81 ನೇ ವಸಂತಕ್ಕೆ ಕಾಲಿಟ್ಟ ರಾಜಹುಲಿ – ಮಾಜಿ ಸಿಎಂ ಯಡಿಯೂರಪ್ಪ ಅವರ ರಾಜಕೀಯ ಹಾದಿ ಹೇಗಿತ್ತು ಗೊತ್ತಾ?

81 ನೇ ವಸಂತಕ್ಕೆ ಕಾಲಿಟ್ಟ ರಾಜಹುಲಿ – ಮಾಜಿ ಸಿಎಂ ಯಡಿಯೂರಪ್ಪ ಅವರ ರಾಜಕೀಯ ಹಾದಿ ಹೇಗಿತ್ತು ಗೊತ್ತಾ?

ರೈತ ಪರ ಹೋರಾಟಗಾರ, ಕರ್ನಾಟಕದ ರಾಜಕಾರಣದಲ್ಲಿ ‘ರಾಜಾಹುಲಿ’ಪ್ರಸಿದ್ಧಿ ಪಡೆದಿರುವ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ತಮ್ಮ 81 ನೇ ವರ್ಷದ  ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಬಿ,ವೈ ವಿಜಯೇಂದ್ರ ಸೇರಿದಂತೆ ಗಣ್ಯರು, ಬಿಜೆಪಿ ಕಾರ್ಯಕರ್ತರು, ಅವರ ಅಪಾರ ಸಂಖ್ಯೆಯ ಬೆಂಬಲಿಗರು ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.

ಮಾಜಿ ಸಿಎಂ ಯಡಿಯೂರಪ್ಪ ಅವರ ರಾಜಕೀಯ ಹಾದಿಯೇ ರೋಚಕ. ದಲಿತರು, ರೈತರ ಪರ ಹೋರಾಟ ನಡೆಸಿದ ಹೆಮ್ಮೆ ಬಿಎಸ್ ವೈ ಅವರದ್ದು. ಕರ್ನಾಟಕ ರಾಜಕೀಯ ರಂಗದಲ್ಲಿ ಬಿಜೆಪಿ ಮುನ್ನೆಲೆಗೆ ಬರಲು ಬಿ.ಎಸ್. ಯಡಿಯೂರಪ್ಪನವರ ಪಾತ್ರ ಅತಿ ಮಹತ್ವದ್ದಾಗಿದೆ. ಅಸಾಧಾರಣ ನಾಯಕನಾಗಿ, ರಾಜ್ಯದ ಜನರ, ರೈತ ಬಂಧುಗಳ, ದುರ್ಬಲರ ಆಶೋತ್ತರಗಳಿಗಾಗಿ ದುಡಿದ ನಾಯಕ ಬಿಎಸ್ ವೈ. ನಾಲ್ಕು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ.

ಇದನ್ನೂ ಓದಿ: ಅಭಿಮಾನಿಗಳ ಮನಗೆದ್ದ ಗಿಲ್ ಮತ್ತು ಧ್ರುವ್ – ಭಾರತದ ಕ್ರಿಕೆಟ್ ಹೀರೋಗಳು ಗೆಲುವಿನ ದಡ ಸೇರಿದ್ದು ಹೇಗೆ ಗೊತ್ತಾ?

ಬಿ.ಎಸ್. ಯಡಿಯೂರಪ್ಪ ಅವರು 1943ರ ಫೆಬ್ರವರಿ 27ರಂದು ಸಿದ್ದಲಿಂಗಯ್ಯ ಹಾಗೂ ಶ್ರೀಮತಿ ಪುಟ್ಟ ತಾಯಮ್ಮನವರ ಸುಪುತ್ರನಾಗಿ ಜನಿಸಿದರು. ತಮ್ಮ ನಾಲ್ಕನೇ ವಯಸ್ಸಿನಲ್ಲಿ ಬಿಎಸ್ ವೈ ತಾಯಿಯವರನ್ನು ಕಳೆದುಕೊಂಡರು. ಮಂಡ್ಯದ ಪಿಇಎಸ್ ಕಾಲೇಜಿನಲ್ಲಿ ತಮ್ಮ ವ್ಯಾಸಂಗ ಮುಗಿಸಿದರು. 1965ರಲ್ಲಿ ಸರ್ಕಾರಿ ಉದ್ಯೋಗಕ್ಕೆ ಸೇರಿಕೊಂಡರು. ಆ ಉದ್ಯೋಗವನ್ನು ತ್ಯಜಿಸಿ ಶಿಕಾರಿಪುರದ ವೀರಭದ್ರ ಶಾಸ್ತ್ರೀ ಶಂಕರ್ ರೈಸ್ ಮಿಲ್ ನಲ್ಲಿ ಗುಮಾಸ್ತರಾಗಿ ಕೆಲಸ ಮಾಡಿದರು. 1967ರಲ್ಲಿ ರೈಸ್ ಮಿಲ್ ಮಾಲೀಕರ ಸುಪುತ್ರಿ ಮೈತ್ರಾ ದೇವಿಯವರನ್ನು ವಿವಾಹವಾದರು. 1972 ರಲ್ಲಿ ಇದೇ ಶಿಕಾರಿಪುರದ ಜನಸಂಘದ ಅಧ್ಯಕ್ಷರಾಗಿ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟರು.

