನ್ನ ಬಳಸಲಾಗುತ್ತಿದ್ದು ಇದರಲ್ಲಿ CE20 ಕ್ರಯೋಜೆನಿಕ್ ಇಂಜಿನ್ನನ್ನ ಅಳವಡಿಸಲಾಗುತ್ತೆ. ಈ ಕ್ರಯೋಜೆನಿಕ್ ಇಂಜಿನ್ನನ್ನ ಭಾರತದಲ್ಲೇ ತಯಾರು ಮಾಡಲಾಗಿದೆ. ಮೇಡ್ ಇನ್ ಇಂಡಿಯಾ ಇಂಜಿನ್ ಇದು. ಈ ಇಂಜಿನ್ಗೆ ಮಾನವನನ್ನ ಹೊತ್ತೊಯ್ಯುವ ಸಾಮರ್ಥ್ಯ ಇದ್ಯಾ? ಭೂಮಿಯಿಂದ 400 ಕಿಲೋ ಮೀಟರ್ ದೂರ ಪ್ರಯಾಣಿಸಬಹುದಾ ಅನ್ನೋ ವಿಚಾರವಾಗಿ ಈಗಾಗ್ಲೇ ಸಕ್ಸಸ್ಫುಲ್ ಆಗಿ ಟೆಸ್ಟ್ ಕೂಡ ನಡೆಸಲಾಗಿದೆ. ಅದು ಕೂಡ ಒಟ್ಟು ಏಳು ಬಾರಿ ಈ CE20 ಕ್ರಯೋಜೆನಿಕ್ ಇಂಜಿನ್ನ ಟೆಸ್ಟಿಂಗ್ ನಡೆದಿದೆ. ಏಳು ಬಾರಿ ಕೂಡ ಪರೀಕ್ಷೆ ಯಶಸ್ವಿಯಾಗಿದೆ. ತಮಿಳುನಾಡಿನ ಮಹೇಂದ್ರಗಿರಿ ಎಂಬಲ್ಲಿ ಇಸ್ರೋದ ಒಂದು ಫೆಸಿಲಿಟಿ ಇದೆ. ಅದು ಭಾರಿ ಎತ್ತರದಲ್ಲಿರೋ ಜಾಗ. ಅಂದ್ರೆ ಹೈ ಆಲ್ಟಿಟ್ಯೂಡ್ ಫೆಸಿಲಿಟಿ. ಏಳು ಬಾರಿ ಕೂಡ ಕ್ರಯೋಜೆನಿಕ್ ಇಂಜಿನ್ ಟೆಸ್ಟ್ ಇಲ್ಲೇ ನಡೆದಿರೋದು. ಇದಿಷ್ಟೇ ಅಲ್ಲ, 2023ರಲ್ಲಿ TV-D1 ಹೆಸರಿನ ಮೂರು ಪ್ಯಾರಾಚೂಟ್ಗಳನ್ನ ಕೂಡ ಟೆಸ್ಟ್ ಮಾಡಲಾಗಿದೆ. ಎಮರ್ಜೆನ್ಸಿ ಸಂದರ್ಭದಲ್ಲಿ ಅಂದ್ರೆ ರಾಕೆಟ್ ಬ್ಲಾಸ್ಟ್ ಆದ್ರೆ ಆಗ ನಮ್ಮ ಗಗನಯಾತ್ರಿಗಳು ಜೀವ ಉಳಿಸಿಕೊಳ್ಳೋಕೆ ಈ ಪ್ಯಾರಾಚೂಟ್ಗಳನ್ನ ಬಳಸ್ತಾರೆ. ರಾಕೆಟ್ ಲಾಂಚ್ ಆಗಿ ಕೆಲ ಕ್ಷಣಗಳಲ್ಲೇ ಬ್ಲಾಸ್ಟ್ ಆದ್ರೆ, ಅಥವಾ ಇಂಜಿನ್ನಲ್ಲಿ ಏನಾದ್ರೂ ಟೆಕ್ನಿಕಲ್ ಪ್ರಾಬ್ಲಂ ಆದ್ರೆ ಆಗ ರಾಕೆಟ್ನ ತುದಿಯಲ್ಲಿ ಗಗನಯಾತ್ರಿಗಳು ಕುಳಿತ ಕ್ಯಾಪ್ಸೂಲ್ ಸಪರೇಟ್ ಆಗುತ್ತೆ. ಹಾಗೆಯೇ ಅದ್ರಿಂದ ಮೂರು ಪ್ಯಾರಾಚೂಟ್ಗಳು ಓಪನ್ ಆಗುತ್ತೆ. ಪ್ಯಾರಾಚೂಟ್ ಮೂಲಕ ಗಗನಯಾತ್ರಿಗಳು ಭೂಮಿ ಮೇಲೆ ಅಥವಾ ಸಮುದ್ರದ ಮೇಲೆ ಲ್ಯಾಂಡ್ ಆಗ್ತಾರೆ. ಈ ಎಲ್ಲಾ ಟೆಸ್ಟ್ಗಳು ಕೂಡ ಈಗಾಗ್ಲೇ ಕಂಪ್ಲೀಟ್ ಆಗಿದೆ.
