ರಾಷ್ಟ್ರ ರಾಜಧಾನಿಯಲ್ಲಿ ರೈತರ ಪ್ರತಿಭಟನೆ – ಕರ್ತವ್ಯ ನಿರತ ಸಬ್ ಇನ್ಸ್​​ಪೆಕ್ಟರ್ ಹಾಗೂ ರೈತ ಮುಖಂಡ ಸಾವು

ರಾಷ್ಟ್ರ ರಾಜಧಾನಿಯಲ್ಲಿ ರೈತರ ಪ್ರತಿಭಟನೆ – ಕರ್ತವ್ಯ ನಿರತ ಸಬ್ ಇನ್ಸ್​​ಪೆಕ್ಟರ್ ಹಾಗೂ ರೈತ ಮುಖಂಡ ಸಾವು

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರೈತ ಸಂಘಟನೆಗಳು ವಿವಿಧ ಬೇಡಿಕೆಗಳನ್ನು ಇಡೇರಿಸುವಂತೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿವೆ. ಕಳೆದ ಸೋಮವಾರದಿಂದ ಅನ್ನದಾತರು ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಒಂದು ವಾರದಿಂದ ನಿಯೋಜನೆಗೊಂಡಿದ್ದ ಪೊಲೀಸ್‌ ಸಬ್‌ ಇನ್ಸ್‌ಸ್ಪೆಕ್ಟರ್‌ ಹಾಗೂ ರೈತ ಮುಖಂಡರೊಬ್ಬರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಪ್ರಿಯಾಂಕ ಗಾಂಧಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲು – ಭಾರತ್‌ ಜೋಡೋ ನ್ಯಾಯ್ ಯಾತ್ರೆಗೆ ಗೈರು

ಕಳೆದ ಐದಾರು ದಿನಗಳಿಂದ ರೈತರು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಅಂಬಾಲಾದ ಶಂಭು ಗಡಿಭಾಗದಲ್ಲಿ ಹೀರಾಲಾಲ್ (52) ಒಂದು ವಾರದಿಂದ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೇ ವೇಳೆ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು ಕರ್ತವ್ಯದ ಸ್ಥಳದಲ್ಲೇ ಹಠಾತ್ ಆಗಿ ಕುಸಿದು ಬಿದ್ದಿದ್ದಾರೆ.  ತಕ್ಷಣ ಅವರನ್ನು ಅಂಬಾಲಾದಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಚಿಕಿತ್ಸೆ ನೀಡಿದ ವೈದ್ಯರು ಅವರನ್ನು ಉಳಿಸಿಕೊಳ್ಳಲು ಆಗಲಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ಮಾತನಾಡಿರುವ ಹರಿಯಾಣದ ಡಿಜಿಪಿ ಶತ್ರುಜೀತ್ ಕಪೂರ್,  ಅಧಿಕಾರಿ ಹೀರಾಲಾಲ್ ಯಾವಾಗಲೂ ಅತ್ಯಂತ ಶ್ರದ್ಧೆಯಿಂದ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದರು. ಅವರ ಸಾವು ಪೊಲೀಸ್ ಪಡೆಗೆ ನಷ್ಟವಾಗಿದೆ ಎಂದು ಹೇಳಿದ್ದಾರೆ.

ಹಿರಿಯ ರೈತ ಮುಖಂಡ ನಿಧನ

ಕೇಂದ್ರ ಸರ್ಕಾರದ ವಿರುದ್ಧದ ಹೋರಾಟ ಮಾಡುವಾಗ ಹಿರಿಯ ರೈತ ಮುಖಂಡ ಜ್ಞಾನ್ ಸಿಂಗ್ ನಿಧನ ಹೊಂದಿದ್ದಾರೆ. ನಿನ್ನೆ ಶಂಭು ಗಡಿಯಲ್ಲಿ ರೈತರ ಜೊತೆ ಚಳವಳಿಯಲ್ಲಿ ಜ್ಞಾನ್ ಸಿಂಗ್‌ ಭಾಗಿಯಾಗಿದ್ರು. ಈ ವೇಳೆ ಅವರಿಗೆ ತೀವ್ರ ಎದೆ ನೋವು ಕಾಣಿಸಿಕೊಂಡಿತ್ತು. ಬಳಿಕ ಅವರನ್ನ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಪೊಲೀಸ್ ಅಧಿಕಾರಿ ಹಾಗೂ ರೈತ ಮುಖಂಡ ಸೇರಿ ಒಟ್ಟು ಇಬ್ಬರು ಪ್ರತಿಭಟನೆ ವೇಳೆ ಸಾವನ್ನಪ್ಪಿದವರಾಗಿದ್ದಾರೆ ಎಂದು ಹೇಳಲಾಗಿದೆ.

Shwetha M