ಸುಮಲತಾಗೆ ಬಿಜೆಪಿ ಟಿಕೆಟ್ ಮಿಸ್ ಆಯ್ತಾ..?- ಮಂಡ್ಯದಲ್ಲಿ ಸ್ಪರ್ಧೆ ಖಂಡಿತಾ ಎಂದು ಹಠ ಮಾಡಿದ್ಯಾಕೆ ಸಂಸದೆ
ಲೋಕಸಭಾ ಚುನಾವಣೆಗೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದ ಜೆಡಿಎಸ್ ಪಟ್ಟು ಬಿಡದೆ ಕೊನೆಗೂ ಮಂಡ್ಯ ಕ್ಷೇತ್ರ ಗಿಟ್ಟಿಸಿಕೊಂಡಿದೆ. ಕಳೆದ ಬಾರಿ ಕ್ಷೇತ್ರದಲ್ಲಿ ಸೋಲು ಕಂಡಿದ್ದ ಜೆಡಿಎಸ್ ಈಗ ಅದೇ ನೆಲದಲ್ಲಿ ಗೆದ್ದು ಬೀಗಬೇಕೆಂದು ಪಣ ತೊಟ್ಟಿದೆ. ಆದ್ರೆ ಜೆಡಿಎಸ್ಗೆ ಇರೋ ಅತಿದೊಡ್ಡ ಸವಾಲು ಅಂದ್ರೆ ಅದು ಸುಮಲತಾ ಅಂಬರೀಶ್. ಬಿಜೆಪಿ ಟಿಕೆಟ್ ನಿರೀಕ್ಷೆಯಲ್ಲಿದ್ದ ಸುಮಲತಾ ಇದೀಗ ಜೆಡಿಎಸ್ ಪಾಲಿಗೆ ಮತ್ತೊಮ್ಮೆ ಸಿಂಹಸ್ವಪ್ನವಾಗೋ ಎಲ್ಲಾ ಸಾಧ್ಯತೆಗಳೂ ಇವೆ. ಹಾಗಾದ್ರೆ ಸುಮಲತಾಗೆ ಬಿಜೆಪಿ ಟಿಕೆಟ್ ಮಿಸ್ ಆಯ್ತಾ..? ಸಂಸದೆಯ ನಡೆ ಏನು..? ಮುಂದಿರುವ ಆಯ್ಕೆಗಳೇನು..? ಎಂಬ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಮಂಡ್ಯದಲ್ಲಿ ಪಾರುಪತ್ಯ ಸಾಧಿಸಲು ಕಾಂಗ್ರೆಸ್ ರಣತಂತ್ರ – ಸುಮಲತಾ, ಹೆಚ್‌ಡಿಕೆಗೆ ಕಾದಿದ್ಯಾ ಶಾಕ್?
2019ರ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದಿದ್ದ ಸುಮಲತಾ ಅಂಬರೀಶ್ ಈ ಬಾರಿ ಬಿಜೆಪಿ ಟಿಕೆಟ್ ನಿರೀಕ್ಷೆಯಲ್ಲಿದ್ದರು. ಆದ್ರೆ ಮೈತ್ರಿಯಿಂದಾಗಿ ಮಂಡ್ಯ ಕ್ಷೇತ್ರವನ್ನ ಬಿಜೆಪಿ ಪಕ್ಷ ಜೆಡಿಎಸ್ಗೆ ಬಿಟ್ಟುಕೊಟ್ಟಿದೆ. ಈ ಬಗ್ಗೆ ಅಧಿಕೃತ ಘೋಷಣೆಯೊಂದೇ ಬಾಕಿ ಇದೆ. ಆದ್ರೂ ತಲೆಕೆಡಿಸಿಕೊಳ್ಳದ ಸುಮಲತಾ ಅಂಬರೀಶ್ ಮಂಡ್ಯದಲ್ಲಿ ಫುಲ್ ಌಕ್ಟೀವ್ ಆಗಿದ್ದಾರೆ. ದಿಶಾ ಸಭೆ ವೇಳೆ ಮಾತನಾಡಿರೋ ಸುಮಲತಾ ತಮಗೆ ಜೀವ ಬೆದರಿಕೆ ಕರೆಗಳು ಬರುತ್ತಿದ್ದವು ಎಂದಿದ್ದಾರೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ, ಕೆಆರ್ ಎಸ್ ಉಳಿವಿಗಾಗಿ ಹೋರಾಡುತ್ತಿದ್ದಾಗ ನನಗೆ ಸಾಕಷ್ಟು ಜೀವ ಬೆದರಿಕೆ ಕರೆಗಳು ಬರುತ್ತಿದ್ದವು. ಆದರೂ ನನ್ನ ಹೋರಾಟದಿಂದ ನಾನು ಹಿಂದೆ ಸರಿಯಲಿಲ್ಲ. ಮಂಡ್ಯ ಜಿಲ್ಲೆ ಜನರ ಜೀವನ ನನಗೆ ಮುಖ್ಯ ಎಂದಿದ್ದಾರೆ. ಈ ಮೂಲಕ ಮಂಡ್ಯ ಬಿಟ್ಟುಕೊಡೋ ಮಾತೇ ಇಲ್ಲ ಎನ್ನುವ ಮೂಲಕ ಮೈತ್ರಿ ಪಕ್ಷಗಳಿಗೆ ತಿರುಗೇಟು ಕೊಟ್ಟಿದ್ದಾರೆ. ಜೊತೆಗೆ ಇನ್ನೂ ಬಿಜೆಪಿ ಟಿಕೆಟ್ ಸಿಕ್ಕೇ ಸಿಗುತ್ತೆ ಎಂಬ ವಿಶ್ವಾಸದಲ್ಲಿದ್ದಾರೆ.
