ಸಾವಿನ ನಾಟಕವಾಡಿದ್ದ ಬಾಲಿವುಡ್ ನಟಿ ಪೂನಂ ಪಾಂಡೆ ವಿರುದ್ಧ ಎಫ್ಐಆರ್ ದಾಖಲು
ಸಾವಿನ ನಾಟಕವಾಡಿದ್ದ ಬಾಲಿವುಡ್ ನಟಿ ಪೂನಂ ಪಾಂಡೆ ಮೇಲೆ ಕೇಸ್ ದಾಖಲಾಗಿದೆ. ಗರ್ಭಕಂಠ ಕ್ಯಾನ್ಸರ್ ಕುರಿತಂತೆ ಜಾಗೃತಿಗಾಗಿ ಸತ್ತಂತೆ ನಾಟಕವಾಡಿದ್ದ ಪೂನಂ ಪಾಂಡೆ ವಿರುದ್ಧ ವಕೀಲರೊಬ್ಬರು ದೂರು ನೀಡಿದ್ದಾರೆ.
ಅಲಿ ಕಾಶಿಪ್ ಎಂಬ ವಕೀಲರೊಬ್ಬರು ದೂರು ನೀಡಿದ್ದು, ಈ ದೂರಿನ ಆಧಾರದ ಮೇಲೆ ಪೂನಂ ಮತ್ತು ಆಕೆಯ ಮ್ಯಾನೇಜರ್ ಮೇಲೆ ಎಫ್.ಐ.ಆರ್ ದಾಖಲಾಗಿದೆ. ತಮ್ಮ ಪ್ರಚಾರಕ್ಕಾಗಿ ಇಂತಹ ಸ್ಟಂಟ್ಗಳನ್ನ ಮಾಡುವಂತವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಸಾವಿನ ಸುದ್ದಿಯಿಂದ ಗರ್ಭಕಂಠ ಕ್ಯಾನ್ಸರ್ ರೋಗದ ಬಗ್ಗೆ ಜಾಗೃತಿ ಮೂಡಿಸಲು ಸಾಧ್ಯವಿಲ್ಲ. ಇದು ಕ್ಯಾನ್ಸರ್ ಸಮಸ್ಯೆಯಿಂದ ಬುದುಕುಳಿದಿರುವವರನ್ನು ಗೇಲಿ ಮಾಡಿದಂತಾಗಿದೆ. ಇದರಿಂದ ಪೂನಂ ವಿರುದ್ಧ ಕೇಸ್ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದ್ದಾರೆ.
ಇದನ್ನೂ ಓದಿ: ಸತ್ತಿರುವ ಪೂನಂ ದಿಢೀರ್ ಪ್ರತ್ಯಕ್ಷ – ಪೂನಂ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಭುಗಿಲೆದ್ದ ಜನಾಕ್ರೋಶ
ನಟಿ ಪೂನಂ ಪಾಂಡೆ ಅವರು ಗರ್ಭಕಂಠ ಕ್ಯಾನ್ಸರ್ ನಿಂದ ಸತ್ತಿರುವುದಾಗಿ ಆಕೆಯ ಮ್ಯಾನೇಜರ್ ಸುದ್ದಿ ಹಬ್ಬಿಸಿದ್ದರು. ಈ ಪ್ರಕರಣದ ಕುರಿತಂತೆ ಪೂನಂ ಮೇಲೆ ಸಾಕಷ್ಟು ಆರೋಪಗಳು ಕೇಳಿ ಬಂದಿವೆ. ಔಷಧಿ ಕಂಪನಿಗಳು ಈಕೆಗೆ ಹಣ ನೀಡಿ, ಈ ರೀತಿ ನಾಟಕವಾಡುವಂತೆ ಮಾಡಿವೆ ಎನ್ನುವ ಆರೋಪವಿತ್ತು. ಈ ಕುರಿತಂತೆ ಸ್ವತಃ ಪೂನಂ ಸ್ಪಷ್ಟನೆ ನೀಡಿದ್ದಾರೆ. ತಾವು ಸತ್ತಿರುವುದಾಗಿ ಹೇಳಿಕೊಂಡಿದ್ದರ ಹಿಂದೆ ನಿಜವಾದ ಕಾಳಜಿ ಇತ್ತು. ಯಾವುದೇ ಔಷಧಿ ಕಂಪನಿಗಳು ತಮಗೆ ಹಣ ನೀಡಿಲ್ಲ ಎಂದು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ.
ತನ್ನ ತಾಯಿ ಕೂಡ ಗಂಟಲು ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಕ್ಯಾನ್ಸರ್ ರೋಗಿಗಳು ಹೇಗೆ ನರಳುತ್ತಾರೆ ಎನ್ನುವುದನ್ನು ಸ್ವತಃ ನಾನು ನೋಡಿದ್ದೇನೆ. ಸದ್ಯ ತಾಯಿ ಆರೋಗ್ಯವಾಗಿದ್ದಾರೆ. ಅವರ ನೋವನ್ನು ನೋಡಿಯೇ ನಾನು ಗರ್ಭಕಂಠ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಬೇಕು ಅಂತ ನಿರ್ಧಾರ ಮಾಡಿದ್ದು. ನೀವು ಟೀಕೆಗಳನ್ನು ಮಾಡುತ್ತಿದ್ದೀರಿ. ಆದರೆ, ನಾನು ಮಾಡಿದ್ದರ ಹಿಂದಿನ ಪರಿಣಾಮವನ್ನೂ ನೀವು ಗಮನಿಸಬೇಕು ಎಂದು ಅವರು ಪೋಸ್ಟ್ ಮಾಡಿದ್ದಾರೆ.
ಗರ್ಭಕಂಠ ಕ್ಯಾನ್ಸರ್ ಕುರಿತಂತೆ ಜಾಗೃತಿ ಮೂಡಿಸುವುದಕ್ಕಾಗಿ ವಾಮಮಾರ್ಗ ಹಿಡಿದಿರುವ ಬಾಲಿವುಡ್ ನಟಿ, ಕಾಂಟ್ರವರ್ಸಿ ಕ್ವೀನ್ ಪೂನಂ ಪಾಂಡೆಯನ್ನು ಅರೆಸ್ಟ್ ಮಾಡಬೇಕು ಎಂದು ಅಭಿಮಾನಿಗಳು ಮತ್ತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ‘ಬಾಯ್ಕಾಟ್ ಪೂನಂ ಪಾಂಡೆ’ ಟ್ರೆಂಡ್ ಶುರು ಮಾಡಿದ್ದಾರೆ. ಈ ಬೆನ್ನಲ್ಲೇ ಪೂನಂ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮಹಾರಾಷ್ಟ್ರ ಶಾಸಕ ಸತ್ಯಜೀತ್ ತಾಂಬೆ ಮುಂಬೈ ಪೊಲೀಸರಿಗೆ ಸೂಚನೆ ಕೊಟ್ಟಿದ್ದಾರೆ.