ಇನ್ನು ಗಗನಯನ ಮಿಷನ್ಗಾಗಿ ಬಾಹ್ಯಾಕಾಶಕ್ಕೆ ತೆರಳೋ ಗಗನಯಾತ್ರಿಗಳ ಹೆಸರನ್ನ ಪ್ರಧಾನಿ ಮೋದಿ ರಿವೀಲ್ ಮಾಡಿದ್ದಾರೆ. ಒಟ್ಟು ನಾಲ್ವರು ಗಗನಯಾತ್ರಿಗಳನ್ನ ಸೆಲೆಕ್ಟ್ ಮಾಡಲಾಗಿದ್ದು, ನಾಲ್ವರಿಗೂ ಈಗ ತರಬೇತಿ ನೀಡಲಾಗ್ತಾ ಇದೆ. ಇವರೆಲ್ಲರೂ ವಿವಿಧ ರೀತಿ ಪರೀಕ್ಷೆಗಳನ್ನ ಮಾಡಲಾಗಿತ್ತು. ಇದಾದ ಬಳಿಕ ಅವರನ್ನ ರಷ್ಯಾಗೆ ಕಳುಹಿಸಲಾಗಿದ್ದು ಅಲ್ಲಿರೋ ಬಾಹ್ಯಾಕಾಶ ತರಬೇತಿ ಕೇಂದ್ರದಲ್ಲಿ 13 ತಿಂಗಳುಗಳ ಕಾಲ ಎಲ್ಲಾ ರೀತಿಯ ಟ್ರೈನಿಂಗ್ ಪಡೆದಿದ್ದಾರೆ. ಆ್ಯರೋಬ್ಯಾಟಿಕ್ ಫ್ಲೈಯಿಂಗ್, ಸರ್ವೈವಲ್ ಟ್ರೈನಿಂಗ್ ಅಂದ್ರೆ ಹಿಮದ ಮೇಲೆ, ಮರುಭೂಮಿಯಲ್ಲಿ, ನೀರಿನ ಮೇಲೆ ಲ್ಯಾಂಡ್ ಆಗೋದು, ಅತ್ಯಂತ ಕಠಿಣ ಹವಾಮಾನ ಪರಿಸ್ಥಿತಿಯನ್ನ ಎದುರಿಸೋದು ಈ ವಿಚಾರಕ್ಕೆ ಸಂಬಂಧಿಸಿ ನಾಲ್ವರು ಗಗನಾಯಾತ್ರಿಗಳು ಕೂಡ ಅತ್ಯಂತ ಟಫ್ ಟ್ರೈನಿಂಗ್ಗೆ ಒಳಗಾಗಿದ್ದಾರೆ. ಇದಿಷ್ಟೇ ಅಲ್ಲ, ಭಾರಿ ಫಿಸಿಕಲ್ ಟೆಸ್ಟ್ ಕೂಡ ನಡೆಸಲಾಗಿದೆ. ವಿಶೇಷ ಯೋಗಾಭ್ಯಾಸದ ತರಬೇತಿಯನ್ನೂ ನೀಡಲಾಗಿದೆ. ಇನ್ನೊಂದು ಇಂಟ್ರೆಸ್ಟಿಂಗ್ ಸಂಗತಿ ಏನಂದ್ರೆ ಇವರೆಲ್ಲರೂ ಕೂಡ ಭಾರತೀಯ ವಾಯುಪಡೆಯ ಪೈಲಟ್ಗಳು. ಗಗನಯಾನ ಮಿಷನ್ಗಾಗಿ ಏರ್ಫೋರ್ಸ್ನಿಂದ ನಾಲ್ವರು ಪೈಲಟ್ಗಳನ್ನೇ ಸೆಲೆಕ್ಟ್ ಮಾಡಿ ಬಾಹ್ಯಾಕಾಶಕ್ಕೆ ತೆರಳೋಕೆ ಬೇಕಾದ ಎಲ್ಲಾ ರೀತಿಯ ಟ್ರೈನಿಂಗ್ ನೀಡಲಾಗಿದೆ.
ಗ್ರೂಪ್ ಕ್ಯಾಪ್ಟನ್ ಪ್ರಶಾಂತ್ ಬಾಲಕೃಷ್ಣನ್ ನಾಯರ್
ಗ್ರೂಪ್ ಕ್ಯಾಪ್ಟನ್ ಪ್ರಶಾಂತ್ ಬಾಲಕೃಷ್ಣನ್ ನಾಯಕ ಮೂಲತ: ಕೇರಳದವರು. 1998ರಲ್ಲಿ ಇಂಡಿಯನ್ ಏರ್ಫೋರ್ಸ್ಗೆ ಸೆಲೆಕ್ಟ್ ಆಗ್ತಾರೆ. ಏರ್ಫೋರ್ಸ್ನಲ್ಲಿ ಫ್ಲೈಯಿಂಗ್ ಇನ್ಸ್ಟ್ರಕ್ಟರ್ ಆಗಿ ಕಾರ್ಯನಿರ್ವಹಿಸ್ತಾರೆ. ಸುಮಾರು 3000 ಗಂಟೆಗಳ ಕಾಲ ಯುದ್ಧ ವಿಮಾನಗಳನ್ನ ಚಲಾಯಿಸಿದ ಅನುಭವ ಕೂಡ ಗ್ರೂಪ್ ಕ್ಯಾಪ್ಟನ್ ಪ್ರಶಾಂತ್ ಬಾಲಕೃಷ್ಣನ್ ಅವರಿಗಿದೆ. Su-30 MKI, MiG-21, MiG-29, Dornier, An-32 ಫೈಟರ್ ಜೆಟ್ಗಳನ್ನ ಹಾರಾಟ ಮಾಡಿರೋ ಎಕ್ಸ್ಪೀರಿಯನ್ಸ್ ಕ್ಯಾಪ್ಟನ್ ಬಾಲಕೃಷ್ಣನ್ಗಿದೆ.
ಗ್ರೂಪ್ ಕ್ಯಾಪ್ಟನ್ ಅಜಿತ್ ಕೃಷ್ಣನ್
ಇವರು ತಮಿಳುನಾಡಿನ ಚೆನ್ನೈನವರು. ಏರ್ಫೋರ್ಸ್ ಅಕಾಡೆಮಿಯಲ್ಲಿ ಗೋಲ್ಡ್ ಮೆಡಲಿಸ್ಟ್. 2003ರಲ್ಲಿ ಇಂಡಿಯನ್ ಏರ್ಫೋರ್ಸ್ನ್ನ ಜಾಯಿನ್ ಆಗ್ತಾರೆ. ಕ್ಯಾಪ್ಟನ್ ಅಜಿತ್ ಕೃಷ್ಣನ್ ಕೂಡ ಫ್ಲೈಯಿಂಗ್ ಇನ್ಸ್ಟ್ರಕ್ಟರ್ ಆಗಿ ಕೆಲಸ ಮಾಡಿದ್ರು. ಸುಮಾರು 2900 ಗಂಟೆಗಳ ಕಾಲ ಫೈಟರ್ ಜೆಟ್ಗಳನ್ನ ಹಾರಾಟ ನಡೆಸಿರೋ ಅನುಭವ ಹೊಂದಿದ್ದಾರೆ. ಇವರು ಕೂಡ Su-30 MKI, MiG-21, MiG-21, Mig-29, Jaguar, Dornier, An-32 ಯುದ್ಧ ವಿಮಾನಗಳನ್ನ ಚಲಾಯಿಸಿದ್ದಾರೆ.
