ರಾಷ್ಟ್ರ ರಾಜಕಾರಣಕ್ಕೆ ಬಸನಗೌಡ ಪಾಟೀಲ್ ಯತ್ನಾಳ್? – ದೆಹಲಿ ರಾಜಕಾರಣಕ್ಕೆ ಕಳುಹಿಸುವ ಕುರಿತು ತೆರೆಮರೆ ಪ್ಲಾನ್

ರಾಷ್ಟ್ರ ರಾಜಕಾರಣಕ್ಕೆ ಬಸನಗೌಡ ಪಾಟೀಲ್ ಯತ್ನಾಳ್? – ದೆಹಲಿ ರಾಜಕಾರಣಕ್ಕೆ ಕಳುಹಿಸುವ ಕುರಿತು ತೆರೆಮರೆ ಪ್ಲಾನ್

ಬಿಜೆಪಿ ಫೈರ್​​ಬ್ರ್ಯಾಂಡ್, ಹಿಂದುತ್ವದ ಬೆಂಕಿ ಚೆಂಡು ಅಂತಾನೇ ಕರೆಸಿಕೊಳ್ಳೋ ನಾಯಕ ಬಸನಗೌಡ ಪಾಟೀಲ್ ಯತ್ನಾಳ್. ಬಿಜೆಪಿ ನಾಯಕರ ಪಾಲಿಗೆ ಸದಾ ಬಿಸಿ ತುಪ್ಪ. ಬಿಜೆಪಿ ಸರ್ಕಾರದ ಅವಧಿಯಲ್ಲೂ ಸ್ವಪಕ್ಷ ನಾಯಕರ ವಿರುದ್ಧವೇ ಕೆಂಡ ಕಾರುತ್ತಿದ್ರು. ಅದ್ರಲ್ಲೂ ಮಾಜಿ ಸಿ.ಎಂ ಬಿಎಸ್ ಯಡಿಯೂರಪ್ಪರನ್ನ ಟಾರ್ಗೆಟ್ ಮಾಡಿ ಸ್ಫೋಟಕ ಆರೋಪಗಳನ್ನ ಮಾಡ್ತಿದ್ರು. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋತ ಮೇಲಂತೂ ಯತ್ನಾಳ್ ಮತ್ತಷ್ಟು ರೆಬೆಲ್ ಆಗಿದ್ರು. ವಿಪಕ್ಷನಾಯಕ ಅಥವಾ ರಾಜ್ಯಾಧ್ಯಕ್ಷನಾಗಿ  ಆಯ್ಕೆ ಮಾಡಬೇಕೆಂದು ಪಟ್ಟು ಹಿಡಿದಿದ್ರು. ಆದ್ರೆ ಒನ್ ಅಗೇನ್ ಬಿಜೆಪಿಯ ರಾಜಾಹುಲಿ ಯಡಿಯೂರಪ್ಪ ಮುಂದೆ ಮಂಡಿಯೂರಬೇಕಾಯ್ತು. ಬಿ.ವೈ ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಪಟ್ಟ ಒಲಿದ್ರೆ ಆರ್.ಅಶೋಕ್ ವಿಪಕ್ಷನಾಯಕನಾದ್ರು. ಇಷ್ಟಾದ್ರೂ ಯತ್ನಾಳ್ ಸಿಟ್ಟು ಕಡಿಮೆಯಾಗಿಲ್ಲ. ಹೋದಲ್ಲಿ ಬಂದಲ್ಲೆಲ್ಲಾ ಬುಸುಗುಡ್ತಾನೇ ಇದ್ದಾರೆ. ತಮ್ಮ ದಾರಿಗೆ ಮುಳ್ಳಾಗಿರೋ ಯತ್ನಾಳ್​ರನ್ನ ಬೇರು ಸಮೇತ ಕಿತ್ತಾಕಲು ಬಿಎಎಸ್​ವೈ ಹೊಸ ಅಸ್ತ್ರ ಕಂಡುಕೊಂಡಿದ್ದಾರೆ.

ಇದನ್ನೂ ಓದಿ: ಯತ್ನಾಳ್ ಅಡ್ಡಕ್ಕೆ ವಿಜಯೇಂದ್ರ! – ರೆಬೆಲ್ ನಾಯಕನ ಉಚ್ಚಾಟನೆ ಫಿಕ್ಸ್? 

