ಜ್ಞಾನವಾಪಿ ಮಸೀದಿಯಲ್ಲಿ ಯಾವೆಲ್ಲಾ ಕುರುಹುಗಳು ಪತ್ತೆಯಾಗಿವೆ? – ಜ್ಞಾನವಾಪಿಗೆ ಕನ್ನಡದ ನಂಟು!
ಮಂದಿರ Vs ಮಸೀದಿ ಗಲಾಟೆ ಇಂದು ನಿನ್ನೆಯದಲ್ಲ. ಶತಮಾನಗಳ ಹೋರಾಟದ ಬಳಿಕ ಅಯೋಧ್ಯೆಯಲ್ಲಿ ರಾಮಮಂದಿರ ತಲೆ ಎತ್ತಿದೆ. ಇದೀಗ ಜ್ಞಾನವಾಪಿ ಮಸೀದಿ ವಿವಾದದಲ್ಲೂ ಮಹತ್ವದ ಬೆಳವಣಿಗೆಯಾಗಿದೆ. ಅಲಹಾಬಾದ್ ಕೋರ್ಟ್ ನಿರ್ದೇಶನದ ಮೇರೆಗೆ ಕಾಶಿ ವಿಶ್ವನಾಥ ಮಂದಿರದ ಪಕ್ಕದಲ್ಲೇ ಇರುವ ಜ್ಞಾನವಾಪಿ ಮಸೀದಿಯಲ್ಲಿ ಸರ್ವೇ ನಡೆಸಲಾಗಿತ್ತು. ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿಗಳು ನಡೆಸಿದ್ದ ವೈಜ್ಞಾನಿಕ ಸಮೀಕ್ಷಾ ವರದಿಯಲ್ಲಿ ಸ್ಫೋಟಕ ಅಂಶಗಳು ಬೆಳಕಿಗೆ ಬಂದಿವೆ. ಜ್ಞಾನವಾಪಿ ಮಸೀದಿ ಜಾಗದಲ್ಲಿ ಮೊದಲು ಹಿಂದೂ ದೇವಾಲಯ ಇತ್ತು ಎಂದು ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್ ಬಹಿರಂಗಪಡಿಸಿದ್ದಾರೆ. ಅಲ್ಲದೆ ಮಸೀದಿಯಲ್ಲಿ ಕನ್ನಡದ ಕುರುಹುಗಳು ಪತ್ತೆಯಾಗಿವೆ ಎಂಬ ರೋಚಕ ಅಂಶವನ್ನೂ ಹೇಳಿದ್ದಾರೆ. ಅಷ್ಟಕ್ಕೂ ವಕೀಲರು ಹೇಳಿದ್ದೇನು..? ಯಾವೆಲ್ಲಾ ಕುರುಹುಗಳು ಪತ್ತೆಯಾಗಿವೆ..? ಕನ್ನಡ ಕುರುಹುಗಳು ಏನು..? ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ:ಅಕಾಲಿಕ ಮರಣ ಹೊಂದಿದ ದೈವ ನರ್ತಕನ ಮಕ್ಕಳಿಗೆ ದೀಕ್ಷೆ – ಭಕ್ತರ ಕಣ್ಮುಂದೆ ಕಾಂತಾರ ಸಿನಿಮಾ ಹೋಲುವ ರಿಯಲ್ ಸನ್ನಿವೇಶ..!
