ಅನ್ನದಾತರ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗುವ ಭೀತಿ – 15 ಜಿಲ್ಲೆಗಳಲ್ಲಿ 144 ಸೆಕ್ಷನ್ ಜಾರಿ, ಇಂಟರ್ನೆಟ್ ಸ್ಥಗಿತ..!
ಎರಡು ದಿನಗಳ ಕಾಲ ಬ್ರೇಕ್ ತೆಗೆದುಕೊಂಡಿದ್ದ ಅನ್ನದಾತರು ಶನಿವಾರದಿಂದ ಮತ್ತೆ ಪ್ರತಿಭಟನೆ ಆರಂಭಿಸಿದ್ದಾರೆ. ದಿನದಿಂದ ದಿನಕ್ಕೆ ಈ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದು, ಅನ್ನದಾತರ ಆಕ್ರೋಶದ ಕಿಡಿ ಸ್ಫೋಟಗೊಳ್ಳುತ್ತಿದೆ. ಇದೀಗ ಈ ಪ್ರತಿಭಟನೆ ರಾಷ್ಟ್ರ ರಾಜಧಾನಿಗೆ ಸಂಕಷ್ಟ ಉಂಟುಮಾಡದಂತೆ ಪೊಲೀಸರು ಹೈಅಲರ್ಟ್ ಆಗಿದ್ದಾರೆ.
ಇದನ್ನೂ ಓದಿ: ಮೆಟ್ರೋ ಪ್ರಯಾಣಿಕರಿಗೆ ಗುಡ್ನ್ಯೂಸ್! – ಮೆಜೆಸ್ಟಿಕ್ – ವೈಟ್ಫೀಲ್ಡ್ ನಡುವೆ ಮೂರು ನಿಮಿಷಕ್ಕೊಮ್ಮೆ ಮೆಟ್ರೋ ಸೇವೆ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅನ್ನದಾತರು ಹೊತ್ತಿಸಿದ್ದ ಪ್ರತಿಭಟನೆ ಆಕ್ರೋಶ ತೀವ್ರ ಸ್ವರೂಪ ಪಡೆದುಕೊಳ್ತಿದೆ. ಅನ್ನದಾತರ ದೆಹಲಿ ಚಲೋ ಪ್ರತಿಭಟನೆ ಶನಿವಾರ ಮತ್ತಷ್ಟು ಕಾವು ಪಡೆಯೋ ಸಾಧ್ಯತೆ ಇದೆ. ಯುವ ರೈತನ ಸಾವಿನ ಬಳಿ ಕಳೆದ ಎರಡು ದಿನಗಳಿಂದ ತಣ್ಣಗಾಗಿದ್ದ ಪ್ರತಿಭಟನಾ ಕಹಳೆ ಮತ್ತೆ ಮೊಳಗಲು ಸಜ್ಜಾಗಿದೆ. ಇಂದು ಮತ್ತೆ ದೆಹಲಿಯತ್ತ ಲಗ್ಗೆ ಇಡಲು ಅನ್ನದಾತರು ಅಣಿಯಾಗಿದ್ದಾರೆ.
ಹರಿಯಾಣ ಮತ್ತು ಪಂಜಾಬ್ ಗಡಿ ಭಾಗದಲ್ಲಿ ಉದ್ವಿಗ್ನತೆಯ ವಾತಾವರಣ ಸೃಷ್ಟಿಯಾಗುವ ಸಾಧ್ಯತೆ ಇದೆ. ಹೀಗಾಗಿ ಹರಿಯಾಣ ಸರ್ಕಾರ ಯಾವುದೇ ತಪ್ಪು ಸಂದೇಶ ರವಾನೆ ಆಗಬಾರದು ಎಂಬ ಹಿನ್ನಲೆ ರಾಜ್ಯದ ಏಳು ಜಿಲ್ಲೆಗಳಲ್ಲಿ ಇಂಟರ್ನೆಟ್ ಸಂಪೂರ್ಣ ಸ್ಥಗಿತಗೊಳಿಸಿದೆ. ಜೊತೆಗೆ 15 ಜಿಲ್ಲೆಗಳಲ್ಲಿ 144 ಸೆಕ್ಷನ್ ಸಹ ವಿಧಿಸಲಾಗಿದೆ.
ಹರಿಯಾಣದ ಹಿಸಾರ್ನ ಖೇಡಿ ಚ್ವಾಪಾಟಾದಲ್ಲಿ ಪ್ರತಿಭಟನಾ ನಿರತ ರೈತರು ಮತ್ತು ಪೊಲೀಸರ ನಡುವೆ ನಡೆದ ಸಂಘರ್ಷದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಗಾಯಗೊಂಡಿದ್ದಾರೆ. ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆಯಲ್ಲಿ ಪೊಲೀಸರು ಅಶ್ರುವಾಯು ಶೆಲ್ಗಳನ್ನ ಸಿಡಿಸಿದ್ದಾರೆ, ಈ ವೇಳೆ ಪೊಲೀಸರು ಲಾಠಿ ಚಾರ್ಜ್ ಸಹ ನಡೆಸಿದ್ದು, ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದಾರೆ.. ಮೆರವಣಿಗೆ ನಡೆಸುತ್ತಿದ್ದ ರೈತರನ್ನು ಪಂಜಾಬ್ ಗಡಿಯಲ್ಲಿರುವ ಖಾನೌಯಲ್ಲಿ ತಡೆಯೊಡ್ಡಿದ್ದರಿಂದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ.