ಯಶಸ್ವಿ ಜೈಸ್ವಾಲ್ ಭರ್ಜರಿ ಶತಕ – ಆಂಗ್ಲರನ್ನು ಬೆಂಡೆತ್ತಿದ ಭಾರತದ ಯಂಗ್ ಬ್ಯಾಟರ್
ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಭರ್ಜರಿ ಶತಕ ಸಿಡಿಸಿದ್ದಾರೆ. ಇದು ಯಶಸ್ವಿ ಜೈಸ್ವಾಲ್ ಅವರ ಟೆಸ್ಟ್ ಕ್ರಿಕೆಟ್ನ ಎರಡನೇ ಶತಕ. ಆಂಗ್ಲರ ಬೆಂಡೆತ್ತಿರುವ ಜೈಸ್ವಾಲ್ 151 ಎಸೆತಗಳಲ್ಲಿ ಸೆಂಚುರಿ ಬಾರಿಸಿದರು.
ಇದನ್ನೂ ಓದಿ: ದಾರಿಯಲ್ಲಿ ಹೋಗುವಾಗ ಪ್ರತ್ಯಕ್ಷವಾದ ಕ್ರಿಕೆಟ್ ದೇವರು –ಅಭಿಮಾನಿಗೆ ಸಚಿನ್ ತೆಂಡೂಲ್ಕರ್ ಸರ್ಪ್ರೈಸ್
ವೈಜಾಗ್ನ ಡಾ. ವೈಎಸ್ ರಾಜಶೇಖರ ರೆಡ್ಟಿ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ಉತ್ತಮ ಮೊತ್ತ ಕಲೆಹಾಕುತ್ತಿದೆ. ನಾಯಕ ರೋಹಿತ್ ಶರ್ಮಾ ಹಾಗೂ ಶುಭ್ಮನ್ ಗಿಲ್ ವಿಕೆಟ್ ಕಳೆದುಕೊಂಡ ಬಳಿಕ ಶ್ರೇಯಸ್ ಅಯ್ಯರ್ ಜೊತೆಗೂಡಿ ಭರ್ಜರಿ ಬ್ಯಾಟಿಂಗ್ ಮಾಡುತ್ತಿರುವ ಯಶಸ್ವಿ ಜೈಸ್ವಾಲ್ ಆಕರ್ಷಕ ಶತಕ ಸಿಡಿಸಿದ್ದಾರೆ. ಕೇವಲ 151 ಎಸೆತಗಳಲ್ಲಿ ಜೈಸ್ವಾಲ್ ಸೆಂಚೂರಿ ಬಾರಿಸಿದ್ದಾರೆ. ಇದು ಅವರ ಎರಡನೇ ಅಂತರರಾಷ್ಟ್ರೀಯ ಟೆಸ್ಟ್ ಶತಕವಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಓಪನರ್ಗಳಾಗಿ ಕಣಕ್ಕಿಳಿದ ಜೈಸ್ವಾಲ್ ಹಾಗೂ ರೋಹಿತ್ ಮೊದಲ ವಿಕೆಟ್ಗೆ 40 ರನ್ಗಳ ಜೊತೆಯಾಟ ಆಡಿದರು. ಚೆನ್ನಾಗಿಯೆ ಆಡುತ್ತಿದ್ದ ರೋಹಿತ್ ಶರ್ಮಾ 14 ರನ್ ಗಳಿಸಿದ್ದಾಗ ಶೋಯೆಜ್ ಬಶಿರ್ ಬೌಲಿಂಗ್ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು. ಬಳಿಕ ಶುಭ್ಮನ್ ಗಿಲ್ ಜೊತೆಯಾದ ಜೈಸ್ವಾಲ್ ಎಚ್ಚರಿಕೆಯಿಂದ ಬ್ಯಾಟ್ ಬೀಸಿದರು. ಆದರೆ, ಆಡಲೇ ಬೇಕಾದ ಪಂದ್ಯದಲ್ಲಿ ಗಿಲ್ ಮತ್ತೊಮ್ಮೆ ವೈಫಲ್ಯ ಅನುಭವಿಸಿದರು. ಎರಡನೇ ಟೆಸ್ಟ್ನಲ್ಲಿ ಸ್ಥಾನ ಪಡೆದ ಜೇಮ್ಸ್ ಅ್ಯಂಡರ್ಸನ್ 34 ರನ್ ಗಳಿಸಿದ್ದ ಗಿಲ್ಗೆ ಪೆವಿಲಿಯನ್ ಹಾದಿ ತೋರಿಸಿದರು. ಜೈಸ್ವಾಲ್ ಬಿರುಸಿನ ಆಟಕ್ಕೆ ಶ್ರೇಯಸ್ ಅಯ್ಯರ್ ಉತ್ತಮ ಸಾಥ್ ನೀಡಿದ್ದು, ಜೈಸ್ವಾಲ್ ಯಶಸ್ವಿಯಾಗಿ ಶತಕ ಹೊಡೆದರು.
ಟೀಮ್ ಇಂಡಿಯಾ ಪರ ಕೆಎಲ್ ರಾಹುಲ್ ಹಾಗೂ ರವೀಂದ್ರ ಜಡೇಜಾ ಜಾಗಕ್ಕೆ ಹೊಸ ಆಟಗಾರರ ಎಂಟ್ರಿ ಆಗಿದೆ. ಮೊಹಮ್ಮದ್ ಸಿರಾಜ್ಗೆ ವಿಶ್ರಾಂತಿ ನೀಡಲಾಗಿದೆ. ಇದೇ ಮೊದಲ ಬಾರಿಗೆ ರಜತ್ ಪಟಿದಾರ್ ಅಂತರರಾಷ್ಟ್ರೀಯ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಈ ಮೂಲಕ ಟೀಮ್ ಇಂಡಿಯಾಕ್ಕೆ ಪದಾರ್ಪಣೆ ಮಾಡಿದ್ದಾರೆ. ಹಾಗೆಯೆ ಮೂರನೇ ಸ್ಪಿನ್ನರ್ ಆಗಿ ಕುಲ್ದೀಪ್ ಯಾದವ್ ಆಡುವ ಬಳಗದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಸ್ಪಿನ್ ವಿಭಾಗವನ್ನು ಆರ್. ಅಶ್ವಿನ್ ಮುನ್ನಡೆಸಲಿದ್ದಾರೆ. ವೇಗಿಗಳಾಗಿ ಜಸ್ಪ್ರಿತ್ ಬುಮ್ರಾ ಮತ್ತು ಮುಖೇಶ್ ಕುಮಾರ್ ಕಾಣಿಸಿಕೊಂಡಿದ್ದಾರೆ. ಇತ್ತ ಇಂಗ್ಲೆಂಡ್ ತಂಡ ಎರಡು ಬದಲಾವಣೆ ಮಾಡಿಕೊಂಡಿದೆ. ಯುವ ಸ್ಪಿನ್ನರ್ ಶೊಯೆಬ್ ಬಶೀರ್ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದಾರೆ.