ಅಥ್ಲೆಟಿಕ್ಸ್ ಅಂಗಳದಲ್ಲಿ ಮೆರೆದ ರೈಸಿಂಗ್ ಸ್ಟಾರ್ ಇನ್ನಿಲ್ಲ – ಅಪಘಾತಕ್ಕೆ ಬಲಿಯಾದ ಕೆಲ್ವಿನ್ ಕಿಪ್ಟಮ್
ಅಥ್ಲೆಟಿಕ್ಸ್ ಅಂಗಳದಲ್ಲಿ ರೈಸಿಂಗ್ ಸ್ಟಾರ್ ಅಂತಾನೇ ಕರೆಸಿಕೊಂಡ 24 ವರ್ಷ ವಯಸ್ಸಿನ ಕೆಲ್ವಿನ್ ಕಿಪ್ಟಮ್ ಇನ್ನು ನೆನಪು ಮಾತ್ರ. ಮ್ಯಾರಥಾನ್ನಲ್ಲಿ ಕೆಲ್ವಿನ್ ಕಿಪ್ಟಮ್ ವಿಶ್ವ ದಾಖಲೆ ಬರೆದಿದ್ದರು. ಇದೀಗ ಕೆಲ್ವಿನ್ ಕಿಪ್ಟಮ್ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಬರಸಿಡಿಲಿನಂತೆ ಬಂದಪ್ಪಳಿಸಿದೆ.
ಇದನ್ನೂ ಓದಿ: ಭಾರತಕ್ಕೆ ಮುಳ್ಳಾದ ಭಾರತೀಯ ಮೂಲದ ಕ್ರಿಕೆಟಿಗ – ಫೈನಲ್ನಲ್ಲಿ ಮುಗ್ಗರಿಸಿದ ಟೀಮ್ ಇಂಡಿಯಾ ಯುವಪಡೆ
ಕೀನ್ಯಾದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಕೆಲ್ವಿನ್ ಮತ್ತು ಅವರ ಕೋಚ್ ಗೆರ್ವೈಸ್ ಹಕಿಜಿಮಾನ ಸಾವಿಗೀಡಾಗಿದ್ದಾರೆ. ಚಿಕಾಗೋ ಮ್ಯಾರಥಾನ್ ಸ್ಪರ್ಧೆಯಲ್ಲಿ 2:00:35 ನಿಮಿಷದಲ್ಲಿ ಗುರಿ ಮುಟ್ಟುವ ಮೂಲಕ ಕೆಲ್ವಿನ್ ಕಿಪ್ಟಮ್ ಹೊಸ ಇತಿಹಾಸ ನಿರ್ಮಿಸಿದ್ದರು. ಕೀನ್ಯಾದ ಎಲಿಯುಡ್ ಕಿಪ್ಚೋಜ್ (2:01:09) ಅವರ ದಾಖಲೆಯನ್ನು ಮುರಿದು ಮ್ಯಾರಥಾನ್ ಅಂಗಳದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದರು. ಕೆಲ್ವಿನ್ ಗೆ ಇದೀಗ ಕೇವಲ 24 ವಯಸ್ಸು. ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕದ ಮೇಲೆ ಕೆಲ್ವಿನ್ ಕಣ್ಣಿಟ್ಟಿದ್ದರು. ಇದಕ್ಕಾಗಿ ಕಠಿಣ ಅಭ್ಯಾಸದಲ್ಲಿ ನಿರತರಾಗಿದ್ದರು. ಹೀಗೆ ಅಭ್ಯಾಸ ಮುಗಿಸಿ ಭಾನುವಾರ ರಾತ್ರಿ 11 ಗಂಟೆಗೆ ಕಪ್ಟಗಾಟ್ನಿಂದ ಎಲ್ಡೊರೆಟ್ಗೆ ತೆರಳುತ್ತಿದ್ದರು. ಈ ವೇಳೆ ಕಾರು ಅಪಘಾತವಾಗಿದ್ದು, ಇದರಿಂದ ಕೆಲ್ವಿನ್ ಹಾಗೂ ರುವಾಂಡಾ ತರಬೇತುದಾರ ಗೆರ್ವೈಸ್ ಹಕಿಜಿಮಾನಾ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತಗೊಂಡ ಕಾರನ್ನು ಕೆಲ್ವಿನ್ ಅವರೇ ಚಾಲನೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಅತೀ ವೇಗದಿಂದಾಗಿ ವಾಹನವು ನಿಯಂತ್ರಣ ಕಳೆದುಕೊಂಡು ಅವಘಡ ಸಂಭವಿಸಿದೆ ಎಂದು ಪೊಲೀಸ್ ವರದಿಯಲ್ಲಿ ತಿಳಿಸಲಾಗಿದೆ. ಕೆಲ್ವಿನ್ ಕಿಪ್ಟಮ್ ಅವರ ಅಕಾಲಿಕ ಮರಣಕ್ಕೆ ವಿಶ್ವದ ಪ್ರಸಿದ್ಧ ಕ್ರೀಡಾಪಟುಗಳು ಸಂತಾಪ ಸೂಚಿಸಿದ್ದಾರೆ. ಅಥ್ಲೆಟಿಕ್ಸ್ ಅಂಗಳದಲ್ಲಿ ರೈಸಿಂಗ್ ಸ್ಟಾರ್ ಎಂದೇ ಗುರುತಿಸಿಕೊಂಡಿದ್ದ ಕೆಲ್ವಿನ್ ಅವರ ಸಾವು ಅಥ್ಲೆಟಿಕ್ಸ್ಗೆ ತುಂಬಲಾರದ ನಷ್ಟ ಎಂದು ವಿಶ್ವ ಅಥ್ಲೆಟಿಕ್ಸ್ ಅಧ್ಯಕ್ಷ ಸೆಬಾಸ್ಟಿಯನ್ ಕೋ ಅವರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.