ಹಾಸನ ಕ್ಷೇತ್ರ ಬಿಟ್ಟು ಕೊಡಲು ಬಿಜೆಪಿ ನಾಯಕರಿಗೆ ಮನಸಿಲ್ಲ – ಜೆಡಿಎಸ್ ಜೊತೆ ಮೈತ್ರಿಯೇ ಕೇಸರಿ ಕಲಿಗಳಿಗೆ ಸವಾಲು..!
ಈ ಬಾರಿಯ ಲೋಕಸಭೆ ಚುನಾವಣೆಗೆ ಬಿಜೆಪಿ ಮತ್ತು ಜೆಡಿಎಸ್ ನಡುವೆ ಮೈತ್ರಿ ಏರ್ಪಟ್ಟ ಬಳಿಕ ರಾಜ್ಯದ ಎರಡು ಕ್ಷೇತ್ರಗಳ ವಿಚಾರವಾಗಿ ಭಾರಿ ಚರ್ಚೆ ನಡೀತಿದೆ. ಒಂದು ಮಂಡ್ಯ.. ಮತ್ತೊಂದು ಹಾಸನ. ಇವೆರಡೂ ದಳಪತಿಗಳ ಪಾಲಿನ ನೆಚ್ಚಿನ ಕ್ಷೇತ್ರಗಳು. ಈ ಪೈಕಿ ಹಾಸನವಂತೂ ಜೆಡಿಎಸ್ ಕೈಯಲ್ಲೇ ಉಳಿಯೋದು ಗ್ಯಾರಂಟಿಯಾಗಿದೆ. ಹಾಸನದಿಂದ ಜೆಡಿಎಸ್ ಕಣಕ್ಕಿಯೋದು ಖಚಿತವಾಗಿದೆ. ಹಾಗಂತಾ ಡೀಲ್ ಇನ್ನೂ ಡನ್ ಆಗಿಲ್ಲ. ಯಾಕಂದ್ರೆ ಹಾಸನ ಕ್ಷೇತ್ರವನ್ನ ಬಿಜೆಪಿ ಕಂಪ್ಲೀಟ್ ಆಗಿ ಇನ್ನೂ ಬಿಟ್ಟುಕೊಟ್ಟಿಲ್ಲ. ಹಾಸನ ವಿಚಾರವಾಗಿ ಬಿಜೆಪಿ ಸದ್ಯ ಒಂದಷ್ಟು ಕನ್ಫ್ಯೂಷನ್ನಲ್ಲಿ ಸಿಕ್ಕಿ ಹಾಕಿಕೊಂಡಿದೆ ಅನ್ನೋ ಬಗ್ಗೆಯೂ ರಾಜಕೀಯ ಪಡಸಾಲೆಯಲ್ಲಿ ಒಂದಷ್ಟು ಚರ್ಚೆಗಳಾಗ್ತಿದೆ. ಅಸಲಿಗೆ ಹಾಸನದಲ್ಲಿ ಬಿಜೆಪಿ ನಾಯಕತ್ವದ ಕೊರತೆ ಎದುರಿಸ್ತಾ ಇದೆ. ಜೆಡಿಎಸ್ ವಿರೋಧಿ ರಾಜಕಾರಣ ಮಾಡಿಕೊಂಡು ಬಂದಿದ್ದ ಪ್ರೀತಂ ಗೌಡ ಸದ್ಯ ರಾಜ್ಯ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಇದುವರೆಗೆ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದ ಹೆಚ್.ಕೆ.ಸುರೇಶ್ ಬೇಲೂರಿನ ಶಾಸಕರಾಗಿದ್ದಾರೆ. ಆರಂಭದಲ್ಲಿ ಮೈತ್ರಿಗೆ ಅಸಮಾಧಾನ ವ್ಯಕ್ತಪಡಿಸಿದ್ದ ಮಾಜಿ ಶಾಸಕರಾದ ಎಟಿ ರಾಮಸ್ವಾಮಿ, ಹೆಚ್.ಎಂ.ವಿಶ್ವನಾಥ್ ಕೂಡ ಮೌನಕ್ಕೆ ಜಾರಿದ್ದಾರೆ. ಇವೆಲ್ಲದರ ಮಧ್ಯೆ ಕೇಸರಿ ಕಲಿಗಳು ಹಾಸನದಲ್ಲಿ ನಿರಂತರವಾಗಿ ಪಕ್ಷ ಸಂಘಟನೆಗೆ ಶತ ಪ್ರಯತ್ನ ಮಾಡ್ತಾನೆ ಇದ್ದಾರೆ. ಹಾಗಿದ್ರೆ ಹಾಸನ ವಿಚಾರವಾಗಿ ನಿಜಕ್ಕೂ ಬಿಜೆಪಿಗರ ನಿಲುವು ಏನು ಅನ್ನೋದನ್ನ ತಿಳಿದುಕೊಳ್ಳಲೇಬೇಕಾಗುತ್ತೆ.
ಇದನ್ನೂ ಓದಿ: ಮಂಡ್ಯ ಟಿಕೆಟ್ ಜೆಡಿಎಸ್ ಪಾಲಾದರೆ ಸುಮಲತಾ ನಡೆಯೇನು? – ದೆಹಲಿಗೆ ಹಾರಿದ್ಯಾಕೆ ಸಂಸದೆ?
ಹಾಸನ ಕ್ಷೇತ್ರವನ್ನ ಬಿಟ್ಟು ಕೊಡೋಕೆ ಬಹುತೇಕ ಬಿಜೆಪಿ ನಾಯಕರಿಗೆ ಮನಸ್ಸಿಲ್ವಂತೆ. ಅದಕ್ಕೆ ಸ್ಥಳೀಯ ಬಿಜೆಪಿ ನಾಯಕರು ನೀಡಿದ ಹೇಳಿಕೆಗಳೇ ಸಾಕ್ಷಿ. ಈ ಹಿಂದೆ ಹಾಸನ, ಮಂಡ್ಯ ಬಿಜೆಪಿಗೆ ಸಿಗುವ ವಿಶ್ವಾಸ ಇದೆ ಅಂತಾ ಸ್ಥಳೀಯ ಬಿಜೆಪಿ ನಾಯಕ ಪ್ರೀತಂ ಗೌಡ ಹೇಳಿದ್ರು. ಹಾಸನ ಕ್ಷೇತ್ರವನ್ನ ಬಿಜೆಪಿ ಉಳಿಸಿಕೊಳ್ಳಬೇಕು ಅಂತಾ ಶಾಸಕರಾ ಹೆಚ್.ಕೆ.ಸುರೇಶ್ ಕೂಡ ಸ್ಟೇಟ್ಮೆಂಟ್ ಕೊಟ್ಟಿದ್ರು. ಆದ್ರೆ ಅಂತಿಮವಾಗ ಎಲ್ಲರೂ ಬಿಜೆಪಿ ಹೈಕಮಾಂಡ್ ನಿರ್ಧಾರವನ್ನ ಒಪ್ಪಿಕೊಳ್ಳಲೇಬೇಕಾಗುತ್ತೆ. ಇದುವರೆಗೂ ಹಾಸನದಲ್ಲಿ NDA ಅಭ್ಯರ್ಥಿ ಯಾರು ಅಂತಾ ಘೋಷಣೆಯಾಗಿಲ್ಲ.
ಇನ್ನು ಹಾಸನವನ್ನ ಜೆಡಿಎಸ್ನಲ್ಲೇ ಉಳಿಸಿಕೊಳ್ಳೋದಕ್ಕಾಗಿ ಈಗಾಗ್ಲೇ ಹೆಚ್.ಡಿ. ದೇವೇಗೌಡರು ಪ್ರಧಾನಿ ಮೋದಿ ಮತ್ತು ಕೇಂದ್ರ ನಾಯಕರ ಜೊತೆಗೆ ಚರ್ಚೆ ನಡೆಸಿದ್ದಾರಂತೆ. ಹಾಗೆಯೇ ಹಾಸನದಲ್ಲಿ ಜೆಡಿಎಸ್ ತನ್ನ ಕಾರ್ಯ ಚಟುವಟಿಯನ್ನ ಮತ್ತಷ್ಟು ಚುರುಕುಗೊಳಿಸ್ತಾ ಇದೆ. ದೇವೇಗೌಡರು ಈಗಾಗ್ಲೇ ಎರಡು ಬಾರಿ ಹಾಸನಕ್ಕೆ ಭೇಟಿ ನೀಡಿ ಸ್ಥಳೀಯ ಮುಖಂಡರು, ಕಾರ್ಯಕರ್ತರ ಮಧ್ಯೆ ಒಗ್ಗಟ್ಟು ಮೂಡಿಸೋಕೆ ಯತ್ನಿಸಿದ್ದಾರೆ. ಪ್ರಜ್ವಲ್ ರೇವಣ್ಣರೇ ಸ್ಪರ್ಧಿಸ್ತಾರೆ ಅಂತಾ ಹೇಳಿಕೊಳ್ತಾ ಇದ್ದಾರೆ. ಕ್ಷೇತ್ರ ಜೆಡಿಎಸ್ಗೆ ಸಿಗೋ ವಿಶ್ವಾಸದಲ್ಲಿ ಹೆಚ್ಡೊ ಕುಮಾರಸ್ವಾಮಿ ಕೂಡ ಕ್ಷೇತ್ರದ ಉಸ್ತುವಾರಿಯನ್ನ ಪ್ರಜ್ವಲ್ ತಂದೆ ಹೆಚ್.ಡಿ. ರೇವಣ್ಣಗೇ ನೀಡಿದ್ದಾರೆ. ಅಂತೂ ದಳಪತಿಗಳೆಲ್ಲಾ ಹಾಸನ ತಮ್ಮ ಕೈಗೇ ಸಿಗೋ ವಿಶ್ವಾಸದಲ್ಲಿದ್ದಾರೆ. ಇತ್ತ ಸ್ಥಳೀಯ ಕೆಸರಿ ಕಲಿಗಳ ತಲೆಯಲ್ಲಿ ಇನ್ನೇನೋ ಯೋಚನೆಗಳೆಲ್ಲಾ ಬರ್ತಾ ಇದ್ರೂ, ವಿಧಿಯಿಲ್ಲದೆ ಹೈಕಮಾಂಡ್ ಫೈನಲ್ ಮಾಡಿದ್ದಕ್ಕೆ ಜೈ ಅನ್ನಬೇಕಾದ ಸ್ಥಿತಿಯಲ್ಲಿದ್ದಾರೆ.