ಸರ್ಜರಿ ಬಗ್ಗೆ ತಿಳಿಸಿದ ಮೊಹಮ್ಮದ್ ಶಮಿ – ಚೇತರಿಸಿಕೊಳ್ಳಲು ಸಮಯ ಬೇಕೆಂದ ಟೀಮ್ ಇಂಡಿಯಾ ಸ್ಟಾರ್ ಬೌಲರ್
ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಐಪಿಎಲ್ನಲ್ಲಿ ಆಡಲ್ಲ ಅನ್ನೋ ಮಾತು ನಿಜವಾಗಿದೆ. ಈಗ ಸ್ವತಃ ಟೀಮ್ ಇಂಡಿಯಾ ಸ್ಟಾರ್ ಬೌಲರ್ ಒಂದು ಹೇಳಿಕೆ ನೀಡಿದ್ದಾರೆ. ಇದು ಐಪಿಎಲ್ನಲ್ಲಿ ಶಮಿ ಆಡಬಹುದು ಅಂತಾ ಭರವಸೆಯಿಟ್ಟುಕೊಂಡಿದ್ದ ಅಭಿಮಾನಿಗಳಿಗಂತೂ ಶಾಕಿಂಗ್ ವಿಚಾರವೇ.
ಇದನ್ನೂ ಓದಿ: ಮೂರು ವಾರಗಳಲ್ಲಿ ಚೇತರಿಕೆ ಆಗುತ್ತೆ ಅಂದರೂ ಯಾಕೆ ಆಡಲ್ಲ ಶಮಿ – ಸ್ಪೆಷಲ್ ಇಂಜೆಕ್ಷನ್ ತಗೊಂಡಿದ್ದರೂ ಏನಾಯ್ತು?
ಕಳೆದ ಏಕದಿನ ವಿಶ್ವಕಪ್ನಲ್ಲಿ ಹೀರೋ ಅನಿಸಿಕೊಂಡವರು ಮೊಹಮ್ಮದ್ ಶಮಿ. ಒಟ್ಟು 24 ವಿಕೆಟ್ ಕಬಳಿಸಿ ಮಿಂಚಿದ್ದರು. ಇದಕ್ಕೂ ಮುನ್ನ ಐಪಿಎಲ್ 2023 ರಲ್ಲಿ ಗುಜರಾತ್ ಟೈಟಾನ್ಸ್ ಪರ ಕಣಕ್ಕಿಳಿದಿದ್ದ ಶಮಿ ಒಟ್ಟು 28 ವಿಕೆಟ್ ಉರುಳಿಸಿ ಪರ್ಪಲ್ ಕ್ಯಾಪ್ ಗೆದ್ದಿದ್ದರು. ಆದರೆ ಈ ಬಾರಿಯ ಐಪಿಎಲ್ಗೆ ಶಮಿ ಆಡುವುದಿಲ್ಲ ಅನ್ನೋದೇ ಅಭಿಮಾನಿಗಳಿಗೆ ಬೇಸರದ ವಿಚಾರ. ಯಾಕೆಂದರೆ, ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಪಾದದ ನೋವಿನಿಂದ ಬಳಲುತ್ತಿದ್ದ ಶಮಿ ಇದೀಗ ಸರ್ಜರಿ ಮಾಡಿಸಿಕೊಂಡಿದ್ದಾರೆ. ಹೀಗಾಗಿ ಐಪಿಎಲ್ನಿಂದ ಹೊರಗುಳಿಯುವುದು ಖಚಿತವಾಗಿದೆ. ಏಕದಿನ ವಿಶ್ವಕಪ್ ವೇಳೆ ಶಮಿ ಅವರ ಪಾದದಲ್ಲಿ ನೋವು ಕಾಣಿಸಿಕೊಂಡಿತ್ತು. ಈ ನೋವಿನ ನಡುವೆಯೂ ಶಮಿ ನಿವಾರಕ ಮಾತ್ರೆಗಳನ್ನು ತೆಗೆದುಕೊಂಡು ಟೀಮ್ ಇಂಡಿಯಾ ಪರ ಕಣಕ್ಕಿಳಿದಿದ್ದರು. ಇದರಿಂದ ಅವರ ಪಾದದ ಸಮಸ್ಯೆಯು ಬಿಗಡಾಯಿಸಿದೆ. ಹೀಗಾಗಿ ಅವರು ಏಕದಿನ ವಿಶ್ವಕಪ್ ಬಳಿಕ ಯಾವುದೇ ಪಂದ್ಯವಾಡಿರಲಿಲ್ಲ. ಅಲ್ಲದೆ ವೈದ್ಯಕೀಯ ಪರಿಶೀಲನೆ ವೇಳೆ ಶಸ್ತ್ರಚಿಕಿತ್ಸೆ ಮಾಡುವಂತೆ ಸಲಹೆ ನೀಡಲಾಗಿತ್ತು. ಅದರಂತೆ ಇದೀಗ ಮೊಹಮ್ಮದ್ ಶಮಿ ಸರ್ಜರಿಗೆ ಒಳಗಾಗಿದ್ದಾರೆ.
ಮೊಹಮ್ಮದ್ ಶಮಿ ಸರ್ಜರಿಗೆ ಒಳಗಾಗಿರುವ ಬಗ್ಗೆ ಸ್ವತಃ ಹೇಳಿಕೊಂಡಿದ್ದಾರೆ. ನಾನು ನನ್ನ ಆಂಕಲ್ಸ್ ಸ್ನಾಯುರಜ್ಜು ಹಿಮ್ಮಡಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದೇನೆ. ಚೇತರಿಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ಆದರೆ ನನ್ನ ಕಾಲಿನ ಮೇಲೆ ನಿಲ್ಲಲು ನಾನು ತುಂಬಾ ಉತ್ಸುಕನಾಗಿದ್ದೇನೆ ಎಂದು ಮೊಹಮ್ಮದ್ ಶಮಿ ಸೋಷಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ. ಇದರೊಂದಿಗೆ ಮುಂಬರುವ ಐಪಿಎಲ್ನಲ್ಲಿ ಮೊಹಮ್ಮದ್ ಶಮಿ ಗುಜರಾತ್ ಟೈಟಾನ್ಸ್ ತಂಡದ ಪರ ಕಣಕ್ಕಿಳಿಯುವುದಿಲ್ಲ ಎಂಬುದು ಖಚಿತವಾಗಿದೆ. ಹಾಗೆಯೇ ಜೂನ್ 1 ರಿಂದ ಶುರುವಾಗಲಿರುವ ಟಿ20 ವಿಶ್ವಕಪ್ಗೂ ಅಲಭ್ಯರಾಗುವ ಸಾಧ್ಯತೆ ಹೆಚ್ಚಿದೆ.