ಜೆಡಿಎಸ್ ಗೆ ಮೂರೇ ಕ್ಷೇತ್ರ! – ಮಂಡ್ಯ, ಹಾಸನ, ಕೋಲಾರ ಟಿಕೆಟ್ ಜೆಡಿಎಸ್ ಗೆ ನೀಡುವುದು ಬಹುತೇಕ ಫಿಕ್ಸ್

ಜೆಡಿಎಸ್ ಗೆ ಮೂರೇ ಕ್ಷೇತ್ರ! – ಮಂಡ್ಯ, ಹಾಸನ, ಕೋಲಾರ ಟಿಕೆಟ್ ಜೆಡಿಎಸ್ ಗೆ ನೀಡುವುದು ಬಹುತೇಕ ಫಿಕ್ಸ್

ವಿಧಾನಸಭಾ ಚುನಾವಣೆಯ ಹೀನಾಯ ಸೋಲಿನ ಸೇಡನ್ನು ಲೋಕಸಭೆ ಎಲೆಕ್ಷನ್​ನಲ್ಲಿ ತೀರಿಸಿಕೊಳ್ಳಲು ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಪಣ ತೊಟ್ಟಿವೆ. ಅದಕ್ಕಾಗೇ ರಾಜ್ಯದಲ್ಲಿ ಮೈತ್ರಿ ಮಾಡಿಕೊಂಡು ಕಾಂಗ್ರೆಸ್ ವಿರುದ್ಧ ಒಗ್ಗಟ್ಟಿನ ಹೋರಾಟಕ್ಕೆ ಮುಂದಾಗಿದ್ದಾರೆ. ಆದ್ರೆ ಮೈತ್ರಿ ನಾಯಕರಿಗೆ ಸೀಟು ಹಂಚಿಕೆಯೇ ಕಗ್ಗಂಟಾಗಿದ್ದು, ಬಿಜೆಪಿ ಕೊಡ್ತಿಲ್ಲ ಜೆಡಿಎಸ್ ಬಿಡ್ತಿಲ್ಲ ಅನ್ನುವಂತಾಗಿದೆ. ಬುಧವಾರವಷ್ಟೇ ಅಮಿತ್ ಶಾ ಬುಲಾವ್ ಹಿನ್ನೆಲೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹಾಗೂ ಪುತ್ರ ನಿಖಿಲ್ ಕುಮಾರಸ್ವಾಮಿ ದೆಹಲಿಗೆ ದೌಡಾಯಿಸಿದ್ದರು. ಆದ್ರೆ ಮಾತುಕತೆ ವೇಳೆ ಅಮಿತ್ ಶಾ ಜೆಡಿಎಸ್ ನಾಯಕರಿಗೆ ಶಾಕ್ ಕೊಟ್ಟಿದ್ದಾರೆ. ಹಾಗಾದ್ರೆ ಚರ್ಚೆ ವೇಳೆ ಏನಾಯ್ತು..? ಜೆಡಿಎಸ್ ಗೆ ಎಷ್ಟು ಸೀಟ್..? ಮಂಡ್ಯ ಯಾರ ಪಾಲಾಯ್ತು..? ಬಿಜೆಪಿ ಎಷ್ಟು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತೆ..? ಈ ಬಗೆಗಿನ ಸಂಪೂರ್ಣ ವಿವರಣೆ ಇಲ್ಲಿದೆ.

ಇದನ್ನೂ ಓದಿ: ಮಂಡ್ಯದಲ್ಲಿ ಪಾರುಪತ್ಯ ಸಾಧಿಸಲು ಕಾಂಗ್ರೆಸ್ ರಣತಂತ್ರ – ಸುಮಲತಾ, ಹೆಚ್‌ಡಿಕೆಗೆ ಕಾದಿದ್ಯಾ ಶಾಕ್?

ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಮತ್ತು ಪುತ್ರ ನಿಖಿಲ್‌ ಕುಮಾರಸ್ವಾಮಿ ಕೇಂದ್ರ ಗೃಹ ಸಚಿವ ಅಮಿತ್‌ ಶಾಅವರನ್ನು ಭೇಟಿ ಮಾಡಿದ್ದಾರೆ. ಭೇಟಿ ವೇಳೆ ಡಾ.ಸಿ.ಎನ್ ಮಂಜುನಾಥ್ ಅವರ ಸ್ಪರ್ಧೆ ಬಗ್ಗೆಯೂ ಪ್ರಸ್ತಾಪ ಇಟ್ಟಿದ್ದಾರೆ ಎನ್ನಲಾಗಿದೆ. ಡಾ.ಸಿ.ಎನ್ ಮಂಜುನಾಥ್ ಅವರು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಮಾಡುವ ಬಗ್ಗೆ ಮಾತುಕತೆ ಕೂಡ ನಡೆದಿದೆ. ಆದರೆ ಇಲ್ಲಿಯವರೆಗೂ ಡಾ. ಮಂಜುನಾಥ್‌ ಅವರು ರಾಜಕೀಯಕ್ಕೆ ಇಳಿಯುವ ಬಗ್ಗೆ ಯಾವುದೇ ಖಚಿತ ಹೇಳಿಕೆ ನೀಡಿಲ್ಲ.  ಹೀಗಿದ್ರೂ ಜೆಡಿಎಸ್ ನಾಯಕರು ಮನವೊಲಿಕೆ ಮಾಡುವುದಾಗಿ ಭರವಸೆ ನೀಡಿದ್ದಾರೆ.

ಕೇಂದ್ರ ಗೃಹಸಚಿವ ಅಮಿತ್ ಶಾ ಸೂಚನೆ ಮೇರೆಗೆ ಹೆಚ್.ಡಿ ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ದೆಹಲಿಗೆ ತೆರಳಿದ್ದರು. ಅಮಿಶ್ ಶಾ ಅವರೊಂದಿಗೆ ಸುಮಾರು 20 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ಈಗಾಗಲೇ ಸೋತಿರುವ ಮಂಡ್ಯ ಕ್ಷೇತ್ರವನ್ನ ಮರಳಿ ಪಡೆಯುವ ನಿಟ್ಟಿನಲ್ಲಿ ಪಟ್ಟು ಹಿಡಿದಿದ್ದ ದಳಪತಿಗಳು ಮಂಡ್ಯ ವಿಚಾರದಲ್ಲಿ ಕೊನೆಗೂ ಮೇಲುಗೈ ಸಾಧಿಸಿದ್ದಾರೆ. ಮಂಡ್ಯ, ಹಾಸನ, ಕೋಲಾರ ಟಿಕೆಟ್ ಜೆಡಿಎಸ್​ಗೆ ನೀಡುವುದು ಫಿಕ್ಸ್‌ ಎನ್ನಲಾಗಿದೆ. ಹಾಗೇ ತುಮಕೂರು, ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರಗಳ ಮೇಲೂ ಜೆಡಿಎಸ್ ಕಣ್ಣಿಟ್ಟಿದೆ. ಆದ್ರೆ ಈ ಜಿಲ್ಲೆಗಳ ಬಗ್ಗೆ ಮತ್ತೊಮ್ಮೆ ಚರ್ಚೆ ಮಾಡೋಣ ಎಂದು ಬಿಜೆಪಿ ಹೈಕಮಾಂಡ್ ನಾಯಕರು ಕುಮಾರಸ್ವಾಮಿ ಅವರಿಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ರಾಜ್ಯದ ಒಟ್ಟು 28 ಕ್ಷೇತ್ರಗಳ ಪೈಕಿ 25 ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಮೂರು ಕ್ಷೇತ್ರಗಳು ಜೆಡಿಎಸ್‌ ಗೆ ಸಿಗಲಿದೆ ಎಂದು ಹೇಳಲಾಗಿದೆ. ಚರ್ಚೆ ವೇಳೆ ಸೀಟು ಹಂಚಿಕೆ ಫೈನಲ್ ಆಗಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಎಂದು ಹೇಳಲಾಗುತ್ತಿದೆ.

ಇನ್ನು ಅಮಿತ್ ಶಾ ಜೊತೆ ಸೀಟು ಹಂಚಿಕೆ ವೇಳೆ ಹೆಚ್.ಡಿ ಕುಮಾರಸ್ವಾಮಿ ಅವರು ಅಮಿತ್ ಶಾ ಬಳಿ ಬೇಸರ ಹೊರಹಾಕಿದ್ದಾರೆ. ನಾವು ಎನ್​ಡಿಎ ಮೈತ್ರಿ‌ಕೂಟ ಸೇರಿರೋದು ಕಾಂಗ್ರೆಸ್​ನ ಸೋಲಿಸಬೇಕೆಂದು. ಆದರೆ ಮಂಡ್ಯ ಮತ್ತು ಹಾಸನದಲ್ಲಿ ನಿಮ್ಮ ಪಕ್ಷದ ಶಾಸಕರೇ ಭಿನ್ನಾಭಿಪ್ರಾಯ ವ್ಯಕ್ತಪಡಿಸ್ತಿದ್ದಾರೆ ಎಂದು ಹೆಚ್​ಡಿಕೆ ದೂರು ಹೇಳಿದ್ದಾರೆ. ಈ ವೇಳೆ ಅಮಿತ್ ಶಾ ತಮ್ಮ ಪಕ್ಷದ ನಾಯಕರ ಜೊತೆ ಮಾತನಾಡುವುದಾಗಿ ತಿಳಿಸಿದ್ದಾರೆ. ಸದ್ಯ ಮಾಹಿಗಳತಿ ಪ್ರಕಾರ ದಳಪತಿಗಳಿಗೆ ಸಿಕ್ಕಿರೋದು ಮೂರು ಕ್ಷೇತ್ರ ಆದ್ರೂ ಈ ಮೂರೂ ಕ್ಷೇತ್ರಗಳಲ್ಲಿ ಗೆಲುವು ಸುಲಭವಾಗಿಲ್ಲ.

