ಪಾಕಿಸ್ತಾನ ಸಬ್‌ಮರೀನ್ ಅವಶೇಷ ಪತ್ತೆ – 53 ವರ್ಷಗಳ ಹಿಂದೆ ಮಧ್ಯರಾತ್ರಿ ಸಮುದ್ರದಲ್ಲಿ ನಡೆದಿದ್ದೇನು?

ಪಾಕಿಸ್ತಾನ ಸಬ್‌ಮರೀನ್ ಅವಶೇಷ ಪತ್ತೆ – 53 ವರ್ಷಗಳ ಹಿಂದೆ ಮಧ್ಯರಾತ್ರಿ ಸಮುದ್ರದಲ್ಲಿ ನಡೆದಿದ್ದೇನು?

ಪಾಕಿಸ್ತಾನ ಯಾವಾಗ ಕಾಲ್ಕೆರೆದು ಭಾರತದ ವಿರುದ್ಧ ಯುದ್ಧಕ್ಕೆ ಇಳಿದಿತ್ತೋ.. ಪ್ರತಿ ಬಾರಿಯೂ ಸೋತು ಸುಣ್ಣವಾಗಿತ್ತು. ಭಾರತ-ಪಾಕಿಸ್ತಾನದ ನಡುವೆ ಒಟ್ಟು ಮೂರು ಯುದ್ಧಗಳಾಗಿವೆ. 1965, 1971 ಮತ್ತು 1999ರಲ್ಲಿ ಒಟ್ಟು ಮೂರು ಬಾರಿ ಎರಡೂ ದೇಶಗಳ ಮಧ್ಯೆ ಸಮರ ನಡೆದಿದೆ. ಈ ಮೂರೂ ಯುದ್ಧಗಳನ್ನ ಭಾರತ ಗೆದ್ದಿತ್ತು. ಆದ್ರೆ, 1971ರ ಡಿಸೆಂಬರ್​​ನಲ್ಲಿ ನಡೆದ ಭಾರತ-ಪಾಕಿಸ್ತಾನ ಯುದ್ಧಕ್ಕೆ ಸಂಬಂಧಿಸಿ ಈಗ ಒಂದು ಮಹತ್ವದ ಬೆಳವಣಿಗೆಯಾಗಿದೆ. ಯುದ್ಧ ನಡೆದು ಸುಮಾರು 53 ವರ್ಷಗಳ ಬಳಿಕ ವಿಶಾಖಪಟ್ಟಣದ ವೈಜಾಗ್ ಸಮುದ್ರ ವಲಯದಲ್ಲಿ ಪಾಕಿಸ್ತಾನ ಸಬ್​ಮರೀನ್​ನ ಅವಶೇಷವೊಂದು ಪತ್ತೆಯಾಗಿದೆ.

ಇದನ್ನೂ ಓದಿ: ಚುನಾವಣೆಯಲ್ಲೂ ಪಾಕಿಸ್ತಾನದಲ್ಲಿ ಮಹಾ ಮೋಸದಾಟ – ಪ್ರಾಮಾಣಿಕತೆಗೆ ಇನ್ನೊಂದು ವಿರೋಧಾರ್ಥಕ ಪದವೇ ಪಾಕಿಸ್ತಾನ..!

1971 ನವೆಂಬರ್ 14.. ಪಿಎನ್​ಎಸ್ ಗಾಜಿ ಹೆಸರಿನ ಸಬ್ ​ಮರೀನ್ ಸೈಲೆಂಟಾಗಿ ಪಾಕಿಸ್ತಾನದ ಕರಾಚಿಯಿಂದ ಭಾರತದ ಹೊರಟಿತ್ತು. ವೈಜಾಗ್ ಕರಾವಳಿ ತೀರದತ್ತ ಸುಮಾರು 4,800 ಕಿಲೋ ಮೀಟರ್ ಪ್ರಯಾಣ ಬೆಳೆಸಿತ್ತು. ಪಿಎನ್​​​ಎಸ್ ಗಾಜಿ ಅಮೆರಿಕ ನಿರ್ಮಿತ ಡೀಸೆಲ್, ಎಲೆಕ್ಟ್ರಿಕ್ ಸಬ್​ಮರೀನ್ ಆಗಿತ್ತು. ಅಂದು ಪಾಕಿಸ್ತಾನ ನೌಕಾಪಡೆ ಪಾಲಿಗೆ ಪಿಎನ್​​​ಎಸ್ ಗಾಜಿಯೇ ಬ್ರಹ್ಮಾಸ್ತ್ರವಾಗಿತ್ತು. ಈ ಸಬ್​ಮರೀನ್​ನನ್ನ ಛೂ ಬಿಟ್ಟು ವಿಶಾಖಪಟ್ಟಣದಲ್ಲಿರೋ ಭಾರತದ ನೌಕಾಪಡೆಯ ದೈತ್ಯ ಐಎನ್​ಎಸ್​ ವಿಕ್ರಾಂತ್​ ಯುದ್ಧ ಹಡಗನ್ನ ನಾಶಗೊಳಿಸೋಕೆ ಪಾಕಿಸ್ತಾನ ಷಡ್ಯಂತ್ರ ಮಾಡಿತ್ತು. ಗಾಜಿ ಸಬ್​ಮರೀನ್ ಭಾರತದತ್ತ ಮುನ್ನುಗ್ಗುತ್ತಿರೋವಾಗ ಅದ್ರ ಸಿಬ್ಬಂದಿ ನಿರಂತರವಾಗಿ ಪಾಕಿಸ್ತಾನ ನೌಕಾಪಡೆಯ ಹೆಡ್​​ಕ್ವಾರ್ಟರ್​​ ಜೊತೆಗೆ ಕಮ್ಯುನಿಕೇಟ್ ಮಾಡ್ತಾನೆ ಇದ್ರು. ಪಿನ್​ ಟು ಪಿನ್​ ಇನ್​ಫಾರ್ಮೇಶನ್ ನೀಡ್ತಾನೆ ಇದ್ರು. ಇದನ್ನ ಭಾರತೀಯ ನೌಕಾಪಡೆ ಟ್ರ್ಯಾಕ್ ಮಾಡಿತ್ತು. ಪಾಕಿಸ್ತಾನದ ಸಬ್​ಮರೀನ್ ಭಾರತದ ವೈಜಾಗ್​​ನತ್ತವೇ ಬರ್ತಿದೆ ಅನ್ನೋದು ನಮ್ಮ ಸೇನೆಗೆ ಖಚಿತವಾಗಿತ್ತು. ಕೂಡಲೇ ನಮ್ಮ ನೌಕಾಪಡೆ ಕೌಂಟರ್​ ಸ್ಟ್ರ್ಯಾಟಜಿ ರೆಡಿ ಮಾಡಿಕೊಳ್ಳುತ್ತೆ. ಪಾಕಿಸ್ತಾನದ ಸಬ್​ಮರೀನ್​​ಗೆ ಸಮುದ್ರದಲ್ಲೇ ಖೆಡ್ಡಾ ತೋಡುತ್ತೆ. ಐಎನ್​ಎಸ್​ ರಜಪೂತ್ ಹೆಸರಿನ ಡಿಸ್ಟ್ರಾಯರ್ ಹಡಗನ್ನ ವಿಶಾಖಪಟ್ಟಣದತ್ತ ಕಳುಹಿಸಿಕೊಡಲಾಗುತ್ತೆ. ಗಾಜಿ ಸಬ್​​ಮರೀನ್​​ ವಿಶಾಖಪಟ್ಟಣದತ್ತ ಬರ್ತಾ ಇರೋದು ಭಾರತಕ್ಕೆ ಗೊತ್ತಾಗಿದೆ. ಹಾಗೆಯೇ ಗಾಜಿಯನ್ನ ಟ್ರ್ಯಾಪ್ ಮಾಡೋಕೆ ಭಾರತ ಸಿದ್ಧತೆ ನಡೆಸ್ತಿದೆ ಅನ್ನೋ ವಿಚಾರ ಗೂಢಾಚಾರಿಗಳ ಮೂಲಕ ಪಾಕ್​​ ಸೇನೆಗೂ ತಲುಪುತ್ತೆ. 1971ರ ನವೆಂಬರ್ 25ರಂದು ಈ ಸಂಗತಿಯನ್ನ ಪಾಕ್ ಸೇನೆ ಗಾಜಿ ಸಬ್​ಮರೀನ್​​ನಲ್ಲಿರೋ ಅಧಿಕಾರಿಗಳೂ ತಿಳಿಸ್ತಾರೆ. ಎಚ್ಚರಿಕೆ ವಹಿಸುವಂತೆ ಅಲರ್ಟ್​ ಮಾಡ್ತಾರೆ. 1971 ಡಿಸೆಂಬರ್​ 3ರಂದು ಪಾಕಿಸ್ತಾನದ ಸಬ್​ಮರೀನ್ ವಿಶಾಖಪಟ್ಟಣವನ್ನ ತಲುಪಿಯೇ ಬಿಡುತ್ತೆ. ಅಲ್ಲಿ ಐಎನ್​ಎಸ್​ ವಿಕ್ರಾಂತ್​​​ಗಾಗಿ ಹುಡುಕಾಟ ಕೂಡ ನಡೆಸುತ್ತೆ. ಆದ್ರೆ ವಿಶಾಖಪಟ್ಟಣದಲ್ಲಿ ನಮ್ಮ ಯುದ್ಧನೌಕೆ ಐಎನ್​ಎಸ್ ವಿಕ್ರಾಂತ್ ಇರೋದೆ ಇಲ್ಲ. ಹೀಗಾಗಿ ಐಎನ್​​ಎಸ್ ವಿಕ್ರಾಂತ್ ಸಿಗದಿದ್ರೂ ನೌಕಾನೆಲೆಯಲ್ಲಿ ಭಾರತದ ಕೆಲ ದೊಡ್ಡ ದೊಡ್ಡ ಹಡಗುಗಳನ್ನಾದ್ರೂ ನಾಶ ಮಾಡೋಣ ಅನ್ನೋ ನಿರ್ಧಾರಕ್ಕೆ ಪಾಕ್ ಸಬ್​​ಮರೀನ್​ ಅಧಿಕಾರಿಗಳು ಬರ್ತಾರೆ. ಯಾಕಂದ್ರೆ 4,800 ಕಿಲೋ ಮೀಟರ್ ದೂರ ಬಂದು ಏನೂ ಮಾಡದೆ ಹಾಗೆ ಸುಮ್ನೆ ಹೋದ್ರೆ ಪಾಕಿಸ್ತಾನಕ್ಕೆ ಭಾರಿ ಮುಖಭಂಗವಾಗುತ್ತೆ ಅನ್ನೋ ಕಾರಣಕ್ಕೆ ಭಾರತದ ಒಂದಷ್ಟು ಹಡಗುಗಳ ಮೇಲಾದ್ರೂ ಅಟ್ಯಾಕ್ ಮಾಡೋಕೆ ಮುಂದಾಗ್ತಾರೆ. ಇದೇ ಟೈಮ್​​ನಲ್ಲಿ ಐಎನ್​ಎಸ್​ ರಜಪೂತ್ ಡಿಸ್ಟ್ರ್ಯಾಯರ್ ಶಿಪ್ ಕಾಲುವೆಯೊಂದರ ಮೂಲಕ ವಿಶಾಖಪಟ್ಟಣದಿಂದ ಎಕ್ಸಿಟ್ ಆಗುತ್ತೆ. ಆದ್ರೆ ಹಾಗೆ ಸುಮ್ನೆ ಎಕ್ಸಿಟ್ ಆಗೋದಿಲ್ಲ. ತೆರಳೋವಾಗ ವಿಶಾಖಪಟ್ಟಣ ಸಮುದ್ರ ಭಾಗದಲ್ಲಿ ಒಂದಷ್ಟು ಆ್ಯಂಟಿ ಸಬ್​​ಮರೀನ್​ ವೆಪನ್​​ಗಳನ್ನ ಫಿಕ್ಸ್ ಮಾಡಿ ಹೋಗುತ್ತೆ. ಅದಕ್ಕೆ ಡೆಪ್ತ್ ಚಾರ್ಜ್ ಅಂತಾರೆ. ಸಬ್​ಮರೀನ್​​ನನ್ನ ನಾಶ ಪಡಿಸೋಕೆ ಅಂತಾನೆ ಇರೋ ಸ್ಫೋಟಕ ಅದು. ನೀರಿನಾಳದಲ್ಲೇ ಬ್ಲಾಸ್ಟ್ ಆಗಿ ಸಬ್​ಮರೀನ್​ನನ್ನ ಸರ್ವನಾಶ ಮಾಡಿ ಬಿಡುತ್ತೆ. ಅಂಥಾ ಹಲವು ಸ್ಫೋಟಕಗಳನ್ನ ಸಮುದ್ರದಲ್ಲಿ ಫಿಕ್ಸ್ ಮಾಡಿಯೇ ರಜಪೂತ್ ಡಿಸ್ಟ್ರ್ಯಾಯರ್ ಹಡಗು ಮುಂದೆ ಸಾಗಿತ್ತು. ಇದ್ರ ಸುಳಿವೇ ಇಲ್ಲದ ಪಾಕಿಸ್ತಾನದ ಗಾಜಿ ಸಬ್​ಮರೀನ್ ನಮ್ಮ ಹಡಗುಗಳನ್ನ ಟಾರ್ಗೆಟ್ ಮಾಡೋಕೆ ಅಂತಾ ನೌಕಾನೆಲೆಯತ್ತ ಮುನ್ನುಗ್ಗಿದೆ. ಅದು ಸಮುದ್ರದಾಳದಲ್ಲಿ ಬರ್ತಿದ್ದ ದಾರಿಯಲ್ಲೇ ರಜಪೂತ್ ಹಡಗು ಫಿಕ್ಸ್​ ಮಾಡಿದ್ದ ಸ್ಫೋಟಗಳಿದ್ವು.

1971 ಡಿಸೆಂಬರ್ 3ರ ಮಧ್ಯರಾತ್ರಿ ಇದ್ದಕ್ಕಿದ್ದಂತೆ ಭಯಾನಕ ಬ್ಲಾಸ್ಟ್ ಆಗುತ್ತೆ. ಪಾಕಿಸ್ತಾನದ ಸಬ್​ಮರೀನ್ ಸ್ಫೋಟಗೊಂಡು ಪೀಸ್ ಆಗುತ್ತೆ. ಅದ್ರಲ್ಲಿದ್ದ ಎಲ್ಲಾ 93 ಮಂದಿ ಸಿಬ್ಬಂದಿ ಕೂಡ ಸಮುದ್ರದಲ್ಲೇ ಹೆಣವಾಗ್ತಾರೆ. ಸಮುದ್ರದೊಳಗೆ ಆ ಬ್ಲಾಸ್ಟ್ ಎಷ್ಟು ತೀವ್ರವಾಗಿತ್ತಂದ್ರೆ, ವಿಶಾಖಪಟ್ಟಣ ಕಡಲ ತೀರದ ಜನರು ಕೂಡ ಬೆಚ್ಚಿಬಿದ್ದಿದ್ರು. ಮನೆಯಿಂದ ಹೊರಬಂದು ಭಯದಲ್ಲಿ ಅತ್ತಿಂದಿತ್ತ ಓಡಾಡಿದ್ರು. ಬಹುತೇಕ ಮಂದಿ ಉಗ್ರರ ದಾಳಿಯಾಗಿದೆ ಅಂದುಕೊಂಡಿದ್ರು. ಇನ್ನೂ ಕೆಲವರು ಪಾಕಿಸ್ತಾನ ಸೇನೆ ದಾಳಿ ನಡೆಸಿದೆ ಅಂದ್ಕೊಂಡ್ರು. ಮತ್ತೊಂದಷ್ಟು ಮಂದಿ ಭಾರಿ ಭೂಕಂಪವಾಗಿದ್ದು, ಹೀಗಾಗಿ ಸಮುದ್ರದಾಳದಲ್ಲಿ ಏನೋ ಆಗಿದೆ ಅಂದುಕೊಂಡ್ರು. ಸಮುದ್ರ ತಟಕ್ಕೆ ಬಂದು ನೋಡಿದವರಿಗೆ ಭಾರಿ ಗಾತ್ರದ ಅಲೆಗಳು ಅಪ್ಪಳಿಸ್ತಾ ಇದ್ದಿದ್ದು ಕಂಡು ಬಂದಿತ್ತು. ಯಾರಿಗೂ ಏನಾಗ್ತಿದೆ ಅನ್ನೋದೆ ಗೊತ್ತಾಗಲಿಲ್ಲ. ಮರುದಿನ ಬೆಳಗ್ಗೆ ಅಂದ್ರೆ 1971ರ ಡಿಸೆಂಬರ್ 4ರಂದು ಭಾರತೀಯ ನೌಕಾಪಡೆಯ ಒಂದು ಶಿಪ್ ಸಮುದ್ರದಲ್ಲಿ​​ ಸ್ಫೋಟ ಸಂಭವಿಸಿದ ಜಾಗಕ್ಕೆ ತೆರಳುತ್ತೆ. ಈ ವೇಳೆ ಸೇನಾಪಡೆಯ ಮುಳುಗುತಜ್ಞರು ಸಮುದ್ರಕ್ಕೆ ಹಾರಿ ಸಾಗರದಾಳದಲ್ಲಿ ಪರಿಶೀಲನೆ ನಡೆಸ್ತಾರೆ. ಈ ವೇಳೆ ಪಾಕಿಸ್ತಾನದ ಗಾಜಿ ಸಬ್​​ಮರೀನ್​​ನ ಒಂದಷ್ಟು ಅವಶೇಷ ಕೂಡ ಪತ್ತೆಯಾಗುತ್ತೆ. ಆಗ ಪಾಕಿಸ್ತಾನದ ಷಡ್ಯಂತ್ರ ಏನಾಗಿತ್ತು ಅನ್ನೋದು ಕೂಡ ಭಾರತೀಯ ಸೇನೆಗೆ ಕನ್ಫರ್ಮ್ ಆಗುತ್ತೆ.

ಅಂದು ಪಾಕ್​ ಸಬ್​​ಮರೀನ್​ ವಿರುದ್ಧ ಭಾರತೀಯ ಸೇನೆ ನಡೆಸಿದ ಈ ಸಾಗರದಾಳದ ಆಪರೇಷನ್ ಇದ್ಯಲ್ಲಾ ಅದು ಇಡೀ ಯುದ್ಧದ ದಿಕ್ಕನ್ನೇ ಬದಲಿಸಿತ್ತು. ಒಂದು ವೇಳೆ ನಮ್ಮ ಸೇನೆ ಅಲರ್ಟ್ ಆಗದೆ ಇದ್ದಲ್ಲಿ, ಪಾಕ್​​ ಸಬ್​​ಮರೀನ್​ನನ್ನ ನಾಶ ಮಾಡದೆ ಇದ್ದಲ್ಲಿ ಭಾರತ ತನ್ನ ಶಕ್ತಿಶಾಲಿ ಐಎಸ್​​ಎಸ್​​ ವಿಕ್ರಾಂತ್​​ ಯುದ್ಧ ಹಡಗನ್ನೇ ಕಳೆದುಕೊಳ್ತಿತ್ತು. ಪರಿಣಾಮ 1971ರ ಯುದ್ಧದಲ್ಲಿ ಭಾರತಕ್ಕೆ ಭಾರಿ ಹಿನ್ನಡೆಯಾಗೋ ಸಾಧ್ಯತೆ ಕೂಡ ಇತ್ತು. ಯಾಕಂದ್ರೆ ಐಎನ್​ಎಸ್​ ವಿಕ್ರಾಂತ್​ ಸಾಮಾನ್ಯ ಯುದ್ಧ ಹಡಗು ಆಗಿಲ್ಲ. ಅದು ಏರ್​ಕ್ರಾಫ್ಟ್ ಕ್ಯಾರಿಯರ್​ ಶಿಪ್​. ಯುದ್ಧ ವಿಮಾನಗಳನ್ನ ಕೂಡ ಹೊತ್ತು ಸಾಗುತ್ತೆ. 1971ರ ಪಾಕ್ ಯುದ್ಧದಲ್ಲಿ ಭಾರತೀಯ ವೈಮಾನಿಕ ಪಡೆ ಮಹತ್ವದ ಪಾತ್ರವಹಿಸಿತ್ತು. ಅಂಥಾ ಯುದ್ಧ ವಿಮಾನಗಳನ್ನ ಹೊತ್ತು ಸಾಗೋ ಹಡಗೇ ನಾಶವಾಗ್ತಿದ್ರೆ ಭಾರತ ಇನ್ನಿಲ್ಲದ ಹೊಡೆತ ತಿನ್ನಬೇಕಾಗಿತ್ತು. ಆಗ ನಮ್ಮ ಬಳಿ ಐಎನ್​​ಎಸ್ ವಿಕ್ರಾಂತ್ ಬಿಟ್ರೆ ಇನ್ಯಾವುದೇ ಏರ್​​​ಕ್ರಾಫ್ಟ್ ಕ್ಯಾರಿಯರ್ ಇರಲಿಲ್ಲ. ಹೀಗಾಗಿಯೇ ಇರೋ ಏಕಮಾತ್ರ ಪ್ರಬಲ ಯುದ್ಧ ಹಡಗನ್ನ ರಕ್ಷಿಸೋಕೆ ಭಾರತೀಯ ಸೇನೆ ಪಾಕ್ ವಿರುದ್ಧ ಪಕ್ಕಾ ಪ್ಲ್ಯಾನ್ ಮಾಡಿತ್ತು. ಹಾಗೆಯೇ ಈ ಆಪರೇಷನ್​ನಲ್ಲಿ ನಮ್ಮ ಇಂಟೆಲಿಜೆನ್ಸ್ ಏಜೆನ್ಸಿಯ ಪಾತ್ರ ಕೂಡ ಅತ್ಯಂತ ದೊಡ್ಡ ಮಟ್ಟದಲ್ಲಿದೆ. ಯಾಕಂದ್ರೆ ಪಾಕಿಸ್ತಾನ ನೌಕಾಪಡೆಯ ಹೆಡ್​​ಕ್ವಾರ್ಟರ್​ನಲ್ಲಿದ್ದ ಹ್ಯಾಂಡಲರ್​​ಗಳ ಜೊತೆಗೆ ಗಾಜಿ ಸಬ್​​ಮರೀನ್ ಅಧಿಕಾರಿಗಳು ನಡೆಸ್ತಿದ್ದ ಮಾತುಕತೆಯನ್ನ ಪತ್ತೆ ಹಚ್ಚಿ, ಟ್ರ್ಯಾಕ್ ಮಾಡಿದ್ದೇ ಭಾರತದ ಇಂಟೆಲಿಜೆನ್ಸ್ ಏಜೆನ್ಸಿ. ಈ ಖಚಿತ ಮಾಹಿತಿಯಿಂದಾಗಿಯೇ ನೌಕಾಪಡೆಗೆ ಎಫೆಕ್ಟಿವ್ ಆಗಿ ಕೌಂಟರ್ ಪ್ಲ್ಯಾನ್ ಮಾಡೋಕೆ ಸಾಧ್ಯವಾಗಿತ್ತು. ಪಾಕಿಸ್ತಾನದ ಸಬ್​ಮರೀನ್​​ನನ್ನ ಪತ್ತೆ ಹಚ್ಚಿ ಅದು ಬರೋ ದಾರಿಯಲ್ಲೇ ಸ್ಫೋಟಕಗಳನ್ನ ಫಿಕ್ಸ್​ ಮಾಡೋಕೆ ಆಗಿತ್ತು.

ಇಲ್ಲಿ ನಿಮ್ಮನ್ನ ಒಂದು ಪ್ರಶ್ನೆ ಕಾಡಬಹುದು. ಐಎನ್​ಎಸ್​ ವಿಕ್ರಾಂತ್​​ ಮೇಲೆ ಅಟ್ಯಾಕ್ ಮಾಡೋಕೆ ಅಂತಾ ಪಾಕ್​ ಸಬ್​​ಮರೀನ್ ವಿಶಾಖಪಟ್ಟಂನತ್ತ ಬಂದಿತ್ತು. ಆದ್ರೆ ಎಷ್ಟೇ ಹುಡುಕಾಡಿದ್ರೂ ಪಾಕ್ ಸಬ್​ಮರೀನ್​​ಗೆ ನಮ್ಮ ಯುದ್ಧ ಹಡಗು ಪತ್ತೆಯಾಗಲೇ ಇಲ್ಲ. ಹಾಗಿದ್ರೆ ಐಎನ್​ಎಸ್ ವಿಕ್ರಾಂತ್ ಎಲ್ಲಿತ್ತು? ಪಾಕಿಸ್ತಾನದ ಕಂತ್ರಿಗಳ ಕಣ್ಣಿಗೆ ಬಿದ್ದಿಲ್ಲ ಯಾಕೆ? ಅನ್ನೋದು ಇಲ್ಲಿರೋ ಪ್ರಶ್ನೆ. ಭಾರತೀಯ ನೌಕಾಪಡೆ ಜಾಣತಣ ತೋರಿಸಿದ್ದು ಇಲ್ಲೇ ನೋಡಿ. ಯಾವಾಗ ಪಾಕಿಸ್ತಾನದ ಸಬ್​​ಮರೀನ್​​ ಐಎನ್​ಎಸ್​ ವಿಕ್ರಾಂತ್​​ ಟಾರ್ಗೆಟ್ ಮಾಡೋಕೆ ಬರ್ತಾ ಇದೆ ಅನ್ನೋ ಇಂಟೆಲಿಜೆನ್ಸ್ ಮಾಹಿತಿ ಸಿಗ್ತೋ, ಅತ್ತ ಪಾಕ್​ ಸಬ್​ಮರೀನ್​ ಇತ್ತ ಬರ್ತಾ ಇದ್ರೆ, ನಮ್ಮ ಐಎನ್​ಎಸ್ ವಿಕ್ರಾಂತ್​​ನ್ನ ವಿಶಾಖಪಟ್ಟಣದಿಂದ ಸದ್ದಿಲ್ಲದೆ ಅಂಡಮಾನ್ ನಿಕೋಬಾರ್​ಗೆ ಶಿಫ್ಟ್ ಮಾಡಲಾಗಿತ್ತು. ಐಎನ್​ಎಸ್ ಗುಲ್ದಾರ್, ಐಎನ್​​ಎಸ್ ಘಾರಿಯಲ್ ಮತ್ತು ಐಎನ್​​ಎಸ್ ಮಗರ್ ಸೇರಿ ಒಟ್ಟು ಮೂರು ಎಸ್ಕಾರ್ಟ್​ ಶಿಪ್​​ ಹಾಗೂ ಐಎನ್​ಎಸ್ ಖದೇರಿ ಹೆಸರಿನ ಸಬ್​​ಮರೀನ್​ ಸಮೇತವೇ ಐಎನ್​ಎಸ್ ವಿಕ್ರಾಂತ್ ಅಂಡಮಾನ್​​ ನಿಕೋಬಾರ್​ಗೆ ಹೋಗಿತ್ತು. ಅತ್ತ ಪಾಕಿಸ್ತಾನದ ಕಡೆಯಿಂದ ಗಾಜಿ ಸಬ್​​ಮರೀನ್ ಬರ್ತಾ ಇದ್ರಿಂದ ನಮ್ಮ ಖದೇರಿ ಸಬ್​ಮರೀನ್​ನನ್ನ ಕೂಡ ಐಎನ್​ಎಸ್​ ವಿಕ್ರಾಂತ್​​ಗೆ ಎಸ್ಕಾರ್ಟ್ ಆಗಿ ಕಳುಹಿಸಕೊಡಲಾಗಿತ್ತು. ಸಮುದ್ರಾದಳದಲ್ಲಿ ಶತ್ರು ಸಬ್​​ಮರೀನ್​ನ್ನ ನಮ್ಮ ಸಬ್​ಮರೀನ್ ಮೂಲಕವೇ ಎದುರಿಸಬೇಕಾಗಿತ್ತು. ಹೀಗಾಗಿ ಎಲ್ಲಾ ರೀತಿಯ ಭದ್ರತೆಯೊಂದಿಗೆ ಐಎನ್​ಎಸ್ ವಿಕ್ರಾಂತ್​ನ್ನ ಅಂಡಮಾನ್​ಗೆ ಸ್ಥಳಾಂತರಿಸಲಾಯ್ತು. ಇಲ್ಲಿ ಇನ್ನೊಂದು ಇಂಟ್ರೆಸ್ಟಿಂಗ್ ಸಂಗತಿ ಕೂಡ ಇದೆ. ಈ ನಾಲ್ಕು ಯುದ್ಧ ಹಡಗು ಮತ್ತು ಸಬ್​ಮರೀನ್ ಕೇವಲ ಅಂಡಮಾನ್​ ನಿಕೋಬಾರ್​ಗೆ ಹೋಗಿ ಅಲ್ಲೇನು ಠಿಕಾಣಿ ಹೂಡಿಲ್ಲ. ಅತ್ತ ಪಾಕ್​ ಸಬ್​ಮರೀನ್ ಭಾರತದತ್ತ ಬರ್ತಿದ್ರೆ, ನಮ್ಮ ನಾಲ್ಕು ಹಡಗು ಮತ್ತು ಸಬ್​ಮರೀನ್ ಆಗಿನ ಪೂರ್ವ ಪಾಕಿಸ್ತಾನ ಅಂದ್ರೆ ಈಗಿನ ಬಾಂಗ್ಲಾದೇಶದತ್ತ ನುಗ್ಗಿತ್ತು. ನಿಮಗೆ ಗೊತ್ತಿರೋ ಹಾಗೆ ಆಗ ಬಾಂಗ್ಲಾದೇಶ ದೇಶವಾಗಿರಲಿಲ್ಲ. ಆ ಭಾಗ ಪಾಕಿಸ್ತಾನದ ವಶದಲ್ಲೇ ಇತ್ತು. ಐಎನ್​ಎಸ್ ವಿಕ್ರಾಂತ್ ಸೇರಿದಂತೆ ಭಾರತೀಯ ಸೇನೆಯ ಈ ನಾಲ್ಕು ಯುದ್ಧ ಹಡಗುಗಳು ಚಿತ್ತಗಾಂಗ್ ಮತ್ತು ಕಾಕ್ಸ್​ ಬಜಾರ್​ಗೆ ನುಗ್ಗಿ ಅಲ್ಲಿದ್ದ ಪಾಕ್​ ಸೇನಾ ನೆಲೆಗಳ ಮೇಲೆ ದಾಳಿ ನಡೆಸ್ತಾವೆ. ಭಾರತದ ಸಬ್​ಮರೀನ್​ ಮತ್ತು ಯುದ್ಧ ಹಡಗುಗಳು ಬರ್ತಾ ಇರೋದನ್ನ ಪತ್ತೆ ಹಚ್ಚುವಲ್ಲಿ ಪಾಕಿಸ್ತಾನ ಇಂಟೆಲಿಜೆನ್ಸ್ ಏಜೆನ್ಸಿ ಕಂಪ್ಲೀಟ್ ಫೇಲ್ ಆಗಿದ್ವು. ಇಂಥದ್ದೊಂದು ದಾಳಿಯಾಗಬಹುದು ಅಂತಾ ಅವರು ಕನಸು ಮನಸಲ್ಲೂ ಊಹಿಸಿರಲಿಲ್ಲ. ಇತ್ತ ಐಎನ್​ಎಸ್ ವಿಕ್ರಾಂತ್ ತನ್ನ ಪಡೆಯೊಂದಿಗೆ ಪೂರ್ವ ಪಾಕಿಸ್ತಾನವನ್ನ ಪುಡಿ ಪುಡಿ ಮಅಡ್ತಾ ಇದ್ರೆ, ಅತ್ತ ರಜಪೂತ್ ಹಡಗು ವಿಶಾಖಪಟ್ಟಣಕ್ಕೆ ಬಂದಿದ್ದ ಪಾಕ್ ಸಬ್​ಮರೀನ್​​ನನ್ನ ಸಮುದ್ರದೊಳಗೇ ಉಡಾಯಿಸಿಬಿಟ್ಟಿತ್ತು. ಐಎನ್​​ಎಸ್ ವಿಕ್ರಾಂತ್​ನ್ನ ನಾಶ ಮಾಡೋಕೆ ಕಳುಹಿಸಿದ್ದ ಪಾಕಿಸ್ತಾನ ತನ್ನ ಸಬ್​ಮರೀನ್​ನನ್ನ ಕಳೆದುಕೊಂಡಿದ್ದಷ್ಟೇ ಅಲ್ಲ, ತನ್ನ ಹಿಡಿತದಲ್ಲಿದ್ದ ಪೂರ್ವ ಪಾಕಿಸ್ತಾನ ಅಂದ್ರೆ ಈಗಿನ ಬಾಂಗ್ಲಾದೇಶವನ್ನೂ ಕಳೆದುಕೊಂಡಿತ್ತು.

