ಹನುಮಧ್ವಜ ತೆರವು ವಿವಾದ – ಮಂಡ್ಯ, ಕೆರಗೋಡು ಬಂದ್ಗೆ ಉತ್ತಮ ಪ್ರತಿಕ್ರಿಯೆ

ಹನುಮಧ್ವಜ ತೆರವು ಖಂಡಿಸಿ ಶುಕ್ರವಾರ ಮಂಡ್ಯ ನಗರ, ಕೆರಗೋಡು ಗ್ರಾಮದಲ್ಲಿ ಬಂದ್ಗೆ ಕರೆ ನೀಡಲಾಗಿದೆ. ಈ ಬಂದ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಗ್ರಾಮಕ್ಕೆ ಆಗಮಿಸಿರುವ ನೂರಾರು ಹಿಂದೂಪರ ಕಾರ್ಯಕರ್ತರು ಬೈಕ್ ರ್ಯಾಲಿ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಕುಮಾರ ಪರ್ವತ ಚಾರಣಕ್ಕೆ ಕಡಿವಾಣ – ಆದೇಶ ಉಲ್ಲಂಘಿಸಿದ್ರೆ ಅರಣ್ಯ ಇಲಾಖೆ ಕಠಿಣ ಕ್ರಮದ ಎಚ್ಚರಿಕೆ!
ಈ ಬಂದ್ಗೆ ಹೋಟೆಲ್ ಮಾಲೀಕರು, ವರ್ತಕರು ಬೆಂಬಲ ವ್ಯಕ್ತಪಡಿಸಿದ್ದಾರೆ. ನಗರದ ಎಲ್ಲಾ ಅಂಗಡಿ, ಹೋಟೆಲ್ ಗಳನ್ನು ಮುಚ್ಚಲಾಗಿದೆ. ಕೆರಗೋಡು ಗ್ರಾಮದ ಆಂಜನೇಯ ದೇವಾಲಯದಿಂದ ಬೈಕ್ ರ್ಯಾಲಿ ಆರಂಭವಾಗಿದ್ದು ನೂರಾರು ಹಿಂದೂಪರ ಕಾರ್ಯಕರ್ತರು ಭಾಗವಹಿಸಿದ್ದಾರೆ. ಕೆರಗೋಡು, ಹುಲಿವಾಹನ, ಸಾತನೂರು, ಚಿಕ್ಕಮಂಡ್ಯ ಮೂಲಕ ಮಂಡ್ಯದ ಆಂಜನೇಯ ದೇಗುಲದವರೆಗೆ ರ್ಯಾಲಿ ಸಾಗಲಿದೆ. ಬಳಿಕ ಇಲ್ಲಿಂದ ಮಂಡ್ಯದ ಡಿಸಿ ಕಚೇರಿವರೆಗೆ ಹಿಂದೂ ಕಾರ್ಯಕರ್ತರು ಪಾದಯಾತ್ರೆ ನಡೆಸಲಿದ್ದಾರೆ. ಪಾದಯಾತ್ರೆಯಲ್ಲಿ ಹಿಂದೂಪರ ಸಂಘಟನೆ ಕಾರ್ಯಕರ್ತರು, ಕೆರಗೋಡು ಗ್ರಾಮಸ್ಥರು, ಬಿಜೆಪಿ ಕಾರ್ಯಕರ್ತರು, ಮುಖಂಡರು ಭಾಗಿಯಾಗಲಿದ್ದಾರೆ.
ಇನ್ನು ಬಂದ್ ಹಿನ್ನೆಲೆ ಧ್ವಜಸ್ತಂಭದ ಬಳಿ ಪೊಲೀಸ್ ಭದ್ರತೆ ಹೆಚ್ಚಾಗಿದೆ. ಕೆರಗೋಡಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಗ್ರಾಮಕ್ಕೆ ಎಎಸ್ಪಿ ತಿಮ್ಮಯ್ಯ ಭೇಟಿ ನೀಡಿ ಭದ್ರತೆ ಪರಿಶೀಲಿಸಿ ಸಿಬ್ಬಂದಿಗೆ ಕೆಲ ಸೂಚನೆ ನೀಡಿದ್ದಾರೆ.
ಹನುಮಧ್ವಜ ತೆರವು ಮಾಡುವಲ್ಲಿ ಶಾಸಕರ ಪಾತ್ರ ಇದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮಂಡ್ಯ ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ ಮನೆಗೆ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಶಾಸಕ ರವಿಕುಮಾರ್ ಫ್ಲೆಕ್ಸ್ ಹರಿದು ಕೆರಗೋಡು ಗ್ರಾಮಸ್ಥರು ಕಿಡಿಕಾರಿದ್ದರು. ಹೀಗಾಗಿ ಮಂಡ್ಯದ ಬಂದೀಗೌಡ ಬಡಾವಣೆಯಲ್ಲಿರುವ ರವಿಕುಮಾರ್ ನಿವಾಸಕ್ಕೆ 10 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.