ಮೈಸೂರು ಬೆಂಗಳೂರು ಇನ್ನೂ ಹತ್ತಿರ.. ಕಡಿಮೆಯಾಗಲಿದೆ ಅಂತರ..!
ಮೈಸೂರು- ಬೆಂಗಳೂರು – ಚೆನ್ನೈ ನಡುವೆ ಹೈಸ್ಪೀಡ್ ಟ್ರೈನ್
ಬೆಂಗಳೂರು: ಬೆಂಗಳೂರು ಮತ್ತು ಮೈಸೂರು ನಡುವೆ ಎಕ್ಸ್ಪ್ರೆಸ್ ಹೈವೆ ಕಾಮಗಾರಿ ಕೂಡಾ ಮುಕ್ತಾಯದ ಹಂತಕ್ಕೆ ಬರಲಿದೆ. ಅದರ ಮಧ್ಯೆಯೇ ಮತ್ತಷ್ಟು ಬೇಗನೇ ಮೈಸೂರು ಮತ್ತು ಬೆಂಗಳೂರು ತಲುಪಬೇಕು ಅಂತಾ ಬಯಸುವವರಿಗೆ ಹೈಸ್ಪೀಡ್ ಟ್ರೈನ್ನಲ್ಲಿ ಪಯಣಿಸುವ ಅವಕಾಶ ಸಿಗಲಿದೆ. ನವಂಬರ್ 11ರಿಂದ ಚೆನ್ನೈ – ಬೆಂಗಳೂರು- ಮೈಸೂರು ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸೇವೆ ಆರಂಭಗೊಳ್ಳಲಿದೆ.
ಇದನ್ನೂ ಓದಿ: ಸುಪ್ರೀಂಕೋರ್ಟ್ ನಲ್ಲಿ ಕೇಂದ್ರಕ್ಕೆ ಜಯ: ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ 10ರಷ್ಟು ಮೀಸಲಾತಿ
ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸ್ವದೇಶಿ ನಿರ್ಮಿತ ಅಂದರೆ ಮೇಕ್ ಇನ್ ಇಂಡಿಯಾ ರೈಲು. ಗಂಟೆಗೆ 180 ಕಿಲೋ ಮೀಟರ್ ವೇಗದಲ್ಲಿ ಈ ರೈಲು ಸಂಚರಿಸಲಿದೆ. ಮೂರು ಗಂಟೆಯಲ್ಲಿ ಮೈಸೂರಿನಿಂದ ಚೆನ್ನೈಗೆ ತಲುಪಬಹುದು. ಕೇವಲ ಒಂದು ಗಂಟೆಯಲ್ಲಿ ಮೈಸೂರು ಮತ್ತು ಬೆಂಗಳೂರಿಗೆ ತಲುಪಬಹುದು. ಈ ವಂದೇ ಭಾರತ್ ರೈಲಿನಲ್ಲಿ 1,128 ಪ್ರಯಾಣಿಕರು ಪಯಣಿಸಬಹುದಾಗಿದೆ.
ವಂದೇಭಾರತ್ ಹೈಸ್ಪೀಡ್ ಟ್ರೈನ್ನಲ್ಲಿ ಎಲ್ಲಾ ಕೋಚ್ಗಳಲ್ಲಿಯೂ ಆಟೋಮ್ಯಾಟಿಕ್ ಡೋರ್ಗಳು ಇರುತ್ತವೆ. ಜಿಪಿಎಸ್ ಆಧಾರಿತ ಆಡಿಯೋ ವೀಡಿಯೋದಿಂದ ಪ್ರಯಾಣದ ಮಾಹಿತಿಯೂ ಸಿಗುತ್ತದೆ. ಉಚಿತ ವೈಫೈ ವ್ಯವಸ್ಥೆಯೂ ಪ್ರಯಾಣಿಕರಿಗೆ ಲಭ್ಯವಾಗಲಿದೆ. ಪ್ರತಿ ಸೀಟ್ಗೂ ಪ್ರತ್ಯೇಕ ಲೈಟ್ ವ್ಯವಸ್ಥೆಯೂ ಇರಲಿದೆ. ಆಹಾರ ಪೂರೈಕೆ ವ್ಯವಸ್ಥೆಯೂ ಸುಸಜ್ಜಿತವಾಗಿ ಇರಲಿದೆ. ಜೊತೆಗೆ ಈ ರೈಲಿನಲ್ಲಿ ಸಂಚಾರ ಮಾಡುವವರಿಗೆ ಹೆಚ್ಚಿನ ಸೌಂಡ್ ಕೂಡಾ ಬರುವುದಿಲ್ಲ.
ಮೈಸೂರಿನಿಂದ ಪ್ರತಿನಿತ್ಯ 40 ಸಾವಿರಕ್ಕೂ ಅಧಿಕ ಪ್ರಯಾಣಿಕರು ರೈಲಿನಲ್ಲಿ ಸಂಚರಿಸುತ್ತಾರೆ. ಮೈಸೂರು ಚೆನ್ನೈ ನಡುವೆ ಈಗಾಗಲೇ ಮೂರು ರೈಲುಗಳು ಸಂಚರಿಸುತ್ತಿವೆ. ಶತಾಬ್ದಿ ಎಕ್ಸ್ಪ್ರೆಸ್ ಗಂಟೆಗೆ 100 ಕಿಲೋಮೀಟರ್ ವೇಗದಲ್ಲಿ 2 ಗಂಟೆಯಲ್ಲಿ ಮೈಸೂರು ಟು ಬೆಂಗಳೂರು ತಲುಪತ್ತದೆ. ವಂದೇಬಾರತ್ ಟ್ರೈನ್ 110 ಕಿಲೋಮೀಟರ್ ವೇಗದಲ್ಲಿ 100 ನಿಮಿಷಕ್ಕೆ ತಲುಪತ್ತದೆ.
