ಸುಮಲತಾ ಮಂಡ್ಯ ಮತದಾರರ ವಿಶ್ವಾಸ ಕಳೆದುಕೊಂಡ್ರಾ..?- ಮತದಾರರಿಗೆ ಗಗನಕುಸುಮವಾದ ಸುಮಲತಾ!

ಸುಮಲತಾ ಮಂಡ್ಯ ಮತದಾರರ ವಿಶ್ವಾಸ ಕಳೆದುಕೊಂಡ್ರಾ..?- ಮತದಾರರಿಗೆ ಗಗನಕುಸುಮವಾದ ಸುಮಲತಾ!

2019ರ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಫಲಿತಾಂಶ ಹಲವು ಅಚ್ಚರಿಗಳಿಗೆ ಸಾಕ್ಷಿಯಾಗಿತ್ತು. 28 ಸ್ಥಾನಗಳ ಪೈಕಿ ಬಿಜೆಪಿ ಬರೋಬ್ಬರಿ 25 ಕ್ಷೇತ್ರಗಳನ್ನ ಗೆದ್ರೆ ಕಾಂಗ್ರೆಸ್ ಮತ್ತು ಜೆಡಿಎಸ್ ತಲಾ ಒಂದೊಂದು ಕ್ಷೇತ್ರಕ್ಕೆ ತೃಪ್ತಿ ಪಟ್ಟುಕೊಂಡಿದ್ವು. ಆದ್ರೆ ಪಕ್ಷೇತರ ಅಭ್ಯರ್ಥಿಯಾಗಿ ಮಂಡ್ಯದಲ್ಲಿ ಗೆದ್ದು ಬೀಗಿದ್ದ ಸುಮಲತಾ ಅಂಬರೀಶ್ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ್ದರು. ಅದೂ ಕೂಡ ಅಂದಿನ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ವಿರುದ್ಧದ ಗೆಲುವು ಅನ್ನೋದೇ ದೊಡ್ಡ ಸಂಚಲನ ಮೂಡಿಸಿತ್ತು. ಮಂಡ್ಯದ ಜನ ಪಕ್ಷವನ್ನ ನೋಡದೆ ಸುಮಲತಾ ಬೆನ್ನಿಗೆ ನಿಂತಿದ್ರು. ಆದ್ರೀಗ ಅದೇ ಜನರ ನಂಬಿಕೆ ಹುಸಿಯಾಯ್ತಾ ಅನ್ನೋ ಪ್ರಶ್ನೆ ಮೂಡಿದೆ. ಹಾಗಾದ್ರೆ ಸುಮಲತಾ ಮಂಡ್ಯ ಮತದಾರರ ವಿಶ್ವಾಸ ಕಳೆದುಕೊಂಡ್ರಾ..?, ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿಲ್ವಾ..? ಅಂಕಿಅಂಶಗಳು ಏನು ಹೇಳುತ್ತವೆ..? ಈ ಬಗೆಗಿನ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:ಸಂಸದೆ ಸುಮಲತಾಗೆ ಪ್ರಧಾನಿ ನೀಡಿದ್ರಾ ಅಭಯ? – ಮೋದಿ ಆಡಿದ ಭರವಸೆ ಮಾತುಗಳಿಂದ ಸುಮಲತಾ ಫುಲ್ ಖುಷ್

ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಏಕೈಕ ಪಕ್ಷೇತರ ಸಂಸದೆಯಾಗಿ ಆಯ್ಕೆಯಾದವರು ಸುಮಲತಾ ಅಂಬರೀಶ್. ಸ್ವಾಭಿಮಾನಿ, ಮನೆ-ಮಗಳು, ಮಂಡ್ಯದ ಹೆಣ್ಣು ಎನ್ನುತ್ತಲೇ ಭಾವನಾತ್ಮಕ ವಿಚಾರಗಳಿಂದ ಸುಮಲತಾ ಸದ್ದು ಮಾಡಿದ್ದರು. ಮಂಡ್ಯದ ಸೊಸೆಯನ್ನ ಗೆಲ್ಲಿಸಿ ಎಂದು ಸೆರಗೊಡ್ಡಿ ಬೇಡಿದ್ದರು. ಸಹಜವಾಗಿಯೇ ಸುಮಲತಾ ಮೇಲೆ ಮಂಡ್ಯ ಕ್ಷೇತ್ರದ ಜನ ಸಾಕಷ್ಟು ನಿರೀಕ್ಷೆಗಳನ್ನ ಇರಿಸಿಕೊಂಡಿದ್ದರು. ಆದ್ರೆ ಸಂಸದೆಯಾಗಿ ಆಯ್ಕೆಯಾದ ಮೇಲೆ ಸುಮಲತಾ ಮಂಡ್ಯದ ಜನರಿಂದ ದೂರವೇ ಉಳಿದರು ಎಂಬ ಆರೋಪವಿದೆ. ಕ್ಷೇತ್ರದ ಅಭಿವೃದ್ಧಿಯಲ್ಲಿ ವಿಫಲರಾಗಿದ್ದಾರೆ. ಯಾವುದೇ ವಿಶೇಷ ಅನುದಾನ, ಯೋಜನೆ ಇಲ್ಲದೆ ಸಂಸದರ ನಿಧಿಗೆ ಮಾತ್ರ ಕ್ಷೇತ್ರದ ಅಭಿವೃದ್ಧಿ ಸೀಮಿತವಾಗಿದ್ದು, ದಿಶಾ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದಷ್ಟೇ ಸಾಧನೆ ಎನ್ನುವ ಆಕ್ಷೇಪವಿದೆ.

ಮಂಡ್ಯ ಸಂಸದೆಯಾದ್ರೂ ಸುಮಲತಾ ಕ್ಷೇತ್ರದಲ್ಲಿ ನೆಲೆಸಿಲ್ಲ. ತಿಂಗಳಿಗೊಮ್ಮೆ ಜಿಲ್ಲೆಗೆ ಭೇಟಿ ನೀಡುವ ಸುಮಲತಾ ಎರಡು ದಿನಗಳ ಕಾಲ ಕ್ಷೇತ್ರದ ಗ್ರಾಮಗಳಿಗೆ ಭೇಟಿ ನೀಡ್ತಾರೆ. ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಹಿಂತಿರುಗುವುದನ್ನು ವಾಡಿಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಕ್ಷೇತ್ರದಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸೋದಕ್ಕಿಂತ ತಮ್ಮ ಸೀಮಿತ ಆಪ್ತ ವಲಯಕ್ಕಷ್ಟೇ ಲಭ್ಯವಾಗುತ್ತಿದ್ದಾರೆ ಎನ್ನಲಾಗಿದೆ. ಮತದಾರರ ನೇರ ಭೇಟಿ ಈವರೆಗೂ ಗಗನ ಕುಸುಮವಾಗಿಯೇ ಉಳಿದಿದೆ. ಅಲ್ದೇ ಚುನಾವಣೆಯಲ್ಲಿ ಸುಮಲತಾರಿಗಾಗಿ ದುಡಿದ ಇತರ ಪಕ್ಷಗಳ ಮುಖಂಡರೊಂದಿಗೂ ಅಂತರ ಕಾಯ್ದುಕೊಂಡಿದ್ದಾರೆ. ಕೇಂದ್ರ ಮತ್ತು ರಾಜ್ಯದೊಂದಿಗೆ ಸಮನ್ವಯ ಸಾಧಿಸಿ ಕ್ಷೇತ್ರಕ್ಕೆ ಅಭಿವೃದ್ಧಿ ಯೋಜನೆಗಳನ್ನು ತರುವ ಪ್ರಯತ್ನವನ್ನೂ ಗಂಭೀರವಾಗಿ ನಡೆಸಿಲ್ಲ ಎಂಬ ಆರೋಪವಿದೆ.

