ಮಂಡ್ಯದಲ್ಲಿ ಹೊತ್ತಿ ಉರಿದ ಹನುಮಜ್ವಾಲೆ – ಇದು ದೈವಭಕ್ತಿಯೋ ಅಥವಾ ರಾಜಕೀಯ ತಂತ್ರವೋ..?
ಅಯೋಧ್ಯೆಯ ರಾಮಮಂದಿರದಲ್ಲಿ ಜನವರಿ 22ರಂದು ಬಾಲರಾಮನ ಪ್ರಾಣ ಪ್ರತಿಷ್ಠೆ ವಿಜೃಂಭಣೆಯಿಂದ ನೆರವೇರಿತ್ತು. ಕೋಟ್ಯಂತರ ಭಕ್ತರು ಅಯೋಧ್ಯೆಗೆ ತೆರಳಿ ರಾಮಲಲ್ಲಾನನ್ನ ಕಣ್ತುಂಬಿಕೊಳ್ತಿದ್ದಾರೆ. ಆದ್ರೆ ಆದಿಪುರುಷ ಜನ್ಮ ತಳೆದ ಒಂದೇ ವಾರಕ್ಕೆ ಕರ್ನಾಟಕದಲ್ಲಿ ಕಿಚ್ಚು ಹೊತ್ತಿಕೊಂಡಿದೆ. ರಾಮನ ಭಂಟ ಹನುಮನ ಧ್ವಜದ ವಿಚಾರ ಜ್ವಾಲೆಯಾಗಿದೆ. ಮಂಡ್ಯದಲ್ಲಿ ಹೊತ್ತಿದ ಕಿಡಿ ಇಡೀ ರಾಜ್ಯಕ್ಕೆ ಹಬ್ಬಿ ಇದೀಗ ರಾಷ್ಟ್ರವ್ಯಾಪಿ ಹರಡುತ್ತಿದೆ. ಅಷ್ಟಕ್ಕೂ ಏನಿದು ಹನುಮ ಜ್ವಾಲೆ..? ರಾಜಕೀಯ ಬಣ್ಣ ಪಡೆದಿದ್ದೇಗೆ..? ಇದು ದೈವಭಕ್ತಿಯೋ ಅಥವಾ ರಾಜಕೀಯ ತಂತ್ರವೋ..? ಈ ಬಗ್ಗೆ ವಿಸ್ತೃತ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಮಂಡ್ಯದಲ್ಲಿ ಹನುಮ ಧ್ವಜ ಸಂಘರ್ಷದ ಕಿಚ್ಚು! – ಕೈ ಶಾಸಕರ ಬ್ಯಾನರ್ಗೆ ಕಲ್ಲೆಸೆದು ಆಕ್ರೋಶ ಹೊರಹಾಕಿದ ಪ್ರತಿಭಟನಾಕಾರರು
ಮಂಡ್ಯದ ಕೆರಗೋಡು ಗ್ರಾಮದ ಸರ್ಕಾರಿ ಜಾಗದಲ್ಲಿ ಹನುಮ ಧ್ವಜ ಅಳವಡಿಸಲಾಗಿತ್ತು. ತಾಲೂಕು ಅಧಿಕಾರಿಗಳು ಇದನ್ನ ಕೆಳಗಿಳಿಸಿ ರಾಷ್ಟ್ರಧ್ವಜ ಹಾರಿಸಿದ್ದರು. ಅಧಿಕಾರಿಗಳ ನಡೆ ಭಾರೀ ಸಂಘರ್ಷಕ್ಕೆ ಕಾರಣವಾಗಿದ್ದು, ಮಂಡ್ಯ ಜಿಲ್ಲೆ ಕೊತ ಕೊತ ಕುದಿಯುತ್ತಿದೆ. ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಕೆರಗೋಡಿ ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಹನುಮಧ್ವಜ ಇಳಿಸಿದ ನಡೆಗೆ ರೊಚ್ಚಿಗೆದ್ದಿರೋ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಇದನ್ನ ಅಸ್ತ್ರವಾಗಿ ಬಳಸಿಕೊಂಡು ಸರ್ಕಾರದ ವಿರುದ್ಧ ಸಮರ ಸಾರಿದ್ದಾರೆ. ಸೋಮವಾರ ಪಾದಯಾತ್ರೆ ನಡೆಸಿದ್ದು, ಲಾಠಿಚಾರ್ಜ್ ಕೂಡ ನಡೆದಿದೆ. ಫೆಬ್ರವರಿ 9ರಂದು ಮಂಡ್ಯ ನಗರ ಬಂದ್ ಗೆ ಹಿಂದೂ ಪರ ಸಂಘಟನೆಗಳು ಕರೆ ಕೊಟ್ಟಿವೆ. ಜನರ ಹೋರಾಟಕ್ಕೆ ಜೆಡಿಎಸ್-ಬಿಜೆಪಿ ಬೆಂಬಲ ಘೋಷಣೆ ಮಾಡಿರುವುದರಿಂದ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ.
ಹನುಮ ಧ್ವಜ ಇಳಿಸಿದ ತಾಲೂಕು ಆಡಳಿತಾಧಿಕಾರಿಗಳ ನಡೆ ಖಂಡಿಸಿ ಸೋಮವಾರ ಬೆಳಗ್ಗೆ ಕೆರಗೋಡು ಗ್ರಾಮದಿಂದ ಪಾದಯಾತ್ರೆ ಆರಂಭಿಸಲಾಯ್ತು. ಪಾದಯಾತ್ರೆವೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಭಾಗಿಯಾಗಿದ್ರು. ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಸಿ.ಟಿ ರವಿ, ಶಾಸಕ ಹೆಚ್.ಟಿ.ಮಂಜುನಾಥ್, ಮಾಜಿ ಶಾಸಕರಾದ ಸುರೇಶ್ ಗೌಡ, ರವೀಂದ್ರ ಶ್ರೀಕಂಠಯ್ಯ, ಡಾ.ಅನ್ನದಾನಿ, ತಮ್ಮಣ್ಣ, ಜನಾರ್ದನ ರೆಡ್ಡಿ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಸೇರಿ ಹಲವರು ಪಾಲ್ಗೊಂಡಿದ್ದರು. ಇಷ್ಟೆಲ್ಲಾ ಘಟನೆಗೆ ಶಾಸಕ ರವಿ ಗಣಿಗ ಮತ್ತು ಸಚಿವ ಚಲುವರಾಯಸ್ವಾಮಿ ಕಾರಣ ಎಂದು ಕೆರಗೋಡು ಗ್ರಾಮಸ್ಥರು ಆಕ್ರೋಶ ಹೊರ ಹಾಕಿದರು. ಪಾದಯಾತ್ರೆ ಮಾರ್ಗಮಧ್ಯೆ ಸಾತನೂರು ಗ್ರಾಮದಲ್ಲಿ ಹಾಕಿದ್ದ ಶಾಸಕ ರವಿ ಗಣಿಗ ಅವರ ಬ್ಯಾನರ್ ಹರಿದು ಬೆಂಕಿ ಹಚ್ಚಿ ಆಕ್ರೋಶ ಹೊರ ಹಾಕಿದರು. ಈ ವೇಳೆ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಹಲವರ ಮೇಲೆ ಲಾಠಿ ಚಾರ್ಜ್ ಕೂಡ ಮಾಡಿದ್ರು. ಲಾಠಿ ಚಾರ್ಜ್ ವೇಳೆ ಕೆಲವರು ಗಾಯಗೊಂಡಿದ್ದಾರೆ. ಇದ್ರಿಂದಾಗಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು.
ಲಾಠಿಚಾರ್ಜ್ ಮಾಡಿದ್ದಕ್ಕೆ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ ಮಾಜಿ ಸಚಿವ ಸಿ.ಟಿ.ರವಿ, ಸಂಘರ್ಷ ಉಂಟಾಗಲಿ ಎಂಬ ಕಾರಣದಿಂದ ಈ ರೀತಿ ಮಾಡಲಾಗಿದೆ. ಹನುಮಧ್ವಜ ಹಾರೋವರೆಗೂ ನಮ್ಮ ಹೋರಾಟ ನಿಲ್ಲಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆಯನ್ನು ರವಾನಿಸಿದರು. ಆದ್ರೆ ಸಿದ್ದರಾಮಯ್ಯ ಮಾತ್ರ ಸರ್ಕಾರದ ನಡೆಯನ್ನ ಸಮರ್ಥನೆ ಮಾಡಿಕೊಂಡಿದ್ದಾರೆ. ನಾನೂ ಒಬ್ಬ ಹಿಂದೂ, ಎಲ್ಲ ಧರ್ಮಗಳ ಜನರನ್ನೂ ಪ್ರೀತಿಸುತ್ತೇನೆ. ಸಂವಿಧಾನದಲ್ಲಿ ಹೇಳಿರುವಂತೆ ಜಾತ್ಯತೀತ ಎಂದರೆ ಸಹಬಾಳ್ವೆ ಸಹಿಷ್ಣುತೆ. ನಮಗೆ ಅದರಲ್ಲಿ ನಂಬಿಕೆ ಇದೆ. ಬಿಜೆಪಿಯವರು ಅನಗತ್ಯ ಸಮಸ್ಯೆ ಸೃಷ್ಟಿಸುತ್ತಿದ್ದಾರೆ. ರಾಷ್ಟ್ರಧ್ವಜ ಹಾರಿಸಲು ಅನುಮತಿ ಪಡೆದಿದ್ದು, ಅದನ್ನೇ ಹಾರಿಸಬೇಕು. ಜಿಲ್ಲಾಡಳಿತ ತೆಗೆದುಕೊಂಡ ಕ್ರಮ ಸರಿಯಾಗೇ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಅಯೋಧ್ಯೆ ರಾಮ ಮಂದಿರದಲ್ಲಿ ಜನವರಿ 22ರಂದು ಬಾಲರಾಮ ಪ್ರಾಣಪ್ರತಿಷ್ಠಾ ಕಾರ್ಯಕ್ರಮ ನಡೆದಿತ್ತು. ಅಂದೇ ಮಂಡ್ಯದ ಕೆರೆಗೋಡು ಗ್ರಾಮಸ್ಥರು ಗ್ರಾಮದ 108 ಅಡಿ ಎತ್ತರದ ಧ್ವಜಸ್ತಂಭದಲ್ಲಿ ಹನುಮ ಧ್ವಜ ಹಾರಿಸಲು ತೀರ್ಮಾನಿಸಿದ್ದರು. ಗ್ರಾಮಸ್ಥರು ಮತ್ತು ಹಿಂದೂ ಕಾರ್ಯಕರ್ತರು ಹನುಮ ಧ್ವಜವನ್ನು ಹಾರಿಸಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಗ್ರಾಮ ಪಂಚಾಯಿತಿಯ ಅಧೀನದ ಧ್ವಜಸ್ತಂಭದಲ್ಲಿ ಹನುಮ ಧ್ವಜ ಹಾರಿಸಿದ್ದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಸರ್ಕಾರಿ ಜಾಗದಲ್ಲಿ ಹನುಮ ಧ್ವಜ ಹಾರಿಸಲಾಗಿದೆ ಇದನ್ನು ತೆರವುಗೊಳಿಸಬೇಕು ಎಂದು ಮಂಡ್ಯ ಜಿಲ್ಲಾಡಳಿತವು ತಾಲೂಕು ಆಡಳಿತಕ್ಕೆ ಮೌಖಿಕ ಆದೇಶ ನೀಡಿತ್ತು. ಅದರಂತೆ ಹನುಮ ಧ್ವಜ ತೆರವು ಮಾಡಲು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೀಣಾ ಅವರು ಅಧಿಕಾರಿಗಳೊಂದಿಗೆ ಗ್ರಾಮಕ್ಕೆ ಆಗಮಿಸಿದ್ದರು. ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ ಕಾರಣ, ಹನುಮ ಧ್ವಜ ಇಳಿಸದೇ ಶನಿವಾರ ರಾತ್ರಿ ಹಿಂದಿರುಗಿದ್ದರು. ಆದರೆ, ಜನವರಿ 28ರ ನಸುಕಿನ ಜಾವ 3 ಗಂಟೆಗೆ ಗ್ರಾಮಕ್ಕೆ ಮಂಡ್ಯ ಎಸಿ ಶಿವಮೂರ್ತಿ, ತಹಶೀಲ್ದಾರ್ ಶಿವಕುಮಾರ್ ಬಿರಾದರ್ ಆಗಮಿಸಿ ಧ್ವಜ ತೆರವುಗೊಳಿಸಲು ಯತ್ನಿಸಿದ್ದರು. ಸ್ಥಳಕ್ಕೆ ಪೊಲೀಸರು ಆಗಮಿಸಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಅಧಿಕಾರಿಗಳು ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರಾದರೂ ಫಲ ನೀಡಲಿಲ್ಲ. ಕೂಡಲೆ ಗ್ರಾಮದಲ್ಲಿ 144 ಸೆಕ್ಷನ್ ಜಾರಿಗೊಳಿಸಿ, ಗುಂಪು ಚದುರಿಸಲು ಲಾಠಿ ಚಾರ್ಜ್ ಮಾಡಲಾಯಿತು. ಇಷ್ಟಾದ ಬಳಿಕ ಪೊಲೀಸರು ಹನುಮ ಧ್ವಜವನ್ನು ತೆರವುಗೊಳಿಸಿದರು.
ಗ್ರಾಮಸ್ಥರ ವಿರೋಧದ ನಡುವೆಯೂ ಹನುಮ ಧ್ವಜ ಇಳಿಸಿದ್ದಕ್ಕೆ ಗ್ರಾಮಸ್ಥರು ಕೆರಳಿ ಕೆಂಡವಾಗಿದ್ದಾರೆ. ರಗೋಡು ಗ್ರಾಮದಲ್ಲಿ ಪ್ರತಿಭಟನೆ ಮುಂದುವರಿದಿದೆ. ಸೆಕ್ಷನ್ 144 ಜಾರಿಯಲ್ಲಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಥಳದಲ್ಲಿ ಜಿಲ್ಲಾ ಸಶಸ್ತ್ರ ಪೊಲೀಸ್ ಪಡೆಯ ತುಕಡಿಗಳು ಸೇರಿದಂತೆ ಹೆಚ್ಚಿನ ಪೊಲೀಸ್ ಸರ್ಪಗಾವಲನ್ನು ಹಾಕಲಾಗಿದೆ.