ಸಂಸದೆ ಸುಮಲತಾಗೆ ಪ್ರಧಾನಿ ನೀಡಿದ್ರಾ ಅಭಯ? – ಮೋದಿ ಆಡಿದ ಭರವಸೆ ಮಾತುಗಳಿಂದ ಸುಮಲತಾ ಫುಲ್ ಖುಷ್
ದಿನಕ್ಕೊಂದು ಟ್ವಿಸ್ಟ್.. ಕ್ಷಣಕ್ಕೊಂದು ತಿರುವು. ಲೋಕಸಭಾ ಚುನಾವಣೆ ಹತ್ತಿರವಾದಂತೆಲ್ಲಾ ಮಂಡ್ಯ ಅಖಾಡ ರಣರಣ ಅಂತಿದೆ. ಕಳೆದ ಬಾರಿಯೇ ಸುಮಲತಾ ಅಂಬರೀಶ್ ಎಂಟ್ರಿಯಿಂದ ಕುದ್ದು ಹೋಗಿದ್ದ ಮಂಡ್ಯ ಇದೀಗ ಬಿಜೆಪಿ-ಜೆಡಿಎಸ್ ಮೈತ್ರಿಯಿಂದಾಗಿ ಜ್ವಾಲೆಯಾಗ್ತಿದೆ. ಸಕ್ಕರೆನಾಡು ಬಿಜೆಪಿಗೋ ಜೆಡಿಎಸ್ಗೋ ಅನ್ನೋ ನಿರ್ಧಾರಕ್ಕೂ ಮೊದ್ಲೇ ಯಾರು ಅಭ್ಯರ್ಥಿಯಾಗ್ಬೋದು ಅನ್ನೋ ಲೆಕ್ಕಾಚಾರ ಜೋರಾಗಿದೆ. ಒಂದ್ಕಡೆ ತಮಗೇ ಕ್ಷೇತ್ರ ಸಿಗುತ್ತೆ, ನಾವೇ ಗೆಲ್ಲಬೇಕು ಅಂತಾ ಹೆಚ್.ಡಿ ಕುಮಾರಸ್ವಾಮಿ ತಂತ್ರಗಾರಿಕೆ ಮಾಡ್ತಿದ್ದಾರೆ. ಆದ್ರೆ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು ಬಿಜೆಪಿಗೆ ಸಪೋರ್ಟ್ ಮಾಡಿರುವ ಸುಮಲತಾ ಅಂಬರೀಶ್ ಭರ್ಜರಿ ಗೇಮ್ ಪ್ಲ್ಯಾನ್ ಮಾಡಿದ್ದಾರೆ. ಖುದ್ದು ಪ್ರಧಾನಿ ಮೋದಿಯವ್ರನ್ನೇ ಭೇಟಿಯಾಗಿ ದಳಪತಿಗಳಿಗೆ ಗುನ್ನಾ ಕೊಡೋಕೆ ಸಜ್ಜಾಗ್ತಿದ್ದಾರೆ. ಹಾಗಾದ್ರೆ ಸುಮಲತಾ ಅಂಬರೀಶ್ ಮೋದಿಯನ್ನ ಮೀಟ್ ಆಗಿದ್ದೇಕೆ..? ಪ್ರಧಾನಿ ಕೊಟ್ಟ ಅಭಯ ಏನು..? ಸುಮಲತಾ ಫುಲ್ ಖುಷಿಯಾಗಿರೋದೇಕೆ..? ಈ ಬಗೆಗಿನ ವಿಸ್ತೃತ ಮಾಹಿತಿ ಇಲ್ಲಿದೆ.
ಇದನ್ನೂ ಓದಿ:ಮಂಡ್ಯದಲ್ಲಿ ಲೋಕಸಭೆ ಟಿಕೆಟ್‌ಗಾಗಿ ಕಸರತ್ತು! – ಪ್ರಧಾನಿ ಮೋದಿಯನ್ನು ಭೇಟಿಯಾದ ಸುಮಲತಾ ಅಂಬರೀಶ್!ʻ
ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಸಂಸದೆ ಸುಮಲತಾ ಅಂಬರೀಶ್ ಮಂಡ್ಯ ಲೋಕಸಭಾ ಕ್ಷೇತ್ರ ಕೈತಪ್ಪುವ ಆತಂಕದಲ್ಲಿದ್ದಾರೆ. ಹೀಗಾಗಿ ದೆಹಲಿಗೆ ಹಾರಿರುವ ಸಂಸದೆ ಈಗಾಗ್ಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಹಾಗೂ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನುಭೇಟಿಯಾಗಿ ತಮಗೆ ಟಿಕೆಟ್ ನೀಡುವಂತೆ ಮನವಿ ಸಲ್ಲಿಸಿದ್ದಾರೆ. ಸಾಲದಕ್ಕೆ ಇದೀಗ ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಮೋದಿ ಆಡಿದ ಭರವಸೆ ಮಾತುಗಳಿಂದ ಸುಮಲತಾ ಫುಲ್ ಖುಷ್ ಆಗಿದ್ದಾರೆ. ಯಾಕಂದ್ರೆ ಮೋದಿ ಆಡಿರುವ ಮಾತು ಸುಮಲತಾಗೇ ಮಂಡ್ಯ ಟಿಕೆಟ್ ಎನ್ನುವಂತಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.
