2024-25ನೇ ಸಾಲಿನ ಬಜೆಟ್ ಮಂಡನೆ – ಬೆಲೆ ಏರಿಕೆ ಬಿಸಿ ತಟ್ಟಿದ್ದು ಯಾರಿಗೆ..?
ಸಿಎಂ ಸಿದ್ದರಾಮಯ್ಯ ಶುಕ್ರವಾರ ತಮ್ಮ ದಾಖಲೆಯ 15ನೆಯ ಬಾರಿ ಬಜೆಟ್ ಮಂಡನೆ ಮಾಡಿದ್ದಾರೆ. ಸಿದ್ದರಾಮಯ್ಯ ಸರ್ಕಾರದ ಪೂರ್ಣಾವಧಿಯ ಮೊದಲ ಬಜೆಟ್ ಇದಾಗಿದ್ದರಿಂದ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಳ್ಳಲಾಗಿತ್ತು. ಲೋಕಸಭಾ ಚುನಾವಣೆಗೆ ಕೆಲವೇ ದಿನಗಳು ಇರೋದ್ರಿಂದ ಕುತೂಹಲ ಮೂಡಿಸಿತ್ತು. ಈ ಬಾರಿ ಸಿದ್ದರಾಮಯ್ಯ 3,71,383 ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡಿಸಿದ್ರು. ಬಜೆಟ್ನಲ್ಲಿ ಯಾವ್ಯಾವ ವಲಯಕ್ಕೆ ಎಷ್ಟು ಅನುದಾನ ಸಿಕ್ಕಿದೆ..? ರೈತರು, ಮಹಿಳೆಯರು, ಶಿಕ್ಷಣ ಇಲಾಖೆಗೆ ಕೊಟ್ಟಿದ್ದೇನು..? ಮೀನುಗಾರರಿಗೆ ಸಿಕ್ಕಿದ್ದೆಷ್ಟು..? ಗ್ಯಾರಂಟಿ ಯೋಜನೆಗಳ ಕಥೆ ಏನು..? ಬೆಲೆ ಏರಿಕೆ ಬಿಸಿ ತಟ್ಟಿದ್ದು ಯಾರಿಗೆ..? ಹೀಗೆ ಬಜೆಟ್ ಬಗೆಗಿನ ಮಹತ್ವದ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಬಜೆಟ್ನಲ್ಲಿ ಮಹಿಳಾ ಸಬಲೀಕರಣಕ್ಕೆ ಒತ್ತು – ರಾಜ್ಯದಲ್ಲಿ ಕೆಫೆ ಸಂಜೀವಿನಿ ಆರಂಭ
ವಿಧಾನಸಭೆಯಲ್ಲಿ ಬೆಳಗ್ಗೆ 10.15ಕ್ಕೆ ಸಿಎಂ ಸಿದ್ದರಾಮಯ್ಯ ಬಜೆಟ್ ಭಾಷಣ ಆರಂಭಿಸಿದ್ರು. ಆದ್ರೆ ಆರಂಭದಲ್ಲಿಯೇ ಕೇಂದ್ರ ಸರ್ಕಾರದಿಂದ ಅನ್ಯಾವಾಗಿದೆ ಎಂದು ಗುಡುಗಿದ್ರು. ಇದಕ್ಕೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿ ಬಜೆಟ್ ಭಾಷಣಕ್ಕೆ ಅಡ್ಡಿಪಡಿಸಿದರು. ‘ಏನಿಲ್ಲ ಏನಿಲ್ಲ ಬಜೆಟ್ ನ ಲ್ಲಿ ಏನಿಲ್ಲ ಎಂದು ಘೋಷಣೆ ಕೂಗಿದ್ರು. ಬಜೆಟ್ಗೆ ಬಹಿಷ್ಕಾರ ಹಾಕಿ ಹೊರನಡೆದರು. ಧಿಕ್ಕಾರ ಕೂಗುತ್ತಾ ಸದನದಿಂದ ಹೊರಬಂದ ಬಿಜೆಪಿ ಶಾಸಕರು, ‘ಏನಿಲ್ಲಾ ಏನಿಲ್ಲಾ ಸಿದ್ದರಾಮಯ್ಯ ಬಜೆಟ್ನಲ್ಲಿ ಏನಿಲ್ಲ ಎಂದು ಕೂಗಿದ್ರು. ಹಾಗೇ ವಿಧಾನಸೌಧದ ಮುಂದೆ ಏನಿಲ್ಲ ಏನಿಲ್ಲ ಎಂದು ಪೋಸ್ಟರ್ ಅಂಟಿಸಿದ್ರು. ವಿಪಕ್ಷನಾಯಕರು ಸಭಾತ್ಯಾಗದ ನಡುವೆಯೂ ಬಜೆಟ್ ಮಂಡಿಸಿದ ಸಿಎಂ ಸಿದ್ದರಾಮಯ್ಯ ಗ್ಯಾರಂಟಿ ಯೋಜನೆಗಳಿಗೆ ಹಣ ಮೀಸಲಿಟ್ಟರು ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯಡಿ ಬೆಂಗಳೂರು ಅಭಿವೃದ್ಧಿಗೆ ಪಣ ತೊಟ್ಟಿರುವ ರಾಜ್ಯ ಸರ್ಕಾರ ಬಜೆಟ್ನಲ್ಲೂ ಒತ್ತು ನೀಡಿದೆ. ವ್ಯಾಪಾರ, ಮೆಟ್ರೋ, ಬಿಎಂಟಿಸಿ, ರಸ್ತೆ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಹಣ ಹಂಚಿಕೆ ಮಾಡಿದೆ.
ವ್ಯಾಪಾರ ವಹಿವಾಟು ಹೆಚ್ಚಿಸುವ ದೃಷ್ಟಿಯಿಂದ ಮಧ್ಯರಾತ್ರಿ 1 ಗಂಟೆಯ ತನಕ ವ್ಯಾಪಾರ ನಡೆಸುವುದಕ್ಕೆ ಅನುಮತಿ ನೀಡಲಾಗಿದೆ. ನಗರದಲ್ಲಿ 147 ಕಿಲೋಮೀಟರ್ ವೈಟ್ ಟಾಪಿಂಗ್ಗೆ ಮುಂದಾಗಿದ್ದು 1,700 ಕೋಟಿ ಅನುದಾನ ಮೀಸಲಿಡಲಾಗಿದೆ. ಹೆಬ್ಬಾಳ ಜಂಕ್ಷನ್ ನಲ್ಲಿ ಸುರಂಗ ಮಾರ್ಗಕ್ಕೆ ಸಮ್ಮತಿ ನೀಡಿದ್ದು, ಹೊರವರ್ತುಲ ರಸ್ತೆ ಅಭಿವೃದ್ಧಿಗೆ 200 ಕೋಟಿ ರೂಪಾಯಿ ಘೋಷಿಸಲಾಗಿದೆ. ಇನ್ನು 73ಕಿಲೋ ಮೀಟರ್ ಉದ್ದದ ನೂತನ ಬ್ಯುಸಿನೆಸ್ ಕಾರಿಡಾರ್ ಗೆ 27 ಸಾವಿರ ಕೋಟಿ, ನಮ್ಮ ಮೆಟ್ರೋದ ಫೇಸ್ 3ಗೆ 15,611 ಕೋಟಿ ಅನುದಾನ ಮೀಸಲಿಡಲಾಹಿದೆ. ನಮ್ಮ ಮೆಟ್ರೋ ಜಾಲಕ್ಕೆ 2025ರ ವೇಳೆಗೆ ಹೆಚ್ಚುವರಿಯಾಗಿ 44 ಕಿಲೋಮೀಟರ್ ಮಾರ್ಗ ಸೇರ್ಪಡೆಯಾಗಲಿದೆ. ಬಿಎಂಟಿಸಿಗೆ ಹೊಸದಾಗಿ 1,334 ಹೊಸ ಇವಿ ಬಸ್ ಖರೀದಿಗೆ ನಿರ್ಧಾರ ಮಾಡಲಾಗಿದ್ದು, ಜೊತೆಗೆ ಬಿಎಂಟಿಸಿಗೆ 820 ಬಿಎಸ್ 6 ಡೀಸೆಲ್ ಬಸ್ ಸೇರ್ಪಡೆ ಮಾಡಲಾಗುವುದು. ಜಲ ಮಂಡಳಿಯ ಕಾವೇರಿ 5ನೇ ಹಂತದ ಕಾಮಗಾರಿಗೆ 5,550 ಕೋಟಿ ಹಾಗೂ ಕೇಂದ್ರದ ಸಹಯೋಗದಲ್ಲಿ ಬೆಂಗಳೂರಿನಲ್ಲಿ ವಿಜ್ಞಾನ ನಗರಿ ಸ್ಥಾಪನೆಗೆ 233 ಕೋಟಿ ಮೀಸಲಿಡಲಾಗಿದೆ. ಬೆಂಗಳೂರಿನ ಉತ್ತರ ತಾಲೂಕಿನಲ್ಲಿ 70 ಎಕರೆ ಜಾಗದಲ್ಲಿ ನೂತನ ಕ್ರೀಡಾ ನಗರಿ ನಿರ್ಮಾಣ ಮಾಡಲಾಗುತ್ತದೆ.
ಹಾಗೇ ಬಜೆಟ್ ನಲ್ಲಿ ಶಿಕ್ಷಣ, ಮಹಿಳೆ ಮತ್ತು ಮಕ್ಕಳ ಕಲ್ಯಾಣಕ್ಕೆ ಹೆಚ್ಚು ಅನುದಾನ ನೀಡಲಾಗಿದೆ. ರಾಜ್ಯದ ಅಸ್ಮಿತೆ, ಸಂಸ್ಕೃತಿಗೆ ಅನುಗುಣವಾಗಿ ರಾಜ್ಯ ಶಿಕ್ಷಣ ನೀತಿ ಜಾರಿಗೊಳಿಸಲಾಗುವುದು ಎಂದಿದ್ದಾರೆ.
ಗೃಹಲಕ್ಷ್ಮೀ ಯೋಜನೆಗೆ 2024-25ನೇ ಸಾಲಿಗೆ 28,608 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಮೇಲ್ವಿಚಾರಕಿಯರಿಗೆ 90 ಕೋಟಿ ರೂಪಾಯಿ ವೆಚ್ಚದಲ್ಲಿ 75, 938 ಸ್ಮಾರ್ಟ್ ಫೋನ್ ಮತ್ತು ಗ್ರಾಚ್ಯುಟಿ ಸವಲತ್ತುಗಳನ್ನು ನೀಡಲಾಗುತ್ತದೆ. ಹಾಗೇ ರಾಜ್ಯದಲ್ಲಿ 200 ಕೋಟಿ ರೂಪಾಯಿ ವೆಚ್ಚದಲ್ಲಿ 1 ಸಾವಿರ ಅಂಗನವಾಡಿ ಕೇಂದ್ರಗಳ ನಿರ್ಮಾಣ ಗುರಿ ಹೊಂದಲಾಗಿದೆ. ಲಿಂಗತ್ವ ಅಲ್ಪಸಂಖ್ಯಾತರಿಗೆ ಮಾಸಾಶನ 1,200 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. 2024-25ನೇ ಸಾಲಿನಲ್ಲಿ ಮಹಿಳಾ ಉದ್ದೇಶಿತ ಯೋಜನೆಗಳಿಗೆ 86,423 ಕೋಟಿ ರೂಪಾಯಿ ಒದಗಿಸಲಾಗುವುದು. ಮಕ್ಕಳ ಉದ್ದೇಶಿತ ಯೋಜನೆಗಳಿಗೆ 2024-25ನೇ ಸಾಲಿನಲ್ಲಿ 54,617 ಕೋಟಿ ರೂಪಾಯಿ ನೀಡಲಾಗುವುದು. ಶಾಲಾ ಕಾಲೇಜುಗಳ ಕೊಠಡಿ ನಿರ್ಮಾಣ, ದುರಸ್ತಿ, ಶೌಚಾಲಯ ನಿರ್ಮಾಣದಂತಹ ಕಾಮಗಾರಿಗಳಿಗೆ 850 ಕೋಟಿ ರೂಪಾಯಿ. 2,000 ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ದ್ವಿಭಾಷಾ ಮಾಧ್ಯಮ ಅಂದ್ರೆ ಕನ್ನಡ ಮತ್ತು ಇಂಗ್ಲೀಷ್ ಶಾಲೆಗಳಾಗಿ ಪರಿವರ್ತಿಸಲಾಗುವುದು. ಪ್ಯಾರಿಸ್ ಒಲಂಪಿಕ್ ನಲ್ಲಿ ಪದಕ ಗೆದ್ದವರಿಗೆ ಭರ್ಜರಿ ಬಹುಮಾನ ಘೋಷಣೆ ಮಾಡಲಾಗಿದೆ. ಒಲಂಪಿಕ್ನಲ್ಲಿ ಚಿನ್ನದ ಪದಕ ಗೆದ್ದವರಿಗೆ 6 ಕೋಟಿ ರೂಪಾಯಿ, ಬೆಳ್ಳಿ ಪದಕ ಗೆದ್ದವರಿಗೆ 4 ಕೋಟಿ ರೂಪಾಯಿ ಹಾಗೂ ಕಂಚಿನ ಪದಕ ಗೆದ್ದವರಿಗೆ 3 ಕೋಟಿ ಪ್ರೋತ್ಸಾಹ ಧನ ನೀಡುವುದಾಗಿ ಸಿಎಂ ಘೋಷಣೆ ಮಾಡಿದ್ದಾರೆ.
ಅನ್ನಭಾಗ್ಯ ಯೋಜನೆಯಲ್ಲಿ 80 ವರ್ಷ ದಾಟಿದ ಹಿರಿಯ ನಾಗರಿಕರನ್ನು ಗಮನದಲ್ಲಿಟ್ಟುಕೊಂಡು ಅನ್ನ ಸುವಿಧಾ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಹಿರಿಯ ನಾಗರಿಕರು ಮಾತ್ರ ಇರುವ ಮನೆಯ ಬಾಗಿಲಿಗೆ ಆಹಾರ ಧಾನ್ಯಗಳನ್ನು ತಲುಪಿಸಲಾಗುತ್ತದೆ. ಇನ್ನು ರಾಜ್ಯದ 36 ಲಕ್ಷಕ್ಕಿಂತ ಹೆಚ್ಚಿನ ರೈತರಿಗೆ 27,000 ಕೋಟಿ ರೂಪಾಯಿಯ ದಾಖಲೆಯ ಬೆಳೆ ಸಾಲ ವಿತರಣೆಯ ಗುರಿ ಇಟ್ಟುಕೊಳ್ಳಲಾಗಿದೆ. ಹಿಂದಿನ ಅವಧಿಯಲ್ಲಿ ಬೆಳೆಸಾಲ ಮನ್ನಾದ ಬಾಕಿ ಉಳಿದುಕೊಂಡಿರುವ 132 ಕೋಟಿ ರೂಪಾಯಿ ಹಣವನ್ನು ಡಿಸಿಸಿ ಬ್ಯಾಂಕುಗಳಿಗೆ ಸರ್ಕಾರ ಬಿಡುಗಡೆ ಮಾಡಿದೆ. ರಾಜ್ಯದ ಆಯ್ದ 20 ತಾಲೂಕುಗಳಲ್ಲಿರುವ ಪಶು ಆಸ್ಪತ್ರೆಗಳನ್ನು ಪಾಲಿಕ್ಲಿನಿಕ್ ಆಗಿ ಮೇಲ್ದರ್ಜೆಗೆ ಏರಿಸಲಾಗಿದೆ. 