ಆದ್ರೆ ಸಂಸದೆ ಸುಮಲತಾ ಮಂಡ್ಯ ಕ್ಷೇತ್ರದಲ್ಲಿ  ಸದ್ದು ಮಾಡಿದ್ದು ಕೆಆರ್‌ಎಸ್‌ ಜಲಾಶಯದ ರಕ್ಷಣೆ ದೃಷ್ಟಿಯಿಂದ. ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ರೈತರು ಹಾಗೂ ನಾನಾ ಸಂಘಟನೆಗಳು ಹೋರಾಟ ನಡೆಸಿದ್ವು. ಇದ್ರಲ್ಲಿ ಸುಮಲತಾ ಕೂಡ ಭಾಗಿಯಾಗಿದ್ರು. ಈ ಹೋರಾಟದ ಪರಿಣಾಮ ಕೆಆರ್‌ಎಸ್‌ ಜಲಾಶಯದಿಂದ 20 ಕಿಲೋಮೀಟರ್ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿರ್ಬಂಧಗೊಳಿಸಲಾಗಿದೆ. ಹಾಗೇ ಬೆಂಗಳೂರು-ಮೈಸೂರು ಹೆದ್ದಾರಿ ಕಾಮಗಾರಿಯ ಲೋಪಗಳ ಬಗ್ಗೆ ಹೋರಾಟ ನಡೆಸಿ ಗಮನ ಸೆಳೆದಿದ್ದಾರೆ. ಜೊತೆಗೆ ಸಂಸದರ ಪ್ರದೇಶಾಭಿವೃದ್ಧಿ ನಿಧಿ ಯೋಜನೆಯಡಿ ಜಿಲ್ಲೆಯಲ್ಲಿ ಕೆಲವೊಂದು ಅಭಿವೃದ್ಧಿ ಮಾಡಿದ್ದಾರೆ.

ಸಂಸದರ ಪ್ರದೇಶಾಭಿವೃದ್ಧಿ ನಿಧಿ ಯೋಜನೆಯಡಿ ಮಿಮ್ಸ್‌ ಬೋಧಕ ಆಸ್ಪತ್ರೆಗೆ 1 ಐಸಿಯು ಆಂಬ್ಯುಲೆನ್ಸ್‌, 4 ಸುಸಜ್ಜಿತ ಆಂಬ್ಯುಲೆನ್ಸ್‌, 6 ವೆಂಟಿಲೇಟರ್‌ಗಳು, ವಿಶೇಷಚೇತನರಿಗೆ 70 ಯಂತ್ರಚಾಲಿತ ತ್ರಿಚಕ್ರ ವಾಹನಗಳು, 25 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. 7 ಶಾಲೆಗಳು, 5 ಅಂಗನವಾಡಿಗಳು, 5 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕಟ್ಟಡಗಳು, 73 ಸಮುದಾಯ ಭವನಗಳು, 5 ಅಂಬೇಡ್ಕರ್‌ ಭವನಗಳು, 1 MPCS ಕಟ್ಟಡ, ಪಾಂಡವಪುರದಲ್ಲಿ ಒಂದು ಗುರುಭವನ ಕಟ್ಟಡವನ್ನು ಅಭಿವೃದ್ಧಿಪಡಿಸಲಾಗಿದೆ. ಕ್ಷೇತ್ರದಲ್ಲಿ 5 ಬಸ್‌ ನಿಲ್ದಾಣಗಳು, ಮಳವಳ್ಳಿಯಲ್ಲಿ1 ಶೌಚಾಲಯ ನಿರ್ಮಿಸಲಾಗಿದೆ. 8 ಗ್ರಾಮಗಳಲ್ಲಿ ಹೈಮಾಸ್ವ್‌ ಬೀದಿದೀಪಗಳನ್ನು ಅಳವಡಿಸಲಾಗಿದೆ. ಹಾಗೇ ಸಂಸದರ ಪ್ರದೇಶಾಭಿವೃದ್ಧಿನಿಧಿಯಿಂದ ನಾಲ್ಕೂವರೆ ವರ್ಷಗಳಲ್ಲಿ ಒಟ್ಟು 17 ಕೋಟಿ ರೂಪಾಯಿ ಬಿಡುಗಡೆಯಾಗಿದೆ. ಬಳಕೆಯಾಗದ ನಿಧಿಯಿಂದ 30.98 ಲಕ್ಷ ರೂಪಾಯಿ ಬಡ್ಡಿ ಬಂದಿದೆ. ಇದರೊಂದಿಗೆ  ರಾಜ್ಯಸಭೆ ಸದಸ್ಯರ ನಿಧಿಯಿಂದಲೂ ಜಿಲ್ಲೆಗೆ 3.08 ಕೋಟಿ ರೂಪಾಯಿ ಬಿಡುಗಡೆಯಾಗಿದೆ. ಒಟ್ಟಾರೆ ಜಿಲ್ಲೆಗೆ ಬಂದ 20.39 ಕೋಟಿ ರೂಪಾಯಿಗಳಲ್ಲಿ ಈವರೆಗೆ 11.32 ಕೋಟಿ ರೂಪಾಯಿಗಳಷ್ಟೇ ಖರ್ಚಾಗಿದೆ. ಇನ್ನು, ಸುಮಲತಾ ಅಂಬರೀಶ್‌ ಅವರು ಲೋಕಸಭೆಯ ಕಲಾಪದಲ್ಲಿ 201 ಪ್ರಶ್ನೆಗಳನ್ನು ಕೇಳಿದ್ದಾರೆ. ಕೆಆರ್‌ಎಸ್, ಗಣಿಗಾರಿಕೆ, ಹೆದ್ದಾರಿ, ಬರ, ರೈತರ ವಿಷಯ ಸೇರಿದಂತೆ 24 ಚರ್ಚೆಯಲ್ಲಿ ಪಾಲ್ಗೊಂಡಿದ್ದಾರೆ. ಅಧಿವೇಶನಗಳಲ್ಲಿ ಶೇಕಡಾ 64ರಷ್ಟು ಹಾಜರಾತಿಯನ್ನು ಸುಮಲತಾ ಹೊಂದಿದ್ದಾರೆ.