ನರೇಂದ್ರ ಮೋದಿಯವರು ವಿಶ್ವದ ಮಹಾನ್ ನಾಯಕರಾಗಿದ್ದು, ಭಾರತದಂತಹ ಬೃಹತ್ ದೇಶವನ್ನು ಕಳೆದ ಹತ್ತು ವರ್ಷಗಳಿಂದ ಯಶಸ್ವಿಯಾಗಿ ಮುನ್ನಡೆಸುತ್ತಾ, ಭಾರತವನ್ನು ಮುಂದುವರೆದ ರಾಷ್ಟ್ರಗಳ ಸಾಲಿಗೆ ಸೇರಿಸಲು ಪಡುತ್ತಿರುವ ಶ್ರಮ ನಿಜಕ್ಕೂ ಶ್ಲಾಘನೀಯ. ದೇಶದ ಅಭಿವೃದ್ಧಿ ಹಾಗೂ ದೇಶದ ಭವಿಷ್ಯದ ಬಗ್ಗೆ ನಿಮಗಿರುವ ದೂರದೃಷ್ಟಿಯನ್ನು ಪದಗಳಲ್ಲಿ ವರ್ಣಿಸಲು ಅಸಾಧ್ಯ. ಭಾರತ ದೇಶವು ಇಂದು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಎಲ್ಲಾ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಲು ಪ್ರಧಾನ ಮಂತ್ರಿಗಳ ಸಮರ್ಥ ನಾಯಕತ್ವವೇ ಕಾರಣ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಈ ಕಾರಣದಿಂದಲೇ ನಮ್ಮ ಹೆಮ್ಮೆಯ ಪ್ರಧಾನ ಮಂತ್ರಿಗಳನ್ನು ಇಡೀ ವಿಶ್ವವೇ ಕೊಂಡಾಡುತ್ತಿದೆ. ವಿಶ್ವದ ಅತ್ಯಂತ ಜನಪ್ರಿಯ ನಾಯಕರಾಗಿರುವ ನಿಮಗೆ, ನಮ್ಮ ದೇಶದ ಭವಿಷ್ಯದ ಬಗ್ಗೆ ಇರುವ ಪರಿಕಲ್ಪನೆ ಹಾಗೂ ದೂರದೃಷ್ಟಿ ನಮ್ಮ ದೇಶದ ಎಲ್ಲಾ ಭವಿಷ್ಯದ ಮಹತ್ವಾಕಾಂಕ್ಷಿ ನಾಯಕರಿಗೆ ಮಾದರಿಯಾಗಿದೆ. ಪ್ರಧಾನ ಮಂತ್ರಿಗಳಾಗಿ ಅಚಲವಾದ ಧೃಢತೆಯಿಂದ ಅದ್ಭುತವಾದ ನಾಯಕತ್ವದ ಗುಣಗಳೊಂದಿಗೆ ತಾವು ಸಲ್ಲಿಸಿದ ಅತ್ಯುತ್ತಮ ಸೇವೆ ಮತ್ತು ದೇಶಕ್ಕೆ ನೀಡಿದ ಆಡಳಿತವು ಭಾರತ ದೇಶದ ಇತಿಹಾಸದಲ್ಲಿ ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತದೆ. ನಿಮ್ಮ ಅಧಿಕಾರಾವಧಿಯಲ್ಲಿ ಸಂಸತ್ ಸದಸ್ಯೆಯಾಗಿ ಸೇವೆ ಸಲ್ಲಿಸಿರುವುದು ನಿಜಕ್ಕೂ ನನ್ನ ಸೌಭಾಗ್ಯವಾಗಿದೆ. ಈ ಬಾರಿಯ ತಮ್ಮ ಭೇಟಿ ಸಂದರ್ಭದಲ್ಲಿ ಮುಂದಿನ ದಿನಗಳಲ್ಲಿ ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರೆಸೋಣ ಎಂಬ ನಿಮ್ಮ ಮಾತುಗಳು ನನಗೆ ಸ್ಪೂರ್ತಿದಾಯಕವಾಗಿದೆ. ವಿಶ್ವದ ಹೆಮ್ಮೆಯ ನಾಯಕರಾದ ತಮ್ಮ ಅಮೂಲ್ಯ ಮಾರ್ಗದರ್ಶನದಲ್ಲಿ ಜನರ ಸೇವೆ ಮಾಡಲು ಮತ್ತು ಭಾರತವನ್ನು ಮುಂದುವರೆದ ದೇಶಗಳ ಸಾಲಿನಲ್ಲಿ ನೋಡಲು ನಾನು ಉತ್ಸುಕಳಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಅಷ್ಟೇ ಅಲ್ಲದೆ ಮೋದಿ ಜೊತೆಗಿನ ಭೇಟಿ ವೇಳೆ ಮಂಡ್ಯ ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿಯೂ ಮಾತನಾಡಿದ್ದಾರೆ. ಮಂಡ್ಯ ಕ್ಷೇತ್ರದ ಅಭಿವೃದ್ಧಿಗೆ ನಿರಂತರವಾಗಿ ಆಸಕ್ತಿ ವಹಿಸಿ, ಉತ್ತಮ ಯೋಜನೆಗಳನ್ನು ಕಾರ್ಯಗತಗೊಳಿಸಲು ಅನುದಾನವನ್ನು ಒದಗಿಸಿದ್ದಕ್ಕಾಗಿ ಧನ್ಯವಾದ ಸಲ್ಲಿಸಿದ್ದಾರೆ. ಇನ್ನು ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಯಲ್ಲಿ ಮಂಡ್ಯ ಕ್ಷೇತ್ರ ಜೆಡಿಎಸ್ ಪಾಲಾಗಲಿದೆ. ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡ್ತಾರೆ ಎನ್ನಲಾಗ್ತಿದೆ. ಇದೇ ಕಾರಣಕ್ಕೆ ಸಂಶದೆ ಸುಮಲತಾ ಮಂಡ್ಯವನ್ನ ಬಿಜೆಪಿಯೇ ಉಳಿಸಿಕೊಂಡು ಟಿಕೆಟ್ ನೀಡುವಂತೆ ಸುಮಲತಾ ಲಾಬಿ ನಡೆಸ್ತಿದ್ದಾರೆ. ಗುರುವಾರವಷ್ಟೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರನ್ನು ಭೇಟಿಯಾಗಿದ್ದರು. ಶುಕ್ರವಾರ ಪ್ರಧಾನಿ ಮೋದಿ ಜೊತೆಗಿನ ಭೇಟಿ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಸುಮಲತಾ ಹಂಚಿಕೊಂಡಿದ್ದಾರೆ. ಸುಮಲತಾ ನಡೆ ಸಾಕಷ್ಟು ಕುತೂಹಲ ಮೂಡಿಸಿದೆ. ಮತ್ತೊಂದೆಡೆ ಸುಮಲತಾ ಅಂಬರೀಶ್ ಕಾಂಗ್ರೆಸ್ಗೆ ಹೋಗ್ತಾರೆ ಎಂದು ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಸುಮಲತಾ ಗೆಲುವಿಗೆ ಶ್ರಮಿಸಿದ ನಾರಾಯಣಗೌಡ ಈಗ ಸಿದ್ದರಾಮಯ್ಯ ಮನೆಯಲ್ಲಿ ಕೂತಿದ್ದಾರೆ. ಹಾಗಾಗಿ ಸುಮಲತಾ ಕಾಂಗ್ರೆಸ್ಗೆ ಹೋಗಬಹುದು ಎಂದಿದ್ದಾರೆ. ಒಂದ್ಕಡೆ ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ರೌಂಡ್ಸ್ ಹಾಕ್ತಿದ್ರೆ ಅತ್ತ ಹೆಚ್.ಡಿ ಕುಮಾರಸ್ವಾಮಿಯೇ ಸ್ಪರ್ಧಿಸ್ತಾರೆ ಎಂಬ ಚರ್ಚೆಯಾಗ್ತಿದೆ. ಇದರ ನಡುವೆ ಸುಮಲತಾ ಸಾಲು ಸಾಲು ಹೈಕಮಾಂಡ್ ನಾಯಕರನ್ನ ಭೇಟಿಯಾಗ್ತಿರೋದು ಕುತೂಹಲಕ್ಕೆ ಕಾರಣವಾಗಿದೆ.