ಚಳಿಗಾಲದಲ್ಲಿ ಈ ಸ್ಥಳಗಳಿಗೆ ಬೇಟಿ ನೀಡಿದರೆ, ಈ ಉತ್ಸವಗಳನ್ನು ಕಣ್ತುಂಬಿಕೊಳ್ಳಬಹುದು
ಪ್ರತಿಯೊಬ್ಬರು ತಾವು ಬೇಟಿ ನೀಡುವ ಸ್ಥಳಗಳು ಅವಿಸ್ಮರನೀಯವಾಗಿರಬೇಕು ಅಂದುಕೊಂಡಿರುತ್ತಾರೆ. ಅದಕ್ಕಾಗಿ ಸಾವಿರಾರು, ನೂರಾರು ಕಿಲೋಮೀಟರ್ ಪ್ರಯಾಣ ಬೆಳೆಸುತ್ತಾರೆ. ಅಂತವರು ಡಿಸೆಂಬರ್, ಜನವರಿ ತಿಂಗಳುಗಳಿನಲ್ಲಿ ಪ್ರವಾಸಕ್ಕೆ ಹೋಗುವುದು ಉತ್ತಮ. ಈ ತಿಂಗಳಿನಲ್ಲಿ ಚಳಿಗಾಲ ಆರಂಭವಾಗುವುದರಿಂದ ಭಾರತದ ಎಲ್ಲೆಡೆ ವಿವಿಧ ಹಬ್ಬ, ಜಾತ್ರೆ, ಉತ್ಸವಗಳು ನಡೆಯುತ್ತವೆ. ಇವೆಲ್ಲವನ್ನು ಕಣ್ತುಂಬಿಕೊಳ್ಳಲು ಈ ಸ್ಥಳಗಳಿಗೆ ಬೇಟಿ ನೀಡಬಹುದು.
ಇದನ್ನೂ ಓದಿ: ಬಂಗಾರದಿಂದ ಮಿರ ಮಿರ ಮಿನುಗುತ್ತಿರುವ ಕೇದಾರನಾಥ
ನಾಗೌರ್ ಜಾನುವಾರು ಜಾತ್ರೆ
ನಾಗೌರ್ ಜಾನುವಾರು ಜಾತ್ರೆ ಕೂಡಾ ರಾಜಸ್ಥಾನದ ಜನಪ್ರಿಯ ಜಾತ್ರೆಗಳಲ್ಲೊಂದು. ಪ್ರತಿ ವರ್ಷ ಫೆಬ್ರವರಿಯಲ್ಲಿ ನಾಗೌರ್ ಜಿಲ್ಲೆಯಲ್ಲಿ ನಡೆಯುವ ಜಾನುವಾರು ಭಾರತದ ಅತಿ ದೊಡ್ಡ ಜಾತ್ರೆಗಳಲ್ಲೊಂದು. ಇಲ್ಲಿ ಜಾನುವಾರು ಮಾರಾಟ ಹಾಗೂ ಪ್ರದರ್ಶನ ನಡೆಯುತ್ತದೆ. ಪ್ರತಿ ವರ್ಷ ಇದರಲ್ಲಿ 75,000 ಕ್ಕೂ ಹೆಚ್ಚು ಒಂಟೆಗಳು, ಕುದುರೆಗಳು, ಎತ್ತುಗಳು ಮಾರಾಟವಾಗುತ್ತವೆ. ಇಷ್ಟೊಂದು ಸಂಖ್ಯೆಯ ಪ್ರಾಣಿಗಳನ್ನು ಒಟ್ಟಿಗೇ ನೋಡುವುದೇ ಕಣ್ಣಿಗೆ ಹಬ್ಬ.
ಮರುಭೂಮಿ ಹಬ್ಬ
ರಾಜಸ್ಥಾನದ ಜೈಸಲ್ಮೇರ್‌ನ ಅತಿ ಜನಪ್ರಿಯ ಹಬ್ಬ ಡಸರ್ಟ್ ಫೆಸ್ಟಿವಲ್. ಇದು ಫೆಬ್ರವರಿಯಲ್ಲಿ ನಡೆಯುತ್ತದೆ. ಈ ಡೆಸರ್ಟ್ ಫೆಸ್ಟಿವಲ್ ಅನ್ನು ವೀಕ್ಷಿಸಲು ವಿಶ್ವಾದ್ಯಂತದಿಂದ ಜನಸಾಗರ ಹರಿದು ಬರುತ್ತದೆ.
