ರಾಜಕೀಯ ಮುತ್ಸದ್ಧಿ ಲಾಲ್ ಕೃಷ್ಣ ಅಡ್ವಾಣಿಗೆ ಭಾರತ ರತ್ನ – ರಾಜಕೀಯವಾಗಿ ಬೆಳೆದು ಬಂದ ಹಾದಿ ಹೇಗಿತ್ತು?

ರಾಜಕೀಯ ಮುತ್ಸದ್ಧಿ ಲಾಲ್ ಕೃಷ್ಣ ಅಡ್ವಾಣಿಗೆ ಭಾರತ ರತ್ನ – ರಾಜಕೀಯವಾಗಿ ಬೆಳೆದು ಬಂದ ಹಾದಿ ಹೇಗಿತ್ತು?

ದೇಶದಲ್ಲಿ ರಾಮಮಂದಿರದ ಕನಸು ಬಿತ್ತಿ, ಬಿಜೆಪಿಗೆ ಭದ್ರ ಬುನಾದಿ ಹಾಕಿದವರು ರಾಜಕೀಯ ಮುತ್ಸದ್ಧಿ ಲಾಲ್ ಕೃಷ್ಣ ಅಡ್ವಾಣಿ. ಇದೀಗ ಮಾಜಿ ಉಪ ಪ್ರಧಾನಿ, ಬಿಜೆಪಿಯ ಭೀಷ್ಮ ಎಲ್‌.ಕೆ ಅಡ್ವಾಣಿ ಅವರಿಗೆ ದೇಶದ ಅತ್ಯುನ್ನತ ಗೌರವಯುತ ಪ್ರಶಸ್ತಿ ಭಾರತ ರತ್ನ ಘೋಷಣೆ ಮಾಡಲಾಗಿದೆ. 96 ವರ್ಷದ ತಮ್ಮ ರಾಜಕೀಯ ಗುರುವಿಗೆ ಅತ್ಯುತ್ತಮ ಗೌರವದ ಬಗ್ಗೆ ಸ್ವತಃ ಪ್ರಧಾನಿ ಮೋದಿಯವರೇ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಮ್ಮ ಕಾಲದ ಅತ್ಯಂತ ಗೌರವಾನ್ವಿತ ರಾಜಕಾರಣಿಗಳಲ್ಲಿ ಅಡ್ವಾಣಿ ಜೀ ಅವರು ಒಬ್ಬರು, ಭಾರತದ ಅಭಿವೃದ್ಧಿಗೆ ಅವರ ಕೊಡುಗೆ ಸ್ಮರಣೀಯವಾಗಿದೆ ಎಂದು ಗುಣಗಾನ ಮಾಡಿದ್ದಾರೆ. ರಾಮ ಮಂದಿರ ಹೋರಾಟದ ರೂವಾರಿ ಎಲ್.ಕೆ ಅಡ್ವಾಣಿಗೆ ಕಳೆದ ತಿಂಗಳು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯಿಂದ ದೊಡ್ಡ ಜಯ ಸಿಕ್ಕಿತ್ತು. ಅಯೋಧ್ಯೆ ರಾಮಮಂದಿರ ಉದ್ಘಾಟನೆಗೊಂಡ ಬೆನ್ನಲ್ಲೇ ಭಾರತ ರತ್ನ ಗೌರವ ಘೋಷಣೆಯಾಗಿದೆ. 1980ರ ದಶಕದಿಂದ ಭಾರತೀಯ ಜನತಾ ಪಕ್ಷಕ್ಕೆ ಬೆನ್ನೆಲುವಾಗಿ ನಿಂತಿದ್ದ ಅಡ್ವಾಣಿಯವರು ಶ್ರೇಷ್ಠ ಗೌರವಕ್ಕೆ ಭಾಜನರಾಗಿದ್ದಾರೆ. ಅಡ್ವಾಣಿಯವರು ರಾಜಕೀಯವಾಗಿ ಬೆಳೆದು ಬಂದ ಹಾದಿ ಹೇಗಿತ್ತು ಅನ್ನೋ ಮಾಹಿತಿ ಇಲ್ಲಿದೆ..

ಇದನ್ನೂ ಓದಿ:   ರಾಜಕೀಯ ವಲಯದಲ್ಲಿ ಕಿಚ್ಚು ಹಚ್ಚಿದ ಡಿ.ಕೆ ಸುರೇಶ್ ಮಾತು – ದೇಶ ಒಡೆಯುವ ಮಾತು ಸಹಿಸಲ್ಲ ಎಂದು ನಾಯಕರ ಎಚ್ಚರಿಕೆ

ಲಾಲ್ ಕೃಷ್ಣ ಅಡ್ವಾಣಿ ಅವರು ಜನಿಸಿದ್ದು, ನವೆಂಬರ್ 8, 1927ರಲ್ಲಿ. ಅವಿಭಜಿತ ಭಾರತದ ಕರಾಚಿಯಲ್ಲಿ ಸಿಂಧಿ ಕುಟುಂಬದಲ್ಲಿ ಜನಿಸಿದರು. 1941ರ ಅವಧಿಯಲ್ಲಿ ಅಂದ್ರೆ 14 ವರ್ಷದವರಿದ್ದಾಗಲೇ ರಾಷ್ಟ್ರೀಯ ಸ್ವಯಂಸೇವಕ ಸಂಘ ಸೇರಿಕೊಂಡಿದ್ದರು. ದೇಶದ ವಿಭಜನೆ ಸಮಯದಲ್ಲಿ ದೆಹಲಿಗೆ ಬಂದ ಅಡ್ವಾಣಿ ಬಳಿಕ ರಾಜಸ್ಥಾನದಲ್ಲಿ ಆರ್ಎಸ್ಎಸ್ ಪ್ರಚಾರಕರಾದರು. ಮೃದುಭಾಷಿ ಮತ್ತು ಸೌಮ್ಯ ಸ್ವಭಾವದ ಅಡ್ವಾಣಿ ರಾಮಜನ್ಮಭೂಮಿ ಚಳವಳಿ ಕೈಗೊಂಡರು. ರಾಜಕೀಯದಲ್ಲಿ ತಮ್ಮದೇ ಹೆಜ್ಜೆ ಗುರುತು ಮೂಡಿಸುತ್ತಾ ಬೆಳೆದ ಅಡ್ವಾಣಿ 1970ರಲ್ಲಿ ರಾಜ್ಯಸಭೆ ಸದಸ್ಯರಾದರು. 1980ರಲ್ಲಿ ರಾಮ ಜನ್ಮಭೂಮಿ ಚಳವಳಿಯನ್ನು ಮತ್ತಷ್ಟು ತೀವ್ರಗೊಳಿಸುತ್ತಾ, ದೇಶದಲ್ಲಿ ಬಿಜೆಪಿ ಅಲೆ ಎಬ್ಬಿಸಿದ್ರು. 10 ಬಾರಿ ಸಂಸದರಾಗಿದ್ದ ಅಡ್ವಾಣಿ ಅವರು ಗೃಹ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. 2002 ರಿಂದ 2004 ರವರೆಗೆ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸಂಪುಟದಲ್ಲಿ ಉಪಪ್ರಧಾನಿಯಾಗಿದ್ದರು.