ಕ್ಷೇತ್ರ ಮೂರು.. ಸಮಸ್ಯೆ ನೂರಾರು!

ಪ್ರಾಥಮಿಕ ಮಾಹಿತಿ ಪ್ರಕಾರ ಜೆಡಿಎಸ್​ಗೆ ಮಂಡ್ಯ, ಹಾಸನ ಹಾಗೂ ಕೋಲಾರ ಕ್ಷೇತ್ರಗಳನ್ನ ಬಿಟ್ಟುಕೊಡಲು ಬಿಜೆಪಿ ಹೈಕಮಾಂಡ್ ಒಪ್ಪಿಕೊಂಡಿದೆ. ಮಂಡ್ಯದಲ್ಲಿ ಪ್ರಸ್ತುತ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಇದ್ದಾರೆ. ಈ ಬಾರಿಯ ಲೋಸಕಭಾ ಚುನಾವಣೆಯಲ್ಲಿ ಸುಮಲತಾ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಮೈತ್ರಿ ಕಾರಣದಿಂದ ಟಿಕೆಟ್ ತಪ್ಪಿದ್ರೂ ಕೂಡ ಮತ್ತೊಮ್ಮೆ ಪಕ್ಷೇತರ ಅಭ್ಯರ್ಥಿಯಾಗಿ ಮಂಡ್ಯದಿಂದಲೇ ಕಣಕ್ಕಿಳಿಯೋದಾಗಿ ಘೋಷಣೆ ಮಾಡಿದ್ದಾರೆ. ಕಳೆದ ಬಾರಿಯೇ ಸುಮಲತಾ ಎದುರು ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನಿಖಿಲ್ ಕುಮಾರಸ್ವಾಮಿ ಸೋಲು ಕಂಡಿದ್ದಾರೆ. ಹೀಗಾಗಿ ಈ ಬಾರಿ ಮಂಡ್ಯದಿಂದ ಯಾರನ್ನ ಕಣಕ್ಕಿಳಿಸಬೇಕು ಎಂಬುದೇ ಜೆಡಿಎಸ್​ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇನ್ನು ಹಾಸನದಲ್ಲಿ ಜೆಡಿಎಸ್​ನ ಪ್ರಜ್ವಲ್ ರೇವಣ್ಣ ಹಾಲಿ ಸಂಸದರಾಗಿದ್ರೂ ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದಾರೆ. ಅಲ್ಲದೆ ಕ್ಷೇತ್ರದಲ್ಲಿ ಬಿಜೆಪಿ ನಾಯಕರ ಅಸಮಾಧಾನ ಇದ್ದು ಇದೂ ಕೂಡ ಸಮಸ್ಯೆ ತಂದೊಡ್ಡಲಿದೆ. ಇನ್ನು ಕೋಲಾರ ಕ್ಷೇತ್ರದಲ್ಲಿ ಬಿಜೆಪಿಯ ಹಾಲಿ ಸಂಸದ ಕೆ.ಮುನಿಸ್ವಾಮಿ ಇದ್ದಾರೆ. ಕೋಲಾರದಿಂದ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸೋದು ಜೆಡಿಎಸ್​ಗೆ ಸವಾಲಾಗಲಿದೆ.

ಸದ್ಯ ಲೋಕಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದ್ದು, ಮೈತ್ರಿ ಪಕ್ಷಗಳು ಸೀಟು ಹಂಚಿಕೆ ಫೈನಲ್ ಮಾಡಿಕೊಳ್ತಿವೆ. ಕಳೆದ ಬಾರಿ ಒಂದೇ ಒಂದು ಕ್ಷೇತ್ರದಲ್ಲಿ ಗೆದ್ದಿದ್ದ ಜೆಡಿಎಸ್​ಗೆ ಈ ಬಾರಿ ಮೂರು ಸೀಟ್ ಕೊಟ್ರೂ ಗೆಲುವು ಸುಲಭವಾಗಿಲ್ಲ. ಅದ್ರಲ್ಲೂ ದಳಪತಿಗಳ ಕಣ್ಣು ಮಂಡ್ಯ ಕ್ಷೇತ್ರದತ್ತಲೇ ನೆಟ್ಟಿದ್ದು ಸುಮಲತಾ ಅಂಬರೀಶ್ ಮತ್ತೊಮ್ಮೆ ದುಸ್ವಪ್ನವಾಗಿ ಕಾಡುವ ಎಲ್ಲಾ ಲಕ್ಷಣಗಳಿವೆ. ಹೀಗಾಗಿ ಜೆಡಿಎಸ್​ನಿಂದ ಯಾರು ಅಭ್ಯರ್ಥಿಯಾಗ್ತಾರೆ ಅನ್ನೋದ್ರ ಮೇಲೆ ಮಂಡ್ಯ ಕ್ಷೇತ್ರದ ಚುನಾವಣಾ ಭವಿಷ್ಯ ನಿಂತಿದೆ.

Sulekha