ಇನ್ನು ಜಿಲ್ಲೆಯಲ್ಲಿ ಕಾಲಕಾಲಕ್ಕೆ ದಿಶಾ ಮತ್ತು ಕೆಡಿಪಿ ಸಭೆಗಳನ್ನು ಸಂಸದೆ ಸುಮಲತಾ ಅಂಬರೀಶ್ ನಡೆಸಿದ್ದಾರೆ.  ದಿಶಾ ಸಭೆಗಳನ್ನು ನಡೆಸಿದ ಸಂಸದರ ಪಟ್ಟಿಯಲ್ಲಿ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಆದರೆ, ಬಹುತೇಕ ಕೆಡಿಪಿ ಮತ್ತು ದಿಶಾ ಸಭೆಗಳು ಗಣಿಗಾರಿಕೆ ವಿಚಾರದ ಮೇಲಿನ ಚರ್ಚೆಗಷ್ಟೇ ಸೀಮಿತವಾಗಿವೆ. ಇದನ್ನೆಲ್ಲಾ ನೋಡಿದ್ರೆ ಎಲ್ಲೋ ಒಂದು ಕಡೆ ಸುಮಲತಾ ಸಭೆಗಳಿಗಷ್ಟೇ ಸೀಮಿತವಾದ್ರು. ಕ್ಷೇತ್ರದ ಮತದಾರರ ಸಮಸ್ಯೆಗಳನ್ನ ಖುದ್ದು ಆಲಿಸಲಿಲ್ಲ ಎಂಬ ಆರೋಪವಿದೆ. ಇದೇ ಕಾರಣಕ್ಕೆ ಸುಮಲತಾ ಜನಪ್ರಿಯತೆ ಕುಗ್ಗುತ್ತಿದೆ. ಈ ಸಲ ಚುನಾವಣೆಯಲ್ಲಿ ಗೆಲುವು ಕೂಡ ಕಷ್ಟ ಎಂದೇ ವಿಶ್ಲೇಷಿಸಲಾಗುತ್ತಿದೆ.

 

Sulekha