ರಾಜಕೀಯ ಅಗ್ನಿಪರೀಕ್ಷೆಗೆ ಇಳಿದ ವಿಜಯ್ ತಳಪತಿ – ಪೊಲಿಟಿಕ್ಸ್ನಲ್ಲಿ ಏನೆಲ್ಲಾ ಬದಲಾವಣೆಗಳಾಗಬಹುದು?
ತಮಿಳುನಾಡು ರಾಜಕೀಯಕ್ಕೆ ಮತ್ತೊಬ್ಬ ಸ್ಟಾರ್ ನಟನ ಎಂಟ್ರಿಯಾಗಿದೆ. ಲೋಕಸಭೆ ಚುನಾವಣೆ ಕೌಂಟ್ಡೌನ್ ಶುರುವಾಗುತ್ತಲೇ ವಿಜಯ್ ತಳಪತಿ ತಮಿಜಗ ವೆಟ್ರಿ ಕಜಗಮ್ ಅನ್ನೋ ಪಕ್ಷವನ್ನ ಲಾಂಚ್ ಮಾಡಿದ್ದಾರೆ. ನಿಮಗೆ ಗೊತ್ತಿರೋ ಹಾಗೆ ತಮಿಳು ಚಿತ್ರರಂಗದ ಮಂದಿ ರಾಜಕೀಯಕ್ಕೆ ಎಂಟ್ರಿಯಾಗ್ತಾ ಇರೋದು ಇದೇ ಮೊದಲೇನಲ್ಲ. ಈ ಹಿಂದೆ ಎಂಜಿಆರ್, ಜಯಲಲಿತಾ, ಕ್ಯಾಪ್ಟನ್ ವಿಜಯಕಾಂತ್, ಕಮಲಹಾಸನ್ ಇವರೆಲ್ಲವೂ ಚಿತ್ರರಂಗದ ಹಿನ್ನೆಲೆಯಿಟ್ಟುಕೊಂಡೇ ರಾಜಕೀಯಕ್ಕೆ ಬಂದವರು. ಈವನ್ ರಜಿನಿಕಾಂತ್ ಕೂಡ ತಮ್ಮದೇ ಪಕ್ಷವನ್ನ ಘೋಷಿಸಿ, ತಮಿಳುನಾಡು ರಾಜಕೀಯದಲ್ಲಿ ಸುನಾಮಿಯೆಬ್ಬಿಸುವ ಮುನ್ಸೂಚನೆ ಕೊಟ್ಟು ಬಳಿಕ ಅಖಾಡದಿಂದ ಹಿಂದೆ ಸರಿದಿದ್ರು. ಇದೀಗ ನಟ ವಿಜಯ್ ಕೂಡ ರಾಜಕೀಯದಲ್ಲಿ ತಮ್ಮ ಭವಿಷ್ಯ ಬರೆಯೋಕೆ ಸಿದ್ಧರಾಗಿದ್ದಾರೆ. ಹಾಗಿದ್ರೆ ನಟ ವಿಜಯ್ ಎಂಟ್ರಿಯಿಂದ ತಮಿಳುನಾಡು ರಾಜಕೀಯದಲ್ಲಿ ಏನೆಲ್ಲಾ ಬದಲಾವಣೆಗಳಾಗಬಹುದು. ಪರದೆ ಮೇಲೆ ಮಿಂಚಿದ್ದ ವಿಜಯ್ ಎಲೆಕ್ಷನ್ ಗೆಲ್ಲೋಕೆ ಸಾಧ್ಯನಾ? ವಿಜಯ್ ಎದುರಾಳಿ ಯಾರಾಗಬಹುದು? ಡಿಎಂಕೆ, ಎಐಎಡಿಎಂಕೆ, ಬಿಜೆಪಿ ವಿಜಯ್ ರಾಜಕೀಯ ಎಂಟ್ರಿಯನ್ನ ಯಾವ ರೀತಿ ನೋಡ್ತಾ ಇದೆ. ಬಿಜೆಪಿ ಜೊತೆಗೆ ವಿಜಯ್ ಕೈಜೋಡಿಸ್ಬಹುದಾ? ಅಣ್ಣಾಮಲೈ ಒಂದು ಟ್ವೀಟ್ ಮಾಡಿದ್ದು, ಅದ್ರ ಹಿಂದಿರೋ ರಹಸ್ಯವೇನು? ಇವೆಲ್ಲದರ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಬಿಜೆಪಿಯ ಭೀಷ್ಮ ಎಲ್.ಕೆ ಅಡ್ವಾಣಿಗೆ ಒಲಿಯಿತು ಭಾರತ ರತ್ನ – ಪ್ರಧಾನಿ ಮೋದಿ ಘೋಷಣೆ
ದೇಶದ ಬೇರೆಲ್ಲಾ ರಾಜ್ಯಗಳಿಗೆ ಹೋಲಿಸಿದ್ರೆ ತಮಿಳುನಾಡು ರಾಜಕೀಯ ಕಂಪ್ಲೀಟ್ ಡಿಫರೆಂಟ್. ಕರ್ನಾಟಕ ಸೇರಿದಂತೆ ಬಹುತೇಕ ಎಲ್ಲಾ ರಾಜ್ಯಗಳಲ್ಲೂ ಸಿನಿಮಾ ನಟರು ರಾಜಕೀಯದಲ್ಲಿ ಕ್ಲಿಕ್ ಆಗೋ ಸಾಧ್ಯತೆ ತೀರಾ ಕಡಿಮೆ. ಎಂಥದ್ದೇ ಸ್ಟಾರ್ ನಟರಾಗಿದ್ರೂ, ಎಷ್ಟೇ ಜನಪ್ರೀಯತೆ ಹೊಂದಿದ್ರೂ ಅವರನ್ನ ಒಬ್ಬ ರಾಜಕೀಯ ನಾಯಕರನ್ನಾಗಿ ಜನರು ಅಷ್ಟು ಸುಲಭಕ್ಕೆ ಒಪ್ಪೋದಿಲ್ಲ. ಆದ್ರೆ ತಮಿಳುನಾಡಿನಲ್ಲಿ ಹಾಗಲ್ಲ. ಸಿನಿಮಾ ಬ್ಯಾಕ್ರೌಂಡ್ನಿಂದ ಬಂದವರು ಮುಖ್ಯಮಂತ್ರಿ ಪಟ್ಟಕ್ಕೇರಿದ್ದಾರೆ. ಅತ್ಯಂತ ಸಕ್ಸಸ್ಫುಲ್ ರಾಜಕಾರಣಿಗಳಾಗಿದ್ದಾರೆ. ತಮಿಳುನಾಡಿನ ಜನರು ಸಿನಿಮಾ ಹೀರೋಗಳನ್ನ ರೀಯಲ್ ಹೀರೋಗಳಾಗಿಯೇ ನೋಡ್ತಾರೆ. ಹೀಗಾಗಿಯೇ ವಿಜಯ್ ತಳಪತಿ ಕೂಡ ಈಗ ರಾಜಕೀಯ ಅಗ್ನಿಪರೀಕ್ಷೆಗೆ ಇಳಿದಿದ್ದಾರೆ. ಕಳೆದ ಕೆಲ ವರ್ಷಗಳಿಂದ ವಿಜಯ್ ರಾಜಕೀಯ ಎಂಟ್ರಿ ಬಗ್ಗೆ ತಮಿಳುನಾಡಿನಲ್ಲಿ ಸಾಕಷ್ಟು ಟಾಕ್ ಇತ್ತು. ಇದೀಗ ಲೋಕಸಭೆ ಸಮರದ ವೇಳೆಗೆ ತಳಪತಿ ಹೊಸ ಅವತಾರದಲ್ಲಿ ಜನರ ಮುಂದೆ ಬರೋಕೆ ನಿರ್ಧರಿಸಿದ್ದಾರೆ.
