ಮಂಡ್ಯ ಕ್ಷೇತ್ರದ ಅಭ್ಯರ್ಥಿಯಾಗಲು ತಂದೆ ಮಗ ಹಿಂದೇಟು – ದಳಕ್ಕೆ ಅಭ್ಯರ್ಥಿ ಆಯ್ಕೆ ಕಗ್ಗಂಟು!
ಲೋಕಸಭೆ ಚುನಾವಣೆಗೆ ಟೆಕೆಟ್ ಹಂಚಿಕೆ ವಿಚಾರದಲ್ಲಿ ಮಂಡ್ಯ ಕ್ಷೇತ್ರ ಗಮನ ಸೆಳೆದಷ್ಟು ಯಾವ ಕ್ಷೇತ್ರವೂ ರಂಗು ಪಡೆದಿಲ್ಲ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಹಲವು ರಾಜಕೀಯ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿದೆ. ಮಂಡ್ಯ ಕ್ಷೇತ್ರದ ಸೀಟು ಯಾವ ಪಕ್ಷಕ್ಕೆ ಎಂಬುದು ಇನ್ನೂ ಅಂತಿಮವಾಗಿಲ್ಲ. ಇದರ ಮಧ್ಯೆ ದಳಪತಿಗಳಿಗೆ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿದೆ.
ಇದನ್ನೂ ಓದಿ:ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ? – ಸೋತ ಕ್ಷೇತ್ರದಲ್ಲಿಯೇ ರಣತಂತ್ರ ರೂಪಿಸುತ್ತಿರುವ ದಳಪತಿಗಳು..!
ಲೋಕಸಭಾ ಚುನಾವಣೆಗೆ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಿದ್ರೆ ಒಳ್ಳೇದು ಅಂತಾ ಮಂಡ್ಯ ಜಿಲ್ಲೆಯ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಒತ್ತಾಯಿಸುತ್ತಲೇ ಇದ್ದಾರೆ. ಕಳೆದ ಬಾರಿ ಸುಮಲತಾ ಅಂಬರೀಶ್ ಅನುಕಂಪದ ಆಧಾರದಲ್ಲಿ ಗೆದ್ದು ಬಂದಿದ್ರು. ಈ ಬಾರಿ ಸುಮಲತಾ ಪರ ಅಲೆ ಇಲ್ಲ. ಹೀಗಾಗಿ ನಿಖಿಲ್ ಸ್ಪರ್ಧಿಸಿದ್ರೆ ಗೆದ್ದೇ ಗೆಲ್ತಾರೆ ಎಂದು ಒತ್ತಾಯ ಮಾಡ್ತಿದ್ದಾರೆ. ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರಿಗೂ ಮನವಿ ಮಾಡಿದ್ದಾರೆ. ಆದ್ರೆ ನಿಖಿಲ್ ಮಾತ್ರ ಯಾವುದೇ ಕಾರಣಕ್ಕೂ ನಾನು ಸ್ಪರ್ಧೆ ಮಾಡಲ್ಲ ಅಂತಾ ಕಡ್ಡಿತುಂಡು ಮಾಡಿದಂತೆ ಹೇಳಿದ್ದಾರೆ. ಮತ್ತೊಂದೆಡೆ ಹೆಚ್.ಡಿ ಕುಮಾರಸ್ವಾಮಿಯವ್ರನ್ನೇ ಲೋಕಸಭಾ ಅಖಾಡಕ್ಕೆ ಇಳಿಸೋ ಚಿಂತನೆ ನಡೆದಿದೆ. ಬಿಜೆಪಿ ಹೈಕಮಾಂಡ್ ಮಟ್ಟದಲ್ಲೂ ಚರ್ಚೆಯಾಗಿದೆ. ಆದ್ರೆ ಕುಮಾರಣ್ಣ ಕೂಡ, ನಾನು ರಾಜ್ಯ ಬಿಟ್ಟು ರಾಷ್ಟ್ರ ರಾಜಕಾರಣಕ್ಕೆ ಹೋಗಲ್ಲ ಅಂತಿದ್ದಾರೆ. ಈ ಮೂಲಕ ತಂದೆ ಮಗ ಇಬ್ಬರೂ ಮಂಡ್ಯ ಕ್ಷೇತ್ರದ ಅಭ್ಯರ್ಥಿಯಾಗಲು ಹಿಂದೇಟು ಹಾಕಿದ್ದಾರೆ. ಇದು ಜೆಡಿಎಸ್ ಪಾಲಿಗೆ ಬಿಸಿತುಪ್ಪವಾಗಿದ್ದು, ಗೆಲ್ಲುವ ಅಭ್ಯರ್ಥಿ ಆಯ್ಕೆಯೇ ಕಷ್ಟವಾಗಿದೆ.
ಮಂಡ್ಯ ಕ್ಷೇತ್ರದಲ್ಲಿ ಜೆಡಿಎಸ್ಗೆ ಅತಿದೊಡ್ಡ ಸವಾಲು ಅಂದ್ರೆ ಅದು ಸುಮಲತಾ ಅಂಬರೀಶ್. ಕಳೆದ ಬಾರಿಯೇ ಪಕ್ಷೇತರ ಅಭ್ಯರ್ಥಿಯಾಗಿ ನಿಖಿಲ್ ವಿರುದ್ಧ ಗೆದ್ದು ಬೀಗಿದ್ರು. ಈ ಸಲ ಬಿಜೆಪಿ ಟಿಕೆಟ್ ಸಿಗದಿದ್ರೆ ಮತ್ತೆ ಪಕ್ಷೇತರವಾಗಿ ಕಣಕ್ಕಿಳಿಯೋದಾಗಿ ಘೋಷಿಸಿದ್ದಾರೆ. ಈಗಾಗ್ಲೇ ನಿಖಿಲ್ ಲೋಕಸಭೆ ಮತ್ತು ವಿಧಾನಸಭೆ ಎರಡರಲ್ಲೂ ಸೋಲು ಕಂಡಿದ್ದಾರೆ. ಈಗೇನಾದ್ರೂ ಮತ್ತೆ ಸ್ಪರ್ಧಿಸಿ ಸೋತರೆ ನಿಖಿಲ್ ರಾಜಕೀಯ ಭವಿಷ್ಯವೇ ಕಮರಿ ಹೋಗುವ ಆತಂತ ದೊಡ್ಡಗೌಡ್ರ ಕುಟುಂಬಕ್ಕಿದೆ. ಹೀಗಾಗಿ ಎಚ್ಚರಿಕೆಯ ಹೆಜ್ಜೆ ಇಡಲು ಮುಂದಾಗಿದ್ದಾರೆ. ಆದ್ರೆ ಕಾಂಗ್ರೆಸ್ ಮಾತ್ರ ಈ ಎಲ್ಲಾ ಲಾಭಗಳನ್ನ ಪಡೆದುಕೊಂಡು ತಮ್ಮ ಅಭ್ಯರ್ಥಿಯನ್ನ ಗೆಲ್ಲಿಸಿಕೊಳ್ಳೋಕೆ ಎಲ್ಲಾ ತಯಾರಿ ಮಾಡಿಕೊಳ್ತಿದ್ದಾರೆ. ಇದು ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೆ ಅನ್ನೋದನ್ನ ಕಾದು ನೋಡ್ಬೇಕು.