ಮತ್ತೆ ಮುಂದಕ್ಕೆ ಹೋದ ಆದಿಪುರುಷ್ ಚಿತ್ರ ರಿಲೀಸ್ ಡೇಟ್: ಕಾರಣ ಏನು ಗೊತ್ತಾ?

ಮತ್ತೆ ಮುಂದಕ್ಕೆ ಹೋದ ಆದಿಪುರುಷ್ ಚಿತ್ರ ರಿಲೀಸ್ ಡೇಟ್: ಕಾರಣ ಏನು ಗೊತ್ತಾ?

ನಟ ಪ್ರಭಾಸ್​ ಅವರ ‘ಆದಿಪುರುಷ್​’ ಚಿತ್ರ ಎಲ್ಲವೂ ಅಂದುಕೊಂಡಂತೆ ಆಗಿದ್ದರೆ 2023ರ ಜನವರಿ ತಿಂಗಳಲ್ಲಿ ರಿಲೀಸ್​ ಆಗಬೇಕಿತ್ತು. ಆದರೆ ಈಗ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಈ ಕುರಿತು ಸ್ವತಃ ಚಿತ್ರದ ನಿರ್ದೇಶಕ ಓಂ ರಾವತ್​ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಈ ರೀತಿ ಆಗಿದ್ದಕ್ಕೆ ಕಾರಣ ಏನು ಎಂಬುದನ್ನು ಕೂಡ ಅವರು ವಿವರಿಸಿದ್ದಾರೆ.

ಇದನ್ನೂ ಓದಿ: ಕತ್ರೀನಾ ಕೈಫ್‌ನ್ನ ಪ್ಯಾನಿಕ್ ಬಟನ್ ಎಂದು ಹೇಳಿದ್ಯಾರು ?

ಪ್ರಭಾಸ್​ ಅವರನ್ನು ರಾಮನ ಅವತಾರಲ್ಲಿ ತೆರೆ ಮೇಲೆ ನೋಡಬೇಕು ಎಂದು ಕಾದಿದ್ದ ಅಭಿಮಾನಿಗಳು ಇನ್ನಷ್ಟು ದಿನ ಕಾಯುವುದು ಅನಿವಾರ್ಯ ಆಗಿದೆ. ಇದರಿಂದ ಒಂದು ವರ್ಗದ ಜನರಿಗೆ ಬೇಸರ ಆಗಿದ್ದರೆ, ಇನ್ನೊಂದು ವರ್ಗದ ಪ್ರೇಕ್ಷಕರು ನಿಟ್ಟುಸಿರು ಬಿಟ್ಟಿದ್ದಾರೆ.

ರಾಮಾಯಣದ ಕಥೆಯನ್ನು ಇಟ್ಟುಕೊಂಡು ‘ಆದಿಪುರುಷ್​’ ಚಿತ್ರ ಮಾಡಲಾಗುತ್ತಿದೆ. ಈ ಸಿನಿಮಾದಲ್ಲಿ ಪ್ರಭಾಸ್​ ಅವರಿಗೆ ರಾಮನ ಪಾತ್ರವಿದೆ. ಸೀತೆಯಾಗಿ ಕೃತಿ ಸನೋನ್​ ಅಭಿನಯಿಸುತ್ತಿದ್ದಾರೆ. ರಾವಣನ ಪಾತ್ರದಲ್ಲಿ ಸೈಫ್​ ಅಲಿ ಖಾನ್​ ಅಬ್ಬರಿಸಲಿದ್ದಾರೆ. ಪೌರಾಣಿಕ ಸಿನಿಮಾಗಳನ್ನು ಕಟ್ಟಿಕೊಡಲು ಅತ್ಯಾಧುನಿಕ ಗ್ರಾಫಿಕ್ಸ್​ ತಂತ್ರಜ್ಞಾನ ಬಳಸಬೇಕಾಗುತ್ತದೆ. ಈ ವಿಚಾರದಲ್ಲಿ ‘ಆದಿಪುರುಷ್’ ತಂಡ ಎಡವಿತ್ತು. ಅಕ್ಟೋಬರ್​ 2ರಂದು ಅದ್ದೂರಿಯಾಗಿ ಅಯೋಧ್ಯೆಯಲ್ಲಿ ‘ಆದಿಪುರುಷ್’ ಚಿತ್ರದ ಟೀಸರ್​ ಬಿಡುಗಡೆ ಮಾಡಲಾಗಿತ್ತು. ಇದನ್ನು ಎಲ್ಲರೂ ಮೆಚ್ಚಿಕೊಳ್ಳುತ್ತಾರೆ ಎಂದು ಚಿತ್ರತಂಡ ಭಾವಿಸಿತ್ತು. ಆದರೆ ಟೀಸರ್​ನಲ್ಲಿ ಕಳಪೆ ಗ್ರಾಫಿಕ್ಸ್​ ಇದೆ ಎಂಬ ಕಾರಣಕ್ಕೆ ಜನರು ಹಿಗ್ಗಾಮುಗ್ಗಾ ಟ್ರೋಲ್​ ಮಾಡಿದ್ದು, ಅದರ ಪರಿಣಾಮ ಚಿತ್ರತಂಡ ಗಟ್ಟಿ ನಿರ್ಧಾರ ತೆಗೆದುಕೊಂಡಿದೆ.

ಈ ಕುರಿತು ನಿರ್ದೇಶಕ ಓಂ ರಾವತ್​ ಟ್ವೀಟ್ ಮಾಡಿದ್ದು,‘ಆದಿಪುರುಷ್​ ಒಂದು ಸಿನಿಮಾ ಅಲ್ಲ. ರಾಮನ ಬಗ್ಗೆ ನಮಗೆ ಇರುವ ಭಕ್ತಿ ಮತ್ತು ಸಂಸ್ಕೃತಿ-ಇತಿಹಾಸದ ಬಗ್ಗೆ ನಮಗೆ ಇರುವ ಬದ್ಧತೆಯನ್ನು ಇದು ಪ್ರತಿನಿಧಿಸುತ್ತದೆ. ಪ್ರೇಕ್ಷಕರಿಗೆ ಸಂಪೂರ್ಣ ದೃಶ್ಯ ವೈಭವವನ್ನು ನೀಡಲು ಚಿತ್ರತಂಡಕ್ಕೆ ಇನ್ನಷ್ಟು ಸಮಯ ಬೇಕಾಗಿದೆ. ಹಾಗಾಗಿ ‘ಆದಿಪುರುಷ್​’ ಚಿತ್ರ ಜೂನ್​ 16ರಂದು ರಿಲೀಸ್​ ಆಗಲಿದೆ. ಭಾರತವು ಹೆಮ್ಮೆ ಪಡುವಂತಹ ಸಿನಿಮಾ ಮಾಡಲು ನಾವು ಪಣತೊಟ್ಟಿದ್ದೇವೆ. ನಾವು ಮುಂದುವರಿಯಲು ನಿಮ್ಮ ಪ್ರೀತಿ, ಬೆಂಬಲ ಇರಲಿ’ ಎಂದಿದ್ದಾರೆ.

ಚಿತ್ರತಂಡದ ಈ ನಿರ್ಧಾರದಿಂದ ಗ್ರಾಫಿಕ್ಸ್​ ದೃಶ್ಯಗಳು ಉತ್ತಮ ಗುಣಮಟ್ಟದಲ್ಲಿ ಮೂಡಿಬರಲಿದೆ ಎಂಬ ಕಾರಣಕ್ಕೆ ಪ್ರಭಾಸ್​ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಆದರೆ, ಇನ್ನೂ ಹಲವು ತಿಂಗಳು ಕಾಯಬೇಕಲ್ಲ ಎಂದು ಕೆಲವು ಅಭಿಮಾನಿಗಳಿಗೆ ಬೇಸರ ಆಗಿದೆ. ಈ ಚಿತ್ರಕ್ಕೆ ಭೂಷಣ್​ ಕುಮಾರ್​ ಮತ್ತು ಕ್ರಿಷನ್​ ಕುಮಾರ್​ ಬಂಡವಾಳ ಹೂಡುತ್ತಿದ್ದಾರೆ.

suddiyaana