ತೆವಳುತ್ತಾ ಸಾಗುತ್ತಿದೆ ಲಾಲ್ ಸಲಾಂ ಸಿನಿಮಾ – ನಾಲ್ಕು ದಿನದಲ್ಲಿ ಕೇವಲ 11 ಕೋಟಿ ರೂಪಾಯಿ ಗಳಿಕೆ
ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಲಾಲ್ ಸಲಾಂ ಸಿನಿಮಾ ಯಾಕೋ ಸದ್ದೇ ಮಾಡುತ್ತಿಲ್ಲ. ಥಿಯೇಟರ್ನಲ್ಲಿ ಸೂಪರ್ ಸ್ಟಾರ್ ಫ್ಯಾನ್ಸ್ ಅಬ್ಬರಿಸುತ್ತಿಲ್ಲ. ಬಹುನಿರೀಕ್ಷೆಯ ಚಿತ್ರ ನೋಡಲು ಅಭಿಮಾನಿಗಳು ಬರುತ್ತಿಲ್ಲ. ಹೀಗಾಗಿ ರಜನಿಕಾಂತ್ ಅಭಿನಯದ ಲಾಲ್ ಸಲಾಂ ಚಿತ್ರ ತೆವಳಿಕೊಂಡೇ ಸಾಗುತ್ತಿದ್ದು, ಕಷ್ಟಪಟ್ಟು 10 ಕೋಟಿ ರೂಪಾಯಿ ಗಳಿಕೆ ಕಂಡಿದೆ.
ಇದನ್ನೂ ಓದಿ: ಮಗಳ ಸಿನಿಮಾದಲ್ಲಿ ಮೊಹಿದ್ದೀನ್ ಭಾಯ್ ಆಗಿ ಕಾಣಿಸಿಕೊಂಡ ರಜನಿಕಾಂತ್ – ತಲೈವಾ ಫ್ಯಾನ್ಸ್ ಸಿಟ್ಟಾಗಿದ್ದೇಕೆ?
ಲಾಲ್ ಸಲಾಂ ಚಿತ್ರ ಫೆಬ್ರವರಿ 9ರಂದು ರಿಲೀಸ್ ಆಗಿತ್ತು. ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಮಂದಗತಿಯಲ್ಲಿ ಗಳಿಕೆ ಮಾಡುತ್ತಿದೆ. ಐಶ್ವರ್ಯಾ ರಜನಿಕಾಂತ್ ನಿರ್ದೇಶನದ ಈ ಚಿತ್ರಕ್ಕೆ ಲೈಕಾ ಪ್ರೊಡಕ್ಷನ್ ಬಂಡವಾಳ ಹೂಡಿದೆ. ಫೆಬ್ರವರಿ 12ರಂದು ಈ ಚಿತ್ರ ಕೇವಲ 1.13 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ ರಿಲೀಸ್ ಆದ ನಾಲ್ಕನೇ ದಿನಕ್ಕೆ ಚಿತ್ರ 11 ಕೋಟಿ ರೂಪಾಯಿ ಗಳಿಕೆ ಮಾಡಿದಂತೆ ಆಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಸಿನಿಮಾ ನಷ್ಟ ಅನುಭವಿಸಲಿದೆ.
ಮೊದಲ ಮೂರು ದಿನ ತಲಾ 3 ಕೋಟಿ ರೂಪಾಯಿಯನ್ನು ಚಿತ್ರ ಗಳಿಕೆ ಮಾಡಿತ್ತು. ಸೋಮವಾರ ಮತ್ತಷ್ಟು ಇಳಿಕೆ ಕಾಣುವ ಮೂಲಕ ಸಿನಿಮಾ ಸೋಮವಾರದ ಪರೀಕ್ಷೆಯಲ್ಲಿ ಫೇಲ್ ಆಗಿದೆ. ಚಿತ್ರದ ಒಟ್ಟಾರೆ ಗಳಿಕೆ 11 ಕೋಟಿ ರೂಪಾಯಿ ಆಗಿದೆ. ವಿದೇಶದಲ್ಲಿ ಈ ಚಿತ್ರ 3 ಕೋಟಿ ರೂಪಾಯಿ ಗಳಿಕೆ ಮಾಡಲಷ್ಟೇ ಸಾಧ್ಯವಾಗಿದೆ.
ಲಾಲ್ ಸಲಾಂ ಚಿತ್ರದಲ್ಲಿ ಮುರ್ದಾಬಾದ್ ಎಂಬ ಗ್ರಾಮದ ಕಥೆಯನ್ನು ಹೇಳಲಾಗಿದೆ. ಹಿಂದೂಗಳು ಹಾಗೂ ಮುಸ್ಲಿಮರು ಒಟ್ಟಾಗಿ ಸಹಬಾಳ್ವೆ ನಡೆಸುತ್ತಾ ಇರುತ್ತಾರೆ. ರಾಜಕಾರಣಿಗಳು ಮಾಡುವ ಕುತಂತ್ರದಿಂದ ಇಬ್ಬರ ಮಧ್ಯೆ ಕಿತ್ತಾಟ ಆರಂಭ ಆಗುತ್ತದೆ. ಈ ವಿಶೇಷ ಕಥಾ ಹಂದರದಲ್ಲಿ ರಜನಿಕಾಂತ್ ಅವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೊಯಿದ್ದೀನ್ ಭಾಯ್ ಪಾತ್ರ ಮಾಡಿದ್ದಾರೆ. ವಿಷ್ಣು ವಿಶಾಲ್ ಕೂಡ ಚಿತ್ರದಲ್ಲಿದ್ದಾರೆ. ಖ್ಯಾತ ಕ್ರಿಕೆಟರ್ ಕಪಿಲ್ ದೇವ್ ಅತಿಥಿ ಪಾತ್ರ ಮಾಡಿದ್ದಾರೆ. ರಜನಿಕಾಂತ್ ಹೀರೋ ಆಗಿ ಕಾಣಿಸಿಕೊಂಡ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಗಳಿಕೆ ಮಾಡಿದ ಉದಾಹರಣೆ ಇದೆ. ಆದರೆ, ‘ಲಾಲ್ ಸಲಾಂ’ ಚಿತ್ರದಲ್ಲಿ ರಜನಿಯದ್ದು ಅತಿಥಿ ಪಾತ್ರ ಎಂಬ ಕಾರಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಿನಿಮಾ ವೀಕ್ಷಣೆ ಮಾಡಿಲ್ಲ ಎನ್ನಲಾಗ್ತಿದೆ.