ಬೊಮ್ಮಾಯಿ ಅವ್ರನ್ನ ಸೋಲಿಸಲು ವಿಜಯೇಂದ್ರ ಷಡ್ಯಂತ್ರ – ಯತ್ನಾಳ್ ಹೊಸ ಬಾಂಬ್!
ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ಪಾಲಿಗೆ ಒಂಥರಾ ಬಿಸಿ ತುಪ್ಪ ಇದ್ದಂಗೆ. ಸ್ವಪಕ್ಷ ನಾಯಕರ ವಿರುದ್ಧವೇ ಹೇಳಿಕೆ ಕೊಡೋದು, ಭ್ರಷ್ಟಾಚಾರ ಮಾಡಿದ್ದಾರೆ ಅನ್ನೋದು, ಚಾಲೆಂಜ್ ಮಾಡೋದು ಹೊಸದೇನು ಅಲ್ಲ. ಬಿಎಸ್ ವೈ ವಿರುದ್ಧ 40 ಸಾವಿರ ಕೋಟಿ ಭ್ರಷ್ಟಾಚಾರ ಆರೋಪ, ಸಿಎಂ ಕುರ್ಚಿಗೆ 2 ಸಾವಿರ ಕೋಟಿ ಕೊಡ್ಬೇಕು ಎಂಬ ಗಂಭೀರ ಆರೋಪ ಮಾಡಿದ್ದರು. ಹೀಗೆ ತಮ್ಮದೇ ನಾಯಕರ ವಿರುದ್ಧ ಆರೋಪ ಮಾಡ್ತಾನೇ ಇರ್ತಾರೆ. ಅದ್ರಲ್ಲೂ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಹಾಗೂ ಪುತ್ರ ಬಿ.ವೈ ವಿಜಯೇಂದ್ರರನ್ನ ಕಂಡ್ರೆ ಕೆಂಡ ಕಾರ್ತಾರೆ. ಬಿಎಸ್ವೈ ಸಿಎಂ ಆಗಿದ್ದಾಗ ಸಂಪುಟದಲ್ಲಿ ಸಚಿವಸ್ಥಾನ ಸಿಗ್ಲಿಲ್ಲ ಅಂತಾ ಹೊತ್ತಿದ್ದ ಕಿಡಿ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಮೇಲಂತೂ ಯತ್ನಾಳ್ ನಿಗಿನಿಗಿ ಅಂತಿದ್ದಾರೆ. ಹೈಕಮಾಂಡ್ ನಾಯಕರ ಎಚ್ಚರಿಕೆಗೂ ಬಗ್ಗದೆ ವರಸೆ ಮುಂದುವರಿಸಿದ್ದಾರೆ.
ಇದನ್ನೂ ಓದಿ: ರಾಷ್ಟ್ರ ರಾಜಕಾರಣಕ್ಕೆ ಬಸನಗೌಡ ಪಾಟೀಲ್ ಯತ್ನಾಳ್? – ದೆಹಲಿ ರಾಜಕಾರಣಕ್ಕೆ ಕಳುಹಿಸುವ ಕುರಿತು ತೆರೆಮರೆ ಪ್ಲಾನ್
ಯಡಿಯೂರಪ್ಪ ಮತ್ತು ಪುತ್ರ ವಿಜಯೇಂದ್ರ ವಿರುದ್ಧ ಯತ್ನಾಳ್ ಮತ್ತೊಮ್ಮೆ ಹರಿಹಾಯ್ದಿದ್ದಾರೆ. ವಿಜಯೇಂದ್ರ ಜೊತೆಗೆ ರಾಜೀ ಆಗೋ ಪ್ರಶ್ನೆನೇ ಇಲ್ಲ. ಯಾರ್ ಜೊತೆ ರಾಜೀ ಆಗಬೇಕು? ಅಪ್ಪ ಮಕ್ಕಳ ಜೊತೆ ರಾಜೀ ಆಗಬೇಕಾ? ಅವರೊಂದಿಗಿನ ರಾಜೀ ಅವಶ್ಯಕತೆ ಇಲ್ಲ. ವಿಜಯೇಂದ್ರ ಜೊತೆ ರಾಜೀ ಆಗಲು ನಾನೇನು ಲೋಕಸಭಾ ಟಿಕೆಟ್ ಕೇಳಿದ್ದೇನಾ?. ವಿಜಯೇಂದ್ರನಿಂದ ನನಗೇನು ಆಗಬೇಕಿಲ್ಲ. ಅವರೊಂದಿಗೆ ನನ್ನದೇನು ವ್ಯವಹಾರ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಇದೇ ವೇಳೆ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವ್ರನ್ನ ಸೋಲಿಸೋಕೆ ವಿಜಯೇಂದ್ರ ಷಡ್ಯಂತ್ರ ಮಾಡಿದ್ರು ಅನ್ನೋ ಗಂಭೀರ ಆರೋಪ ಮಾಡಿದ್ದಾರೆ. ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮತ್ತೆ ಪ್ರಧಾನಿ ಆಗಬೇಕು ಎಂಬುದಷ್ಟೇ ನನ್ನ ಮುಂದಿದೆ. ವಿಜಯೇಂದ್ರ ಅವರ ಉದ್ದೇಶ ಏನು?. ಅವರು ಮಾಜಿ ಸಚಿವ ವಿ. ಸೋಮಣ್ಣ ಅವರ ಮೇಲೆ ಏನು ಮಾಡಿದ್ರು?. ವಿಜಯಪುರದಲ್ಲಿ ಏನ್ ಮಾಡಿದ್ದರು ಎಂಬುದೆಲ್ಲ ನನಗೆ ಗೊತ್ತಿದೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಸೋಲಿಸಲು ವಿಜಯೇಂದ್ರ ಏನ್ ಮಾಡಿದ್ದಾರೆ ? ಎಲ್ಲಾ ಇತಿಹಾಸ ಗೊತ್ತಿದೆ. ಲೋಕಸಭಾ ಚುನಾವಣೆ ಬಳಿಕ ಇತಿಹಾಸ ಹೇಳುವುದಾಗಿ ಅವರು ಬಾಂಬ್ ಸಿಡಿಸಿದ್ದಾರೆ.
ಇಷ್ಟಕ್ಕೇ ಸುಮ್ಮನಾಗದ ಯತ್ನಾಳ್, ನಾನು ಯಾವ ವಿಜಯೇಂದ್ರಗೂ ಜಗ್ಗಲ್ಲ, ಅವರ ಅಪ್ಪನಿಗೂ ಅಂಜಲ್ಲ. ವಿಜಯೇಂದ್ರ ನೇತೃತ್ವದಲ್ಲಿ ಇಲ್ಲಿ ಚುನಾವಣೆಗೆ ಹೋಗುತ್ತಿಲ್ಲ. ನಾವು ನರೇಂದ್ರ ಮೋದಿಯವರ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ ಎಂದು ಕಡ್ಡಿ ಮುರಿದಂತೆ ಹೇಳಿದ್ರು. ಅಸಲಿಗೆ ಕಳೆದ ಗುರುವಾರವಷ್ಟೇ ಯತ್ನಾಳ್ ಹಾಗೂ ವಿಜಯೇಂದ್ರ ಅವರು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಸಮ್ಮುಖದಲ್ಲಿ ಮುಖಾಮುಖಿಯಾಗಿದ್ರು. ವರಿಷ್ಠರ ಭೇಟಿಗಾಗಿ ದಿಲ್ಲಿಗೆ ತೆರಳಿದ್ದ ವಿಜಯೇಂದ್ರ ಜೋಶಿ ಅವರ ನಿವಾಸಕ್ಕೂ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಯತ್ನಾಳ್, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕೂಡ ಇದ್ದರು. ಎಲ್ಲ ನಾಯಕರು ಒಟ್ಟಿಗೆ ಇರುವ ಫೋಟೋವನ್ನು ‘ಎಕ್ಸ್’ ಖಾತೆಯಲ್ಲಿ ವಿಜಯೇಂದ್ರ ಹಂಚಿಕೊಂಡಿದ್ರು. ಬಳಿಕ ಯತ್ನಾಳ್ ಮತ್ತು ವಿಜಯೇಂದ್ರ ನಡುವಿನ ಮುನಿಸು ತಣ್ಣಗಾಯ್ತು ಅಂತಾನೇ ಎಲ್ರೂ ಅನ್ಕೊಂಡಿದ್ರು. ಆದ್ರೆ ಬಿಜೆಪಿ ಪಡೆ ನಿಟ್ಟುಸಿರು ಬಿಡೋ ಮುನ್ನವೇ ಯತ್ನಾಳ್ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ. ಯತ್ನಾಳ್ ಹೀಗೆ ಪದೇಪದೆ ಸ್ವಪಕ್ಷ ನಾಯಕರ ವಿರುದ್ಧ ಹೇಳಿಕೆಗಳನ್ನ ನೀಡ್ತಿದ್ರೂ ಯಾವುದೇ ಶಿಸ್ತು ಕ್ರಮ ಕೈಗೊಳ್ಳದೆ ಇರೋದು ಕುತೂಹಲಕ್ಕೆ ಕಾರಣವಾಗಿದೆ. ಈ ಹಿಂದೆ ಪಕ್ಷದಿಂದಲೇ ಉಚ್ಚಾಟನೆ ಮಾಡಬೇಕೆಂದು ಕೆಲ ನಾಯಕರು ಪಟ್ಟು ಹಿಡಿದಿದ್ರು. ಆದ್ರೆ ಬಿಜೆಪಿ ಹೈಕಮಾಂಡ್ ಆಗ್ಲಿ ಅಥವಾ ರಾಜ್ಯ ಬಿಜೆಪಿ ನಾಯಕರೇ ಆಗ್ಲಿ ಯತ್ನಾಳ್ ವಿಚಾರದಲ್ಲಿ ಸೈಲೆಂಟ್ ಆಗಿದ್ದಾರೆ.