ಒಲಾ-ಊಬರ್ ವಿವಾದ: ಸಮಸ್ಯೆ ಬಗೆಹರಿಸಲು ಸರ್ಕಾರಕ್ಕೆ 4 ವಾರ ಕಾಲಾವಕಾಶ ನೀಡಿದ ಹೈಕೋರ್ಟ್
ಬೆಂಗಳೂರು: ಓಲಾ ಮತ್ತು ಉಬರ್ ತಮ್ಮ ಆ್ಯಪ್ ಮೂಲಕ ಆಟೋರಿಕ್ಷಾ ಸೇವೆ ನೀಡುವುದಕ್ಕೆ ಸಂಬಂಧಿಸಿದಂತೆ ಉದ್ಭವಿಸಿರುವ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಲು ಕರ್ನಾಟಕ ಹೈಕೋರ್ಟ್ ನಾಲ್ಕು ವಾರಗಳ ಕಾಲ ಸಮಯ ನೀಡಿದೆ.
ಇದನ್ನೂ ಓದಿ: ಓಲಾ-ಉಬರ್ಗೆ ಸೆಡ್ಡು ಹೊಡೆಯುತ್ತಾ ‘ನಮ್ಮ ಯಾತ್ರಿ’?
ವಿವಾದ ಸಾಹಾರ್ಧಯುತ ಪರಿಹಾರಕ್ಕೆ ನಾಲ್ಕು ವಾರ ಕಾಲಾವಕಾಶ ನೀಡಬೇಕು ಎಂಬ ರಾಜ್ಯ ಸರ್ಕಾರದ ಮನವಿಯನ್ನು ಕರ್ನಾಟಕ ಹೈಕೋರ್ಟ್ ಸೋಮವಾರ ಪುರಸ್ಕರಿಸಿದ್ದು, ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ಅರ್ಜಿದಾರರು ಸಲ್ಲಿಸಿರುವ ಮಧ್ಯಪ್ರವೇಶ ಮನವಿಗೆ ರಾಜ್ಯ ಸರ್ಕಾವು ಐದು ದಿನಗಳಲ್ಲಿ ಆಕ್ಷೇಪಣೆ ಸಲ್ಲಿಸಬೇಕು ಎಂದು ಹೇಳಿದೆ.
ಓಲಾ ಮತ್ತು ಉಬರ್ ಇನ್ನು ಮುಂದೆ ತಮ್ಮ ಆ್ಯಪ್ ಮೂಲಕ ಆಟೋರಿಕ್ಷಾ ಸೇವೆ ನೀಡುವಂತಿಲ್ಲ. ತಕ್ಷಣ ಈ ಸೇವೆ ಸ್ಥಗಿತಗೊಳಿಸಬೇಕು ಎಂದು ರಾಜ್ಯ ಸರ್ಕಾರ ಇತ್ತೀಚೆಗೆ ನಿರ್ದೇಶಿಸಿರುವ ಆಕ್ಷೇಪಾರ್ಹ ಆದೇಶ ವಜಾ ಮಾಡುವಂತೆ ಕೋರಿ ಎಎನ್ಐ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್, ಉಬರ್ ಇಂಡಿಯಾ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಮತ್ತು ರೊಪ್ಪೆನ್ ಟ್ರಾನ್ಸ್ಪೊರ್ಟೇಷನ್ ಸರ್ವೀಸಸ್ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಸಿ.ಎಂ.ಪೂಣಚ್ಚ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.
“ಆ್ಯಪ್ ಮೂಲಕ ಓಲಾ ಮತ್ತು ಉಬರ್ ಆಟೋರಿಕ್ಷಾ ಸೇವೆ ಕಲ್ಪಿಸುವುದಕ್ಕೆ ಸಂಬಂಧಿಸಿದಂತೆ ಎಲ್ಲರ ಜೊತೆ ಸಮಾಲೋಚನಾ ಸಭೆ ನಡೆಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರದ ಕೋರಿಕೆಯಂತೆ ನಾಲ್ಕು ವಾರಗಳ ಕಾಲಾವಕಾಶ ನೀಡಲಾಗಿದೆ. ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ಅರ್ಜಿದಾರರು ಸಲ್ಲಿಸಿರುವ ಮಧ್ಯಪ್ರವೇಶ ಮನವಿಗೆ ರಾಜ್ಯ ಸರ್ಕಾವು ಐದು ದಿನಗಳಲ್ಲಿ ಆಕ್ಷೇಪಣೆ ಸಲ್ಲಿಸಬೇಕು. ಉಳಿದ ಮಧ್ಯಪ್ರವೇಶ ಅರ್ಜಿಗಳಿಗೆ ಪಕ್ಷಕಾರರು ಎರಡು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸಬೇಕು. ಮಧ್ಯಪ್ರವೇಶ ಕೋರಿಕೆಗಳನ್ನು ಒಂದು ದಿನ ವಿಚಾರಣೆ ನಡೆಸಿ, ಇತ್ಯರ್ಥಪಡಿಸಲಾಗುವುದು”ಎಂದು ನ್ಯಾಯಾಲಯವು ಆದೇಶದಲ್ಲಿ ದಾಖಲಿಸಿದೆ.