ಮತ್ತೊಮ್ಮೆ ಮಂಡ್ಯ ಕ್ಷೇತ್ರದಿಂದಲೇ ಸ್ಪರ್ಧಿಸಬೇಕೆಂದು ಸುಮಲತಾ ಹಠಕ್ಕೆ ಬಿದ್ದಿದ್ದಾರೆ. ಮಂಡ್ಯ ಕ್ಷೇತ್ರ ಉಳಿಸಿಕೊಳ್ಳಬೇಕು. ಬಿಜೆಪಿಗೆ ಮಂಡ್ಯ ಕ್ಷೇತ್ರದ ಟಿಕೆಟ್ ಸಿಗಬೇಕೆಂಬುದು ನನ್ನ ಹೋರಾಟ. ಟಿಕೆಟ್ ಘೋಷಣೆಯಾಗುವವರೆಗೂ ಅಂತೆಕಂತೆಗಳು ಕೇಳಿಬರುತ್ತಲೇ ಇರುತ್ತವೆ. ನೋಡೋಣ ಬಿಜೆಪಿ ಹೈಕಮಾಂಡ್ ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ. ನನಗೆ ಟಿಕೆಟ್ ಸಿಗುವ ವಿಶ್ವಾಸವಿದೆ. ನಾನು ಈ ಬಾರಿ ಕೂಡ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಂಡಿತ ಎಂದು ಸಂಸದೆ ಸುಮಲತಾ ಅಂಬರೀಷ್ ಪುನರುಚ್ಛರಿಸಿದ್ದಾರೆ. ಜೆಡಿಎಸ್ ನಾಯಕರು ಬಿಜೆಪಿ ಹೈಕಮಾಂಡ್ ಭೇಟಿ ಮಾಡಿ ತಮ್ಮ ಪರವಾಗಿ ಮಾತನಾಡಿ ತಮಗೆ ಟಿಕೆಟ್ ಸಿಗಬೇಕೆಂದು ಕೇಳುವುದು ಸಹಜ. ನನಗಂತೂ ಮಂಡ್ಯ ಕ್ಷೇತ್ರದ ಟಿಕೆಟ್ ಬಿಜೆಪಿ ಪಾಲಾಗುತ್ತದೆ ಎಂಬ ನಂಬಿಕೆಯಿದೆ. ನನಗೆ ಬೇರೆ ಕ್ಷೇತ್ರಗಳಲ್ಲಿ ಟಿಕೆಟ್ ಕೇಳುವುದು ಕಷ್ಟವೇನಲ್ಲ. ನನ್ನ ಮುಂದೆ ಹಲವು ಆಯ್ಕೆಗಳಿವೆ. ಆದರೆ ನಾನು ಮಂಡ್ಯ ಬಿಟ್ಟು ಬೇರೆ ಕಡೆಗೆ ಹೋಗುವ ಪ್ರಶ್ನೆಯೇ ಇಲ್ಲ. ನೋಡೋಣ ಏನಾಗುತ್ತದೆ ಎಂದು ತಮ್ಮ ಮುಂದಿನ ನಡೆಯ ಬಗ್ಗೆ ಮಾರ್ಮಿಕವಾಗಿ ನುಡಿದಿದ್ದಾರೆ.
ಮಂಡ್ಯ ಮೈತ್ರಿ ಟಿಕೆಟ್ ಜೆಡಿಎಸ್ ಪಾಲಾಗಿರೋದು ಗೊತ್ತಿದ್ರೂ ಸುಮಲತಾ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಅಧಿಕೃತವಾಗಿ ಘೋಷಣೆ ಆಗುವವರೆಗೂ ಸೈಲೆಂಟಾಗೇ ಇರಲು ಪ್ಲ್ಯಾನ್ ಮಾಡಿದ್ದಾರೆ. ಅಲ್ದೇ ಮುಂದೆ ಏನು ಮಾಡಬೇಕೆಂಬ ಬಗ್ಗೆ ತಮ್ಮ ಆಪ್ತರು, ಬೆಂಬಲಿಗರ ಜೊತೆ ಈಗಾಗಲೇ ಚರ್ಚೆಗಳನ್ನೂ ನಡೆಸಿದ್ದಾರೆ. ಮಂಡ್ಯ ಜೆಡಿಎಸ್ಗೇ ಎಂದು ಅಧಿಕೃತವಾದ್ರೆ ಮತ್ತೊಮ್ಮೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸೋಕೆ ವೇದಿಕೆಯೂ ಸಜ್ಜಾಗ್ತಿದೆ. ಒಂದ್ಕಡೆ ಸುಮಲತಾ ತೆರೆಮರೆಯಲ್ಲೇ ಸಿದ್ಧತೆ ಮಾಡಿಕೊಳ್ತಿದ್ರೆ ಅತ್ತ ಜೆಡಿಎಸ್ ಕೂಡ ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕಿಳಿಸೋ ತಯಾರಿಯಲ್ಲಿದೆ. ನಿಖಿಲ್ ಕುಮಾರಸ್ವಾಮಿಯವ್ರೇ ಈ ಬಗ್ಗೆ ಮಾತನಾಡಿದ್ದು ಕೋಲಾರ, ಮಂಡ್ಯ, ಹಾಸನ ಕ್ಷೇತ್ರದಲ್ಲಿ ಬಿಜೆಪಿಗಿಂತ ನಾವೇ ಸ್ಟ್ರಾಂಗ್ ಎಂದಿದ್ದಾರೆ.
ಮಂಡ್ಯ ಮತ್ತು ಹಾಸನದಲ್ಲಿ ಜೆಡಿಎಸ್ ಪ್ರಾಬಲ್ಯವಿದ್ದರೂ ಬಿಜೆಪಿ ನಾಯಕರು ಎರಡೂ ಕ್ಷೇತ್ರಗಳ ವಿಚಾರವಾಗಿ ಕ್ಯಾತೆ ತೆಗೆದಿದ್ದಾರೆ. ಮಂಡ್ಯ, ಹಾಸನ ಟಿಕೆಟ್ಗೆ ಬೇಡಿಕೆ ಇಟ್ಟಿದ್ದಾರೆ. ಇದಕ್ಕೆ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ. ಕಳೆದ ವಿಧಾನಸಭೆ ಚುನಾವಣೆ ವೇಳೆ ತೆಗೆದುಕೊಂಡ ವೋಟ್ ಶೇರಿಂಗ್ ನೋಡಿದಾಗ, ಬಿಜೆಪಿಗಿಂತ 3 ಪಟ್ಟು ವೋಟ್ಗಳು ಜೆಡಿಎಸ್ ಹೆಚ್ಚು ಬಂದಿವೆ. ಕೋಲಾರ, ಮಂಡ್ಯ, ಹಾಸನದಲ್ಲಿ ಜೆಡಿಎಸ್ ಪರ ಅತಿಹೆಚ್ಚು ಮತದಾನ ಆಗಿದೆ. ಮುಂದಿನ ದಿನಗಳಲ್ಲಿ ಸೀಟು ಶೇರಿಂಗ್ ಮಾತುಕತೆ ಆಗುತ್ತದೆ, ಕಾರ್ಯಕರ್ತರಲ್ಲಿ ಯಾವುದೇ ಗೊಂದಲ ಇಲ್ಲ, ಸಣ್ಣ ಪುಟ್ಟ ಸಮಸ್ಯೆ ಬಗೆಹರಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇನ್ನು ಮಂಡ್ಯ ಕ್ಷೇತ್ರದಲ್ಲಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸ್ಪರ್ಧೆ ಮಾಡಬೇಕು ಎಂದು ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ. ನಿಖಿಲ್ ಸ್ಪರ್ಧೆಗೂ ಒತ್ತಡ ಹೆಚ್ಚಾಗುತ್ತಿದೆ. ಈ ಎರಡು ಹೆಸರುಗಳ ನಡುವೆ ಡಾ.ಮಂಜುನಾಥ್ ಅವರನ್ನು ಮಂಡ್ಯದಿಂದ ನಿಲ್ಲಿಸಬೇಕು ಎನ್ನಲಾಗುತ್ತಿದೆ. ಒಟ್ಟಾರೆ ಮಂಡ್ಯ ಕ್ಷೇತ್ರ ಜೆಡಿಎಸ್ಗೆ ಸಿಕ್ಕರೂ ಅಭ್ಯರ್ಥಿ ಆಯ್ಕೆಯೇ ದೊಡ್ಡ ಸವಾಲಾಗಿದೆ. ಜೊತೆಗೆ ಸುಮಲತಾ ಮತ್ತೊಮ್ಮೆ ಮಂಡ್ಯದಿಂದಲೇ ಸ್ಪರ್ಧೆ ಎನ್ನುತ್ತಿರೋದು ಜೆಡಿಎಸ್ಗೆ ತಲೆನೋವಾಗಿ ಪರಿಣಮಿಸಿದೆ.