200 ಕೋಟಿ ರೂಪಾಯಿ ವೆಚ್ಚದಲ್ಲಿ 115 ಜಲ ಸಂರಕ್ಷಣಾ ಕಾಮಗಾರಿ ಅನುಷ್ಠಾನ ಮಾಡಲಾಗುತ್ತದೆ. ಸಮಗ್ರ ಕೃಷಿಯನ್ನು ಉತ್ತೇಜಿಸುವ ಕರ್ನಾಟಕ ರೈತ ಸಮೃದ್ಧಿ ಯೋಜನೆಯನ್ನು ಜಾರಿಗೊಳಿಸಲಾಗುವುದು. ಕೃಷಿ ಭಾಗ್ಯ ಯೋಜನೆಯನ್ನು ಮರುಜಾರಿಗೊಳಿಸಲಾಗುತ್ತದೆ. ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯನ್ನು ಪ್ರಸಕ್ತ ಸಾಲಿನಲ್ಲಿಯೂ ಮುಂದುವರಿಸಿ 10,000 ಫಲಾನುಭವಿಗಳಿಗೆ ಸಹಾಯಧನ ನೀಡಲಾಗುವುದು. ಅಮೃತ ಮಹಲ್/ ಹಳ್ಳಿಕಾರ್/ ಖಿಲಾರಿ ರಾಸುಗಳನ್ನು ಸಂವರ್ಧನೆ ಮಾಡಿ ಉತ್ಕೃಷ್ಟ ಕರುಗಳನ್ನು ಒದಗಿಸಲಾಗುವುದು. ರೈತ ಮಹಿಳೆಯರಲ್ಲಿ ಹೈನುಗಾರಿಕೆಯನ್ನು ಪ್ರೋತ್ಸಾಹಿಸಲು ಹಸು/ಎಮ್ಮೆ ಖರೀದಿಗೆ ಪಡೆಯುವ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡುವ ಮಹಿಳೆಯರಿಗೆ ರಾಜ್ಯ ಸರ್ಕಾರದಿಂದಲೇ ಶೇ.6ರ ಬಡ್ಡಿ ಸಹಾಯಧನ ನೀಡಲಾಗುವುದು. ಮೀನುಗಾರಿಕೆ ನಿಷೇಧದ ಅವಧಿಯಲ್ಲಿ ಕರಾವಳಿಯ ಮೀನುಗಾರರಿಗೆ ನೀಡುತ್ತಿರುವ ಪರಿಹಾರ ಮೊತ್ತದ ರಾಜ್ಯದ ಪಾಲನ್ನು 1,500 ರೂಪಾಯಿಗಳಿಂದ 3,000 ರೂಪಾಯಿಗೆ ಹೆಚ್ಚಿಸಲಾಗುವುದು. ಸಮುದ್ರ ಮೀನುಗಾರಿಕೆಗೆ ತೆರಳಿದಾಗ ಅಪಘಾತ ಅಥವಾ ಅನಾರೋಗ್ಯಕ್ಕೆ ಒಳಗಾಗುವ ಮೀನುಗಾರರನ್ನು ತ್ವರಿತವಾಗಿ ದಡಕ್ಕೆ ತರಲು ರಾಜ್ಯದಲ್ಲಿ ಪ್ರಪ್ರಥಮ ಸಮುದ್ರ ಆಂಬುಲೆನ್ಸ್ ಅನ್ನು 7 ಕೋಟಿ ರೂಪಾಯಿ ವೆಚ್ಚದಲ್ಲಿ ಖರೀದಿಸಲಾಗುವುದು.
