5 ವರ್ಷಗಳ ಬಳಿಕ ಕನ್ನಡಿಗರಿಗೆ ಬೆಳಗಾವಿ ಮೇಯರ್ ಸ್ಥಾನ! – ಪೌರ ಕಾರ್ಮಿಕ ಮಹಿಳೆಗೆ ಒಲಿದ ಮೇಯರ್ ಪಟ್ಟ!
ಬೆಳಗಾವಿ ಮಹಾನಗರ ಪಾಲಿಕೆಯ 22 ನೇ ಅವಧಿಗೆ ನೂತನ ಮೇಯರ್ ಅನ್ನು ಆಯ್ಕೆ ಮಾಡಲಾಗಿದೆ. ಪೌರಕಾರ್ಮಿಕ ಮಹಿಳೆ ಸವಿತ ಕಾಂಬಳೆ ಎಂಬವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಇದನ್ನೂ ಓದಿ: ಕರ್ನಾಟಕರ ರೈತರು ಪೊಲೀಸರ ವಶಕ್ಕೆ – ಮಧ್ಯಪ್ರದೇಶ ಸಿಎಂಗೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ
ಬೆಳಗಾವಿ ಮಹಾನಗರ ಪಾಲಿಕೆಯನ್ನು ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಪೌರ ಕಾರ್ಮಿಕ ಮಹಿಳೆ, ಕನ್ನಡತಿ ಸವಿತಾ ಕಾಂಬಳೆ ಅವರಿಗೆ ಮೇಯರ್ ಪಟ್ಟ ಒಲಿದುಬಂದಿದೆ. ಆ ಮೂಲಕ 5 ವರ್ಷಗಳ ಬಳಿಕ ಬೆಳಗಾವಿ ಮಹಾನಗರಕ್ಕೆ ಕನ್ನಡ ಭಾಷಿಕರೊಬ್ಬರು ಮೇಯರ್ ಆಗಿದ್ದಾರೆ. ಉಪಮೇಯರ್ ಆಗಿ ಮರಾಠಿಯ ಆನಂದ್ ಚವ್ಹಾಣ್ ಆಯ್ಕೆಯಾಗಿದ್ದಾರೆ. ಬಿಜೆಪಿಯ ಆನಂದ್ ಚವ್ಹಾಣ್ 39 ಮತ ಹಾಗೂ ಕಾಂಗ್ರೆಸ್ನ ಜ್ಯೋತಿ ಕಡೋಲ್ಕರ್ 20 ಮತಗಳು ಪಡೆದುಕೊಂಡಿದ್ದಾರೆ. ಇದರೊಂದಿಗೆ ಆನಂದ್ ಗೆಲುವುಸಾಧಿಸಿದ್ದಾರೆ.
ಬೆಳಗಾವಿ ಮೇಯರ್ ಆಗಿ ಆಯ್ಕೆಯಾಗಿರುವ ಸವಿತಾ ಕಾಂಬಳೆ ಅವರು ಕೆಲ ವರ್ಷಗಳ ಹಿಂದೆ ಇದೇ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಪೌರಕಾರ್ಮಿಕರಾಗಿ ಕೆಲಸ ಮಾಡಿದ್ದಾರೆ. ನಂತರ ಹೆಲ್ಮೆಟ್ ಕಂಪನಿಯೊಂದರಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದರು. ತದನಂತರ ಅವರು ಊದುಬತ್ತಿ ತಯಾರಿಕಾ ಘಟಕ ಶುರು ಮಾಡಿದ್ದರು. ಆದ್ರೆ, 2021ರಲ್ಲಿ ಅವರಿಗೆ ಒಲಿದು ಬಂದ ಅವಕಾಶ ಬಳಸಿಕೊಂಡು ಬಿಜೆಪಿಯಿಂದ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿದ್ದರು. ಇದೀಗ ಪೌರಕಾರ್ಮಿಕ ಆಗಿ ಕೆಲಸ ಮಾಡಿದ್ದ ಸವಿತಾ ಕಾಂಬಳೆ ಬೆಳಗಾವಿ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.