ಚೀನಾ ಗೂಢಚಾರಿ ಎಂದು ಶಂಕಿಸಿದ್ದ ಪಾರಿವಾಳ ಕೊನೆಗೂ ರಿಲೀಸ್! – ಪಕ್ಷಿಯ ಕಾಲಿನಲ್ಲಿದ್ದ ರಿಂಗ್, ಚಿಪ್ ಮತ್ತು ಚೀಟಿ ಯಾವುದಕ್ಕೆ ಸಂಬಂಧಿಸಿದ್ದು?
ಒಂದು ಕಾಲದಲ್ಲಿ ಪಾರಿವಾಳಗಳನ್ನ ಮೆಸೇಂಜರ್ ಆಗಿ ಬಳಸ್ತಾ ಇದ್ರು. ಪಾರಿವಾಳದ ಕಾಲಿಗೆ ಪತ್ರ ಕಟ್ಟಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಂದೇಶ ರವಾನಿಸ್ತಿದ್ದಿದ್ದನ್ನ ನೀವು ಕೇಳಿಯೇ ಇರ್ತೀರಾ. ಆದ್ರೆ ಈಗ ಪಾರಿವಾಳಗಳ ಕಾಲಿಗೆ ಪತ್ರ ಕಟ್ಟದಿದ್ರೂ ಅವುಗಳನ್ನ ಸೀಕ್ರೆಟ್ ಮೆಸೇಂಜರ್ಗಳಾಗಿ ಬಳಸಲಾಗ್ತಿದೆ. ಅರ್ಥಾತ್ ಗೂಢಾಚಾರಿಕೆಗೆ ಪಾರಿವಾಳಗಳ ಬಳಕೆಯಾಗ್ತಿದೆ. ಪಾರಿವಾಳಗಳು ಕೂಡ ಸ್ಪೈ ಮಾಸ್ಟರ್ಗಳಾಗಿವೆ. 2023ರ ಮೇನಲ್ಲಿ ಮುಂಬೈನ ಕರಾವಳಿ ತೀರದಲ್ಲಿ ಹಾರಾಡ್ತಿದ್ದ ಪಾರಿವಾಳವೊಂದನ್ನ ಸೆರೆ ಹಿಡಿಯಲಾಗಿತ್ತು. ಮುಂಬೈ ಬಂದರಿನ ಬಳಿ ಕುಳಿತಿದ್ದಾಗ ಪಾರಿವಾಳದ ಕಾಲಿಗೆ ರಿಂಗ್ ಕಟ್ಟಲಾಗಿತ್ತು. ಅದ್ರಲ್ಲೊಂದು ಸಂದೇಶ ಕೂಡ ಇತ್ತು. ಆ ಸಂದೇಶ ಚೈನೀಸ್ ಭಾಷೆಯಲ್ಲಿ ಬರೆದುಕೊಂಡಿತ್ತು. ಸುಮಾರು 8 ತಿಂಗಳುಗಳ ಕಾಲ ಈ ಪಾರಿವಾಳವನ್ನ ಕಸ್ಟಡಿಗೂ ತೆಗೆದುಕೊಳ್ಳಲಾಗಿತ್ತು. ಇದೀಗ ಎಂಟು ತಿಂಗಳುಗಳ ಬಳಿಕ ಈ ಪಾರಿವಾಳಕ್ಕೆ ಸಂಬಂಧಿಸಿ ಒಂದು ಮಹತ್ವದ ಬೆಳವಣಿಗೆಯಾಗಿದೆ.
ಇದನ್ನೂ ಓದಿ: ಅಮೆರಿಕದಲ್ಲಿ ಮತ್ತೊಂದು ಹೊಸ ಸೋಂಕು ಪತ್ತೆ! – ಕೊರೊನದಂತೆ ಜನರ ಜೀವ ಹಿಂಡುತ್ತಾ ಮಹಾಮಾರಿ?
ಈಗಿನ ಕಾಲದಲ್ಲಿ ಮನುಷ್ಯರನ್ನ ಮಾತ್ರವಲ್ಲ ಕೆಲವೊಂದು ಸಂದರ್ಭದಲ್ಲಿ ಪ್ರಾಣಿ, ಪಕ್ಷಿಗಳನ್ನ ಕೂಡ ಅನುಮಾನದಿಂದ ನೋಡುವಂಥಾ ಪರಿಸ್ಥಿತಿ ನಿರ್ಮಾಣವಾಗಿದೆ. ಯಾಕಂದ್ರೆ ಗೂಢಾಚಾರಿಕೆ ಅನ್ನೋದು ಆ ಮಟ್ಟಕ್ಕೆ ಬೆಳೆದಿದೆ. ಎಲ್ಲಾ ಕಡೆಗೂ ಮನುಷ್ಯನಿಗೆ ಹೋಗೋಕೆ ಆಗೋದಿಲ್ಲ. ಅಂಥಾ ಸಂದರ್ಭದಲ್ಲಿ ಇಲಿಗಳ ಮೂಲಕ, ಪಕ್ಷಿಗಳ ಮೂಲಕವೂ ಗೂಢಾಚಾರಿಕೆ ನಡೆಸಲಾಗ್ತಿದೆ. ಭಾರತದ ಮೇಲೂ ನಿರಂತರವಾಗಿ ಗೂಢಾಚಾರಿಕೆ ನಡೀತಾನೆ ಇದೆ. ಅದ್ರಲ್ಲೂ ಚೀನಾ ಮತ್ತು ಪಾಕಿಸ್ತಾನದ ಸ್ಪೈಗಳು ಆಗಾಗ ಅರೆಸ್ಟ್ ಆಗ್ತಾನೆ ಇರ್ತಾರೆ. ಅದೇ ರೀತಿ ಮುಂಬೈನಲ್ಲಿ ಈ ಪಾರಿವಾಳವನ್ನ ಕೂಡ ವಶಕ್ಕೆ ಪಡೆಯಲಾಗಿತ್ತು. ಮುಂಬೈ ಪೊಲೀಸ್ ಸಬ್ಇನ್ಸ್ಪೆಕ್ಟರ್ ರವೀಂದರ್ ಪಾಟೀಲ್ಗೆ ಪ್ರಕರಣದ ತನಿಖೆಯ ಜವಾಬ್ದಾರಿ ವಹಿಸಲಾಗಿತ್ತು. ಪಾರಿವಾಳವನ್ನ ಲಾಕ್ಪ್ನಲ್ಲಿ ಕೂಡಿ ಹಾಕಲಾಗಿತ್ತು. ಅದ್ರ ಕಾಲಿನಲ್ಲಿದ್ದ ಚಿಪ್ ಮತ್ತು ರಿಂಗ್ನ್ನ ಫೊರೆನ್ಸಿಕ್ ಲ್ಯಾಬ್ಗೆ ಕಳುಹಿಸಿ ಪರಿಶೀಲಿಸಲಾಯ್ತು. ಆದ್ರೆ ಈ ಪಾರಿವಾಳವನ್ನೇನೂ ವಿಚಾರಣೆಗೊಳಪಡಿಸೋಕೆ ಆಗೋದಿಲ್ಲ. ಅದ್ರ ಬಾಯಿ ಬಿಡಿಸೋಕಂತೂ ಸಾಧ್ಯವಿಲ್ಲ. ಹೀಗಾಗಿ ಪಾರಿವಾಳದ ದೆಹವನ್ನೊಮ್ಮೆ ಕಂಪ್ಲೀಟ್ ಆಗಿ ಚೆಕ್ ಮಾಡಲಾಗುತ್ತೆ. ಅದ್ರ ಅರೋಗ್ಯ ಪರೀಕ್ಷೆ ಕೂಡ ಮಾಡಲಾಗುತ್ತೆ. ಬಳಿಕ ಪಾರಿವಾಳವನ್ನ ಪಶುವೈದ್ಯಕೀಯ ಆಸ್ಪತ್ರೆಗೆ ರವಾನಿಸಲಾಗಿತ್ತು.
ಆದ್ರೆ ಫೊರೆನ್ಸಿಕ್ ಲ್ಯಾಬ್ನಲ್ಲಿ ಪಾರಿವಾಳದ ಕಾಲಿಗೆ ಕಟ್ಟಿದ್ದ ಚಿಪ್ನ್ನ ಪರಿಶೀಲಿಸಿದಾಗ ಒಂದು ಮಹತ್ವದ ಸಂಗತಿ ಬಯಲಾಗುತ್ತೆ. ಆ ಚಿಪ್ನಲ್ಲಿ ಲೊಕೇಶನ್ ಕೋಡಿಂಗ್ ಇರುತ್ತೆ. ಅಂದ್ರೆ ಆ ಚಿಪ್ ಯಾವುದಕ್ಕೆ ಸಮಬಂಧಿಸಿದ್ದು. ಎಲ್ಲಿಗೆ ಸೇರಿದ್ದು ಅನ್ನೋ ಬಗ್ಗೆ ಮಾಹಿತಿ ಇರುತ್ತೆ. ಮುಂಬೈ ಪೊಲೀಸ್ ಸಬ್ಇನ್ಸ್ಪೆಕ್ಟರ್ ರವೀಂದರ್ ಪಾಟೀಲ್ ಫೊರೆನ್ಸಿಕ್ ಲ್ಯಾಬ್ನ ವರದಿಯನ್ನ ಕ್ರಾಸ್ ಚೆಕ್ ಮಾಡ್ತಾರೆ. ಈ ವೇಳೆ ಪಾರಿವಾಳದ ಬಗ್ಗೆ ಸಂಶಯ ಪಡುವಂಥಾ ಯಾವುದೇ ಅಂಶಗಳು ಆ ವರದಿಯಲ್ಲಿ ಇರೋದಿಲ್ಲ. ಫೈನಲೀ ಈ ಪಾರಿವಾಳ ಗೂಢಾಚಾರಿಕೆ ಮಾಡ್ತಾ ಇರಲಿಲ್ಲ ಅನ್ನೋ ನಿರ್ಧಾರಕ್ಕೆ ಬರಲಾಗುತ್ತೆ. ಹಾಗಿದ್ರೆ ಆ ಪಾರಿವಾಳದ ಕಾಲಿನಲ್ಲಿದ್ದ ರಿಂಗ್, ಚಿಪ್ ಮತ್ತು ಚೀಟಿ ಏನಕ್ಕೆ ಸಂಬಂಧಿಸಿದ್ದು ಅನ್ನೋ ಪ್ರಶ್ನೆ ನಿಮ್ಮಲ್ಲಿ ಬರಬಹುದು. ಅಸಲಿಗೆ ಅದೊಂದು ರೇಸಿಂಗ್ ಪಕ್ಷಿಯಾಗಿತ್ತು. ಹೇಗೆ ಕುದುರೆ ರೇಸ್, ನಾಯಿಗಳ ರೇಸ್ ಮಾಡ್ತಾರೋ ಅದೇ ರೀತಿ ಸಾಕು ಪಾರಿವಾಳಗಳ ರೇಸ್ ಕೂಡ ನಡೆಯುತ್ತೆ. ತೈವಾನ್ ದೇಶದಲ್ಲಿ ಪಾರಿವಾಳದ ರೇಸ್ ನಡೆಯುತ್ತೆ. ಈ ಪಾರಿವಾಳ ಕೂಡ ಅಲ್ಲಿಂದಲೇ ಬಂದಿತ್ತು. ರೇಸ್ಗೆ ಅಂತಾ ಹಾರಿದ್ದ ಪಾರಿವಾಳ ದಾರಿ ತಪ್ಪಿ ಸೀದಾ ಭಾರತದ ಸಮುದ್ರ ಪ್ರದೇಶದ ಕಡೆ ಬಂದಿತ್ತು. ಬಳಿಕ ಸಮುದ್ರದಲ್ಲಿದ್ದ ಯಾವುದೋ ಹಡಗಿನ ಮೇಲೆ ಕುಳಿತಿದೆ. ಆ ಹಡಗು ಮುಂಬೈಗೆ ಬಂದಿದೆ. ಮುಂಬೈಗೆ ಬಂದ ಪಾರಿವಾಳ ಬಂದರಿನಲ್ಲಿ ಕುಳಿತು ಅತ್ತಿಂದಿತ್ತ ನೋಡ್ತಾ ಇತ್ತು. ಅದ್ರ ಕಾಲಿನಲ್ಲಿ ರಿಂಗ್, ಚೀಟಿ ಎಲ್ಲಾ ಇದ್ದಿದ್ದನ್ನ ನೋಡಿ ಡೌಟ್ ಬಂದು ಬಂದರಿನ ಸೆಕ್ಯೂರಿಟಿ ಗಾರ್ಡ್ ಒಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ರು. ಇನ್ನು ಆ ಚೀಟಿಯಲ್ಲಿ ಏನು ಬರೆದಿದೆ ಅನ್ನೋದು ಕೂಡ ಆಲ್ಮೋಸ್ಟ್ ಅಳಿಸಿ ಹೋಗಿತ್ತು. ಇಷ್ಟೆಲ್ಲಾ ಡೆವಲಪ್ಮೆಂಟ್ಗಳಾಗಬೇಕಾದ್ರೆ ಪೊಲೀಸ್ ಕಸ್ಟಡಿಯಲ್ಲಿದ್ದ ಪಾರಿವಾಳವನ್ನ ಬಿಡಿಸೋಕೆ ಮುಂದೆ ಬಂದಿರೋದು ಪ್ರಾಣಿ ಹಕ್ಕುಗಳ ಸಂರಕ್ಷಣಾ ಸಂಸ್ಥೆ ಪೇಟಾ. ಯಾಕಂದ್ರೆ ಈ ಪಾರಿವಾಳ ಪಶುವೈದ್ಯಕೀಯ ಆಸ್ಪತ್ರೆಯಲ್ಲೇ ಇತ್ತು. ತನಿಖಾ ವರದಿಯಲ್ಲಿ ಇದು ಗೂಢಾಚಾರಿಕೆಗೆ ಸೇರಿದ ಪಾರಿವಾಳ ಅಲ್ಲ ಅನ್ನೋದು ಖಚಿತವಾಗಿದ್ರು, ಪೊಲೀಸರೂ ಕೂಡ ಕೇಸ್ಗೆ ಅಂತ್ಯ ಹಾಡಿದ್ರೂ ಆ ಪಾರಿವಾಳವನ್ನ ಮಾತ್ರ ರಿಲೀಸ್ ಮಾಡಿಯೇ ಇರಲಿಲ್ಲ. ಅಸಲಿಗೆ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿದ್ದ ಪಾರಿವಾಳವನ್ನ ಪೊಲೀಸರು ಮರೆತೇ ಬಿಟ್ಟಿದ್ರು. ಅದನ್ನ ನೋಡೋಕೆ ಅಂತಾ ಒಂದು ಬಾರಿಯೂ ಆಸ್ಪತ್ರೆಗೆ ಹೋಗಿರಲಿಲ್ಲ. ರಿಲೀಸ್ ಮಾಡೋಕೂ ಸೂಚಿಸಿರಲಿಲ್ಲ. ಆರೋಗ್ಯವಂತ ಪಾರಿವಾಳವನ್ನ ಅನಗತ್ಯವಾಗಿ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ಕೂಡಿ ಹಾಕಲಾಗಿತ್ತು. ಹೀಗಾಗಿ ಪೇಟಾದ ಮಂದಿ ಪಾರಿವಾಳದ ಬಿಡುಗಡೆಗಾಗಿ ಪಟ್ಟು ಹಿಡಿದ್ರು. ಆದ್ರೆ ಪ್ರಕರಣದ ತನಿಖೆ ನಡೆಸಿದ್ದ ಸಬ್ಇನ್ಸ್ಪೆಕ್ಟರ್ ರವೀಂದರ್ ಪಾಟೀಲ್ ಪಾರಿವಾಳ ಆರೋಗ್ಯವಾಗಿದ್ರೆ ಅದನ್ನ ರಿಲೀಸ್ ಮಾಡುವಂತೆ ಮೊದಲೇ ಸೂಚಿಸಿದ್ರಂತೆ. ಆದ್ರೆ ಆಸ್ಪತ್ರೆ ಸಿಬ್ಬಂದಿ ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ ಅಂತಾ ಹೇಳ್ತಿದ್ದಾರೆ. ಇನ್ನು ತೈವಾನ್ನಲ್ಲಿರೋ ಈ ಪಾರಿವಾಳದ ಮಾಲೀಕ ಕೂಡ ಅದನ್ನ ತೆಗೆದುಕೊಂಡು ಹೋಗೋ ಬಗ್ಗೆ ಮುಂಬೈ ಪೊಲೀಸರನ್ನ ಸಂಪರ್ಕಿಸಿಲ್ಲ. ಹೀಗಾಗಿ ಕೊನೆಗೂ ಪಾರಿವಾಳವನ್ನ ಮುಂಬೈನ ಆಗಸದಲ್ಲಿ ಹಾರಿ ಬಿಡಲಾಗಿದೆ.