ಹಾಗೇ ಅಲ್ಪಸಂಖ್ಯಾತ ಸಮುದಾಯಕ್ಕೂ ಅನುದಾನ ಘೋಷಣೆ ಮಾಡಲಾಗಿದೆ. ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮಕ್ಕೆ ಬರೋಬ್ಬರಿ 393 ಕೋಟಿ ರೂಪಾಯಿ ಅನುದಾನ ನೀಡುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಶುಲ್ಕ ಭರಿಸುವ ಯೋಜನೆ ಮತ್ತೆ ಆರಂಭ ಮಾಡಲಾಗುತ್ತದೆ. ಅಲ್ಪಸಂಖ್ಯಾತ ಉದ್ಯಮಶೀಲರು ಕೈಗಾರಿಕೆ ಸ್ಥಾಪನೆಗೆ 10 ಕೋಟಿವರೆಗೂ ಸಾಲ ಸೌಲಭ್ಯ, ಅಲ್ಪಸಂಖ್ಯಾತ ಮಹಿಳಾ ಸ್ವ- ಸಹಾಯ ಗುಂಪುಗಳಿಗೆ 10 ಕೋಟಿ ಅನುದಾನ ನೀಡಲಾಗುತ್ತದೆ. ರಾಜ್ಯದಲ್ಲಿ ವಕ್ಫ್ ಆಸ್ತಿಗಳ ರಕ್ಷಣೆಗೆ 100 ಕೋಟಿ, ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿಗಾಗಿ 200 ಕೋಟಿ, ಜೈನರ ಧಾರ್ಮಿಕ ಸ್ಥಳಗಳ ಅಭಿವೃದ್ಧಿಗೆ 50 ಕೋಟಿ ರೂಪಾಯಿ ಮೀಸಲಿಡಲಾಗಿದೆ.
ಬೆಳಗ್ಗೆ 10.15 ಕ್ಕೆ ಬಜೆಟ್ ಓದಲು ಶುರು ಮಾಡಿದ ಸಿಎಂ ಸಿದ್ದರಾಮಯ್ಯ ಮಧ್ಯಹ್ನ 1.30 ಕ್ಕೆ ಪೂರ್ಣಗೊಳಿಸಿದರು. ಈ ಮೂಲಕ ಸತತ 3 ಗಂಟೆ 15 ನಿಮಿಷಗಳ ಕಾಲ ಬಜೆಟ್ ಮಂಡನೆ ಮಾಡಿದ್ರು. ಬಜೆಟ್ ನಲ್ಲಿ ಮತ್ತೆ ಮದ್ಯಪ್ರಿಯರಿಗೆ ಶಾಕ್ ನೀಡಿದ್ದು, ದರ ಮತ್ತೆ ಹೆಚ್ಚಿಸಲು ತೀರ್ಮಾನ ಮಾಡಲಾಗಿದೆ. ಹಾಗೇ ಆನ್ಲೈನ್ ಡೆಲಿವರಿ ಮೇಲೆ ಸೆಸ್ ವಿಧಿಸಲು ಮುಂದಾಗಿದೆ. ಒಟ್ಟಾರೆ ಅಳೆದು ತೂಗಿ ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆ ಮಾಡಿದ್ದಾರೆ. ರಾಜ್ಯ ಬಿಜೆಪಿ ನಾಯಕರು ಇದು ಬಜೆಟ್ ಅಲ್ಲ. ಇದು ಕರ್ನಾಟಕ ಜನತೆಯ ಕಿವಿ ಮೇಲೆ ಹೂವಿನ ತೋಟ.. ರೈತ ವಿರೋಧಿ ಬಜೆಟ್ ಎಂದು ಟ್ವೀಟ್ ಮೂಲಕ ವ್ಯಂಗ್ಯವಾಡಿದ್ದಾರೆ. ಸಾಲ- ಶೂಲದ ಹರಿಕಾರ ಸಾಲರಾಮಯ್ಯ ಎಂದು ಕಿಡಿ ಕಾರಿದ್ದಾರೆ.