ವೇಗ ಪಡೆದುಕೊಂಡ ಮೆಟ್ರೋ ಗುಲಾಬಿ ಮಾರ್ಗದ ಸುರಂಗ ಕಾಮಕಾರಿ – ಇನ್ನೆಷ್ಟು ಕೆಲಸ ಬಾಕಿ..?
ಬೆಂಗಳೂರು ನಮ್ಮ ಮೆಟ್ರೋ ಕಾಮಗಾರಿಗಳು ಎಲ್ಲಡೆ ಭರದಿಂದ ಸಾಗುತ್ತಿದೆ. ಕಾಳೇನ ಅಗ್ರಹಾರದಿಂದ ನಾಗವಾರವರೆಗೆ ಸಂಪರ್ಕಿಸುವ ನಮ್ಮ ಮೆಟ್ರೋದ ಗುಲಾಬಿ ಮಾರ್ಗದ ಕಾರ್ಯಗಳು ಕೂಡ ತ್ವರಿತ ಗತಿಯಲ್ಲಿ ಸಾಗುತ್ತಿದೆ. ಇದೀಗ ಅಂತಿಮವಾಗಿ ಕೆ.ಜಿ.ಹಳ್ಳಿ-ನಾಗವಾರದವರೆಗೆ ಸುರಂಗ ಕೊರೆವ ಕಾರ್ಯವನ್ನು ಆರಂಭಿಸಿದ್ದು, ಇನ್ನೊಂದೆಡೆ ಸುರಂಗದಲ್ಲಿ ಹಳಿ ಜೋಡಣೆ ಕಾರ್ಯ ಕೂಡ ಶುರುವಾಗಿದೆ ಚುರುಕಾಗಿದೆ.
ಇದನ್ನೂ ಓದಿ: ವಿಪಕ್ಷಗಳ ಜಾತಿ ಗಣತಿ ಅಸ್ತ್ರಕ್ಕೆ ಬಜೆಟ್ ಮೂಲಕ ಕೌಂಟರ್ – ಲೋಕಸಭೆ ಎಲೆಕ್ಷನ್ಗೆ ಸಿಕ್ಕಿತಾ ಬಿಗ್ ಟ್ವಿಸ್ಟ್?
ನಮ್ಮ ಮೆಟ್ರೋ ಗುಲಾಬಿ ಮಾರ್ಗವು ಬೆಂಗಳೂರಿನ ದಕ್ಷಿಣದಲ್ಲಿರುವ ಬನ್ನೇರುಘಟ್ಟ ರಸ್ತೆಯಲ್ಲಿರುವ ಕಾಳೇನ ಅಗ್ರಹಾರದಿಂದ ಉತ್ತರ ಭಾಗದಲ್ಲಿರುವ ನಾಗವಾರಕ್ಕೆ ಸಂಪರ್ಕಿಸುವ ಅತ್ಯಂತ ದೊಡ್ಡ ಹಾಗೂ ಕಾಮಗಾರಿಯಲ್ಲಿ ಅತ್ಯಂತ ಸವಾಲಾಗಿರುವ ಮಾರ್ಗವಾಗಿದೆ. ಈ ಗುಲಾಬಿ ಮಾರ್ಗವು ದೇಶದಲ್ಲೇ ಅತಿ ದೊಡ್ಡದಾದ ಮೆಟ್ರೋ ಸುರಂಗ ಮಾರ್ಗವಾಗಿದೆ. ಒಟ್ಟು 21 ಕಿಲೋ ಮೀಟರ್ ಉದ್ದದ ಮಾರ್ಗ ಇದಾಗಿದ್ದು, ಒಟ್ಟು ಹದಿನೆಂಟು ನಿಲ್ದಾಣಗಳನ್ನು ಹೊಂದಿರಲಿದೆ. ಒಟ್ಟು 11,500 ಕೋಟಿ ರೂಪಾಯಿ ವೆಚ್ಚದಲ್ಲಿ ನಾಲ್ಕು ಪ್ಯಾಕೇಜ್ಗಳಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. ಇದೀಗ ಇದರ ಕಾಮಗಾರಿ ವೇಗವಾಗಿ ಸಾಗುತ್ತಿದೆ. ವೆಂಕಟೇಶಪುರದಿಂದ ಕೆ.ಜಿ.ಹಳ್ಳಿವರೆಗೆ 1184.4 ಮೀಟರ್ ಸುರಂಗ ಕೊರೆದಿದ್ದ ತುಂಗಾ ಟಿಬಿಎಂ ಡಿಸೆಂಬರ್ನಲ್ಲಿ ಹೊರಬಂದಿತ್ತು. ಇದೀಗ ಅಂತಿಮ ಹಂತವಾಗಿ 935 ಮೀ. ಸುರಂಗ ಕೊರೆವ ಕಾಮಗಾರಿಯನ್ನು ಪ್ರಾರಂಭಿಸಿದೆ. ಈ ಕಾಮಗಾರಿ ಮೇ ಅಂತ್ಯ ಅಥವಾ ಜೂನ್ ಮೊದಲ ವಾರದಲ್ಲಿ ಮುಗಿಯುವ ನಿರೀಕ್ಷೆಯಿದೆ.
ಸದ್ಯ ಭದ್ರಾ ಟಿಬಿಎಂ ವೆಂಕಟೇಶಪುರದಿಂದ ಕೆ.ಜಿ.ಹಳ್ಳಿವರೆಗೆ (1186 ಮೀ.) ಸುರಂಗ ಕೊರೆವ ಕಾರ್ಯದಲ್ಲಿದ್ದು, ದಿನಕ್ಕೆ 3.35 ಮೀ. ಸುರಂಗ ಕೊರೆಯುತ್ತಿರುವ ಈ ಯಂತ್ರ ಈವರೆಗೆ 1128 ಮೀ. ಸುರಂಗದ ಕೆಲಸ ಮುಗಿಸಿದೆ. ಫೆ.7ರ ಹೊತ್ತಿಗೆ ಇದು ಪೂರ್ಣಗೊಳ್ಳಲಿದೆ. ಬಳಿಕ ಮಾರ್ಚ್ನಿಂದ ಈ ಟಿಬಿಎಂ ಕೂಡ ಕೆ.ಜಿ.ಹಳ್ಳಿ-ನಾಗವಾರದವರೆಗೆ (939 ಮೀ.) ಸುರಂಗ ಕೊರೆವ ತನ್ನ ಅಂತಿಮ ಕಾರ್ಯ ಆರಂಭಿಸಲಿದೆ. ಈ ಕೆಲಸ ಜೂನ್ ಅಂತ್ಯ, ಜುಲೈ ಮೊದಲ ವಾರದಲ್ಲಿ ಪೂರ್ಣಗೊಳ್ಳುವ ಸಾಧ್ಯತೆಯಿದ್ದು, ಈ ಮೂಲಕ ಗುಲಾಬಿ ಮಾರ್ಗದ 20.99 ಕಿ.ಮೀ. ಸುರಂಗ ಕೊರೆವ ಕೆಲಸ ಮುಗಿಯಲಿದೆ. ಗುಲಾಬಿ ಮಾರ್ಗದ ಸುರಂಗ ಕೊರೆವ ಕಾಮಗಾರಿಯಲ್ಲಿ ತೊಡಗಿದ್ದ ಏಳು ಯಂತ್ರಗಳು ಈಗಾಗಲೇ ತಮ್ಮ ಕೆಲಸವನ್ನು ಮುಗಿಸಿವೆ. ಇನ್ನು, ಸುರಂಗ ಮಾರ್ಗದಲ್ಲಿ ಹನ್ನೆರಡು, ಹಾಗೂ ಎತ್ತರಿಸಿದ ಮಾರ್ಗದಲ್ಲಿ ಆರು ನಿಲ್ದಾಣಗಳ ಕಾಮಗಾರಿ ಪ್ರಗತಿಯಲ್ಲಿದೆ.