ಉತ್ತರ ಪ್ರದೇಶದ ಕಾಶಿ ವಿಶ್ವನಾಥ ದೇವಾಲಯದ ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಸರ್ವೇ ನಡೆಸಿತ್ತು. ದೇವಸ್ಥಾನ ಮತ್ತು ಮಸೀದಿಯ ಪರ ವಕೀಲರಿಗೆ 839 ಪುಟಗಳ ಸಮೀಕ್ಷಾ ವರದಿಯ ಹಾರ್ಡ್ ಕಾಪಿ ನೀಡಲಾಗಿದೆ. ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್ ವರದಿಯ ಅಂಶಗಳನ್ನು ತಿಳಿಸಿದ್ದಾರೆ. ಮಸೀದಿ ನಿರ್ಮಾಣಕ್ಕೂ ಮುನ್ನ ದೊಡ್ಡ ದೇಗುಲ ಇತ್ತೆಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 17ನೇ ಶತಮಾನದಲ್ಲಿ ದೊಡ್ಡ ದೇವಾಲಯವನ್ನು ಧ್ವಂಸಗೊಳಿಸಲಾಗಿದೆ. ಸಮೀಕ್ಷೆಯಲ್ಲಿ 32 ಸ್ಥಳಗಳಲ್ಲಿ ಪುರಾವೆಗಳು ಸಿಕ್ಕಿವೆ. ಮಸೀದಿ ಹಿಂದೆ ಹಿಂದೂ ದೇವಾಲಯವಿತ್ತು ಎಂದು ತೋರಿಸುತ್ತದೆ. 1669 ರಲ್ಲಿ ದೇವಾಲಯವನ್ನು ಕೆಡವಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಜನಾರ್ದನ, ರುದ್ರ ಮತ್ತು ವಿಶ್ವೇಶ್ವರನ ಬಗ್ಗೆ ಶಾಸನಗಳು ಕಂಡುಬಂದಿವೆ. ದೇವನಾಗರ ಲಿಪಿ, ತೆಲುಗು, ಕನ್ನಡ ಶಾಸನಗಳು ಪತ್ತೆಯಾಗಿವೆ. ದೇವಾಲಯವನ್ನು ಕೆಡವಿದ ನಂತರ, ಅದರ ಕಂಬಗಳನ್ನು ಮಸೀದಿಯನ್ನು ನಿರ್ಮಿಸಲು ಬಳಸಲಾಗಿದೆ. ಹಿಂದೂ ದೇವರು ಮತ್ತು ದೇವತೆಗಳ ಪ್ರತಿಮೆಗಳನ್ನು ಒಳಗೊಂಡಿದೆ. ಜ್ಞಾನವಾಪಿಯ ಪಶ್ಚಿಮ ಗೋಡೆಯು ಹಿಂದೂ ದೇವಾಲಯದ ಭಾಗವಾಗಿತ್ತು. ಅದನ್ನು ಸುಲಭವಾಗಿ ಗುರುತಿಸಬಹುದಾಗಿದೆ.
ಅಲಹಾಬಾದ್ ಕೋರ್ಟ್ ಆದೇಶದಂತೆ ಎಎಸ್ಐ ಮಸೀದಿ ಆವರಣದಲ್ಲಿ ವೈಜ್ಞಾನಿಕ ಸರ್ವೆ ನಡೆಸಿದೆ. ಮಸೀದಿಯನ್ನು ಹಿಂದೆ ಇದ್ದ ದೇಗುಲದ ಕಂಬಗಳನ್ನು ಬಳಸಿಕೊಂಡು ನಿರ್ಮಿಸಲಾಗಿದೆ ಎಂಬ ಅಂಶವನ್ನು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. 1669 ರಲ್ಲಿ ಜ್ಞಾನವಾಪಿ ಮಂದಿರದ ಒಂದು ಭಾಗವನ್ನು ಕೆಡವಿ ಮೊಘಲ್ ಚಕ್ರವರ್ತಿ ಔರಂಗಜೇಬನ ಆದೇಶದ ಮೇರೆಗೆ ಮಸೀದಿಯನ್ನು ನಿರ್ಮಿಸಲಾಗಿದೆ ಎನ್ನಲಾಗುತ್ತಿದೆ. ಮಸೀದಿಯೊಳಗೆ ಅನೇಕ ಹಿಂದೂ ದೇವಾಲಯಗಳು, ಹಿಂದೂ ಧಾರ್ಮಿಕತೆಗೆ ಸಂಬಂಧಿಸಿದ ಪತ್ರಗಳು, ವಸ್ತುಗಳು ಸಿಕ್ಕಿವೆ ಎನ್ನಲಾಗಿದೆ. ಅಲ್ಲದೆ ಜ್ಞಾನವಾಪಿಗೂ ಕನ್ನಡಕ್ಕೂ ಇರೋ ನಂಟು ಕೂಡ ಬಯಲಾಗಿದೆ.
ಜ್ಞಾನವಾಪಿಗೆ ಕನ್ನಡದ ನಂಟು!
ಈ ಹಿಂದೆ ದೇಗುಲವಾಗಿದ್ದ ಜ್ಞಾನವಾಪಿಯಲ್ಲಿ ಪುರಾತತ್ವ ಸರ್ವೆ ಇಲಾಖೆಗೆ ಒಟ್ಟು 34 ಶಿಲಾ ಶಾಸನಗಳು ಪತ್ತೆಯಾಗಿವೆ. ಈ ಪೈಕಿ ಕನ್ನಡದ ಶಿಲಾ ಶಾಸನವೂ ಇದೆ. ಕನ್ನಡ ಭಾಷೆಯಲ್ಲಿ ಇರುವ ಶಿಲಾ ಶಾಸನದ ಜೊತೆಯಲ್ಲೇ ತೆಲುಗು, ದೇವನಾಗರಿ ಭಾಷೆಗಳಲ್ಲೂ ಶಿಲಾ ಶಾಸನಗಳಿವೆ. ದೇವತೆಗಳಾದ ಜನಾರ್ದನ, ರುದ್ರ ಹಾಗೂ ಉಮೇಶ್ವರನ ಹೆಸರುಗಳು ಈ ಶಾಸನಗಳಲ್ಲಿ ಪತ್ತೆಯಾಗಿವೆ. ಕೆಲವು ಶಾಸನಗಳನ್ನು ಧ್ವಂಸ ಮಾಡಲಾಗಿದೆ. ಇನ್ನೂ ಕೆಲವು ಶಾಸನಗಳನ್ನು ಹಾಲಿ ಇರುವ ಕಟ್ಟಡಕ್ಕೆ ಬಳಕೆ ಮಾಡಿಕೊಳ್ಳಲಾಗಿದೆ ಎಂದೂ ಸರ್ವೆಯಲ್ಲಿ ತಿಳಿಸಲಾಗಿದೆ. ಈ ಎಲ್ಲಾ ಶಿಲಾ ಶಾಸನಗಳೂ ಕೂಡಾ ಈ ಹಿಂದೆ ಇಲ್ಲಿ ದೇಗುಲ ಇತ್ತು ಅನ್ನೋದಕ್ಕೆ ಕುರುಹುಗಳಾಗಿವೆ ಎಂದು ಅಧ್ಯಯನ ವರದಿ ವಿವರಿಸಿದೆ.
ಎಎಸ್ಐ ಸರ್ವೆ ವೇಳೆ ಮಸೀದಿಯಲ್ಲಿ ಲೆಕ್ಕವಿಲ್ಲದಷ್ಟು ಹಿಂದೂ ದೇವರ ಮೂರ್ತಿಗಳು ಪತ್ತೆಯಾಗಿವೆ. ಕೆಲವು ಮೂರ್ತಿಗಳನ್ನು ವಿರೂಪಗೊಳಿಸಲಾಗಿದೆ. ಮತ್ತೆ ಕೆಲವನ್ನು ಗೋಡೆಯಲ್ಲಿ ಗಾರೆ ಸಮೇತ ಮುಚ್ಚಲಾಗಿದೆ. ಮೂರ್ತಿಗಳ ಜೊತೆಗೆ ಕೆತ್ತನೆ ಮಾಡಲಾಗಿದ್ದ ಪಕ್ಷಿಗಳು ಹಾಗೂ ಪ್ರಾಣಿಗಳ ಪ್ರತಿಕೃತಿಗಳೂ ಕೂಡಾ ಹಾಗೆಯೇ ಇವೆ. ಇನ್ನು ಮಸೀದಿ ಒಂದು ರೂಂನಲ್ಲಿ ಫಲಕ ಕೂಡಾ ಸಿಕ್ಕಿದೆ. ಈ ಫಲಕದಲ್ಲಿ ಔರಂಗಜೇಬನ ಕಾಲದಲ್ಲಿ ಮಸೀದಿ ನಿರ್ಮಾಣ ಮಾಡಲಾಗಿತ್ತು ಎಂಬ ಮಾಹಿತಿ ಇದೆ. ಅರೇಬಿಕ್ ಪರ್ಷಿಯನ್ ಭಾಷೆಯಲ್ಲಿ ಈ ಶಾಸನ ಇದೆ. ಒಟ್ಟಾರೆ ಜ್ಞಾನವಾಪಿ ಮಸೀದಿ ಕೂಡ ಹಿಂದೂ ದೇಗುಲವನ್ನೇ ಕೆಡವಿಯೇ ನಿರ್ಮಿಸಲಾಗಿದೆ ಎಂಬುದು ಭಾರತೀಯ ಪುರಾತತ್ವ ಇಲಾಖೆಯ ಸರ್ವೆಯಲ್ಲಿ ಬಯಲಾಗಿದೆ. ಹೀಗಾಗಿ ಕೋರ್ಟ್ ಮುಂದೆ ಯಾವ ತೀರ್ಮಾನ ಕೈಗೊಳ್ಳುತ್ತೆ ಅನ್ನೋದನ್ನ ಕಾದು ನೋಡ್ಬೇಕು.