ಮದ್ಯ ಕುಡಿದು ಗಾಢ ನಿದ್ರೆಗೆ ಜಾರಿದ ಆನೆಗಳು: ಎಚ್ಚರಿಸಲು ಹೋದ ಅಧಿಕಾರಿಗಳಿಗೆ ಸುಸ್ತೋ ಸುಸ್ತು

ಮದ್ಯ ಕುಡಿದು ಗಾಢ ನಿದ್ರೆಗೆ ಜಾರಿದ ಆನೆಗಳು: ಎಚ್ಚರಿಸಲು ಹೋದ ಅಧಿಕಾರಿಗಳಿಗೆ ಸುಸ್ತೋ ಸುಸ್ತು

ಒಡಿಶಾ: ಇಲ್ಲಿನ ಕಿಯೋಂಜಾರ್​ ಜಿಲ್ಲೆಯ ಕಾಡಿನಲ್ಲಿ ಹಳ್ಳಿಗರ ಗುಂಪೊಂದು ಮದ್ಯ ತಯಾರಿಸಲು ಹೊಂಡವೊಂದರಲ್ಲಿ ಹುಗಿದ ಮಡಕೆಗಳೊಳಗೆ ನೀರಿನೊಂದಿಗೆ ಮಹುವಾ ಹೂಗಳನ್ನು ಹಾಕಿ ಹುದುಗು ಬರಲು ಬಿಟ್ಟಿದ್ದರು.  ಕಾಡಿನಲ್ಲಿ ಓಡಾಡುತ್ತಿದ್ದ ಆನೆಗಳ ಗುಂಪು ಬಾಯಾರಿಕೆ ತಣಿಸಿಕೊಳ್ಳಲು ಆ ಮಡಕೆಯೊಳಗಿನ ನೀರನ್ನು ಕುಡಿದು ನಶೆ ಏರಿ ಕಾಡಿನಲ್ಲಿ ಗಾಢ ನಿದ್ದೆಗೆ ಜಾರಿದ ಘಟನೆ ನಡೆದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ: ದುರಂತಗಳು ಸಂಭವಿಸಿದರೆ ಇಲಿಗಳೇ ರಕ್ಷಣೆಗೆ ನಿಲ್ಲುತ್ತವೆ!

ಗೋಡಂಬಿ ಕಾಡಿನ ಬಳಿ ವಾಸಿಸುವ ಗ್ರಾಮಸ್ಥರು ‘ಮಹುವಾ’ ಎಂಬ ಮದ್ಯದ ತಯಾರಿ ನಡೆಸಿದಾಗ ಈ ಅವಘಡ ಸಂಭವಿಸಿದೆ ಎನ್ನಲಾಗಿದ್ದು, ಈ ಆನೆಗಳ ಗುಂಪಿನಲ್ಲಿ ಒಟ್ಟು ಒಂಭತ್ತು ಗಂಡು, ಆರು ಹೆಣ್ಣು ಮತ್ತು ಒಂಭತ್ತು ಮರಿಗಳು ಇದ್ದವು. ಬಾಯಾರಿ ಬಂದ ಆನೆಗಳಿಗೆ ಹೊಂಡದ ನೀರು ರುಚಿ ಹತ್ತಿದ್ದು,  ಕುಡಿದು ಕುಡಿದು ಅಮಲಿಗೆ ನಡೆಯಲಾರದೆ ಕಾಡಿನೊಳಗೇ ನಿದ್ದೆಗೆ ಜಾರಿದೆ.

ಈ ಬಗ್ಗೆ ಮಾತನಾಡಿದ ಗ್ರಾಮಸ್ಥ ನಾರಿಯಾ ಸೇಥಿ, ‘ನಾವು ಮಹುವಾ ತಯಾರಿಸಲು ಬೆಳಿಗ್ಗೆ 6 ಗಂಟೆಗೆ ಕಾಡಿನೊಳಗೆ ಹೋಗಿದ್ದೆವು. ನೋಡಿದರೆ ಮಹುವಾ ಹೂವುಗಳನ್ನು ನೀರಿನಲ್ಲಿ ಹಾಕಿ ಹುದುಗು ಬರಲು ಇಟ್ಟ ಮಡಿಕೆಗಳೆಲ್ಲಾ ಧ್ವಂಸವಾಗಿದ್ದವು. ಅದರೊಳಗಿನ ನೀರೆಲ್ಲಾ ಖಾಲಿಯಾಗಿತ್ತು. ಪಕ್ಕದಲ್ಲಿಯೇ ಆನೆಗಳು ಮಲಗಿದ್ದವು. ಈ ನೀರನ್ನು ಕುಡಿದೇ ಈ ಆನೆಗಳು ಮತ್ತು ಬಂದು ಮಲಗಿವೆ ಎನ್ನುವುದು ತಿಳಿಯಿತು. ಆ ಮದ್ಯವನ್ನು ಇನ್ನೂ ಸಂಸ್ಕರಿಸಿರಲಿಲ್ಲ. ಎಷ್ಟೇ ಎಬ್ಬಿಸಿದರೂ ಅವು ಮೇಲೇಳಲೇ ಇಲ್ಲ. ನಂತರ ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದೆವು’ ಎಂದರು.

ಅರಣ್ಯಾಧಿಕಾರಿ ಘಾಸೀರಾಮ್​ ಪಾತ್ರಾ ಮಾತನಾಡಿ, ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ, ಡ್ರಮ್​ ಬಾರಿಸಿ ಅವುಗಳನ್ನು ಎಚ್ಚರಿಸಲು ಪ್ರಯತ್ನಿಸಿದರು. ಬೆಳಗ್ಗೆ ಸುಮಾರು 10 ಗಂಟೆ ವೇಳೆಗೆ ಆನೆಗಳ ಹಿಂಡು ಈ ಸ್ಥಳದಿಂದ ನಿರ್ಗಮಿಸಿದೆ. ಆದರೆ ಆನೆಗಳು ಮಹುವಾ ಅನ್ನು ಕುಡಿದಿವೆಯೋ ಇಲ್ಲವೋ ಎಂಬ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ. ಬಹುಶಃ ವಿಶ್ರಾಂತಿ ಪಡೆಯುತ್ತಿದ್ದವೇನೋ ಎಂದು ಹೇಳಿದ್ದಾರೆ.

suddiyaana