ಕಳೆದ ಮೂರು ದಶಕದ ಕರ್ನಾಟಕದ ರಾಜಕಾರಣದಲ್ಲಿ ಯತ್ನಾಳ್ ಹೆಸರು ಜನಪ್ರಿಯವಾಗಿದೆ. ತಮ್ಮ ವಿಭಿನ್ನ ಮಾತು, ನಡೆ ನುಡಿ, ಹಿಂದುತ್ವದ ಚಿಂತನೆಗಳಿಂದ ಫೈರ್‌ ಬ್ರಾಂಡ್‌ ರಾಜಕಾರಣಿ ಎಂದೇ ಗುರುತಿಸಿಕೊಂಡಿದ್ದಾರೆ. ರಾಜಕೀಯವನ್ನೇ ಹಾಸಿ ಹೊದ್ದು ಮಲಗಿರುವ ವಿಜಯಪುರ ಜಿಲ್ಲೆಯ ಪಾಟೀಲರ ಕದನ ಕಣವನ್ನು ದಾಟಿಕೊಂಡು ದಿಲ್ಲಿಯವರೆಗೂ ಹೋದ ನಾಯಕ. ಆದ್ರೆ ಯತ್ನಾಳ್​ಗೆ ಕರ್ನಾಟಕದ ರಾಜಕೀಯ ವಲಯದಲ್ಲಿ ನಿರೀಕ್ಷಿತ ಸ್ಥಾನ ಮಾನಗಳು ಸಿಕ್ಕಿಲ್ಲ. ಈಗಲೂ ಮಾತಿನಿಂದಲೇ ಗಮನಸೆಳೆಯುವ ಯತ್ನಾಳರು ರಾಜಕೀಯ ಗದ್ದುಗೆ ಗುದ್ದಾಟದಲ್ಲಿ ಮುಂಚೂಣಿಯಲ್ಲೇ ಇರುವ ರಾಜಕಾರಣಿ. ಇದೇ ಕಾರಣಕ್ಕೆ ಯತ್ನಾಳ್​ರನ್ನ ಮತ್ತೆ ದೆಹಲಿಗೆ ಕಳಿಸೋ ಪ್ಲ್ಯಾನ್ ನಡೆದಿದೆ.

ಬಸನಗೌಡ ಪಾಟೀಲ್ ಯತ್ನಾಳ್ ರಾಜ್ಯ ರಾಜಕಾರಣದ ಪ್ರಭಾವಿ ನಾಯಕ. ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರಗೆ ಯತ್ನಾಳ್ ಬಿಸಿ ತುಪ್ಪವಾಗಿದ್ದಾರೆ. ಪದೇ ಪದೇ ಅಪ್ಪ-ಮಕ್ಕಳ ಬಗ್ಗೆ ನೇರವಾಗಿ ಯತ್ನಾಳ್ ವಾಗ್ದಾಳಿ ನಡೆಸೋದು ಪಕ್ಷಕ್ಕೆ ಮುಜುಗರವನ್ನುಂಟು ಮಾಡುತ್ತಿದೆ. ಹಾಗೇನಾದ್ರೂ ಶಿಸ್ತು ಕ್ರಮ ತೆಗೆದುಕೊಂಡರೆ ಮತ್ತಷ್ಟು ಕಟುವಾಗಿ ಟೀಕಿಸುವ ಆತಂಕ ಬಿಜೆಪಿಗೆ ಇದೆ. ಇದರ ಜೊತೆಯಲ್ಲಿ ಯತ್ನಾಳ್​ ರಾಜ್ಯದಲ್ಲಿ ಹಿಂದೂ ಫೈರ್ ಬ್ರ್ಯಾಂಡ್ ಆಗಿ ಗುರುತಿಸಿಕೊಂಡಿರೋದರಿಂದ ಶಿಸ್ತು ಕ್ರಮ ತೆಗೆದುಕೊಳ್ಳಲು ಹೈಕಮಾಂಡ್ ಹಿಂದೇಟು ಹಾಕುತ್ತಿದೆ. ಇದೇ ಕಾರಣಕ್ಕೆ ಯತ್ನಾಳ್​ ಅವರನ್ನು ದೆಹಲಿ ರಾಜಕಾರಣಕ್ಕೆ ಕಳುಹಿಸುವ ಕುರಿತು ತೆರೆಮರೆಯಲ್ಲಿ ಪ್ಲಾನ್ ನಡೆಯುತ್ತಿದೆ.  ಸ್ವತಃ ಯಡಿಯೂರಪ್ಪ ಅವರೇ ಯತ್ನಾಳ್​ ಅವರಿಗೆ ಲೋಕಸಭಾ ಚುನಾವಣೆಯ ಟಿಕೆಟ್ ಕೊಡಿಸಲು ಚಿಂತನೆ ನಡೆಸಿದ್ದಾರಂತೆ. ಇತ್ತ ಹೈಕಮಾಂಡ್ ಸಹ ಈ ಬಗ್ಗೆ ಯೋಚನೆ ಮಾಡಿಕೊಂಡಿದೆ ಎನ್ನಲಾಗಿದೆ. ಬಾಗಲಕೋಟೆ ಲೋಕಸಭಾ ಕ್ಷೇತ್ರದಿಂದ ಯತ್ನಾಳ್ ಅವರನ್ನು ಕಣಕ್ಕಿಳಿಸಲು ಹೈಕಮಾಂಡ್ ಗಂಭೀರ ಚಿಂತನೆ ನಡೆಸಿದೆಯಂತೆ. ಹಾಲಿ ಸಂಸದ ಪಿ.ಸಿ. ಗದ್ದಿಗೌಡರ ವಿರುದ್ಧ ಆಡಳಿತ ವಿರೋಧಿ ಅಲೆ ಹಿನ್ನೆಲೆ ಬಾಗಲಕೋಟೆಗೆ ಹೊಸ ಅಭ್ಯರ್ಥಿ ಹಾಕಲು ಚರ್ಚೆಗಳು ನಡೆದಿವೆ.

ಯತ್ನಾಳ್ ಬಿಜೆಪಿ ವಿರುದ್ಧ ಮಾತಾಡೋದು ಇದೇ ಮೊದಲೇನಲ್ಲ. ಬಿಎಸ್ ವೈ ವಿರುದ್ಧ 40 ಸಾವಿರ ಕೋಟಿ ಭ್ರಷ್ಟಾಚಾರ ಆರೋಪ, ಸಿಎಂ ಕುರ್ಚಿಗೆ 2 ಸಾವಿರ ಕೋಟಿ ಕೊಡ್ಬೇಕು ಎಂಬ ಗಂಭೀರ ಆರೋಪ ಮಾಡಿದ್ದರು. ಹೀಗೆ ತಮ್ಮದೇ ನಾಯಕರ ವಿರುದ್ಧ ಆರೋಪ ಮಾಡ್ತಾನೇ ಇರ್ತಾರೆ. ಇದೇ ಕಾರಣಕ್ಕೆ ಯತ್ನಾಳ್​ರನ್ನ ರಾಜ್ಯ ರಾಜಕೀಯದಿಂದ ಬಿಡಿಸಿ ದೆಹಲಿ ರಾಜಕಾರಣಕ್ಕೆ ಕಳಿಸೋ ಪ್ಲ್ಯಾನ್ ನಡೆದಿದೆ. ಹಾಗಂತ ಯತ್ನಾಳ್ ಗೆ ರಾಷ್ಟ್ರ ರಾಜಕಾರಣ ಹೊಸದೇನೂ ಅಲ್ಲ.

ಸಾಮಾನ್ಯನಿಂದ ಸಂಸತ್ ವರೆಗೆ! 

ವಿಜಯಪುರದ ಸಾಮಾನ್ಯ ಯತ್ನಾಳ ಕುಟುಂಬದಲ್ಲಿ ಜನಿಸಿದವರು ಬಸನಗೌಡರು 90ರ ದಶಕದಲ್ಲಿ ರಾಜಕೀಯಕ್ಕೆ ಕಾಲಿಟ್ಟವರು. ಮೊದಲ ಬಾರಿಗೆ 1994ರಲ್ಲಿ ಬಿಜಾಪುರ ಕ್ಷೇತ್ರದಿಂದ ಬಿಜೆಪಿಯಿಂದ ಗೆದ್ದರು. ನಾಯಕತ್ವದ ಗುಣ, ಮಾತುಗಾರಿಕೆ ಇದ್ದುದರಿಂದ ಸಂಸತ್‌ ಸದಸ್ಯರಾಗಿ ಆಯ್ಕೆಯಾಗುವ ಅವಕಾಶ ದೊರೆಯಿತು. 1999ರಲ್ಲಿ ವಿಜಾಪುರ ಲೋಕಸಭಾ ಕ್ಷೇತ್ರದಿಂದ ಗೆದ್ದು ಮೂರೇ ವರ್ಷದಲ್ಲಿ ವಾಜಪೇಯಿ ಅವರ ಸಂಪುಟದಲ್ಲಿ ರೈಲ್ವೆ, ಜವಳಿ ಸಚಿವರಾಗಿಯೂ ಕಾರ್ಯನಿರ್ವಹಿಸಿದರು. ಮತ್ತೊಂದು ಬಾರಿ ಸಂಸದರಾದರು. ಬಳಿಕ ವಿಧಾನಸಭೆ ಚುನಾವಣೆಗೆ ಟಿಕೆಟ್‌ ಸಿಗದೇ ಕೊನೆಗೆ ಜನತಾ ದಳ ಸೇರಿ ದೇವರಹಿಪ್ಪರಗಿ ಮತ ಕ್ಷೇತ್ರಕ್ಕೆ ವಲಸೆ ಹೋಗಿ ಅಲ್ಲಿ ಸೋತರು. ಮೂರು ವರ್ಷದಲ್ಲೇ ಜನತಾದಳ ಬಿಟ್ಟು ಮತ್ತೆ ಬಿಜೆಪಿಗೆ ಸೇರಿದರು. ಆಗ ಸ್ಥಳೀಯ ಸಂಸ್ಥೆಗಳ ಎಂಎಲ್ಸಿ ಚುನಾವಣೆ ಟಿಕೆಟ್‌ ಬಯಸಿ ಅವಕಾಶ ಸಿಗದೇ ಬಂಡಾಯವೆದ್ದು ಗೆದ್ದರು. ಆಗ ಪಕ್ಷದಿಂದ ಉಚ್ಛಾಟನೆ ಮಾಡಲಾಗಿತ್ತು. ಇದಾಗಿ ಮೂರು ವರ್ಷಕ್ಕೆ ಮತ್ತೆ ಬಿಜೆಪಿ ಸೇರಿ ಗೆದ್ದರು. ಬಳಿಕ 2023ರ ವಿಧಾನಸಭಾ ಚುನಾವಣೆಯಲ್ಲಿ ವಿಜಯಪುರಲ್ಲಿ ಬಿಜೆಪಿಯಿಂದ ಗೆದ್ದ ಒಬ್ಬರೇ ಶಾಸಕ ಯತ್ನಾಳ್.

ಫೈರ್ ಬ್ರ್ಯಾಂಡ್, ಹಿಂದೂ ಹುಲಿ ಅಂತೆಲ್ಲಾ ಕರೆಸಿಕೊಂಡ್ರೂ ಯತ್ನಾಳ್‌ಗೆ ಉನ್ನತ ಹುದ್ದೆಗಳು ಎರಡು ದಶಕದಿಂದ ದೊರೆತಿಲ್ಲ. ಎನ್‌ಡಿಎ ಸರ್ಕಾರವಿದ್ದಾಗ ಅನಂತಕುಮಾರ್‌ ಅವರ ಬೆಂಬಲದಿಂದ ವಾಜಪೇಯಿ ಅವರ ಸಂಪುಟ ಸೇರಿದ್ದ ಯತ್ನಾಳರು ಎರಡು ವರ್ಷ ಸಚಿವರೂ ಆಗಿದ್ದರು. ಅದೊಂದು ಅವಕಾಶ ಬಿಟ್ಟರೆ ಅವರಿಗೆ ಪ್ರಮುಖ ಹುದ್ದೆಗಳೇನೂ ದೊರೆತಿಲ್ಲ. ಶಾಸಕರಾಗಲು ಅವರು ಹೆಣಗಾಡಿದ ಸನ್ನಿವೇಶದ ನಡುವೆ ಈಗ ಸತತ ಎರಡನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದಾರೆ. ಆದ್ರೂ ಉನ್ನತ ಸ್ಥಾನಮಾನ ಸಿಗ್ತಿಲ್ಲ ಅಂತಾ ಕೆಂಡ ಕಾರುತ್ತಿದ್ದಾರೆ. ಇದೀಗ ರಾಷ್ಟ್ರ ರಾಜಕಾರಣಕ್ಕೆ ಕಳಿಸೋ ತಯಾರಿ ನಡೆಯುತ್ತಿದ್ದು ಇದಕ್ಕೆ ಯತ್ನಾಳರು ಒಪ್ಪುತ್ತಾರಾ ಅನ್ನೋದೇ ಪ್ರಶ್ನೆ.

Sulekha