ಜನಸಾಮಾನ್ಯರ ಕೈಗೆಟುಕುತ್ತಾ ‘ವಂದೇಭಾರತ್’ ರೈಲು?
ಚೆನ್ನೈ-ಬೆಂಗಳೂರು-ಮೈಸೂರು ವಂದೇಭಾರತ್ ಹೈಸ್ಪೀಡ್ ಟ್ರೈನ್ ನಗರಗಳನ್ನ ಮತ್ತಷ್ಟೂ ಹತ್ತಿರವಾಗಿಸಿದೆ. ಆದರೆ, ಜನ ಸಾಮಾನ್ಯರಿಗೆ ಈ ರೈಲಿನಲ್ಲಿ ಪ್ರಯಾಣ ಮಾಡುವ ವೆಚ್ಚ ಸ್ವಲ್ಪ ಹೊರೆಯೇ ಆಗಿದೆ. ಸದ್ಯಕ್ಕೆ ಇದು ಶತಾಬ್ದಿ ಎಕ್ಸ್ಪ್ರೆಸ್ ರೈಲಿಗೆ ಪರ್ಯಾಯವಾಗಿ ಓಡುವ ರೈಲಾಗಿದೆ. ಸದ್ಯ ಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಮೈಸೂರಿನಿಂದ ಬೆಂಗಳೂರಿಗೆ ಟಿಕೆಟ್ ದರ ತಲಾ 380 ರೂಪಾಯಿಯಷ್ಟಿದೆ. ಇಷ್ಟು ದರ ನೀಡಿದರೇ ಎರಡೇ ಗಂಟೆಯಲ್ಲಿ ತಲುಪಬಹುದು. ಇದೇ ರೀತಿ ಯೋಚನೆ ಮಾಡಿ ವಂದೇಭಾರತ್ ರೈಲನ್ನ ಹತ್ತಿದರೆ ಟಿಕೆಟ್ ಇನ್ನೂ ಹೆಚ್ಚೇ ಕೊಡಬೇಕು. ಎರಡು ಗಂಟೆಯಲ್ಲಿ ಪ್ರಯಾಣ ಮಾಡುವ ರೈಲಿಗೆ 380 ರೂಪಾಯಿ ನೀಡಬೇಕಾದರೆ, ಕೇವಲ ಒಂದು ಗಂಟೆಯಲ್ಲೇ ಮೈಸೂರು ಬೆಂಗಳೂರು ತಲುಪಬೇಕಾದರೇ 80 ರೂಪಾಯಿ ಇಲ್ಲವೇ 100 ರೂಪಾಯಿಯನ್ನ ಹೆಚ್ಚಿಗೆ ನೀಡಲೇಬೇಕಾಗುತ್ತದೆ.
ಈಗಾಗಲೇ ಶತಾಬ್ದಿ ಎಕ್ಸ್ಪ್ರೆಸ್ ರೈಲಿನ ದರವೇ ಹೆಚ್ಚು ಅನ್ನುತ್ತಿರೋ ಪ್ರಯಾಣಿಕರು, ವಂದೇ ಭಾರತ್ ರೈಲಿನಲ್ಲಿ ಇನ್ನೆಷ್ಟು ಟಿಕೆಟ್ ದರ ಹೆಚ್ಚಿರಬಹುದು ಅನ್ನೋ ಲೆಕ್ಕಾಚಾರದಲ್ಲಿದ್ದಾರೆ. ಆರ್ಥಿಕ ಸ್ಥಿತಿ ಉತ್ತಮವಾಗಿದ್ದವರಿಗೆ ಇಂಥಾ ರೈಲುಗಳಿಂದ ಲಾಭವೇ ಹೊರತು ಜನಸಾಮಾನ್ಯನಿಗೆ ಟಿಕೆಟ್ ದರ ಹೊರೆಯಾಗುತ್ತೆ ಅನ್ನೋ ಮಾತುಗಳು ಕೇಳಿಬರುತ್ತಿದೆ.
ಸಧ್ಯದಲ್ಲೇ ಮೈಸೂರು ಬೆಂಗಳೂರು ನಡುವೆ ದಶಪಥ ಹೆದ್ದಾರಿ ಸಂಚಾರ ಶುರುವಾಗಲಿದೆ. ದಶಪಥದಲ್ಲಿ ಹೋದರೆ ವಾಹನ ಸವಾರರು ಟೋಲ್ ಕಟ್ಟಲೇಬೇಕು. ವಂದೇಭಾರತ್ ರೈಲಿನಲ್ಲಿ ಹೋದರೆ ಟಿಕೆಟ್ ದರ ದುಬಾರಿಯೇ ಇರುತ್ತೆ. ಸರ್ಕಾರ ಈ ಬಗ್ಗೆ ಜನಸಾಮಾನ್ಯನಿಗೆ ಸ್ವಲ್ಪ ಅನುಕೂಲ ಮಾಡಿಕೊಡಬೇಕು ಅಂತಿದ್ದಾರೆ ಪ್ರಯಾಣಿಕರು.