ಬಿಎಸ್ ವೈ ಪ್ರಮುಖ ಹೋರಾಟಗಳು ಬಳ್ಳಾರಿ ಹಾಗೂ ಶಿವಮೊಗ್ಗದಲ್ಲಿ 1975ರ ತುರ್ತು ಪರಿಸ್ಥಿತಿಯ 45 ದಿನಗಳ ಕಾಲ ಸೆರೆವಾಸ ಅನುಭವಿಸಿದರು. ನಂತರ 1700ಮಂದಿಯನ್ನು ಜೀತ ಪದ್ಧತಿಯಿಂದ ವಿಮುಕ್ತಿಗೊಳಿಸಿದರು. ಹಾಗೂ ಬಗರ್ ಹುಕುಂ ರೈತರ ಪರವಾಗಿ ಹೋರಾಟ ನಡೆಸಿದರು. ಶಿಕಾರಿಪುರ ತಾಲ್ಲೂಕಿನಾದ್ಯಂತ ಸಂಚರಿಸಿ ಬರ ಪರಿಸ್ಥಿತಿ ಅಧ್ಯಯನ ಮಾಡಿ ಸರ್ಕಾರದ ಗಮನಕ್ಕೆ ತರಲು 1987 ರಲ್ಲಿ ಸೈಕಲ್ ಜಾಥಾ ನಡೆಸಿ, ಸಂತ್ರಸ್ತರಿಗೆ ನ್ಯಾಯ ದೊರಕಿಸಿದರು. ಮೊದಲ ಬಾರಿಗೆ ಶಾಸಕರಾಗಿ ವಿಧಾನ ಸಭೆಗೆ 1983ರಲ್ಲಿ ಪ್ರವೇಶ ಮಾಡಿದರು.

1985ರಲ್ಲಿ ಬಿಜೆಪಿಯ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಯಾದರು. 1988ರಲ್ಲಿ ಬಿಜೆಪಿಯ ರಾಜ್ಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದರು. 1988ರಲ್ಲಿ ಬಸವ ಕಲ್ಯಾಣದಿಂದ ಬೆಂಗಳೂರು ವರೆಗೆ ರೈತ ಜಾಥಾ ಹಾಗೂ ಬನವಾಸಿಯಿಂದ ಬೆಂಗಳೂರು ವರೆಗೆ ರೈತ ಜಾಥಾದ ನೇತೃತ್ವ. 1991ರಲ್ಲಿ ಡಾ. ಮುರಳೀ ಮನೋಹರ ಜೋಶಿ ನೇತೃತ್ವದಲ್ಲಿ ನಡೆದ ಏಕತಾ ಯಾತ್ರೆಯಲ್ಲಿ ಭಾಗಿ. ಶ್ರೀನಗರದ ಲಾಲ್ ಚೌಕದಲ್ಲಿ ತ್ರಿವರ್ಣ ಧ್ವಜಾರೋಹಣ. 1992ರಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿಯಾಗಿ ನಿಯೋಜನೆ.

1994ರಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕರಾಗಿ ಆಯ್ಕೆ. 1998 ತಲಕಾವೇರಿಯಿಂದ ಕೆ.ಆರ್.ಎಸ್ ವರೆಗೆ ರೈತ ಜಾಥಾ. 2000ರಲ್ಲಿ ವಿಧಾನ ಪರಿಷತ್ ಗೆ ಆಯ್ಕೆ. 2003 ಬಗರ್ ಹುಕುಂ ರೈತರ ಜಮೀನು ಸಕ್ರಮಕ್ಕೆ ಆಗ್ರಹಿಸಿ ಶಿಕಾರಿಪುರದಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸಿದರು. ಹೀಗೆ ರಾಜಕೀಯಕ್ಕೆ ಕಾಲಿಟ್ಟ ಬಿಎಸ್ ವೈ ಅವರು ಬಿಜೆಪಿಗಾಗಿ ದುಡಿದರು.

Shwetha M