ಗಾಳಿಪಟ ಉತ್ಸವ
ಗುಜರಾತ್‌ನಲ್ಲಿ ಪ್ರತಿ ವರ್ಷ ಮಕರ ಸಂಕ್ರಾಂತಿಯ ದಿನ ನಡೆವ ಗಾಳಿಪಟ ಉತ್ಸವ ಈ ರಾಜ್ಯದ ಅತಿ ದೊಡ್ಡ ಸಂಭ್ರಮಗಳಲ್ಲೊಂದು. ಇಡೀ ರಾಜ್ಯದ ಜನತೆ, ಹೊರ ರಾಜ್ಯದ ಗಾಳಿಪಟ ಉತ್ಸಾಹಿಗಳೆಲ್ಲರೂ ಇದರಲ್ಲಿ ಭಾಗವಹಿಸುತ್ತಾರೆ. ಸಾವಿರಾರು ಸಂಖ್ಯೆಯಲ್ಲಿ ಆಗಸವೇ ಮುಚ್ಚುವಂತೆ ಗಾಳಿಪಟ ಹಾರಿಸುವುದನ್ನು ನೋಡುವುದಕ್ಕಿಂತ ಸೊಬಗು ಮತ್ತೊಂದಿಲ್ಲ.
ಗಂಗಾಸಾಗರ್ ಮೇಳ
ಕೋಲ್ಕತ್ತಾದ ಗ್ಯಾಂಗೆಸ್ ಡೆಲ್ಟಾ ದ್ವೀಪದಲ್ಲಿ ಪ್ರತಿ ವರ್ಷ ಗಂಗಾ ಸಾಗರ್ ಮೇಳ ನಡೆಯುತ್ತದೆ. ಈ ಹಬ್ಬವು ಜಗತ್ತಿನಲ್ಲೇ ಅತಿ ಹೆಚ್ಚು ಜನ ಸೇರುವ ಎರಡನೇ ಮೇಳವಾಗಿದೆ. ಜನವರಿ 14ರಂದು ಈ ಮೇಳ ಆರಂಭವಾಗಲಿದ್ದು, ಲಕ್ಷಾಂತರ ಭಕ್ತರು ಗಂಗೆಯಲ್ಲಿ ಮುಳುಗೆದ್ದು ಜಾತ್ರೆ ಆರಂಭಿಸಲಿದ್ದಾರೆ. ಸುಮಾರು 2 ತಿಂಗಳ ಕಾಲ ಮೇಳ ನಡೆಯುತ್ತದೆ.
ರಾಜಸ್ಥಾನದ ವಿಂಟರ್ ಫೆಸ್ಟಿವಲ್
ರಾಜಸ್ಥಾನ ಎಂದರೇ ರಂಗು ರಂಗೋಲಿ. ಪ್ರವಾಸಕ್ಕೆ ಹೇಳಿ ಮಾಡಿಸಿದ ತಾಣ. ಅದರಲ್ಲೂ ನವೆಂಬರ್, ಡಿಸೆಂಬರ್ ರಾಜಸ್ಥಾನ ಭೇಟಿಗೆ ಹೇಳಿ ಮಾಡಿಸಿದ್ದು. ರಾಜಸ್ಥಾನದ ಜನಪ್ರಿಯ ಸ್ಥಳ ಮೌಂಟ್ ಅಬುವಿನಲ್ಲಿ ವಿಂಟರ್ ಫೆಸ್ಟಿವಲ್ ನಡೆಯುತ್ತದೆ. ಇಲ್ಲಿ ವಿಶಿಷ್ಠ ಸಂಸ್ಕೃತಿ, ಸಂಪ್ರದಾಯಗಳಿಂದ ಕಣ್ಮನ ಸೆಳೆವ ರಾಜಸ್ಥಾನದ ನೃತ್ಯ, ಹಾಡುಗಳು ಎಲ್ಲವೂ ಈ ವಿಂಟರ್ ಫೆಸ್ಟಿವಲ್‌ನಲ್ಲಿ ಮನರಂಜಿಸುತ್ತವೆ. ಅದರಲ್ಲೂ ಇಲ್ಲಿನ ಖ್ಯಾತ ಘೂಮರ್ ಹಾಗೂ ಗೇರ್ ನೃತ್ಯಗಳನ್ನು ಕಣ್ತುಂಬಿಕೊಳ್ಳಬಹುದು.