ಗ್ರೂಪ್ ಕ್ಯಾಪ್ಟನ್ ಅಂಗದ್ ಪ್ರತಾಪ್
ಉತ್ತರಪ್ರದೇಶದ ಪ್ರಯಾಗ್ರಾಜ್ ಮೂಲದ ಕ್ಯಾಪ್ಟನ್ ಅಂಗದ್ ಪ್ರತಾಪ್ 2004ರಲ್ಲಿ ಇಂಡಿಯನ್ ಏರ್ಫೋರ್ಸ್ ಜಾಯಿನ್ ಆಗ್ತಾರೆ. ಇವರು ಕೂಡ ಅಷ್ಟೇ ಫೈಟರ್ ಜೆಟ್ಗಳ ಫ್ಲೈಯಿಂಗ್ ಇನ್ಸ್ಟ್ರಕ್ಟರ್ ಮತ್ತು ಟೆಸ್ಟ್ ಪೈಲಟ್ ಆಗಿರ್ತಾರೆ. ಸುಮಾರು 2000 ಗಂಟೆಗಳ ಕಾಲ ಯುದ್ಧ ವಿಮಾನಗಳನ್ನ ಚಲಾಯಿಸಿದ್ದು, Su-30 MKI, MiG-21, MiG-29, Jaguar, Hawk, Dornier, An-32 ಈ ಎಲ್ಲಾ ಫೈಟರ್ ಜೆಟ್ಗಳನ್ನ ಆಪರೇಟ್ ಮಾಡಿದ್ದಾರೆ.
ವಿಂಗ್ ಕಮಾಂಡರ್ ಶುಭಾಂಶು ಶುಕ್ಲಾ
ಉತ್ತರಪ್ರದೇಶದ ಲಕ್ನೋದವರಾದ ವಿಂಗ್ ಕಮಾಂಡರ್ ಶುಭಾಂಶು ಶುಕ್ಲಾ 2006ರಲ್ಲಿ ಭಾರತೀಯ ವಾಯುಪಡೆಯನ್ನ ಸೇರಿಕೊಳ್ತಾರೆ. 2000 ಗಂಟೆಗಳ ಕಾಲ ಯುದ್ಧ ವಿಮಾನಗಳನ್ನ ಚಲಾಯಿಸಿದ ಅನುಭವ ಇವರಿಗೆ ಕೂಡ ಇದೆ. Su-30 MKI, MiG-21, MiG-29, Jaguar, Dornier, An-32 ಈ ಎಲ್ಲಾ ಫೈಟರ್ ಜೆಟ್ಗಳನ್ನ ಕೂಡ ವಿಂಗ್ ಕಮಾಂಡರ್ ಶುಭಾಂಶು ಶುಕ್ಲಾ ಆಪರೇಟ್ ಮಾಡಿದ್ದಾರೆ.
