ಮೂರನೇ ದಿನಕ್ಕೆ ಕಾಲಿಟ್ಟ ದೆಹಲಿ ಚಲೋ ಚಳವಳಿ – ಪಂಜಾಬ್ನಲ್ಲಿ ರೈಲು ತಡೆದು ಪ್ರತಿಭಟನೆ
ರೈತ ಸಂಘಟನೆಗಳ ದೆಹಲಿ ಚಲೋ ಚಳವಳಿ ಮೂರನೇ ದಿನಕ್ಕೆ ಕಾಲಿಟ್ಟಿದ್ದಾರೆ. ದಿನದಿಂದ ದಿನಕ್ಕೆ ರೈತರ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ರಾಷ್ಟ್ರ ರಾಜಧಾನಿ ದೆಹಲಿಯ ಪ್ರತಿಯೊಂದು ಗಡಿಯಲ್ಲೂ ರೈತರ ಚಳಿವಳಿಯ ಪರಿಣಾಮ ಗೋಚರಿಸುತ್ತಿದೆ. ಗುರುವಾರ ರೈತರು ರೈಲುಗಳನ್ನು ತಡೆದು ಪ್ರತಿಭಟನೆ ನಡೆಸಿದ್ದಾರೆ.
ಇದನ್ನೂ ಓದಿ: ಮಗುವಿಗೆ ಬಾಟಲಿಯಲ್ಲಿ ಹಾಲು ಕುಡಿಸ್ತೀರಾ? – ನಿಮ್ಮ ಮಗುವಿನ ಆರೋಗ್ಯದ ಕಾಳಜಿ ಇಲ್ವಾ?
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ 200ಕ್ಕೂ ಹೆಚ್ಚು ರೈತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಈ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದೆ. ಕಳೆದ ಎರಡು ದಿನಗಳಿಂದ ರೈತರ ಪ್ರತಿಭಟನೆ ಹಿನ್ನೆಲೆ ದೆಹಲಿ ಸೇರಿದಂತೆ ಪಂಜಾಬ್, ಹರ್ಯಾಣ ಸಾಕಷ್ಟು ಕಡೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಮಂಗಳವಾರ ರೈತರ ಚಳವಳಿಯಿಂದಾಗಿ ಪೊಲೀಸರು ಹಾಗೂ ರೈತರ ನಡುವೆ ಘರ್ಷಣೆ ಏರ್ಪಟ್ಟಿತ್ತು. ರೈತರನ್ನು ದೆಹಲಿಗೆ ಪ್ರವೇಶಿಸದಂತೆ ತಡೆಯಲು ಪೊಲೀಸರು ಡ್ರೋನ್ ಮೂಲಕ ಅಶ್ರುವಾಯು ಶೆಲ್ಗಳನ್ನು ಸಿಡಿಸಿದ್ದರು. ರೈತರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಗುರುವಾರ ರೈತರು ಪಂಜಾಬ್ನಲ್ಲಿ ರೈಲುಗಳನ್ನು ತಡೆದು ಪ್ರತಿಭಟನೆ ನಡೆಸಿದ್ದಾರೆ.
ರೈತರು ದೆಹಲಿಗೆ ಬರುವುದನ್ನು ತಡೆಯಲು ಗಡಿಯಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಟಿಕ್ರಿ, ಸಿಂಗು ಮತ್ತು ಝರೋಡಾ ಗಡಿಯನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ರೈತರು ಟ್ರ್ಯಾಕ್ಟರ್ ಮತ್ತು ಟ್ರಾಲಿಗಳೊಂದಿಗೆ ರಾಜಧಾನಿ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ. ಉತ್ತರ ಪ್ರದೇಶ ಜೊತೆಗಿನ ಚಿಲ್ಲಾ-ಗಾಜಿಪುರ ಗಡಿಯನ್ನೂ ಮುಚ್ಚಲಾಗಿದೆ. ದೆಹಲಿ ಪೊಲೀಸರು ಪ್ರವೇಶ, ನಿರ್ಗಮನ ಸ್ಥಳಗಳಲ್ಲಿ ಬ್ಯಾರಿಕೇಡ್ಗಳು, ಕಬ್ಬಿಣದ ಮೊಳೆಗಳು ಹಾಗೂ ಕಾಂಕ್ರೀಟ್ ಬ್ಯಾರಿಕೇಡ್ಗಳನ್ನು ಅಳವಡಿಸಿದೆ.