ಪಾಕಿಸ್ತಾನದ ದಾರಿ ತಪ್ಪಿಸೋಕೆ ಭಾರತೀಯ ಸೇನೆ ಇನ್ನೊಂದು ಮಾಸ್ಟರ್​ ಪ್ಲ್ಯಾನ್ ಕೂಡ ಮಾಡಿತ್ತು. ವಿಶಾಖಪಟ್ಟಣಕ್ಕೆ ಬಂದಿದ್ದ ಐಎನ್​ಎಸ್ ರಜಪೂತ್ ಹಡಗಿನ ಸಿಬ್ಬಂದಿ ಐಎನ್​ಎಸ್ ವಿಕ್ರಾಂತ್​​ನ ರೇಡಿಯೋ ಫ್ರೀಕ್ವೆನ್ಸಿಯನ್ನೇ ಕಮ್ಯುನಿಕೇಶನ್​​ಗೆ ಬಳಸಿಕೊಂಡಿದ್ರು. ಹಾಗೆಯೇ ಐಎನ್​ಎಸ್​ ವಿಕ್ರಾಂತ್​​ನಲ್ಲಿ ನಿಯೋಜಿಸುವ ಸೈನಿಕರ ಸಂಖ್ಯೆ, ವಿಕ್ರಾಂತ್​ನ ಸಿಬ್ಬಂದಿಗೆ ಬೇಕಾಗುವಷ್ಟು ಆಹಾರ ಸೇರಿದಂತೆ ಇತರೆ ವಸ್ತುಗಳ ಬೇಡಿಕೆಯನ್ನ ಐಎನ್​ಎಸ್ ರಜಪೂತ್ ಇಟ್ಟಿತ್ತು. ಅಂದ್ರೆ ಇವೆಲ್ಲವೂ ಐಎನ್​ಎಸ್ ವಿಕ್ರಾಂತ್​​ನ ರೇಡಿಯೋ ಫ್ರೀಕ್ವೆನ್ಸಿಯ ಮೂಲಕವೇ ಕಮ್ಯುನಿಕೇಟ್ ಆಗಿತ್ತು. ಹಾಗೆಯೇ ವಿಶಾಖಪಟ್ಟಣದಲ್ಲೇ ಎಲ್ಲಾ ವಸ್ತುಗಳನ್ನ ಖರೀದಿಸಲಾಗಿತ್ತು. ಈ ಎಲ್ಲಾ ವಿಚಾರಗಳನ್ನ ಪಾಕ್ ಗೂಢಾಚಾರಿಗಳು ಪಾಕಿಸ್ತಾನ ಸೇನೆಗೆ ಮಾಹಿತಿ ನೀಡಿದ್ರು. ಹೀಗಾಗಿ ಐಎನ್​ಎಸ್ ವಿಕ್ರಾಂತ್ ವಿಶಾಖಪಟ್ಟಣಂನಲ್ಲೇ ಇದೆ ಅನ್ನೋ ನಿರ್ಧಾರಕ್ಕೆ ಪಾಕ್ ಸೇನೆ ಬಂದಿತ್ತು. ಈ ಮೂಲಕ ಆರಂಭದಲ್ಲೇ ಪಾಕಿಸ್ತಾನ ಕಂಪ್ಲೀಟ್ ಆಗಿ ಭಾರತೀಯ ಸೇನೆಯ ಟ್ರ್ಯಾಪ್​ಗೆ ಬಿದ್ದಿತ್ತು. ಹೀಗೆ ಸಮುದ್ರದಲ್ಲಿ ಚಕ್ರವ್ಯೂಹ ಹೆಣೆದೇ 1971ರ ಡಿಸೆಂಬರ್​​ 3ರಂದು ಭಾರತೀಯ ಸೇನೆ ಪಾಕ್​ ಸಬ್​ಮರೀನ್​ನನ್ನ ಸಾಗರದಾಳದಲ್ಲೇ ಬ್ಲಾಸ್ಟ್ ಮಾಡಿದೆ. ಆ ಗಾಜಿ ಸಬ್​ಮರೀನ್​ನ ಇನ್ನೊಂದಷ್ಟು ಅವಶೇಷ ಈಗ ವಿಶಾಖಪಟ್ಟಣಂನ ವೈಜಾಗ್ ಸಮುದ್ರ ಭಾಗದಲ್ಲಿ ಪತ್ತೆಯಾಗಿದೆ.

Sulekha