ಇವರೆಲ್ಲರೂ ಕೂಡ ಗಗನಯಾನ ಮಿಷನ್ಗಾಗಿ ರಷ್ಯಾದಲ್ಲಿ ಕಂಪ್ಲೀಟ್ ಟ್ರೈನಿಂಗ್ ಪಡೆದುಕೊಂಡು ಬಂದಿದ್ದಾರೆ. ಈಗ ಬೆಂಗಳೂರಲ್ಲಿರೋ ಗಗನಯಾತ್ರಿ ತರಬೇತಿ ಕೇಂದ್ರದಲ್ಲಿ ಒಂದಷ್ಟು ಟ್ರೈನಿಂಗ್ ಪಡೀತಿದ್ದಾರೆ. ಅಂತಿಮವಾಗಿ ಈ ನಾಲ್ವರ ಪೈಕಿ ಮೂವರು ಬಾಹ್ಯಾಕಾಶ ಯಾತ್ರೆ ಕೈಗೊಳ್ತಾರೆ. 400 ಕಿಲೋ ಮೀಟರ್ ದೂರಕ್ಕೆ ಲೋ ಅರ್ತ್ ಆರ್ಬಿಟ್ಗೆ ತೆರಳಿ ಮೂರು ದಿನಗಳ ಬಳಿಕ ವಾಪಸ್ ಆಗ್ತಾರೆ. ಹಾಗಂತಾ ಬಾಹ್ಯಾಕಾಶಕ್ಕೆ ಭಾರತೀಯ ಗಗನಯಾತ್ರಿ ಹೋಗ್ತಾ ಇರೋದು ಇದೇ ಮೊದಲೇನಲ್ಲ. 1984ರಲ್ಲಿ ರಾಕೇಶ್ ಶರ್ಮಾ ಅವರು ರಷ್ಯಾದಿಂದ ಬಾಹ್ಯಾಕಾಶಕ್ಕೆ ಹೋಗಿದ್ರು. ಆಗ ವಿಡಿಯೋ ಕಾನ್ಫರೆನ್ಸ್ನಲ್ಲಿ ಪ್ರಧಾನಿ ಇಂದಿರಾ ಗಾಂಧಿ ಬಾಹ್ಯಾಕಾಶದಿಂದ ಭಾರತ ಹೇಗೆ ಕಾಣಿಸುತ್ತೆ ಅಂತಾ ಕೇಳಿದಾಗ ರಾಕೇಶ್ ಶರ್ಮಾ ಅವರು ಸಾರೇ ಜಯಾಂಸೆ ಅಚ್ಛಾ ಎಂದಿದ್ರು. ಬಾಹ್ಯಾಕಾಶಕ್ಕೆ ತೆರಳಿದ ಏಕೈಕ ಗಗನಯಾತ್ರಿ ಅಂದ್ರೆ ಅದು ರಾಕೇಶ್ ಶರ್ಮಾ ಮಾತ್ರ. ಇನ್ನು ಭಾರತೀಯ ಮೂಲದವರಾಗಿ ಕಲ್ಪನಾ ಚಾವ್ಲಾ, ಸುನಿತಾ ವಿಲಿಯಮ್ಸ್ ಇವೆರಲ್ಲಾ ಬಾಹ್ಯಾಕಾಶಕ್ಕೆ ತೆರಳಿದ್ರು. ಈ ಕಲ್ಪನಾ ಚಾವ್ಲಾ ಭೂಮಿಗೆ ಮರಳೋ ವೇಳೆ ಸ್ಪೇಸ್ಕ್ರಾಫ್ಟ್ ಸ್ಫೋಟಗೊಂಡು 2003ರಲ್ಲಿ ಮೃತಪಟ್ಟಿದ್ರು.
ಅಂತೂ ಇಸ್ರೋ ವಿಜ್ಞಾನಿಗಳು ಈಗ ಇದೇ ಮೊದಲ ಬಾರಿಗೆ ನಮ್ಮ ದೇಶದ ಗಗನಯಾತ್ರಿಗಳನ್ನ ನಮ್ಮ ನೆಲದಿಂದಲೇ ಬಾಹ್ಯಾಕಾಶಕ್ಕೆ ಕಳುಹಿಸೋ ಯೋಜನೆ ಕೈಗೊಂಡಿದ್ದಾರೆ. 2025ರ ಅಂತ್ಯದ ವೇಳೆಗೆ ಮೂವರು ಗಗನಯಾತ್ರಿಗಳ ಹೊತ್ತ ರಾಕೆಟ್ ಲಾಂಚ್ ಆಗುವ ಸಾಧ್ಯತೆ ಇದೆ.