ಇಸ್ರೋಗೆ ಮತ್ತೊಂದು ಯಶಸ್ಸು! – 17 ವರ್ಷಗಳ ಬಳಿಕ ಕಾರ್ಟೋಸ್ಯಾಟ್ ಉಪಗ್ರಹವನ್ನು ಭೂಮಿಯ ವಾತವರಣಕ್ಕೆ ತಂದ ಬಾಹ್ಯಾಕಾಶ ಸಂಸ್ಥೆ
ಚಂದ್ರಯಾನ 3 ಉಪಗ್ರಹ ಉಡಾವಣೆ ಬಳಿಕ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಸದಾ ಸುದ್ದಿಯಲ್ಲಿದೆ. ಪ್ರತಿದಿನ ಸಾಧನೆಯ ಮೆಟ್ಟಿಲು ಹತ್ತುತ್ತಿದೆ. ಚಂದ್ರಯಾನದ ಬಳಿಕ ಸೂರ್ಯನ ಅಧ್ಯಯನಕ್ಕೆ ಕಳುಹಿಸಿದ್ದ ಆದಿತ್ಯ ಎಲ್1 ಉಡಾವಣೆ ಮಾಡಿ ಯಶಸ್ವಿಯಾಗಿದೆ. ಇದೀಗ ಇಸ್ರೋ ಮತ್ತೊಂದು ಸಾಧನೆ ಮೂಲಕ ಮತ್ತೆ ವಿಶ್ವವನ್ನೇ ಬೆರುಗುಗೊಳಿಸಿದೆ. ಬರೋಬ್ಬರಿ 17 ವರ್ಷಗಳ ಹಿಂದೆ ಉಡಾವಣೆ ಮಾಡಿದ ಕಾರ್ಟೋಸ್ಯಾಟ್ 2 ಉಪಗ್ರಹವನ್ನು ಮತ್ತೆ ಸಕ್ರಿಯ ಮಾಡಿ, ಭೂಮಿ ವಾತಾವರಣಕ್ಕೆ ತರುವುಲ್ಲಿ ಇಸ್ರೋ ಯಶಸ್ವಿಯಾಗಿದೆ.
ಹೌದು, ಚಂದ್ರಯಾನ 3 ಬಳಿಕ ಇಸ್ರೋ ಹೊಸ ಹೊಸ ಆವಿಷ್ಕಾರಗಳನ್ನು ಮಾಡುತ್ತಿದೆ. ಅಮೆರಿಕ, ಚೀನಾ ಸೇರಿದಂತೆ ಬಾಹ್ಯಕಾಶದಲ್ಲಿ ದಿಗ್ಗಜರೆನಿಸಿರುವ ದೇಶಗಳೇ ಇದೀಗ ಇಸ್ರೋ ಮಾಡೆಲ್ ಅನುಸರಿಸಲು ಮುಂದಾಗುತ್ತಿದೆ. ಈ ಬೆಳವಣಿಗೆಗಳ ನಡುವೆಯೇ ಇಸ್ರೋ, ಹೈ ರೆಸಲ್ಯೂಶನ್ ಫೋಟೋಗಳನ್ನು ತೆಗೆಯಬಲ್ಲ 2ನೇ ತಲೆಮಾರಿನ ಉಪಗ್ರಹವಾದ ಕಾರ್ಟೋಸ್ಯಾಟ್-2 ಉಪಗ್ರಹವನ್ನು ಮತ್ತೆ ಭೂಮಿಯ ವಾತಾವರಣಕ್ಕೆ ತಂದಿದೆ. ಈ ಉಪಗ್ರಹ ಭೂಮಿಯ ವಾತಾವರಣ ಪ್ರವೇಶಿಸುತ್ತಿದ್ದಂತೆ ಉರಿದು ಬೂದಿಯಾಗಲಿದೆ. ಅವಶೇಷಗಳು ಸಮುದ್ರದಲ್ಲಿ ಬೀಳಲಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಕೋಲ, ನೇಮೋತ್ಸವದ ರೀತಿ ಬಣ್ಣ ಹಚ್ಚಿ ಸಿನಿಮಾ, ಧಾರಾವಾಹಿಯಲ್ಲಿ ಅನುಕರಣೆ – ಕರಾವಳಿ ಭಾಗದ ದೈವಾರಾಧಕರಿಂದ ಹೋರಾಟ
ಈ ಉಪಗ್ರಹವನ್ನು ಇಸ್ರೋ 17 ವರ್ಷಗಳ ಹಿಂದೆ, 2007ರ ಜ.10ರಂದು ಉಡಾವಣೆ ಮಾಡಿತ್ತು. 2019ರವರೆಗೆ 635 ಕಿ.ಮೀ. ಎತ್ತರದಿಂದ ಕಾರ್ಯ ನಿರ್ವಹಿಸಿದ ಈ ಉಪಗ್ರಹ, ನಗರ ಪ್ರದೇಶಗಳ ಪ್ಲಾನಿಂಗ್ಗಾಗಿ ಉತ್ತಮ ಚಿತ್ರಗಳನ್ನು ಒದಗಿಸಿತ್ತು. 2019ರ ನಂತರ ಕೆಲಸ ನಿಲ್ಲಿಸಿತ್ತು.
ಪ್ರತಿ ದೇಶಗಳು ಬಾಹ್ಯಾಕಾಶಕ್ಕೆ ಉಪಗ್ರಹಗಳನ್ನು ಉಡಾವಣೆ ಮಾಡುತ್ತಿದೆ. ಇದರಿಂದ ಬಾಹ್ಯಾಕಾಶದಲ್ಲಿ ಇದೀಗ ನಿಷ್ಕ್ರೀಯಗೊಂಡಿರುವ ಉಪಗ್ರಹಗಳ ಸಂಖ್ಯೆ ಹೆಚ್ಚಿದೆ. ಪ್ರಯೋಗ, ಪ್ರಯತ್ನಗಳಿಂದ ಬಾಹ್ಯಾಕಾಶದಲ್ಲಿನ ಅವಶೇಷಗಳಿಂದ ಮುಂದೊಂದು ದಿನ ಆಪತ್ತು ಸಂಭವಿಸು ಸಾಧ್ಯತೆ ಇದೆ. ಹೀಗಾಗಿ ಇಸ್ರೋ, ನಾಸಾ ಸೇರಿದಂತೆ ಪ್ರಮುಖ ಬಾಹ್ಯಾಕಾಶ ಕೇಂದ್ರಗಳು ಬಾಹ್ಯಾಕಾಶದಲ್ಲಿನ ಅವಶೇಷಗಳನ್ನು ಕಡಿಮೆ ಮಾಡಲು ಮಹತ್ವದ ಹೆಜ್ಜೆ ಇಟ್ಟಿದೆ. ಈ ನಿಟ್ಟಿನಲ್ಲಿ ಇಸ್ರೋ ನಿರಂತರವಾಗಿ ಪ್ರಯತ್ನ ಮಾಡುತ್ತಿದೆ.
ಬಾಹ್ಯಾಕಾಶದಲ್ಲಿ ಅವಶೇಷಗಳನ್ನು ಕಡಿಮೆ ಮಾಡಬೇಕು ಎಂಬ ನಿಯಮದಂತೆ, ಕಾರ್ಯಸ್ಥಗಿತಗೊಂಡಿರುವ ಈ ಉಪಗ್ರಹವನ್ನು ಇಸ್ರೋ ಭೂವಾತಾವರಣಕ್ಕೆ ತಂದು ಪತನಗೊಳಿಸಿದೆ. ಕಾರ್ಯಾಚರಣೆ ನಿಲ್ಲಿಸಿರುವ ಉಪಗ್ರಹಗಳನ್ನು ಭೂಮಿಯ ವಾತಾವರಣಕ್ಕೆ ತಂದರೆ, ಸೂರ್ಯನ ಶಾಕ ಹಾಗೂ ಭೂಮಿಯ ವಾತಾವರಣದಿಂದ ಈ ಉಪಗ್ರಹಗಳು ಉರಿದು ಬೂದಿಯಾಗಲಿದೆ. ಸಮುದ್ರದ ಮೇಲಿನ ಭೂಮಿಯ ವಾತಾವರಣಕ್ಕೆ ಈ ಉಪಗ್ರಹಗಳನ್ನು ತರಲಾಗುತ್ತದೆ. ಭೂಮಿ ವಾತಾವರಣ ಪ್ರವೇಶಿಸುತ್ತಿದ್ದಂತೆ ಈ ಅವಶೇಷಗಳು ಬೂದಿಯಾಗಲಿದೆ. ಈ ಬೂದಿ ಸಮುದ್ರಕ್ಕೆ ಬೀಳಲಿದೆ.