ತಳಪತಿ ಅಂದ್ರೆ ತಮಿಳಿನಲ್ಲಿ ಕಮಾಂಡರ್ ಅಂತಾ ಅರ್ಥ. ಆದ್ರೆ ರಾಜಕೀಯ ಯುದ್ಧಭೂಮಿಯಲ್ಲಿ ಹೋರಾಡಿ ಅಧಿಪತ್ಯ ಸಾಧಿಸೋಕೆ ವಿಜಯ್ ಕಮಾಂಡರ್ಗೆ ಸಾಧ್ಯನಾ ಅನ್ನೋದು ಈಗಿರುವ ಪ್ರಶ್ನೆ. ಸದ್ಯ ತಮಿಳುನಾಡಿನಲ್ಲಿ ಅತ್ಯಂತ ಪ್ರಭಾವಿಯಾಗಿರೋ ಪಕ್ಷಗಳಂದ್ರೆ ಡಿಎಂಕೆ ಮತ್ತು ಎಐಎಡಿಎಂಕೆ. ಎರಡೂ ಪಕ್ಷಗಳ ಪ್ರತ್ಯೇಕ ಮೈತ್ರಿಕೂಟ 70-80 ಪರ್ಸೆನೆಂಟ್ನಷ್ಟು ವೋಟ್ಶೇರ್ ಹೊಂದಿವೆ. ಇನ್ನುಳಿದ 20-30 ಪರ್ಸೆಂಟ್ ವೋಟ್ನ್ನ ಉಳಿದವರು ಬಾಚಿಕೊಳ್ಳಬೇಕಿದೆ. ಈ 20-30 ಪರ್ಸೆಂಟ್ ವೋಟ್ ಏನಿದ್ಯಲ್ಲಾ, ಇದನ್ನೇ ಈಗ ವಿಜಯ್ ತಳಪತಿ ಕೂಡ ಟಾರ್ಗೆಟ್ ಮಾಡ್ತಾ ಇರೋದು. ಕಳೆದ 30 ವರ್ಷಗಳಿಂದಲೂ ತಮಿಳುನಾಡು ರಾಜಕೀಯವನ್ನ ಡಾಮಿನೇಟ್ ಮಾಡಿರೋದು ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳು ಮಾತ್ರ. 70-80 ಪರ್ಸೆನೆಂಟ್ನಷ್ಟು ವೋಟ್ಶೇರ್ ಡಿಎಂಕೆ- ಎಐಎಡಿಎಂಕೆ ಹಿಡಿತದಲ್ಲೇ ಇದೆ. ಹೀಗಾಗಿ ಮೂರು ದಶಕಗಳಿಂದಲೂ ಹಲವು ಮಂದಿ ಉಳಿದ 30 ಪರ್ಸೆಂಟ್ ಮತವನ್ನ ಬುಟ್ಟಿಗೆ ಹಾಕೋಕೆ ಸರ್ಕಸ್ ಮಾಡ್ತಾನೆ ಇದ್ರು. ಇದೇ ಕಾರಣಕ್ಕೆ 1996ರಲ್ಲಿ ಕಾಂಗ್ರೆಸ್ ನಾಯಕ ಜಿಕೆ ಮೂಪನರ್ ತಮಿಳ್ ಮನಿಲಾ ಕಾಂಗ್ರೆಸ್ ಅನ್ನೋ ಪಕ್ಷವನ್ನ ಸ್ಥಾಪಿಸ್ತಾರೆ. 2005ರಲ್ಲಿ ಕ್ಯಾಪ್ಟನ್ ವಿಜಯ್ಕಾಂತ್ ಡಿಎಂಡಿಕೆಯನ್ನ ಲಾಂಚ್ ಮಾಡ್ತಾರೆ. 2009ರಲ್ಲಿ ಸಿನಿಮಾ ನಿರ್ದೇಶಕ ಸೀಮನ್ರ ಎನ್ಟಿಕೆ ಪಕ್ಷ ಹುಟ್ಟಿಕೊಳ್ಳುತ್ತೆ. 2014ರಲ್ಲಿ ಕೇಂದ್ರ ಮಾಜಿ ಸಚಿವ ಅನ್ಬುಮಣಿ ರಾಮ್ದಾಸ್ ಪಿಎಂಕೆ ಪಕ್ಷ ಸ್ಥಾಪಿಸ್ತಾರೆ. 2018ರಲ್ಲಿ ಕಮಲಹಾಸನ್ ಎಂಎನ್ಎಂ ಪಾರ್ಟಿ ಮೂಲಕ ರಾಜಕೀಯಕ್ಕೆ ಎಂಟ್ರಿಯಾಗ್ತಾರೆ. ಇವರೆಲ್ಲರೂ ಆ 30 ಪರ್ಸೆಂಟ್ ವೋಟ್ನ್ನ ಟಾರ್ಗೆಟ್ ಮಾಡಿಯೇ ಪಕ್ಷಗಳನ್ನ ಲಾಂಚ್ ಮಾಡಿದ್ರು. ಆದ್ರೆ 2019ರ ಲೋಕಸಭೆ ಚುನಾವಣೆಯಲ್ಲಿ ಕಮಲಹಾಸನ್ ಫೇಲ್ ಆಗಿದ್ರು. ಈಗ 2024ರ ಚುನಾವಣೆಯಲ್ಲಿ ಕನಿಷ್ಠ ಒಂದು ಸ್ಥಾನವನ್ನಾದ್ರೂ ಗಿಟ್ಟಿಸಿಕೊಳ್ಳೋಕೆ ಡಿಎಂಕೆ-ಕಾಂಗ್ರೆಸ್ ಜೊತೆಗೆ ಮೈತ್ರಿಗೆ ಪ್ಲ್ಯಾನ್ ಮಾಡ್ತಾ ಇದ್ದಾರೆ.
ಹಾಗಂತಾ ಕಮಲ್ ಹಾಸನ್, ವಿಜಯ್ಕಾಂತ್ರಂತೆ ತಳಪತಿ ವಿಜಯ್ ರಾಜಕೀಯದಲ್ಲಿ ಫ್ಲಾಪ್ ಆಗಬಹುದು ಅಂತಾ ಹೇಳೋಕಾಗಲ್ಲ. ಯಾಕಂದ್ರೆ ವಿಜಯ್ಗೆ ಇರೋ ಸೂಪರ್ಸ್ಟಾರ್ಡಮ್ ದೊಡ್ಡ ಪ್ಲಸ್ ಪಾಯಿಂಟ್ ಆಗಬಹುದು. ಇದೇ ಸೂಪರ್ಸ್ಟಾರ್ಡಮ್ ತಮಿಳುನಾಡು ಮಾಜಿ ಸಿಎಂ ಎಂಜಿಆರ್ಗೂ ಇತ್ತು. ಸಿನಿಮಾದಿಂದ ಸಿಕ್ಕಿದ್ದ ಆ ಖ್ಯಾತಿಯನ್ನ ಇಟ್ಕೊಂಡೇ ಎಂಜಿಆರ್ ರಾಜಕೀಯ ಅಖಾಡಕ್ಕಿಳಿದಿದ್ರು. ಚುನಾವಣೆಯನ್ನ ಗೆದ್ದು ಮುಖ್ಯಮಂತ್ರಿ ಕೂಡ ಆದ್ರು. ಎಂಜಿಆರ್ ಬಳಿಕ ಸಿನಿಮಾದಲ್ಲಿ ಆ ರೇಂಜಿಗೆ ಸೂಪರ್ಸ್ಟಾರ್ಡಮ್ ಹೊಂದಿರೋ ತಮಿಳು ನಟರಂದ್ರೆ ಇಬ್ಬರು ಮಾತ್ರ. ರಜಿನಿಕಾಂತ್ ಮತ್ತು ತಳಪತಿ ವಿಜಯ್. ಈ ಪೈಕಿ ರಜಿನಿ ರಾಜಕೀಯದಿಂದ ಹಿಂದೆ ಸರಿದಿದ್ದಾರೆ. ಆದ್ರೆ ವಿಜಯ್ ತಮ್ಮ ಸ್ಟಾರ್ಡಮ್ನ್ನ ರಾಜಕೀಯದಲ್ಲೂ ಪರೀಕ್ಷೆಗೊಳಪಡಿಸೋಕೆ ಮುಂದಾಗಿದ್ದಾರೆ.