ಅಡ್ವಾಣಿಯವರಿಗೆ ಬಹುದೊಡ್ಡ ಹೆಸರು ತಂದು ಕೊಟ್ಟಿದ್ದು ರಾಮಜನ್ಮಭೂಮಿ ಹೋರಾಟ. 1990 ರಲ್ಲಿ ಅಡ್ವಾಣಿ ಅವರು ಗುಜರಾತ್‌ನ ಸೋಮನಾಥದಿಂದ ಉತ್ತರ ಪ್ರದೇಶದ ಪವಿತ್ರ ನಗರ ಅಯೋಧ್ಯೆಗೆ ರಾಮ ರಥ ಯಾತ್ರೆ ಕೈಗೊಂಡರು. ರಾಮ ಜನ್ಮಭೂಮಿ ಆಂದೋಲನಕ್ಕೆ ಸ್ವಯಂಸೇವಕರನ್ನು ಸಜ್ಜುಗೊಳಿಸಲು ಮೆರವಣಿಗೆಯು ಸಹಾಯ ಮಾಡಿತು. ದೇಶಾದ್ಯಂತ ರಾಮಮಂದಿರ ಆಂದೋಲನವನ್ನು ಆರಂಭಿಸಿದವರೇ ಅಡ್ವಾಣಿ. ಸಾಕಷ್ಟ ಏಳುಬೀಳುಗಳನ್ನ ಕಂಡಿರುವ ಅಡ್ವಾಣಿ ಅವರ ರಾಜಕೀಯ ವೃತ್ತಿಜೀವನದ ಮೇಲೆ ಪರಿಣಾಮ ಬೀರಿದ ಮತ್ತೊಂದು ಘಟನೆಯೆಂದರೆ 2005ರಲ್ಲಿ ಪಾಕಿಸ್ತಾನಕ್ಕೆ ಅವರ ಪ್ರವಾಸ. ಅಲ್ಲಿ ಅವರು ಪಾಕಿಸ್ತಾನದ ಸಂಸ್ಥಾಪಕ ಮುಹಮ್ಮದ್ ಅಲಿ ಜಿನ್ನಾ ಅವರನ್ನು ಹೊಗಳಿದ್ದರು. ಇದು ಆರ್‌ಎಸ್‌ಎಸ್ ಮತ್ತು ಅವರ ಪಕ್ಷದ ಕೆಲವು ನಾಯಕರನ್ನು ಕೆರಳಿಸಿತ್ತು. ಪಾಕಿಸ್ತಾನದಲ್ಲಿ ಅಡ್ವಾಣಿ ಮಾಡಿದ ಭಾಷಣದಿಂದ ಬಿಜೆಪಿಯ ಅಧ್ಯಕ್ಷ ಸ್ಥಾನಕ್ಕೆ ಎಲ್​ಕೆ ಅಡ್ವಾಣಿ ರಾಜೀನಾಮೆ ನೀಡಬೇಕಾಯಿತು. ಬಳಿಕ 2009ರ ಸಾರ್ವತ್ರಿಕ ಚುನಾವಣೆಯಲ್ಲಿ ಅಡ್ವಾಣಿ ಅವರನ್ನೇ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸುವುದರ ಬಗ್ಗೆ ಬಿಜೆಪಿಯ ಕೆಲ ಸದಸ್ಯರು ಅತೃಪ್ತರಾಗಿದ್ದರು. ಆದ್ರೆ ಬಿಜೆಪಿಗೆ ಗೆಲುವು ಸಿಗಲಿಲ್ಲ. 2014ರ ಮೊದಲು ಅಡ್ವಾಣಿಯವರು ಪ್ರಧಾನ ಮಂತ್ರಿ ಹುದ್ದೆಯ ಅಭ್ಯರ್ಥಿಯಾಗಿ ಗುರುತಿಸಿಕೊಂಡಿದ್ದರು. ನರೇಂದ್ರ ಮೋದಿಯವರ ಜನಪ್ರಿಯತೆ ಹೆಚ್ಚಾದಂತೆ ಅವರು ದೂರ ಸರಿಯಬೇಕಾಯಿತು.  ಇತ್ತೀಚಿನ ವರ್ಷಗಳಲ್ಲಂತೂ ಆರೋಗ್ಯ ಸಮಸ್ಯೆಗಳಿಂದಾಗಿ ಸಕ್ರಿಯ ರಾಜಕೀಯದಿಂದ ಹಿಂದೆ ಸರಿದಿದ್ದಾರೆ.  ಆದ್ರೆ ಅವ್ರು ಹಾಕಿದ ಹೆಜ್ಜೆ, ಕೈಗೊಂಡ ಹೋರಾಟಗಳೇ ಇಂದು ಬಿಜೆಪಿಗೆ ಭಾರತದಲ್ಲಿ ಭದ್ರನೆಲೆ ಕಲ್ಪಿಸಿಕೊಟ್ಟಿದೆ ಅನ್ನೋದ್ರಲ್ಲಿ ಯಾವುದೇ ಅನುಮಾನ ಇಲ್ಲ.

Shwetha M