ಇನ್ನು ಈ ರೀತಿ ಪಾರಿವಾಳಗಳನ್ನ ಭಾರತದಲ್ಲಿ ಬಂಧಿಸಿರೋದು ಇದೇ ಮೊದಲೇನಲ್ಲ. 2020ರಲ್ಲಿ ಜಮ್ಮು-ಕಾಶ್ಮೀರದಲ್ಲೂ ಇಂಥದ್ದೇ ಒಂದು ಪಾರಿವಾಳವನ್ನ ಕೂಡಿ ಹಾಕಲಾಗಿತ್ತು. ಅದು ಪಾಕಿಸ್ತಾನದ ಮೀನುಗಾರರಿಗೆ ಸೇರಿದ ಪಾರಿವಾಳವಾಗಿತ್ತು. ಬಿಗಿಭದ್ರತೆಯ ಭಾರತ-ಪಾಕಿಸ್ತಾನ ಗಡಿ ದಾಟಿ ಆ ಪಾರಿವಾಳ ಜಮ್ಮು-ಕಾಶ್ಮೀರಕ್ಕೆ ಹಾರಿ ಬಂದಿತ್ತು. ಸ್ಪೈ ಪಾರಿವಾಳವಾಗಿರಬಹುದು ಅನ್ನೋ ಡೌಟ್ನಲ್ಲಿ ಅದನ್ನ ಸೆರೆಹಿಡಿದಿದ್ರು. ಆದ್ರೆ ತನಿಖೆಯಿಂದ ಅದು ಕೂಡ ಗೂಢಾಚಾರಿಕೆ ಪಾರಿವಾಳ ಅಲ್ಲ ಅನ್ನೋದು ಕನ್ಫರ್ಮ್ ಆಗುತ್ತೆ. ನಂತರ ಅದನ್ನ ರಿಲೀಸ್ ಮಾಡ್ತಾರೆ.
2016ರಲ್ಲೂ ಜಮ್ಮು-ಕಾಶ್ಮೀರದಲ್ಲಿ ಒಂದು ಪಾರಿವಾಳವನ್ನ ಕಸ್ಟಡಿಗೆ ತೆಗೆದುಕೊಳ್ಳಲಾಗಿತ್ತು. ಆ ಪಾರಿವಾಳ ಹೊತ್ತು ತಂದಿದ್ದ ಲೆಟರ್ನಲ್ಲಿ ಪ್ರಧಾನಿ ಮೋದಿಗೆ ಬೆದರಿಕೆಯೊಡ್ಡಲಾಗಿತ್ತು. 2015ರಲ್ಲಿ ಭಾರತ-ಪಾಕಿಸ್ತಾನ ಗಡಿ ಬಳಿ ಸೆರೆಹಿಡಿಯಲಾಗಿದ್ದ ಪಾರಿವಾಳ ಉರ್ದುವಿನಲ್ಲಿ ಬರೆದ ಪತ್ರವೊಂದನ್ನ ತಂದಿತ್ತು. ಪಾರಿವಾಳದ ವಿಚಾರದಲ್ಲಿ ಇಂಥಾ ಪ್ರಕರಣಗಳನ್ನ ಯಾವುದೇ ಕಾರಣಕ್ಕೂ ಕ್ಯಾರ್ಲೆಸ್ ಮಾಡುವಂತೆಯೇ ಇಲ್ಲ. ಯಾಕಂದ್ರೆ ಗೂಢಾಚಾರಿಕೆಗೆ ಅತೀ ಹೆಚ್ಚು ಬಳಕೆಯಾಗೋ ಪಕ್ಷಿ ಅಂದ್ರೆ ಅದು ಪಾರಿವಾಳ ಮಾತ್ರ.